More

    ಕಾರ್ಯಕ್ರಮದಲ್ಲಿ ಶೋಕಿ ಬೇಡ, ಶೂನ್ಯಕಸವಾಗಿಸೋಣ!

    ಸಣ್ಣ ಸಣ್ಣ ಹೆಜ್ಜೆ, ಕ್ರಮಗಳಿಂದ ದೊಡ್ಡ ಬದಲಾವಣೆ ಸಾಧ್ಯವಿದೆ. ಕಾರ್ಯಕ್ರಮಗಳು ದುಡ್ಡು ಮತ್ತು ಆಹಾರ ಪೋಲು ಮಾಡುವ ಸಾಧನಗಳಾಗಬಾರದು. ಪರಿಸರಕ್ಕೆ, ಭೂಮಿಗೆ ಯಾವುದೇ ಹಾನಿ ಮಾಡದಂತೆ, ಮುಂದಿನ ಪೀಳಿಗೆಗಳಿಗೆ ಪ್ರೇರಣೆ ಆಗುವಂತೆ ಕಾರ್ಯಕ್ರಮಗಳನ್ನು ಮಾಡಬೇಕು. ಈ ಸಂಕಲ್ಪ ನಮ್ಮದಾದರೆ ಸಕಾರಾತ್ಮಕ ಪರಿವರ್ತನೆ ತರಬಹುದು.

    1990-1993. ಈ ಮೂರು ವರ್ಷ ಜಯಮಹಲ್ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ನಾನು, ಅನಂತಕುಮಾರ್, ಮಗಳು ವಾಸವಾಗಿದ್ದೆವು. ಅದೇ ಕಟ್ಟಡದ ಮಹಡಿಯಲ್ಲಿ ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಂಭಾಗದಲ್ಲಿ ಮಲ್ಲಿಕಾರ್ಜುನಯ್ಯ, ಹಿಂದಿನ ಭಾಗದಲ್ಲಿ ಇಬ್ಬರು ಕಾರ್ಯಕರ್ತರು ವಾಸವಾಗಿದ್ದರು. ಅಲ್ಲದೆ, ಆ ಕಟ್ಟಡ ಬಿಜೆಪಿ ರಾಜ್ಯ ಕಚೇರಿಯಂತೆಯೂ ಕಾರ್ಯನಿರ್ವಹಿಸುತ್ತಿತ್ತು. ಜಯಮಹಲ್ ರಸ್ತೆಯ ಆ ಬದಿಗೆ ಹಸಿರಿನಿಂದ ಕೂಡಿದ ವಿಶಾಲವಾದ ಅರಮನೆ ಮೈದಾನ. ಇಲ್ಲೇ ನಾನು ಸ್ಕೂಟರ್ ಕಲಿತದ್ದು. ಆಗೆಲ್ಲ ಪೂರ್ತಿ ಖಾಲಿ-ಖಾಲಿ ಆಗಿರುತ್ತಿತ್ತು, ಈಗಿನಂತೆ ಜನಜಂಗುಳಿ ಇರುತ್ತಿರಲಿಲ್ಲ. ವರ್ಷಕ್ಕೆ ಒಂದೋ, ಎರಡು ಅದ್ದೂರಿ ಮದುವೆಗಳು ಆ ಮೈದಾನದಲ್ಲಿ ನಡೆಯುತ್ತಿದ್ದವು. ಅದೂ ತುಂಬ ಸಿರಿವಂತರ ಮದುವೆ. ಅಲ್ಲದೆ, ವರ್ಷಕ್ಕೊಂದು ವಸ್ತುಪ್ರದರ್ಶನ ವಾರಗಟ್ಟಲೇ ನಡೆಯುತ್ತಿತ್ತು. ಅದನ್ನು ಬಿಟ್ಟರೆ ಶಾಂತವಾದ, ಹಸಿರಿನಿಂದ ಕೂಡಿದ ಪ್ರದೇಶವಾಗಿತ್ತು. ಮೆಜೆಸ್ಟಿಕ್, ಮಲ್ಲೇಶ್ವರಕ್ಕೆ ಹೋಗಬೇಕಾದರೂ ಈ ಮಾರ್ಗ ಬಳಸಿಯೇ ಹೋಗಬೇಕಿತ್ತು. ಬೆಂಗಳೂರಿನಲ್ಲಿರುವ ಬಹುತೇಕರು ಅರಮನೆ ಮೈದಾನವನ್ನು ನೋಡಿದ್ದಾರೆ.

    ಕಳೆದ 15-20 ವರ್ಷಗಳಲ್ಲಿ ಅನೇಕ ಬಾರಿ ಈ ಮೈದಾನಕ್ಕೆ ಭೇಟಿ ನೀಡಿದ್ದುಂಟು. ಈಗಂತೂ ಹಲವು ಕಾರ್ಯಕ್ರಮಗಳ ನಿಮಿತ್ತ ವಾರಕ್ಕೆ ಎರಡು ಬಾರಿ ಭೇಟಿ ನೀಡಬೇಕಾಗುತ್ತದೆ. ಅಲ್ಲದೆ, ದಿನಕ್ಕೆ ಕನಿಷ್ಠ 20 ಮದುವೆಗಳು ಇಲ್ಲಿ ನಡೆಯುತ್ತವೆ. ಕಳೆದ ಇಪ್ಪತ್ತು ವರ್ಷಗಳಲ್ಲೇ ಇಷ್ಟೊಂದು ಬದಲಾವಣೆಯಾಗಿದೆ. 2015ರಲ್ಲಿ ಮಗಳ ಮದುವೆ ಬಗ್ಗೆ ಚರ್ಚೆ ಮಾಡುವಾಗ ಅಲ್ಲಿನ ಮ್ಯಾನೇಜರ್ ವ್ಯವಸ್ಥೆ, ರ್ಪಾಂಗ್ ಸೌಲಭ್ಯ ಬಗ್ಗೆ ವಿವರಿಸಿದರು. ನಾನಾಗ ಕಸದ ಬಗ್ಗೆ ಪ್ರಸ್ತಾಪಿಸಿದೆ. ಒಂದು ದೊಡ್ಡ ಮದುವೆ ಆದಾಗ 18-20 ಲಾರಿಗೆ ಆಗುವಷ್ಟು ಕಸ ಇಲ್ಲಿಂದ ಹೊರಗಡೆ ಕಳುಹಿಸಲಾಗುತ್ತದೆ ಎಂದವರು ಹೇಳಿದರು. ಹಾಗಾಗಿ, ನಾವು ಕಸ ತಯಾರಿಸದೆ, ಪರಿಸರಕ್ಕೆ ಪೂರಕವಾಗಿ ಮದುವೆ ಮಾಡಲು ನಿರ್ಧರಿಸಿ, ಯಶಸ್ವಿಯಾದೆವು.

    ದೊಡ್ಡ ಉತ್ಸವವಿರಲಿ, ಕಾರ್ಯಕ್ರಮ ಅಥವಾ ಮದುವೆ ನಡೆದ ಬಳಿಕ ಕಸದ ದೊಡ್ಡ ರಾಶಿಯೇ ಅಲ್ಲಿರುತ್ತದೆ. ನಮ್ಮ ದೈನಂದಿನ ಓಡಾಟದಲ್ಲಿ, ಕೆಲವೊಮ್ಮೆ ಮಾಧ್ಯಮಗಳ ಮೂಲಕವೂ ಇದನ್ನು ಗಮನಿಸುತ್ತೇವೆ. ಪ್ಲಾಸ್ಟಿಕ್ ಲೋಟಗಳು, ಪ್ಲಾಸ್ಟಿಕ್ ಕವರ್​ಗಳು, ಬಿಟ್ಟ ಆಹಾರ, ಗಬ್ಬು ವಾಸನೆ… ಹೀಗೆ ಕಸದ ರಾಶಿ ಕಳವಳ ಮೂಡಿಸುತ್ತದೆ. ಪರಿಸರದ ಮೇಲಿನ ಒತ್ತಡ ಹೆಚ್ಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಕಸದ ಪ್ರಮಾಣ ನಿಧಾನವಾಗಿಯಾದರೂ ಕಡಿಮೆಯಾಗುತ್ತಿದೆ. ಅದಕ್ಕಾಗಿ ನಾನು ಆಯೋಜಕರಿಗೆ ಮತ್ತು ಸಾರ್ವಜನಿಕರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಆದರೂ, ಮದುವೆ, ಉಪನಯನ, ಹುಟ್ಟುಹಬ್ಬದಂಥ ಶುಭ ಕಾರ್ಯಕ್ರಮಗಳ ನಂತರ ರಾಶಿ-ರಾಶಿ ಕಸ. ಪುಣ್ಯಕ್ಷೇತ್ರದ ಜಾತ್ರೆ ನಂತರ, ರಾಜಕೀಯ ಸಮಾವೇಶಗಳ ಬಳಿಕ, ಅಷ್ಟೇಕೆ ಸುಂದರ ಉದ್ದೇಶದ ಕಾರ್ಯಕ್ರಮ ನಡೆದ ಬಳಿಕವೂ ಕಸದ ಬೃಹತ್ ರಾಶಿ! ಏನಾಗಿದೆ ನಮಗೆ?

    ಹಿಂದೆಲ್ಲ ಕಸದ ಸ್ವರೂಪವೂ ಬೇರೆ ಇತ್ತು. ಆ ಕಸದಲ್ಲಿ ಉಳಿದ ಆಹಾರ, ಕಾಗದಗಳ ಚೂರುಗಳು, ಮೆಟಲ್ ತುಂಡುಗಳು, ತೋರಣದ ಎಲೆಗಳು, ಇತ್ಯಾದಿ ಇರುತ್ತಿದ್ದವು. ಆದರೆ, ಇತ್ತೀಚಿನ ವರ್ಷಗಳ ಕಸ ನೋಡಿದರೆ ನಾಚಿಕೆಯಾಗುತ್ತದೆ, ಅದರ ಬಗ್ಗೆ ಬರೆಯಲು ಸಹ. ಏನೆಲ್ಲ ಕಸಕ್ಕೆ ಹಾಕುತ್ತಿದ್ದೇವೆ? ಕಾಂಡಮ್, ಸ್ಯಾನಿಟರಿ ನ್ಯಾಪಕಿನ್, ಸಾರಾಯಿ ಪ್ಯಾಕೆಟ್, ಕಂದಮ್ಮಗಳಿಗಾಗಿ ಬಳಸುವ ಯೂಸ್ ಆಂಡ್ ಥ್ರೋ ನ್ಯಾಪ್ಕಿನ್​ಗಳು… ಇದೆಲ್ಲ ನೋಡುತ್ತಿದ್ದರೆ ಖೇದವೆನಿಸುತ್ತದೆ, ನಾವೇನು ನಾಗರಿಕರಾ… ಎನಿಸಿ ಬಿಡುತ್ತದೆ. ಕಾರ್ಯಕ್ರಮಗಳಲ್ಲಿ ಒಂದೆಡೆ ಅತಿಥಿಗಳ ಸಂಖ್ಯೆ, ಆಡಂಬರ, ಅಲಂಕಾರ ಬೆಳೆಯುತ್ತಿದೆ. ವಿದ್ಯುತ್​ದೀಪಗಳು, ಬ್ಯಾಕ್​ಡ್ರಾಪ್, ಊಟದಲ್ಲಿ ಐದುಹತ್ತು ಸಿಹಿಪದಾರ್ಥಗಳು… ಹಾಗೇ ಅಷ್ಟೇ ವೇಗದಲ್ಲಿ ನಾವು ಸೃಷ್ಟಿಸುತ್ತಿರುವ ಕಸದಿಂದ ಅನಾಹುತಗಳೂ ಹೆಚ್ಚುತ್ತಿವೆ. ಈ ಧಿಮಾಕುಗಳು ಏಕೆ ಬರುತ್ತಿದೆ ನಮಗೆ?

    ಖಂಡಿತವಾಗಿಯೂ ನಾವು ಮಾಡುವ ಕಾರ್ಯಕ್ರಮಗಳ ಬಗ್ಗೆ ಒಂದ್ನಿಮಿಷ ಯೋಚಿಸಬೇಕಿದೆ. ಸುತ್ತಮುತ್ತಲಿನ ವಾತಾವರಣಕ್ಕೆ, ಭೂಮಿಗೆ, ಅಕ್ಕಪಕ್ಕದವರಿಗೆ ತೊಂದರೆ ಮಾಡದೆ ಕಾರ್ಯಕ್ರಮಗಳನ್ನು ಮಾಡಬಹುದೆ? ಈ ಬಗ್ಗೆ ಯೋಚಿಸಬೇಕಿದೆ. ಈ ನಿಟ್ಟಿನಲ್ಲಿ ನಾನು ಕುಟುಂಬ ಮತ್ತು ಸ್ನೇಹಿತರ ಸಹಕಾರದಿಂದ ವೈಯಕ್ತಿಕ ನೆಲೆಗಟ್ಟಿನಲ್ಲಿ ಮತ್ತು ಅದಮ್ಯ ಚೇತನದಿಂದ, ಕೆಲ ಸಂಸ್ಥೆಗಳ ಸಹಯೋಗದಿಂದ ಹಲವು ಯಶಸ್ವಿ ಪ್ರಯೋಗಗಳನ್ನು ಮಾಡಿರುವೆ. ಕಸ ಕಡಿಮೆ ಮಾಡಲು ಹಲವರು ವಿನೂತನ ಪ್ರಯತ್ನಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಂಥ ಉಪಾಯ, ಪ್ರಯತ್ನಗಳನ್ನು ಪರಸ್ಪರ ಹಂಚಿಕೊಳ್ಳೋಣ. ಕಸ ಕಡಿಮೆ ಮಾಡಲು ಏನು ಮಾಡಬಹುದು? ವಾಯುಮಾಲಿನ್ಯ ಕಡಿಮೆ ಮಾಡಲು ಏನು ಮಾಡಬಹುದು? ಎಂಬ ಚಿಂತನೆ ನಿಟ್ಟಿನಲ್ಲಿ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಸಣ್ಣ ಸಣ್ಣ ಸಂಗತಿಗಳ ಕಡೆ ಗಮನ ಹರಿಸೋಣ.

    ಹಿಂದೆಲ್ಲ ಬಟ್ಟಲಲ್ಲಿ ಅರಿಶಿಣ, ಕುಂಕುಮ ಇರಿಸಿಕೊಂಡು, ಅದನ್ನು ಹಚ್ಚುತ್ತಿದ್ದರು. ಇದು ಸರಿಯಾದ ಕ್ರಮ. ಈಗೇನಾಗಿದೆ? ಅರಿಶಿಣಕ್ಕೊಂದು ಪ್ಲಾಸ್ಟಿಕ್, ಕುಂಕುಮಕ್ಕೊಂದು ಪ್ಲಾಸ್ಟಿಕ್ ಕವರ್! ಅದನ್ನು ಬಿಡಿಸಿ ಉಪಯೋಗಿಸುವವರು ವಿರಳ. ಒಬ್ಬರಿಂದ ಒಬ್ಬರ ಕೈಗೆ ಅದು ವರ್ಗವಾಗುತ್ತ ಹೋಗಿ ಕೊನೆಗೊಮ್ಮೆ ಕಸವಾಗಿ ಹೋಗುತ್ತದೆ. ಹಾಗಾಗಿ, ಪ್ಲಾಸ್ಟಿಕ್ ಕವರ್​ಗಳಲ್ಲಿ ಅರಿಶಿಣ, ಕುಂಕುಮ ನೀಡುವ ಪ್ರಥೆಗೆ ತಡೆ ಹಾಕೋಣ.

    ಇತ್ತೀಚೆಗೆ ನಾನೊಂದು ಮದುವೆಗೆ ಹೋಗಿದ್ದೆ. ಸ್ವಾಗತದ ಸಮಯದಲ್ಲೇ ಅಕ್ಷತೆಯ ಪ್ಯಾಕೆಟ್ ಕೊಟ್ಟರು. ಅದೂ 12 ಸಾವಿರ ಜನರಿಗೆ ಪ್ಯಾಕೆಟ್​ನಲ್ಲಿ ಅಕ್ಷತೆ ಹಾಕಿ ಕೊಟ್ಟಿದ್ದರು! ಅದರಿಂದ ಎಷ್ಟೊಂದು ಕಸ… ಈ ಬಗ್ಗೆ ಯೋಚನೆ ಮಾಡಬೇಕಲ್ವೆ?

    ಬಹುತೇಕ ಮದುವೆಗಳ ಕಥೆ ಹೀಗೆಯೇ. ಅರಿಶಿಣ, ಕುಂಕುಮ, ಸಕ್ಕರೆಪುಡಿ, ಪೇಡಾಕ್ಕೆ ಪ್ರತ್ಯೇಕ ಪ್ಲಾಸ್ಟಿಕ್ ಕವರ್. ಸ್ವಾಗತದ ವೇಳೆ ಪ್ಲಾಸ್ಟಿಕ್ ಲೋಟದಲ್ಲಿ ಜ್ಯೂಸ್ (ಪೇಪರ್ ಕಪ್ ಅಲ್ಲೂ ಸಣ್ಣ ಪ್ಲಾಸ್ಟಿಕ್​ನ ಲೇಯರ್ ಇರುತ್ತದೆ ಎಂಬುದು ನೆನಪಿರಲಿ). ಬಾಳೆಎಲೆ ಒರೆಸಲು ಬಳಸುವ ನ್ಯಾಪಕಿನ್ ಪ್ಲಾಸ್ಟಿಕ್ ಕವರಲ್ಲಿ ಸೀಲ್ ಆಗಿ ಬರುತ್ತದೆ. ಊಟಕ್ಕೆ ಕೂತರೆ ನೀರಿಗಾಗಿ ಪ್ಲಾಸ್ಟಿಕ್ ಲೋಟ ಅಥವಾ ಪ್ಲಾಸ್ಟಿಕ್ ಬಾಟಲ್​ಗಳು. ಪ್ಲಾಸ್ಟಿಕ್ ಕಪ್​ನಲ್ಲಿ ಪಾಯಸ. ಕೇಸರಿಭಾತ್ ಬಡಿಸುವಾಗ ಚಮಚಾಕ್ಕೆ ಪ್ಲಾಸ್ಟಿಕ್ ಹೊದಿಕೆ, ಇಡ್ಲಿ ಬುಟ್ಟಿಯ ಕೆಳಗಡೆ ಪ್ಲಾಸ್ಟಿಕ್, ಎಲೆ ಇಡುವ ಟೇಬಲ್ ಮೇಲೆ ಪ್ಲಾಸ್ಟಿಕ್, ಅದರ ಕೆಳಗೆ ಪೇಪರ್. ಅಲ್ಲದೆ, ಕೆಲ ಸಿಹಿಗಳು ಪ್ಲಾಸ್ಟಿಕ್ ಕವರ್ ಒಳಗೆ ಬರುತ್ತವೆ. ಇನ್ನು ಬೀಡಾ ಕೂಡ ಪ್ಲಾಸ್ಟಿಕ್​ನಲ್ಲಿ! ಇದು ನಮ್ಮ ಊಟ! ಬಫೆಯಲ್ಲಿ ಪ್ರತೀ ತಟ್ಟೆ ಮೇಲೂ ಪ್ಲಾಸ್ಟಿಕ್ ಕವರ್ ಸೀಲ್ ಆಗಿ ಬರುತ್ತದೆ. ಪಾನಿಪುರಿ ತಿಂದರೆ ಅದಕ್ಕೊಂದು ಪ್ಲೇಟು, ಬಟ್ಟಲು, ಚಮಚ. ಸ್ವೀಟ್​ಗೊಂದು ಕಪ್. ಅಬ್ಬಬ್ಬಾ… ಅದು ಸೃಷ್ಟಿಸುವ ಪ್ಲಾಸ್ಟಿಕ್ ತ್ಯಾಜ್ಯ ನೆನೆಸಿಕೊಂಡರೂ ಭಯವಾಗುತ್ತದೆ.

    ಇದೆಲ್ಲ ನಿಜ. ಹಾಗಾದರೆ, ನಾವೇನು ಮಾಡಬಹುದು? ನಾವು ಮಾಡುವ ಪ್ರತಿ ಕಾರ್ಯಕ್ರಮವನ್ನು ಶೂನ್ಯತ್ಯಾಜ್ಯವಾಗಿಸೋಣ. ಇದಕ್ಕಾಗಿ ವೈಯಕ್ತಿಕವಾಗಿಯೂ, ಸಾಮೂಹಿಕವಾಗಿಯೂ ನಿರ್ಣಯ ತೆಗೆದುಕೊಳ್ಳಬೇಕು. ಪರೀಕ್ಷೆ ಬರೆಯಬೇಕಾದರೆ 100ಕ್ಕೆ 100 ಅಂಕ ತೆಗೆದುಕೊಳ್ಳುತ್ತೇವೆ ಎಂದುಕೊಂಡು ತಯಾರಿ ನಡೆಸಿದರೆ 80-85 ಅಂಕಗಳನ್ನಾದರೂ ತೆಗೆದುಕೊಳ್ಳುತ್ತೇವೆ. ಬರೀ ಪಾಸಾದರೆ ಸಾಕು ಎಂದು ಯೋಚಿಸಿದರೆ ಸ್ಥಿತಿ ಏನಾಗುತ್ತದೆ ಎಂಬುದು ನಿಮಗೆ ಗೊತ್ತಿದೆ. ಹಾಗಾಗಿ, ಕಸದ ವಿಷಯದಲ್ಲಿಯೂ ಅಷ್ಟೇ. ಒಂಚೂರೂ ಕಸ ಮಾಡುವುದಿಲ್ಲ ಎಂದುಕೊಂಡು ಆ ನಿಟ್ಟಿನಲ್ಲಿ ತಯಾರಿ ನಡೆಸಿದರೆ ಬಹುತೇಕ ಯಶಸ್ವಿಯಾಗುತ್ತೇವೆ.

    ನಾವು ಯಾವುದೇ ಕಸ ತಯಾರು ಮಾಡುವುದಿಲ್ಲ ಅಂತ ಅಂದುಕೊಂಡು ಕಾರ್ಯಕ್ರಮ ಅಥವಾ ದಿನದ ಬೆಳಗು ಆರಂಭಿಸಿದರೆ ಫಲಿತಾಂಶ ಸಾಧ್ಯ. ಯಾವುದೇ ಕಾರ್ಯಕ್ರಮವಿರಲಿ ಪುರೋಹಿತರು, ಅಡುಗೆಯವರ ಜತೆ ಮೊದಲೇ ಚರ್ಚೆ ಮಾಡಬೇಕು. ಏನೆಲ್ಲ ಸಾಮಗ್ರಿ ತರುತ್ತೀರಿ? ಉಳಿದ ಆಹಾರ ಎಲ್ಲಿ ತೆಗೆದುಕೊಂಡು ಹೋಗುತ್ತೀರಿ? ಯಾವ ಬಗೆಯ ತಟ್ಟೆ, ಗ್ಲಾಸು ಉಪಯೋಗಿಸುತ್ತೀರಿ? ಬಳಿಕ ಅದನ್ನು ಏನು ಮಾಡುತ್ತೀರಿ? ಇದನ್ನೆಲ್ಲ ತಿಳಿದುಕೊಂಡು ಪ್ಲಾಸ್ಟಿಕಿನ ಬಳಕೆ ತಪ್ಪಿಸಬೇಕು.

    ಕಾರ್ಯಕ್ರಮ ಮಾಡಬೇಕಾದರೆ ಐದರ ಬದಲು ನಾಲ್ಕು ಸ್ವೀಟ್ ಮಾಡಿ, ಪರವಾಗಿಲ್ಲ. ಉಳಿದ ಒಂದು ಸ್ವೀಟಿನ ಹಣದಲ್ಲಿ ಕಾರ್ಯಕ್ರಮವನ್ನು ಪರಿಸರಕ್ಕೆ ಪೂರಕವಾಗಿ, ಯಾವುದೇ ಕಸ ಇಲ್ಲದಂತೆ ಮಾಡಲು ಪ್ರಯತ್ನಿಸಬೇಕು. 100 ಜನರನ್ನು ಕರೆಯುವ ಬದಲಿಗೆ 50-60 ಅತಿಥಿಗಳನ್ನು ಕರೆದರೆ ಸಾಕೇ ಎಂಬ ಬಗ್ಗೆ ಯೋಚಿಸಿ, ತೀರ್ವನಕ್ಕೆ ಬರಬೇಕು. ಕಳೆದ ಹನ್ನೆರಡು ವರ್ಷಗಳಿಂದ ಶೂನ್ಯಕಸದ ವಿಷಯದಲ್ಲಿ ಕೆಲಸ ಮಾಡುತ್ತಿದ್ದೇನೆ. ಬಡಿಸುವವರಿಗೂ ಸರಿಯಾದ ಸೂಚನೆ ನೀಡಬೇಕು. ಅತಿಥಿಗಳ ಸಂಖ್ಯೆ ಬಗ್ಗೆ ಗಮನ ಇರಲಿ. ಮುಖ್ಯವಾಗಿ, ಮೆನುವಿನ ಬಗ್ಗೆ ಗಮನ ಇರಲಿ. ಟೇಬಲ್ ಮೇಲೆ ಪ್ಲಾಸ್ಟಿಕ್ ಹೊದಿಕೆ ಬೇಡವೇ ಬೇಡ. ಅದನ್ನು ಸ್ವಚ್ಛ ಮಾಡಿಕೊಂಡು ತೀರಾ ಅನಿವಾರ್ಯವಾದರೆ ಪೇಪರ್​ನ್ನು ಹಾಕಿ, ಮೇಲೆ ಬಾಳೆ ಎಲೆ ಹಾಕಬಹುದು. ಮರುಬಳಕೆ ಆಗುವಂಥ ತಟ್ಟೆ, ಲೋಟ, ಬಟ್ಟಲು, ಚಮಚಗಳನ್ನೇ ಬಳಸೋಣ. ಯೂಸ್ ಆಂಡ್ ಥ್ರೋ ಬೇಡ.

    ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ವೇದಾಂತ ಭಾರತೀ ಸಂಸ್ಥೆ ದೊಡ್ಡ ಕಾರ್ಯಕ್ರಮ ಆಯೋಜಿಸಿತ್ತು. ಅದರಲ್ಲಿ ಪಾಲ್ಗೊಂಡಿದ್ದ 97 ಸಾವಿರ ಭಕ್ತರಿಗೆ, ಸಾರ್ವಜನಿಕರಿಗೆ ಪ್ರಸಾದ ತಯಾರಿಸಿ, ಬಡಿಸುವ ಜವಾಬ್ದಾರಿ ಅದಮ್ಯ ಚೇತನದ್ದಾಗಿತ್ತು. ಬಡಿಸುವ ವಿಷಯದಲ್ಲಿ ಬೆಂಗಳೂರಿನ ರಾಷ್ಟ್ರೆೊತ್ಥಾನ ಸೇರಿ ಹಲವು ಸಂಘಟನೆಗಳು ನೆರವಾದವು. 97 ಸಾವಿರ ಜನರಿಗೆ ಸ್ಟೀಲ್ ತಟ್ಟೆಯ ಪೂರೈಕೆ ಕಷ್ಟ ಅಂತ ಅಡಿಕೆ ತಟ್ಟೆ ಬಳಸಿದ್ದಿವಿ. ಬ್ರಿಕೆಟ್ಸ್ ಮಾಡಲು ಸಾಧ್ಯ ಎಂಬುದನ್ನು ಖಚಿತ ಪಡಿಸಿಕೊಂಡು ಅಂಥದ್ದೇ ಅಡಿಕೆ ತಟ್ಟೆಗಳನ್ನು ಬಳಸಿದೆವು. ಅದಮ್ಯ ಚೇತನದ ಸ್ಟೀಲ್ ಬ್ಯಾಂಕಿನಲ್ಲಿ 40 ಸಾವಿರ ಸ್ಟೀಲ್ ಚಮಚಗಳಿವೆ. ಅವುಗಳನ್ನೇ ತಂದು, ಮರುಬಳಕೆ ಮಾಡಲು ಸಾಧ್ಯವಾಗುವಂತೆ ಚಮಚ ತೊಳೆಯಲು 20 ಕೌಂಟರ್​ಗಳನ್ನು ಸ್ಥಾಪಿಸಲಾಯಿತು. ಊಟಕ್ಕೆ ಬಿಸಿಬೇಳೆ ಭಾತ್, ಸಿಹಿಅನ್ನ ನೀಡಲಾಯಿತು. ತಟ್ಟೆಯಲ್ಲಿ ಉಳಿದ ಅನ್ನ ಏನು ಮಾಡುವುದು? ಆ ಬಗ್ಗೆ ಮೊದಲೇ ಯೋಚಿಸಿ ನಿರ್ಧಾರಕ್ಕೆ ಬಂದಿದ್ದೆವು. ಉಳಿದ ಅನ್ನವನ್ನು ಬಯೋಗ್ಯಾಸ್​ಗೆ ಬಳಸಲಾಯಿತು. ಚಮಚಗಳನ್ನು ತೊಳೆಯಲು ಬೂದಿ ಮತ್ತು ಇಕೋ ಫ್ರೆಂಡ್ಲಿ ಸೋಪನ್ನು ಬಳಸಲಾಯಿತು, ಅಂಥ ಸೋಪುಗಳನ್ನು ಬ್ರಿಕ್ಸ್ ಎಂಬ ಸಂಸ್ಥೆ ಒದಗಿಸಿತ್ತು. ಪಾತ್ರೆ ತೊಳೆದ ನೀರನ್ನು ಮರುಬಳಕೆ ಮಾಡಲಾಯಿತು. ಹಾಗಾಗಿ, 90 ಸಾವಿರಕ್ಕೂ ಅಧಿಕ ಜನರು ಊಟ ಮಾಡಿದ ಮೇಲೂ ಯಾವುದೇ ತ್ಯಾಜ್ಯ ಆಗಲಿಲ್ಲ.

    ಅಂದಹಾಗೆ, ಕುಡಿಯುವ ನೀರಿಗೆ ಪ್ಲಾಸ್ಟಿಕ್ ಬಾಟಲ್ ಬಳಸಲಿಲ್ಲ. ಬದಲಿಗೆ, 20 ಲೀಟರ್ ನೀರಿನ ಕ್ಯಾನ್ ಅನ್ನು ಸ್ಟೀಲ್ ಡ್ರಮ್​ ಬಗ್ಗಿಸಿ ಸ್ಟಿಲ್ ಲೋಟಗಳಲ್ಲಿ ನೀರು ನೀಡಲಾಯಿತು. ಕುಡಿಯುವ ನೀರಿಗಾಗಿಯೇ 50 ಕೌಂಟರ್, ಊಟ ಬಡಿಸಲು 200 ಕೌಂಟರ್ ಮಾಡಲಾಗಿತ್ತು. ದೊಡ್ಡ ಕಾರ್ಯಕ್ರಮಗಳನ್ನು ಹೀಗೆ ಯಾವುದೇ ಕಸ ಇಲ್ಲದೆ ಮಾಡಬಹುದಾದರೆ, ನಮ್ಮ ಮನೆಗಳ, ಸ್ನೇಹಿತರ ಕಾರ್ಯಕ್ರಮಗಳನ್ನು ಹೀಗೆ ಮಾಡಬಹುದಲ್ಲವೇ?

    ಇತ್ತೀಚಿನ ದಿನಗಳಲ್ಲಿ ಕಾರ್ಯಕ್ರಮಗಳಲ್ಲಿ ರಿಟರ್ನ್ ಗಿಫ್ಟ್ ಕೊಡುವ ಸಂಪ್ರದಾಯ ಬೆಳೆದಿದೆ. ಹೀಗೆ ಗಿಫ್ಟ್ ಕೊಡುವಾಗ ಬಟ್ಟೆಯ ಚೀಲದಲ್ಲೇ ಕೊಡಿ. ಮದುವೆ, ಮುಂಜಿಗೆ ಮಾಡಿದ ಬ್ಯಾಕ್​ಡ್ರಾಪ್ (ಹಿಂದಿನ) ಅಲಂಕಾರ ಮರುಬಳಕೆ ಆಗುವಂತಿರಲಿ. ಅತಿಥಿಗಳಿಗೆ ಹಾರ ಹಾಕುವ ಬದಲಿಗೆ ಹೂವಿನ ಗಿಡ ನೀಡಿ. ಪ್ಲಾಸ್ಟಿಕ್ ಜರಿಯ ಶಾಲು ನೀಡದೆ ಬಳಸಬಹುದಾದಂಥ ಶಾಲು ನೀಡೋಣ. ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡೋಣ. ಅತಿಥಿಗಳನ್ನು ಸೌಜನ್ಯದಿಂದ, ಸಿಹಿ ಮಾತುಗಳಿಂದ ಗೌರವಿಸೋಣ. ಕಾರ್ಯಕ್ರಮಗಳೆಂದರೆ, ದುಡ್ಡು, ಆಹಾರ ಪೋಲು ಮಾಡುವಂತಾಗಬಾರದು. ಏಕೆಂದರೆ, ಇಡೀ ಜಗತ್ತು ನಮ್ಮನ್ನು ನೋಡುತ್ತಿದೆ. ಯುವಪೀಳಿಗೆ ನಮ್ಮನ್ನು ನೋಡುತ್ತಿದೆ. ಅದ್ದೂರಿತನಕ್ಕಿಂತ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆಯಬೇಕು. ಆ ಬಗ್ಗೆ ನಮ್ಮ ಗಮನ ಇರಲಿ. ಒಂದೇ ದಿನದಲ್ಲಿ ಸೃಷ್ಟಿಸುವ ಕಸ ಅದು ವಿಂಗಡಣೆ ಆಗಿ, ಸಾಗಾಟವಾಗಿ ಮರಳಿ ಮಣ್ಣಿಗೆ ಸೇರುವ ಪ್ರಕ್ರಿಯೆಗೆ ಎಷ್ಟೋ ದಿನಗಳು ಬೇಕು. ಹಾಗಾಗಿ, ಕಸ ಸೃಷ್ಟಿಸದಿರುವುದೇ ಇದಕ್ಕೆ ಉತ್ತಮ ಪರಿಹಾರ. ಮೊದಲ ಹೆಜ್ಜೆಯಾಗಿ ನಮ್ಮ ಮನೆಗಳನ್ನು ಶೂನ್ಯಕಸವಾಗಿ ಮಾರ್ಪಡಿಸೋಣ, ಬಳಿಕ ಕಾರ್ಯಕ್ರಮಗಳನ್ನು ಸಹ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts