ಕುಶಾಲನಗರ: ಹನ್ನೆರಡನೇ ಶತಮಾನದ ಶರಣರು ಸತ್ಯ, ಶುದ್ಧವಾದ ಕಾಯಕಕ್ಕೆ ಹೆಚ್ಚಿನ ಮನ್ನಣೆ ನೀಡಿದ್ದರು. ನುಡಿದಂತೆ ನಡೆದು ಪ್ರಾತಃಸ್ಮರಣೀಯವಾಗುಳಿದರು. ಶರಣರ ಈ ನಡೆ ಮನುಕುಲಕ್ಕೆ ಎಲ್ಲ ಕಾಲಕ್ಕೂ ನಿತ್ಯನೂತನ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಎಚ್.ವಿ. ಶಿವಪ್ಪ ಹೇಳಿದರು.
ಚಿಕ್ಕಹೊಸೂರಿನ ಕೃಷಿಕರಾದ ಜಗದೀಶ್ ಮತ್ತು ಶೈಲಜಾ ಶರಣ ದಂಪತಿಯನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದರು.
ಯಾವ ಕಾಯಕವೇ ಆಗಲಿ ಸತ್ಯವಾಗಿರಬೇಕು ಹಾಗೂ ಶುದ್ಧವಾಗಿರಬೇಕು. ಕಾರ್ಮಿಕರ ಅಲಭ್ಯದ ಇಂದಿನ ದಿನಗಳಲ್ಲಿ ಶರಣ ದಂಪತಿ ಜಗದೀಶ್ ಮತ್ತು ಶೈಲಾ ಅವರ ಕೃಷಿ ಸೇವೆ ಶ್ಲಾಘನೀಯ ಎಂದರು.
ಸತತ ಅಧ್ಯಯನ ಹಾಗೂ ನಿರಂತರ ಕಲಿಕೆಯೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ತೋರುವ ಮೂಲಕ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನಿಯುಕ್ತಿಗೊಂಡ ಶರಣ ದಂಪತಿ ಪುತ್ರ ಡಾ.ತೇಜಸ್ವಿ ಕುಮಾರ್ ಅವರನ್ನು ಇದೇ ಸಂದರ್ಭ ಗೌರವಿಸಲಾಯಿತು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ನಟರಾಜು, ಕೊಡಗು ಜಿಲ್ಲಾ ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ದೀಪಾಕರುಣ್, ಕುಶಾಲನಗರ ತಾಲೂಕು ಕದಳಿ ವೇದಿಕೆ ಅಧ್ಯಕ್ಷೆ ಹೇಮಲತಾ, ಕೊಡಗು ಜಿಲ್ಲಾ ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ನಂದೀಶ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಗಣೇಶ್, ಬೆಟ್ಟದಪುರ ಹೋಬಳಿ ಶಸಾಪ ಅಧ್ಯಕ್ಷ ಕೂರ್ಗಲ್ಲು ಶಿವಕುಮಾರಸ್ವಾಮಿ, ಚನ್ನಪಟ್ಟಣ ನಗರಸಭೆ ಸಹಾಯಕ ಅಭಿಯಂತರ ಕಾರ್ತಿಕ್, ಪ್ರಗತಿಪರ ಕೃಷಿಕ ಸುರಗಳ್ಳಿ ವಿದ್ಯಾಶಂಕರ್, ಮಂಜುನಾಥ್, ಬೆಟ್ಟದಪುರ ರುದ್ರೇಶ್, ಕೊಪ್ಪ ಗ್ರಾಪಂ ಸದಸ್ಯ ಸಿ.ಎಸ್. ರೇಣುಕಾ, ಶಿಕ್ಷಕ ಶಿವಲಿಂಗ, ವಿರೂಪಾಕ್ಷ, ಮಹದೇವಪ್ಪ ಹಾಗೂ ಅಜಿತ್ ಇದ್ದರು.