ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್ ಒಡೆಯರ್ ನಡೆ ಕಾಂಗ್ರೆಸ್​ಗೆ ಕಸಿವಿಸಿ

ಚಿಕ್ಕಮಗಳೂರು: ಕಾಂಗ್ರೆಸ್​ನಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದ ಕಡೂರು ತಾಲೂಕು ಸಿಂಗಟೆಗೆರೆ ಕ್ಷೇತ್ರದ ಕೆ.ಆರ್.ಮಹೇಶ್ ಒಡೆಯರ್ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿರುವುದರಿಂದ ಪಕ್ಷಾಂತರ ಕಾಯ್ದೆಯ ಕತ್ತಿ ಅವರ ಸದಸ್ಯತ್ವದ ಮೇಲೆ ತೂಗ ತೊಡಗಿದೆ.

ಕಳೆದ ವಿಧಾನಸಭಾ ಚುನಾವಣೆ ನಂತರ ಪಕ್ಷದಿಂದ ದೂರವಾಗಿ, ಬಿಜೆಪಿ ಜತೆ ಸಕ್ರಿಯವಾಗಿ ತೊಡಗಿಕೊಂಡಿದ್ದ ಮಹೇಶ್ ಒಡೆಯರ್ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕಡೂರಿನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇಲ್ಲಿಯವರೆಗೆ ಬಿಜೆಪಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾಂಗ್ರೆಸ್ ಮುಖಂಡರಿಗೆ ತಲೆನೋವು ಉಂಟುಮಾಡಿದ್ದ ಒಡೆಯರ್, ಈಗ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡು ಕಾಂಗ್ರೆಸ್ ಜಿಲ್ಲಾ ಮುಖಂಡರಿಗೆ ಟಾಂಗ್ ನೀಡಿದ್ದಾರೆ.

ಒಡೆಯರ್ ನಡೆಯಿಂದ ಮುಜುಗರ ಅನುಭವಿಸುತ್ತಿರುವ ಜಿಲ್ಲಾ ಕೈ ಮುಖಂಡರು ಈಗ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂದು ಕಾನೂನು ತಜ್ಞರ ಮೊರೆ ಹೋಗಿದ್ದಾರೆ. ಕಡೂರು ತಾಲೂಕು ಹಾಸನ ಲೋಕಸಭಾ ಕ್ಷೇತ್ರಕ್ಕೆ ಬರುತ್ತದೆ. ಮೈತ್ರಿ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ತಮ್ಮ ಅಭ್ಯರ್ಥಿ ಗೆಲ್ಲಿಸಲು ಹರಸಹಾಸಪಡುತ್ತಿವೆ. ಕ್ಷೇತ್ರದಲ್ಲಿ ಹೈವೋಲ್ಟೇಜ್ ಸೃಷ್ಟಿಯಾಗಿರುವ ಸಮಯದಲ್ಲೇ ಮಹೇಶ್ ಒಡೆಯರ್ ಕಾಂಗ್ರೆಸ್​ನಿಂದ್ ಬಿಜೆಪಿಗೆ ಬಹಿರಂಗವಾಗಿ ಜಂಪ್ ಮಾಡಿರುವುದು ಪಕ್ಷದ ಜಿಲ್ಲಾ ಮುಖಂಡರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಮೊನ್ನೆ ರಾಜ್ಯಕ್ಕೆ ಬಂದ ರಾಹುಲ್ ಗಾಂಧಿ, ಕಾಂಗ್ರೆಸ್​ನಿಂದ ಹೊರಹೋಗಿ ಅನ್ಯಪಕ್ಷಗಳ ಪ್ರಚಾರ ಮಾಡುವವರ ಪಕ್ಷದ ಸದಸ್ಯತ್ವ ರದ್ದುಗೊಳಿಸಿ ಕಾನೂನು ಕ್ರಮಕ್ಕೆ ಮುಂದಾಗಿ ಎಂದು ಕಟ್ಟಾಜ್ಞೆ ಹೊರಡಿಸಿದ್ದರು. ಆದರೆ ಹಳೇ ಮೈಸೂರು ಭಾಗದಲ್ಲಿ ಮೈತ್ರಿ ನಂತರ ಹಲವು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಕ್ಷದಿಂದ ದೂರ ಸರಿದಿದ್ದಾರೆ. ಒಮ್ಮೆಲೆ ಕ್ರಮ ಕೈಗೊಂಡರೆ ಪಕ್ಷದಲ್ಲಿ ಉಳಿಯುವವರ ಸಂಖ್ಯೆಯೇ ಕಡಿಮೆಯಾಗುತ್ತದೆಂದು ಸುಮ್ಮನಾಗಿದ್ದಾರೆ.

ಜಿಪಂ ಸದಸ್ಯತ್ವದ ಅವಧಿ ಇನ್ನೂ ಎರಡು ವರ್ಷವಿದೆ. ಹೀಗಾಗಿ ಜಿಲ್ಲಾ ಕಾಂಗ್ರೆಸ್ ಪಕ್ಷಾಂತರ ಕಾಯ್ದೆಯಡಿ ಮಹೇಶ್ ಒಡೆಯರ್ ಸದಸ್ಯತ್ವ ರದ್ದುಗೊಳಿಸುವಂತೆ ಚುನಾವಣೆ ಆಯೋಗಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇದೆ. ಒಂದು ವೇಳೆ ಚುನಾವಣೆ ಆಯೋಗ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕಠಿಣ ಕ್ರಮ ಕೈಗೊಂಡು ಸದಸ್ಯತ್ವ ರದ್ದುಗೊಳಿಸಿದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲು ಒಡೆಯರ್​ಗೆ ಅವಕಾಶವಿದೆ.

ಒಡೆಯರ್ ಈಗಲೂ ಕಾಂಗ್ರೆಸ್ ಸದಸ್ಯರು. ಬಿಜೆಪಿ ವೇದಿಕೆಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಆದರೆ ಬಿಜೆಪಿಯ ಸದಸ್ಯತ್ವ ಇನ್ನೂ ಪಡೆದಿಲ್ಲ. ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಒಡೆಯರ್ ಬಿಜೆಪಿ ಸದಸ್ಯತ್ವ ಪಡೆದಿಲ್ಲ ಎನ್ನಲಾಗುತ್ತಿದೆ. ಇದರ ಜತೆ ಪಕ್ಷ ನೀಡುವ ವಿಪ್ ಉಲ್ಲಂಘನೆ ಮಾಡಿದರೆ ಮಾತ್ರ ಪಕ್ಷಾಂತರ ಕಾಯ್ದೆ ಉಲ್ಲಂಘನೆಯಾಗುತ್ತೆಂಬ ಅಭಿಪ್ರಾಯವೂ ಇದೆ. ಹೀಗಾಗಿ ಒಡೆಯರ್ ಎರಡು ವರ್ಷ ಪಕ್ಷದ ವಿಪ್ ಉಲ್ಲಂಘಿಸದಿದ್ದರೆ ತೊಂದರೆ ಇಲ್ಲ ಎನ್ನುವ ಅಭಿಪ್ರಾಯವೂ ಇದೆ.

Leave a Reply

Your email address will not be published. Required fields are marked *