More

    ದೇಶದ ಅತಿದೊಡ್ಡ ಸುರಂಗಮಾರ್ಗ ಜೊಜಿಲಾ; ಲಡಾಖ್-ಕಾಶ್ಮೀರ ನಡುವೆ ಸರ್ವಋತು ಸಂಚಾರಕ್ಕೆ ತಯಾರಿ ಜೋರು

    ಸರ್ವ ಋತುಗಳಲ್ಲಿ ಸುಗಮ ರಸ್ತೆ ಸಂಪರ್ಕವನ್ನು ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್ ಹಾಗೂ ಜಮ್ಮು ಮತ್ತು ಕಾಶ್ಮೀರ ನಡುವೆ ಕಲ್ಪಿಸುವ ಉದ್ದೇಶದಿಂದ ಜೊಜಿಲಾ ಸುರಂಗ ಮಾರ್ಗ ನಿರ್ವಿುಸಲಾಗುತ್ತಿದೆ. ನಿರ್ಮಾಣ ಪೂರ್ಣಗೊಂಡ ನಂತರ ಇದು ಭಾರತದ ಅತ್ಯಂತ ಉದ್ದದ ಸುರಂಗ ಮಾರ್ಗವಾಗಲಿದೆ. 4,600 ಕೋಟಿ ರೂಪಾಯಿ ವೆಚ್ಚದಲ್ಲಿ ಸುರಂಗ ನಿರ್ವಿುಸಲಾಗುತ್ತಿದ್ದು, 2023ರ ಡಿಸೆಂಬರ್ ಒಳಗಾಗಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

    ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈಚೆಗೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜತೆಗಿದ್ದರು.

    ಈ ಮಾರ್ಗವು ದುರ್ಗಮ ಹಾಗೂ ಕಡಿದಾದ ಭೂಪ್ರದೇಶದಿಂದ ಕೂಡಿದೆ. ಇಲ್ಲಿ ಸಂಪರ್ಕವನ್ನು ಸುಧಾರಿಸಲು ನಡೆಯುತ್ತಿರುವ ಯೋಜನೆಯ ಭಾಗವಾಗಿ, 25,000 ಕೋಟಿ ರೂಪಾಯಿ ವೆಚ್ಚದಲ್ಲಿ 19 ಸುರಂಗಗಳನ್ನು ನಿರ್ವಿುಸಲಾಗುತ್ತಿದೆ. ಜೊಜಿಲಾ ಸುರಂಗ ಕೂಡ ಇದರಲ್ಲಿ ಸೇರಿದ್ದು, ಈಗ ಇದರ 38 ಪ್ರತಿಶತದಷ್ಟು ಕೆಲಸ ಪೂರ್ಣಗೊಂಡಿದೆ. ನಿರ್ಮಾಣ ಕ್ಷೇತ್ರದಲ್ಲಿ ಹೆಸರು ಮಾಡಿರುವ meil ಸಂಸ್ಥೆ ನಿರ್ವಣದ ಹೊಣೆ ಹೊತ್ತಿದೆ.

    ಜೊಜಿಲಾ ಸುರಂಗವು ಭಾರತದ ಅತಿ ಉದ್ದದ ರಸ್ತೆ ಸುರಂಗ ಮಾತ್ರವಲ್ಲದೆ, ಏಷ್ಯಾದ ಅತಿ ಉದ್ದದ ಉಭಯ ದಿಕ್ಕಿನ ಸುರಂಗವಾಗಿ ದಾಖಲೆ ಬರೆಯಲಿದೆ ಎಂದು ನಿರೀಕ್ಷಿಸಲಾಗಿದೆ, ಇದರ ಉದ್ದ 14.15 ಕಿಮೀ ಇದೆ. ಇದಲ್ಲದೆ, ಸೋನ್ಮಾರ್ಗ್ ಮತ್ತು ಕಾರ್ಗಿಲ್ ನಡುವಿನ ಜೊಜಿಲಾ ಘಾಟ್​ಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಒಂದರಲ್ಲಿ ಝುಡ್- ಮೊರ್ಹ್ ನಿಂದ ಜೊಜಿಲಾ ಸುರಂಗಕ್ಕೆ ಸಂರ್ಪಸುವ ಮತ್ತೊಂದು ಸುರಂಗವನ್ನು ಕೂಡ ನಿರ್ವಿುಸಲಾಗುತ್ತಿದೆ. ಇದು ಝುಡ್- ಮೊರ್ಹ್​ನಿಂದ ಜೊಜಿಲಾ ನಡುವಿನ 18.475ಕಿ.ಮೀ. ಹೆದ್ದಾರಿಯ ಅಭಿವೃದ್ಧಿ ಮತ್ತು ವಿಸ್ತರಣೆಯನ್ನು ಒಳಗೊಂಡಿದೆ. ಇದರಲ್ಲಿ 3 ಕಿಮೀ ಮಾರ್ಗವನ್ನು ವಿಸ್ತರಿಸಲಾಗುವುದು; ಉಳಿದುದನ್ನು ಹೊಸದಾಗಿ ಅಭಿವೃದ್ಧಿಪಡಿಸಲಾಗುವುದು. ಹೆದ್ದಾರಿಯು ಎರಡು ಟ್ವಿನ್-ಟ್ಯೂಬ್ ಸುರಂಗಗಳು (ಪೈಪ್ ಆಕಾರದ ಜೋಡಿ ಸುರಂಗ), ಐದು ಸೇತುವೆಗಳು ಮತ್ತು ಎರಡು ಹಿಮ ಗ್ಯಾಲರಿಗಳನ್ನು ಹೊಂದಿರುತ್ತದೆ. ಈ ಒಟ್ಟಾರೆ 33-ಕಿಮೀ ವ್ಯಾಪ್ತಿಯ ಕಾಮಗಾರಿಯು ಎರಡು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ನಡುವೆ ವ್ಯಾಪಿಸಿದೆ.

    ಸುರಂಗ ಏಕೆ ಬೇಕು?

    ಪ್ರಸ್ತುತ, ಲಡಾಖ್​ನ ಅತಿದೊಡ್ಡ ನಗರವಾದ ಲೇಹ್ ಮತ್ತು ಶ್ರೀನಗರ ನಡುವಿನ ಪ್ರಯಾಣವು ಉತ್ತಮ ಹವಾಮಾನದ ಸಂದರ್ಭದಲ್ಲಿ 10 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ, ದುರ್ಗಮ ಭೂಪ್ರದೇಶದ ಮೂಲಕ ಸಾಗುತ್ತದೆ. ಎತ್ತರದ ಪರ್ವತ ಮಾರ್ಗವಾದ ಜೊಜಿಲಾ ಪಾಸ್ ಮೂಲಕವೂ ಪ್ರಯಾಣಿಸಬೇಕಾಗುತ್ತದೆ. ತೀವ್ರ ಚಳಿಗಾಲದಲ್ಲಿ ಹಿಮಕುಸಿತಗಳು, ಭೂಕುಸಿತಗಳು ಮತ್ತು ಜಾರು ರಸ್ತೆಗಳ ಭಯದಿಂದಾಗಿ ಈ ಮಾರ್ಗವನ್ನು ಮುಚ್ಚಲಾಗುತ್ತದೆ, ಇದರಿಂದಾಗಿ, ಜೊಜಿಲಾ ಪಾಸ್​ನ ಆಚೆಗಿನ ಪ್ರದೇಶಗಳಿಗೆ ದೇಶದ ಉಳಿದ ಭಾಗಗಳಿಂದ ಕನಿಷ್ಠ ಐದು ತಿಂಗಳವರೆಗೆ ಸಂಪರ್ಕ ಕಡಿತಗೊಳ್ಳುತ್ತದೆ. ಜೊಜಿಲಾ ಪಾಸ್ ಮುಚ್ಚುವುದರೊಂದಿಗೆ, ವಿಮಾನ ಸಂಪರ್ಕವು ಏಕೈಕ ಆಯ್ಕೆಯಾಗಿ ಉಳಿದುಕೊಳ್ಳುತ್ತದೆ. ತೀವ್ರ ಚಳಿಗಾಲದ ಅವಧಿಯಲ್ಲಿ ವಿಮಾನ ದರಗಳು ರೂ. 40,000ವರೆಗೆ ಏರಿಕೆ ಕಾಣುತ್ತವೆ. ದೆಹಲಿ ಮತ್ತು ಲಂಡನ್ ನಡುವಿನ ವಿಮಾನ ಟಿಕೆಟ್ ಬೆಲೆಗೆ ಇದು ಸರಿಸಮನಾಗಿರುತ್ತದೆ.

    ಕಾರ್ಯತಂತ್ರದ ದೃಷ್ಟಿಯಿಂದ ಜೊಜಿಲಾ ಸುರಂಗ ನಿರ್ಮಾಣ ಬಹುಮುಖ್ಯವಾಗಿದೆ. ಜನರು ವಲಸೆ ಹೋಗದಂತೆ ಈ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುವುದು. ಇದು ಈ ಪ್ರದೇಶದಲ್ಲಿ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

    | ನಿತಿನ್ ಗಡ್ಕರಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ

    ಸಮಯದ ಉಳಿತಾಯ

    ಸರ್ವ ಋತು ಸಂಪರ್ಕವನ್ನು ಒದಗಿಸುವುದರ ಜತೆಗೆ ಜೊಜಿಲಾ ಸುರಂಗವು ಕಾಶ್ಮೀರ ಮತ್ತು ಲಡಾಖ್ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ. ಬಾಲ್ಟಾಲ್​ನಿಂದ ಮಿನಾಮಾರ್ಗ್​ಗೆ ಪ್ರಸ್ತುತ 40 ಕಿ.ಮೀ. ದೂರ ಇದ್ದು, ಸುರಂಗ ನಿರ್ವಣವಾದ ನಂತರ ಇದು 13 ಕಿ.ಮೀ.ಗೆ ಇಳಿಯಲಿದೆ. ಇದರಿಂದಾಗಿ, ಪ್ರಯಾಣದ ಸಮಯ ಒಂದೂವರೆ ಗಂಟೆ ಕಡಿತಗೊಳ್ಳುವ ಅಂದಾಜು ಇದೆ. ಇದಲ್ಲದೆ, ಪ್ರಯಾಣವು ಕಡಿಮೆ ಶ್ರಮದಾಯಕವಾಗಿರುತ್ತದೆ. ಜೊಜಿಲಾದ ದುರ್ಗಮ ಭೂಪ್ರದೇಶವನ್ನು ಗಮನಿಸಿದರೆ, ಪ್ರತಿ ವರ್ಷ ಈ ಮಾರ್ಗದಲ್ಲಿ ಅನೇಕ ಮಾರಣಾಂತಿಕ ಅಪಘಾತಗಳು ವರದಿಯಾಗುತ್ತವೆ. ಸುರಂಗ ಯೋಜನೆ ಪೂರ್ಣಗೊಂಡ ನಂತರ ಅಪಘಾತಗಳ ಸಾಧ್ಯತೆಗಳು ಗಮನಾರ್ಹವಾಗಿ ಕಡಿಮೆಯಾಗಲಿವೆ ಎಂಬ ಭರವಸೆ ವ್ಯಕ್ತವಾಗಿದೆ.

    ಮಿಲಿಟರಿಗೂ ಅನುಕೂಲ

    ಉದ್ದೇಶಿತ ಜೊಜಿಲಾ ಸುರಂಗವು ಲಡಾಖ್ ಮತ್ತು ದೇಶದ ಇತರ ಭಾಗಗಳ ನಡುವೆ ಸರ್ವಋತು ಸಂಪರ್ಕವನ್ನು ಒದಗಿಸುತ್ತದೆ. ಇದು ಈ ಪ್ರದೇಶದಲ್ಲಿ ವಾಸಿಸುವ ಮತ್ತು ಉದ್ಯೋಗ ಮಾಡುತ್ತಿರುವ ನಾಗರಿ ಕರಿಗೆ ಮಾತ್ರವಲ್ಲದೆ, ಆಯಕಟ್ಟಿನ ಈ ಪ್ರದೇಶದಲ್ಲಿ ಸೇನಾ ಪಡೆಗಳು ಮತ್ತು ಸಾಮಗ್ರಿ ಸರಬರಾಜು ಚಲನೆಯನ್ನು ತ್ವರಿತಗೊಳಿಸುವ ಮೂಲಕ ಮಿಲಿಟರಿಗೆ ಕೂಡ ಪ್ರಯೋಜನವನ್ನು ಒದಗಿಸುತ್ತದೆ.

    ಹವಾಮಾನ ಮುನ್ಸೂಚನೆ: ಮುಂದಿನ 5 ದಿನ ರಾಜ್ಯದ ಎಲ್ಲೆಲ್ಲಿ ಮಳೆಯಾಗಲಿದೆ?

    ತಾನೂ ಕೋಟ್ಯಧಿಪತಿ, ಮಕ್ಕಳಿಬ್ಬರೂ ಕೋಟ್ಯಧಿಪತಿ, ಹೆಂಡತಿಯೂ ಕೋಟಿ ರೂ. ಮೌಲ್ಯದ ಚಿನ್ನಾಭರಣದ ಒಡತಿ, ಆದ್ರೆ ಸ್ವಂತ ಕಾರಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts