More

    ಬಜೆಟ್​ನಲ್ಲಿ ಕಟ್ಟಕಡೆಯ ಜಿಲ್ಲೆಗಳಿಗೆ ಸೊನ್ನೆ!

    ರಾಜ್ಯ ಬಜೆಟ್ ಮಂಡಿಸುವ ವೇಳೆಗೆ ಎಲ್ಲರನ್ನೂ ಸಂತೃಪ್ತಿಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪನವರು ಹರಸಾಹಸ ಮಾಡಿದ್ದಾರೆ. ಅವರ ಪ್ರಯತ್ನದಲ್ಲಿ, ಪ್ರಾಮಾಣಿಕತೆಯಲ್ಲಿ ಯಾವ ಶಂಕೆಯೂ ಇಲ್ಲ. ಆದರೆ ವಸ್ತುಸ್ಥಿತಿ ನೋಡಬೇಕು. ನಮ್ಮ ಅನೇಕ ಜಿಲ್ಲೆಗಳು ಬಡವಾಗಿವೆ. ಕಡುಬಡವಾಗಿವೆ. ಇನ್ನೂ ಅನೇಕ ಜಿಲ್ಲೆಗಳು ಅತಿ ಕಡುಬಡವಾಗಿವೆ. ಈ ಅತಿ ಕಡುಬಡವ ಜಿಲ್ಲೆಗಳಿಗೆ ಈಗ ಬಿಸಿ ಮುಟ್ಟಿದೆ. ಈಗ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಈ ಮುನ್ನ ಬಸ್ ದರ ಏರಿಕೆ, ಅದಕ್ಕೂ ಮೊದಲು ಹಾಲು ದರ ಏರಿಕೆ ಬಂದಿದೆ. ಇವುಗಳಿಂದಾಗಿ ಅತಿ ಕಡುಬಡವ ಜಿಲ್ಲೆಗಳು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.

    ಉದಾಹರಣೆಗೆ ಚಾಮರಾಜನಗರ ಜಿಲ್ಲೆ. ಆರ್ಥಿಕವಾಗಿ ರಾಜ್ಯದಲ್ಲಿ ಅತ್ಯಂತ ಕಡುಬಡತನದಲ್ಲಿರುವ ಜಿಲ್ಲೆ ಇದು. ಈ ಬಜೆಟ್ ನಲ್ಲಿ ಇಲ್ಲಿ ಶೂನ್ಯಸಂಪಾದನೆ ಆಗಿದೆ! ಆರ್ಥಿಕವಾಗಿ ಕಡುಬಡತನದಲ್ಲಿ ಇರುವ ಇನ್ನೂ ಐದು ಜಿಲ್ಲೆಗಳ ಹಣೆಬರಹವೂ ಇದೇ ಆಗಿದೆ! ಇದು ವಿಚಿತ್ರ ಆದರೂ ಸತ್ಯ.

    ಬಜೆಟ್​ನಲ್ಲಿ ಕಟ್ಟಕಡೆಯ ಜಿಲ್ಲೆಗಳಿಗೆ ಸೊನ್ನೆ!ಜಿಲ್ಲೆಗಳ ಆರ್ಥಿಕ ಶಕ್ತಿಯ ಮಾನದಂಡ ಎಂದರೆ ಜಿಲ್ಲೆಯಲ್ಲಿ ಬ್ಯಾಂಕುಗಳಲ್ಲಿರುವ ಠೇವಣಿಗೆ ಮತ್ತು ಬ್ಯಾಂಕುಗಳು ನೀಡಿರುವ ಸಾಲದ ಮೊತ್ತ. ಈ ಎರಡು ಬಾಬ್ತುಗಳಲ್ಲಿ ಕಟ್ಟಕಡೆಯ ಜಿಲ್ಲೆ ನಮ್ಮ ರಾಜ್ಯದಲ್ಲಿ ಎಂದರೆ ಅದು ಚಾಮರಾಜನಗರ. ಇದರ ಜೋಡಿಯಾಗಿರುವ ಜಿಲ್ಲೆಗಳು- ಬೀದರ್ ಕೊಡಗು ಯಾದ್ಗೀರ್ ಚಿಕ್ಕಬಳ್ಳಾಪುರ ಕೋಲಾರ ಗದಗ ಕೊಪ್ಪಳ ರಾಮನಗರ ಜಿಲ್ಲೆಗಳು. ಈ ಜಿಲ್ಲೆಗಳು ಚಾಮರಾಜನಗರದಂತೆ ಬಜೆಟ್ ನಲ್ಲಿ ಶೂನ್ಯ ಸಂಪಾದನೆ ಇಲ್ಲ ಅಲ್ಪಸ್ವಲ್ಪ ಹಣ ಕಂಡಿರುವ ಇತರ ಜಿಲ್ಲೆಗಳು. ಅಂದರೆ ಕಡುಬಡವ ಜಿಲ್ಲೆಗಳ ಬಗ್ಗೆ ಅಲಕ್ಷ್ಯ ತೋರಿರುವುದು ಇಲ್ಲಿ ಸ್ಪಷ್ಟವಾಗಿದೆ. ಇದೊಂದು ಅಕ್ಷಮ್ಯ ನಿಸ್ಸೀಮ ನಿರ್ಲಕ್ಷದ ವಿಚಾರ.

    ಇದಕ್ಕೆ ನಾನು ಮುಖ್ಯಮಂತ್ರಿ ಯಡಿಯೂರಪ್ಪ ನವರನ್ನು ದೂಷಿಸುವುದಿಲ್ಲ. ಏಕೆಂದರೆ ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ ರಾಜಕೀಯ ಕುಚೇಷ್ಟೆಯು ಮಿತಿಮೀರಿ ನಡೆಯುತ್ತಾ ಬಂದಿದೆ. ಇದರ ದುರ್ಲಾಭ ಪಡೆದಿರುವುದು ಅಧಿಕಾರಶಾಹಿ! ಬೆಂಗಳೂರಿನಲ್ಲಿರುವ ಅಧಿಕಾರಶಾಹಿಯು ರಾಜ್ಯದ ಹಣಕಾಸು ಹಾಗೂ ಬಂಡವಾಳವನ್ನು ತನ್ನ ಕಪಿಮುಷ್ಟಿಯಲ್ಲಿ ಹಿಡಿದುಕೊಂಡಿದೆ. ಇದೇ ಈಗ ಬಜೆಟ್ ನಲ್ಲೂ ಬಿಂಬಿತವಾಗಿರುವುದು. ಈ ಬಜೆಟ್ ನಲ್ಲಿ ಹಿಂದಿನ ಎಲ್ಲ ಬಜೆಟ್ ಗಳಂತೆ ಅಧಿಕಾರಶಾಹಿ ಮೇಲುಗೈ ಸಾಧಿಸಿರುವುದು ಎದ್ದು ಕಾಣುತ್ತದೆ. ಹೀಗಾಗಿ ಬಜೆಟ್ನಲ್ಲಿ ಮುಂದುವರೆದ ಜಿಲ್ಲೆಗಳದ್ದೇ ಕಾರುಬಾರು. ಬೇರೆ ಜಿಲ್ಲೆಗಳಿಗೆ ಸಣ್ಣ-ಪುಟ್ಟ ಮರ್ಯಾದೆ ತೋರಲಾಗಿದೆ! ಅದು ಹೇಗಿದೆ ಗೊತ್ತಾ ? ವೇದಿಕೆಯ ಮೇಲೆ ಕುರ್ಚಿ ಹಾಕಿ ಕೂರಿಸಿ, ಮೈಸೂರು ಪೇಟ ತೊಡಿಸಿ, ಶಾಲುಹೊದಿಸಿ, ಏಲಕ್ಕಿ ಹಾರ ಹಾಕಿ, ಕೈಗೆ ಫಲಕ ನೀಡಿ, ಪಂಚಫಲಗಳನ್ನು ನೀಡಿಬಿಟ್ಟರೆ ಅದು ಸಾರ್ವಜನಿಕ ಮರ್ಯಾದೆ! ಈ ಪೇಟ ಶಾಲು ಹಾರ ಫಲಕ ಪಂಚ ಫಲಗಳನ್ನು ಕೈಯಿಂದ ಕೆಳಗಿಳಿಸಿ ಬಿಟ್ಟರೆ ಉಳಿದಿದ್ದೇನು? ಶೂನ್ಯ ಸಂಪಾದನೆ! ಈ ಬಾರಿ ಬಜೆಟ್ ನಲ್ಲಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಿಗೆ ಮೈಸೂರು ಪೇಟದ ಮರ್ಯಾದೆ ಆಗಿದೆ.

    ಬಜೆಟ್ ನಲ್ಲಿ ಶೂನ್ಯ ಸಂಪಾದನೆ ಮಾಡಿದ ಏಳು ಜಿಲ್ಲೆಗಳಲ್ಲಿ ಚಿಕ್ಕಮಗಳೂರು ಮಾತ್ರ ತುಸು ವಾಸಿ. ಉಳಿದ ಆರು ಜಿಲ್ಲೆಗಳು ಎಷ್ಟು ಕಟ್ಟಕಡೆಯ ಸ್ಥಿತಿಯಲ್ಲಿವೆ ನೀವೇ ನೋಡಿ: 2016 -17 ರಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಬ್ಯಾಂಕುಗಳಲ್ಲಿದ್ದ ಠೇವಣಿ ಹಣ 5.57 ಲಕ್ಷ ಕೋಟಿ ರೂಪಾಯಿ. ಅದೇ ಚಾಮರಾಜನಗರದಲ್ಲಿ ಠೇವಣಿ ಹಣ 2519 ಕೋಟಿ ಮಾತ್ರ! ಬ್ಯಾಂಕುಗಳಿಂದ ಶ್ರೀಮಂತ ಬೆಂಗಳೂರು ಪಡೆದ ಸಾಲದ ಮೊತ್ತ 3.88 ಲಕ್ಷ ಕೋಟಿ; ಚಾಮರಾಜನಗರ ಜಿಲ್ಲೆ ಪಡೆದ ಸಾಲ 2361 ಕೋಟಿ ! ಇದು ಆನೆಗೂ ಇಲಿಗೂ ಇರುವಷ್ಟು ಅಂತರ. ಇನ್ನು ಬೀದರ್ ಜಿಲ್ಲೆ ನೋಡಿ. ಇಲ್ಲಿ ಠೇವಣಿ ಹಾಗೂ ಸಾಲದ ಮೊತ್ತ 4344 ಕೋಟಿ ಹಾಗೂ 3292 ಕೋಟಿ ರೂಪಾಯಿ. ಇದು ಬೆಂಗಳೂರಿನ ಗಾತ್ರದ ಮುಂದೆ ಕ್ಷುಲ್ಲಕ. ಯಾದಗಿರಿ ಜಿಲ್ಲೆಯೂ ಕಟ್ಟಕಡೆಯ ಜಿಲ್ಲೆಗಳ ಪೈಕಿ ಅತ್ಯಂತ ಕೊಟ್ಟ ಕೊನೆಯಲ್ಲಿದೆ. ಅದರ ಠೇವಣಿ – ಸಾಲದ ಬಾಬ್ತು 2206 ಕೋಟಿ ಹಾಗೂ 2633 ಕೋಟಿ ರೂಪಾಯಿ. ಇದು ಅತ್ಯಂತ ಹೀನ ಆರ್ಥಿಕ ಸ್ಥಿತಿಯಲ್ಲಿದೆ. ಇನ್ನು ಗದಗ ಜಿಲ್ಲೆಯ ಪಾಲು 4485 ಕೋಟಿ ಹಾಗೂ 3849 ಕೋಟಿ ರೂಪಾಯಿ ಇದೆ. ಕೊಪ್ಪಳ ಜಿಲ್ಲೆಯಲ್ಲಿ ಒಂದು ಭಾಗ ಭತ್ತದ ಜಮೀನು ಸೇರಿರುವುದರಿಂದ ಅದರ ಠೇವಣಿ 4033 ಕೋಟಿ ಹಾಗೂ ಸಾಲ 4208 ಕೋಟಿ ರೂ. ಆಗಿದೆ. ಇವೆಲ್ಲಾ ಬೆಂಗಳೂರಿನಿಂದ ದೂರ ಇರುವ ಹಾಗೂ ಆರ್ಥಿಕವಾಗಿ ಕಗ್ಗತ್ತಲಿನಲ್ಲಿ ಇರುವ ಜಿಲ್ಲೆಗಳು.

    ದೀಪದ ಕೆಳಗೆ ನೆರಳು ಎಂಬ ಮಾತಿದೆ. ಬೆಂಗಳೂರು ಬೆಳಕಾಗಿದ್ದರೂ ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆ ಮಾತ್ರ ಉತ್ತರ ಕರ್ನಾಟಕದ ಜಿಲ್ಲೆಗಳಂತೆ ಕತ್ತಲೆಯಲ್ಲಿದೆ! ಅಲ್ಲಿನ ಠೇವಣಿ ಮೊತ್ತ 4014 ಕೋಟಿ ಹಾಗೂ ಸಾಲ 3444 ಕೋಟಿ ರೂಪಾಯಿ ಇದ್ದು ಇದು ಬೀದರ್ ಜೊತೆಯಲ್ಲಿ ಇದೆ. ಪಕ್ಕದ ಕೋಲಾರ ಜಿಲ್ಲೆ ಕೂಡ ಹಿಂದೆ ಬಿದ್ದಿದೆ. ಈ ಜಿಲ್ಲೆ ಶ್ರೀಮಂತ ಇರಬಹುದು; ಆದರೆ ಜನ ಮಾತ್ರ ಬಡವರು. ಅವರ ಠೇವಣಿ 6555 ಕೋಟಿ ಹಾಗೂ ಸಾಲ 4909 ಕೋಟಿ ರೂಪಾಯಿ ಇದೆ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕಂಗೊಳಿಸುವ ರಾಮನಗರ ಜಿಲ್ಲೆ ಕೂಡ ಕಡುಬಡವರ ಪಾಲನ್ನು ಹೆಚ್ಚಾಗಿ ಹೊಂದಿದೆ. ಇಲ್ಲಿನ ಠೇವಣಿ 6436ಕೋಟಿ ಇದ್ದರೆ ಪಡೆದ ಸಾಲ 4671 ಕೋಟಿ ರೂಪಾಯಿ ಮಾತ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts