ಶೂನ್ಯ ಬಂಡವಾಳ ಕೃಷಿಗೆ ಸಿದ್ಧತೆ

ಸಂತೋಷ ದೇಶಪಾಂಡೆ ಬಾಗಲಕೋಟೆ: ಕೃಷಿ ಪರಿಕರಗಳ ಬೆಲೆ ಹೆಚ್ಚಳ, ಅನಿಶ್ಚಿತ ಮಳೆ, ಕೃಷಿ ಉತ್ಪನ್ನಗಳ ಬೆಲೆ ಕುಸಿತ ಅನ್ನದಾತರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದು, ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದಕ್ಕೆಲ್ಲ ಕೊನೆ ಹಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಶೂನ್ಯ ಬಂಡವಾಳ ಸಹಜ ಕೃಷಿ ಯೋಜನೆ ಜಾರಿಗೆ ಮುಂದಾಗಿದ್ದು, ಕೋಟೆನಾಡಲ್ಲೂ ಅನುಷ್ಠಾಗೊಳ್ಳುತ್ತಿದೆ!

ಹೌದು, ಸತತ ಬರದಿಂದ ನಲುಗಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಶೂನ್ಯ ಬಂಡವಾಳ ಸಹಜ ಕೃಷಿ ಯೋಜನೆ ಜಾರಿ ಮಾಡಲು ಕೃಷಿ ಇಲಾಖೆ ಸಿದ್ಧತೆ ನಡೆಸಿದೆ. ಈಗಾಗಲೇ ಪ್ರಥಮ ಹಂತದಲ್ಲಿ ಯೋಜನೆ ಅಗತ್ಯವಿರುವ 350 ರಿಂದ 360 ಹೆಕ್ಟೇರ್ ಭೂಮಿಯಲ್ಲಿ ಯೋಜನೆ ಜಾರಿ ಮಾಡಲು ರೈತರನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿದೆ.

ಬಂಡವಾಳವಿಲ್ಲದ ಕೃಷಿ: ನೈಸರ್ಗಿಕವಾಗಿ ಬರುವ ಬೆಳೆಗಳನ್ನು ಕೃಷಿಕರು ಬೆಳೆಯಲು ಪ್ರೋತ್ಸಾಹ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶ. ಇಲ್ಲಿನ ಹವಾಮಾನಕ್ಕೆ ಅನುಗುಣವಾಗಿ ಬರುವ ಹಣ್ಣು, ತರಕಾರಿ ಸೇರಿ ವಿವಿಧ ಬೆಳೆಗಳನ್ನು ಹೇಗೆ ಬೆಳೆಬಹುದು ಎಂದು ರೈತರಿಗೆ ಮಾಹಿತಿ ನೀಡಲಾಗುತ್ತದೆ. ಅಲ್ಲದೆ ಮಾರುಕಟ್ಟೆ ಕುರಿತು ರೈತರಲ್ಲಿ ತಿಳಿವಳಿಕೆ ಮೂಡಿಸಲಾಗುತ್ತದೆ. ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ವಿಜ್ಞಾನಿಗಳು ನಿರಂತವಾಗಿ ಅನ್ನದಾತರಿಗೆ ಮಾರ್ಗದರ್ಶನ ಮಾಡುತ್ತಾರೆ. ಅಲ್ಲದೆ ದೇಸಿ ಹಸುವಿನ ಗಂಜಲ ಹಾಗೂ ಸೆಗಣಿ ಆಧಾರಿತ ಕಷಾಯಗಳಿಂದ ಬೀಜಗಳ ಲೇಪನ, ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳ ಸಂಖ್ಯೆ ವೃದ್ಧಿಸಲು ಹಾಗೂ ಮಣ್ಣಿನ ವಾಯುಗುಣ ವೃದ್ಧಿಸಲು ಆದ್ಯತೆ ನೀಡಲಾಗುತ್ತದೆ.

ರೈತರಿಗೆ ಕೃಷಿ ಲಾಭದಾಯಕವಾಗಬೇಕು, ಜನರಿಗೆ ಆರೋಗ್ಯಕರವಾದ ಆಹಾರ ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ಆಂಧ್ರಪ್ರದೇಶದಲ್ಲಿ ಈ ಯೋಜನೆ ಜಾರಿಯಲ್ಲಿದೆ. ಇದೇ ಮಾದರಿಯನ್ನು ರಾಜ್ಯ ಸರ್ಕಾರ ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದಿದ್ದು, ಜಿಲ್ಲೆಯಲ್ಲೂ ಜಾರಿಯಾಗಿದೆ. ಸರ್ಕಾರ ಅಂದುಕೊಂಡಂತೆ ಈ ಯೋಜನೆ ಯಶಸ್ಸು ಕಾಣುವುದೇ ಕಾದು ನೋಡಬೇಕಿದೆ.

ಸರ್ಕಾರದಿಂದ ಸಮಿತಿ ರಚನೆ: ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ವಿವಿಧ ಹಂತದ ಸಮಿತಿ ರಚನೆ ಮಾಡಿದೆ. ಜಿಲ್ಲಾಮಟ್ಟದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಅಧ್ಯಕ್ಷರು. ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ ಇಲಾಖೆ ಉಪನಿರ್ದೇಶಕರು, ಮೂರು ಜನ ರೈತರು ಸದಸ್ಯರಾಗಿರುತ್ತಾರೆ. ಕ್ಲಸ್ಟರ್ ಮಟ್ಟದಲ್ಲಿ ಸಹಾಯಕ ಕೃಷಿ ನಿರ್ದೇಶಕರು, ಸಂಶೋಧಕ ಸಹಾಯಕ, ರೈತ ಪ್ರತಿನಿಧಿ, ಕ್ಷೇತ್ರ ಸಹಾಯಕರು, ಸಮುದಾಯ ಸಂಪನ್ಮೂಲ ವ್ಯಕ್ತಿ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕಾರ್ಯನಿರ್ವಹಿಸುತ್ತಾರೆ. ಈ ಸಮಿತಿಯ ಪ್ರತಿಯೊಬ್ಬರಿಗೂ ಜವಾಬ್ದಾರಿ ನೀಡಲಾಗಿದೆ.

ಆಯ್ಕೆಯಾದ ರೈತರಿಗೆ ಪ್ರೋತ್ಸಾಹ ಧನ: ಶೂನ್ಯ ಬಂಡವಾಳ ಸಹಜ ಕೃಷಿ ಯೋಜನೆಗೆ ಆಯ್ಕೆಯಾದ ರೈತರಿಗೆ ವಿವಿಧ ರೀತಿಯಲ್ಲಿ ಸರ್ಕಾರ ಪ್ರೋತ್ಸಾಹ ಧನ ನೀಡುತ್ತದೆ. ವೈಯಕ್ತಿಕ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ರೈತನಿಗೆ ಒಂದು ಹೆಕ್ಟೇರ್ ಪ್ರದೇಶ ಸೀಮಿತಗೊಳಿಸಿ ಪ್ರತಿ ಎಕರೆಗೆ 875 ರೂ. ಗರಿಷ್ಠ ಮೊತ್ತ ನೀಡಲಾಗುತ್ತದೆ. ದ್ರವರೂಪದ ಬೀಜಾಮೃತ, ಜೀವಾಮೃತ ಇತ್ಯಾದಿ ತಯಾರಿಕೆಗೆ 1500 ರೂ., ಇವುಗಳ ತಯಾರಿಸಲು ಬೇಕಾಗುವ ಕಚ್ಚಾವಸ್ತುಗಳಿಗೆ 1500 ರೂ. ಹಾಗೂ ಸಮುದಾಯ ಚಟುವಟಿಕೆಗಳ ಕಾರ್ಯಕ್ರಮದಡಿಯಲ್ಲಿ ನಾಟಿ ತಳಿಗಳ ಸಮುದಾಯ ಬೀಜ ಬ್ಯಾಂಕ್ ಸ್ಥಾಪನೆಗೆ 10 ಸಾವಿರ ರೂ. ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳಿಗೆ 500 ರೂ. ಸೇರಿ ವಿವಿಧ ರೀತಿಯಲ್ಲಿ ಪ್ರೋತ್ಸಾಹ ಧನ ನೀಡಲು ಸರ್ಕಾರ ನಿರ್ಧರಿಸಿದೆ.