ಮೊಳಕಾಲ್ಮೂರು: ಗ್ರಾಮೀಣ ಜನರಿಗೆ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳ ಕರ್ತವ್ಯ ಲೋಪ, ಉಡಾಫೆ ವರ್ತನೆ ಸಹಿಸುವುದಿಲ್ಲ ಎಂದು ಪಿಡಿಒಗಳಿಗೆ ಸಿಇಒ ಸತ್ಯಭಾಮ ಎಚ್ಚರಿಕೆ ನೀಡಿದರು.
ತಾಪಂ ಸಭಾಂಗಣದಲ್ಲಿ ಸೋಮವಾರ ಪಿಡಿಒಗಳಿಗೆ ಆಯೋಜಿಸಿದ್ದ ಕುಡಿಯುವ ನೀರು, ನೈರ್ಮಲ್ಯ ಹಾಗೂ ನರೇಗಾ ಯೋಜನೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ತಾವು ಅಧಿಕಾರ ವಹಿಸಿಕೊಂಡು 25 ದಿನವಾಗಿದೆ. ಕುಡಿವ ನೀರಿಲ್ಲ, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ದೊರೆಯುತ್ತಿಲ್ಲ ಎಂಬ ಹಲವು ಕರೆಗಳು ಜನರಿಂದ ಬಂದಿವೆ. ಆದರೆ, ಯಾವೊಬ್ಬ ಪಿಡಿಒಗಳಿಂದ ಸಮಸ್ಯೆ ಕುರಿತು ಒಂದೂ ಕರೆ ಬಂದಿಲ್ಲ. ಮೈಮರೆತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.
ಸಾರ್ವಜನಿಕ ಸೇವೆಗೆ ಅಧಿಕಾರಿಗಳಿಗೆ ನೀಡಿರುವ ಪೋನ್ ನಂಬರ್ ದಿನದ 24 ಗಂಟೆ ಚಾಲ್ತಿಯಲ್ಲಿರಬೇಕು. ನಿತ್ಯ 10 ಗಂಟೆಯೊಳಗೆ ಕಚೇರಿಗೆ ಹಾಜರಾಗಬೇಕು. ಜನ ಕಲ್ಯಾಣ ಕಾರ್ಯಗಳನ್ನು ನಿಮ್ಮಿಂದ ಬಯಸುತ್ತೇನೆ. ಕುಂಟು ನೆಪ ಸಹಿಸುವುದಿಲ್ಲ. ಆದೇಶ ಮೀರಿದರೆ ವೇತನ ತಡೆ ಹಿಡಿಯುತ್ತೇನೆ ಎಂದು ಬಿಸಿ ಮುಟ್ಟಿಸಿದರು.
ನರೇಗಾ ಯೋಜನೆ ಸದ್ಬಳಕೆಯಾಗಬೇಕು. ಗ್ರಾಮೀಣ ಪ್ರದೇಶದ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು. ಕುಡಿವ ನೀರಿನ ಸಮಸ್ಯೆ ಕಾಡದಂತೆ ಎಚ್ಚರಿಕೆ ವಹಿಸಬೇಕು. ರಸ್ತೆ, ಚರಂಡಿ ಕಾಮಗಾರಿ ಬದಲಿಗೆ ಜಲ ಮರುಪೂರಣ, ಕೆರೆ, ಗೋಕಟ್ಟೆ ಪುನಶ್ಚೇತನ, ಕೃಷಿ ಹೊಂಡ, ಚೆಕ್ ಡ್ಯಾಂ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದರು.
ಕುಡಿವ ನೀರಿನ ಅಭಾವ ನೀಗಿಸಲು ಇಒ, ಎಇಇ ಹಾಗೂ ಪಿಡಿಒಗಳ ಪರಸ್ಪರ ಒಪ್ಪಿಗೆ ಪತ್ರದ ನಂತರ ಕೊಳವೆ ಬಾವಿ ಕೊರೆಸಬೇಕು. ಮನಸೋ ಇಚ್ಛೆ ಕೊರೆಸಿದ ಕೊಳವೆ ಬಾವಿಗಳು ವಿಫಲವಾದರೆ ಅನುದಾನ ಪೋಲಾಗುವುದನ್ನು ತಡೆಯಲು ಈ ಕ್ರಮ ಜಾರಿಗೊಳಿಸಲಾಗಿದೆ ಎಂದರು.
ಹಸಿರೀಕರಣಕ್ಕಾಗಿ ಮನೆ ಆವರಣ, ಜಮೀನು, ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿ ಆವರಣದಲ್ಲಿ ಗಿಡಮರ ಬೆಳೆಸಲು ಪ್ರೋತ್ಸಾಹ ನೀಡಬೇಕು. ಹೆಚ್ಚು ಪ್ರಗತಿ ಸಾಧಿಸಿದವರನ್ನು ಗೌರವಿಸಿ ನಗದು ಬಹುಮಾನ ನೀಡೋಣ ಎಂದರು.
ಜಿಲ್ಲೆಯಲ್ಲಿ ಬರ ತಾಂಡವವಾಡುತ್ತಿದೆ. ಹಸಿರೀಕರಣಕ್ಕೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಯಾವುದೂ ಅಸಾಧ್ಯವಲ್ಲ. ಮಳೆ ನೀರು ಸಂಗ್ರಹ ಮತ್ತು ಹಸಿರೀಕರಣ, ಗುಳೆ ಹೋಗುವುದನ್ನು ತಪ್ಪಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು.
> ಸತ್ಯಭಾಮ, ಜಿಪಂ ಸಿಇಒ ಚಿತ್ರದುರ್ಗ