28ರಂದು ಜಿಪಂ ಅಧ್ಯಕ್ಷೆ ವಿರುದ್ಧ ರ‍್ಯಾಲಿ

ಬಾಗಲಕೋಟೆ: ಬಣಜಿಗ ಸಮಾಜದ ಬಗ್ಗೆ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಹಗುರವಾಗಿ ಮಾತನಾಡಿದ್ದನ್ನು ಖಂಡಿಸಿ ನ.28ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ನಗರದಲ್ಲಿ ಬುಧವಾರ ನಡೆದ ಬಣಜಿಗ ಸಮಾಜ ಜಿಲ್ಲಾ ಘಟಕದ ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲಾಧ್ಯಕ್ಷ ತಾತಾಸಾಬ ಬಾಂಗಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಉನ್ನತ ಸ್ಧಾನ ಹೊಂದಿ ಒಂದು ಸಮಾಜದ ಕುರಿತು ಹಗುರವಾಗಿ ಮಾತನಾಡುವುದು ಖಂಡನೀಯ. ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ನೇರವಾಗಿ ಕ್ಷಮೆಯಾಚಿಸಬೇಕಿತ್ತು, ಬದಲಾಗಿ ಪಂಚಮಸಾಲಿ ಸಮಾಜದ ಮುಖಂಡರು ಕ್ಷಮೆ ಕೋರಿದ್ದು ಸಮಂಜಸವಲ್ಲ, ಪಂಚಮಸಾಲಿ ಸಮುದಾಯದವರೊಂದಿಗೆ ಬಣಜಿಗ ಸಮಾಜದವರು ಅನ್ಯೋನ್ಯವಾಗಿದ್ದಾರೆ ಎಂದರು.

ಸಮಾಜದ ಮುಖಂಡ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮಾತನಾಡಿ, ಬಣಜಿಗ ಸಮಾಜದವರು ಶಾಂತ ಸ್ವಭಾವದವರು. ಹಾಗಂತ ಯಾರು ಏನೇ ಅಂದರೂ ಸಹಿಸಲು ಸಾಧ್ಯವಿಲ್ಲ. ನಮ್ಮ ಆಕ್ರೋಶ ಹೇಳಿಕೆ ನೀಡಿದ ವೀಣಾ ಕಾಶಪ್ಪನವರ ವಿರುದ್ಧವೇ ಹೊರತು ಪಂಚಮಸಾಲಿ ಸಮಾಜದ ವಿರುದ್ಧವಲ್ಲ. ಅವರೇ ಬಹಿರಂಗ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಶಿವಾನಂದ ನಿಂಗನೂರ, ಆನಂದ ಎಸ್ ಜಿಗಜಿನ್ನಿ ಮಾತನಾಡಿ, ಹೇಳಿಕೆ ನೀಡಿ 10 ದಿನ ಗಳಾದರೂ ಕ್ಷಮೆ ಕೋರಿಲ್ಲ. ಇದು ಸಮಾಜದ ಯುವ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಘಟನೆಗಳು ಮರುಕಳಿಸಬಾರದು. ಬರುವ ದಿನಗಳಲ್ಲಿ ಸಮಾಜ ಇದಕ್ಕೆ ತಕ್ಕ ಉತ್ತರ ನೀಡಲಿದೆ ಎಂದರು.

ನಗರ ಘಟಕದ ಅಧ್ಯಕ್ಷ ಶಿವಶರಣ ಯಾದವಾಡ, ಮುಖಂಡರಾದ ಮುರುಗೆಪ್ಪ ವೈಜಾಪುರ, ರಾಜೇಂದ್ರ ತಪಶೆಟ್ಟಿ, ರವಿ ಕುಮಟಗಿ, ನ್ಯಾಯವಾದಿ ಸಿ.ಎಸ್. ಭಾಂಗಿ, ವೀರಣ್ಣ ಹಲಕುರ್ಕಿ, ಮಲ್ಲಪ್ಪಣ್ಣ ಅರಬ್ಬಿ, ಬಸವರಾಜ ಅವರಾದಿ, ಅಶೋಕ ಮಹಾಬಾಳಶೆಟ್ಟಿ, ಸಿ.ಎನ್.ಗಂಜಿ , ರಾಚಣ್ಣ ಗುಳಿಪಲ್ಲೆ, ಶಿವರಾಜ ಅಕ್ಕಿ, ಚಂದ್ರಶೇಖರ ಹುಲಗಬಾಳ, ಬಸವರಾಜ ತೆಗ್ಗಿ, ಸಂಗಣ್ಣ ಪಟ್ಟಣಶೆಟ್ಟಿ ಇತರರಿದ್ದರು.