Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಯುವಕರು ಹಚ್ಚಿದ ಜ್ಞಾನದೀಪ ಪ್ರಕಾಶಿಸುತ್ತಿದೆ ನೋಡಾ!

Wednesday, 17.01.2018, 3:05 AM       No Comments

ದೊಡ್ಡ ದೊಡ್ಡ ಪ್ಯಾಕೇಜುಗಳಿಂದ ಸಿಗುವ ಸಂತೋಷಕ್ಕಿಂತ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡುವ ಮೂಲಕ ದೊರೆಯುವ ಆತ್ಮಸಂತೃಪ್ತಿಯೇ ಶ್ರೇಷ್ಠ ಎಂಬ ಭಾವಸಿರಿವಂತಿಕೆ ಯುವಸಮೂಹದಲ್ಲಿ ಬಲಗೊಳ್ಳುತ್ತಿದೆ. ಇದರಿಂದ ಬತ್ತಿಹೋಗಿದ್ದ ಅಂತಃಕರಣದ ಸೆಲೆ ಮತ್ತೆ ಚಿಮ್ಮುವಂತಾಗಿದ್ದರೆ, ದೀನದುರ್ಬಲರ ಬದುಕಲ್ಲೂ ಉತ್ಕರ್ಷದ ಬೆಳ್ಳಿರೇಖೆ ಮೂಡುತ್ತಿದೆ.

 ಅವರೆಲ್ಲ ದಿಲ್ಲಿಯ ಪ್ರತಿಷ್ಠಿತ ಐಐಟಿಯಲ್ಲಿ ಓದುತ್ತಿದ್ದ ಹುಡುಗ/ಹುಡುಗಿಯರು. ಅದರಲ್ಲಿ ಈ ಆರು ಜನ ಪಕ್ಕಾ ಸ್ನೇಹಿತರು. ರಚನಾತ್ಮಕವಾಗಿ ಏನಾದರೂ ಮಾಡಬೇಕು, ಅದರ ಫಲಿತಾಂಶದಿಂದ ಸಮಾಜಕ್ಕೆ ಲಾಭವಾಗಬೇಕು ಎಂದೆಲ್ಲ ಯೋಚಿಸುವವರು. ವಿಶೇಷವೆಂದರೆ ಇವರ ಚರ್ಚೆ-ಹರಟೆಗಳ ಹೊತ್ತಲ್ಲಿ ಎಂದೂ ನಕಾರಾತ್ಮಕ ಸಂಗತಿಗಳು ಪ್ರವೇಶಿಸುತ್ತಿರಲಿಲ್ಲ. ಅಂಥ ಸಂಗತಿಗಳ ಬಗ್ಗೆ ರ್ಚಚಿಸುವುದೆಂದರೆ ಅಮೂಲ್ಯ ಸಮಯ, ದಿನ ಮಾತ್ರವಲ್ಲ ಮನಸ್ಸನ್ನೂ ಹಾಳು ಮಾಡಿಕೊಂಡಂತೆ ಎಂದು ನಂಬಿದವರು. ಅದಕ್ಕೆಂದೆ ಅವರಿಗೆ ವಿಭಿನ್ನವಾಗಿ ಚಿಂತಿಸಲು ಸಾಧ್ಯವಾಯಿತು. ವಾರಾಂತ್ಯದಲ್ಲಿ ಉಳಿದ ಸಹಪಾಠಿಗಳೆಲ್ಲ ಮಾಲ್, ಕ್ಲಬ್, ಟಾಕೀಸು ಅಂತ ಸುತ್ತುತ್ತಿದ್ದರೆ ಆ ಕೃತಕ ಸಂತೋಷ ತಮಗೆ ಬೇಕಿಲ್ಲ ಎಂದು ತೀರ್ವನಿಸಿ ಇವರು ಮುಖಮಾಡುತ್ತಿದ್ದದ್ದು ಸಮೀಪದ ಹಳ್ಳಿಗಳತ್ತ. ಅಲ್ಲಿ ಹೋಗಿ ಗ್ರಾಮಸ್ಥರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವುದು, ಯುವಕರಲ್ಲಿ ಶಿಕ್ಷಣ ಮುಂದುವರಿಸಲು ಪ್ರೇರಣೆ ತುಂಬುವುದು, ಶಾಲಾ ಮಕ್ಕಳನ್ನು ಒಟ್ಟಾಗಿಸಿ ಅವರಿಗೆ ಮನರಂಜನೆ ವಿಧಾನದಲ್ಲಿ ಗಣಿತ, ವಿಜ್ಞಾನ ಹೇಳಿಕೊಡುವುದು ಹೀಗೆ ವಾರಾಂತ್ಯವನ್ನು ಸಾರ್ಥಕವಾಗಿ ಕಳೆದು ‘ಮತ್ತೆ ಮುಂದಿನ ವಾರ ಬರ್ತೇವೆ…’ ಅಂತ ಆ ಹಳ್ಳಿಗರ ಮೊಗದಲ್ಲಿ ನಗುಚಿಮ್ಮಿಸಿ ಹೊರಡುವರು. ಸಾಕಷ್ಟು ಸಮಯ ಹೀಗೇ ನಡೆಯಿತು. ಕ್ರಮೇಣ ಹಳ್ಳಿಗರು ಆಪ್ತರಾಗತೊಡಗಿದರು, ಈ ಯುವಸಮೂಹದ ಬರುವಿಕೆಗಾಗಿ ಕಾತರದಿಂದ ಕಾಯತೊಡಗಿದರು.

ಇದರ ಮಧ್ಯೆ ಇವರಿಗೆ ಕಾಡುತ್ತಿದ್ದ ಪ್ರಶ್ನೆಗಳು- ‘ಇಂದಿನ ಆಧುನಿಕ ಜಮಾನಾದಲ್ಲೂ ಗ್ರಾಮೀಣಿಗರು ಶಿಕ್ಷಣದ ಬಗ್ಗೆ ಇಷ್ಟು ಉದಾಸೀನ ಮನೋಭಾವ ಹೊಂದಿದ್ದಾರಲ್ಲ? ನಗರ ಹಾಗೂ ಹಳ್ಳಿಗಳ ನಡುವಿನ ಈ ದೊಡ್ಡ ಕಂದಕ ನಿವಾರಣೆ ಮಾಡುವುದು ಹೇಗೆ? ಶಿಕ್ಷಣವಿಲ್ಲದೆ ಹಳ್ಳಿಗಳ ಪ್ರಗತಿಯನ್ನು ಹೇಗೆ ತಾನೆ ನಿರೀಕ್ಷಿಸಲು ಸಾಧ್ಯ?’- ಈ ಎಲ್ಲ ಪ್ರಶ್ನೆಗಳಿಗೆ ತಾವೇ ಉತ್ತರ ಹುಡುಕುವ ಪ್ರಯತ್ನ ಮಾಡುತ್ತ ಹಳ್ಳಿಗಳಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಪ್ರಾಧಾನ್ಯತೆ ನೀಡಿದರು. ಅದು 2012ರ ಸಮಯ. ಅವರ ಐಐಟಿ ವ್ಯಾಸಂಗ ಕೊನೆಗೊಂಡಿತು. ಉತ್ತಮ ಅಂಕ, ಜ್ಞಾನದೊಂದಿಗೆ ಕ್ಯಾಂಪಸ್ ಬದುಕಿನಿಂದ ಹೊರಬಂದ ಅವರಿಗಾಗಿ ಉತ್ತಮ ಕೆಲಸ ಕಾಯುತ್ತಿತ್ತು! ಬಹುಬೇಗನೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ದೊಡ್ಡ ಸಂಬಳದ ಕೆಲಸವೂ ಸಿಕ್ಕಿತು. ಆದರೆ ಅವರು ನಿರ್ಧರಿಸಿದರು- ನೌಕರಿ, ಮನೆ ಇಷ್ಟರಲ್ಲೇ ಬದುಕು ಕಳೆದುಹೋಗಬಾರದು. ವಿಶಿಷ್ಟವಾಗಿ ಒಂದಿಷ್ಟು ಕೆಲಸ ಮಾಡಿ ಸಮಾಜಕ್ಕೆ ತಮ್ಮಿಂದಾದ ಕೊಡುಗೆ ನೀಡಬೇಕು ಎಂದು. ಕಂಪ್ಯೂಟರ್ ವಿಜ್ಞಾನದಲ್ಲಿ ಇಂಜನಿಯರಿಂಗ್ ಪದವಿ ಪಡೆದ ನವೀನ್ ಕುಮಾರ್ ಮಿಶ್ರಾ ಈ ತಂಡಕ್ಕೆ ನಾಯಕ. ನವೀನ್​ರ ಈ ಮಾತಿಗೆ, ಚಿಂತನೆಗೆ ಗೆಳೆಯರು ಒಕ್ಕೊರಲಿನಿಂದ ಒಪ್ಪಿಗೆ ನೀಡಿದರು. ಹಳೆಯ ಗೆಳೆಯರ ಜತೆ ಒಂದಿಷ್ಟು ಹೊಸ ಗೆಳೆಯರೂ ಸೇರಿಕೊಂಡರು. ಕಂಪ್ಯೂಟರ್ ವಿಜ್ಞಾನದಲ್ಲಿ ಎಂ.ಟೆಕ್ ಮುಗಿಸಿದ ಅನಿಲ್ ಮಹೇಶ್ವರಿ, ಸಿವಿಲ್ ಇಂಜಿನಿಯರಿಂಗ್ ಪದವೀಧರ ರವಿ ಅಗರ್​ವಾಲ್, ಪ್ರದೀಪ್ ಕುಮಾರ್, ಇಂಜಿನಿಯರಿಂಗ್ (ಇಲೆಕ್ಟ್ರಾನಿಕ್ಸ್) ಬಳಿಕ ಲಖನೌದ ಐಐಎಮ್ಲ್ಲಿ ಎಂಬಿಎ ಪೂರ್ಣಗೊಳಿಸಿದ ರಾಜನ್ ಗುಂದಲ್, ದಿಲ್ಲಿಯಲ್ಲಿ ನಿರ್ವಹಣಾಶಾಸ್ತ್ರದಲ್ಲಿ ಪಿ.ಎಚ್​ಡಿ ಮಾಡುತ್ತಿರುವ ಮೋನಿಕಾ ಸನ್​ಸನ್​ವಾಲ್ ಜತೆಯಾದರು.

ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು, ಅವರನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸಬೇಕು, ತನ್ಮೂಲಕ ಹಳ್ಳಿ-ನಗರ ನಡುವಿನ ಅಂತರವನ್ನು ನಿವಾರಿಸಬೇಕು ಎಂದು ನಿರ್ಧರಿಸಿ ‘ವಿಕಲ್ಪ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು (ಫೆಬ್ರವರಿ, 2013). ಇದಕ್ಕಾಗಿ ಪ್ರತಿ ಶನಿವಾರ, ಭಾನುವಾರ ದಿಲ್ಲಿಯಿಂದ ರೇವಾಡಿಗೆ (ಹರಿಯಾಣ) ತೆರಳಿ ಸರ್ಕಾರಿ ಶಾಲೆಯ ಮಕ್ಕಳು ವಿಜ್ಞಾನ, ಗಣಿತದಲ್ಲಿ ಗಟ್ಟಿಯಾಗುವಂತೆ ಮಾಡಿದರು. ವಿಷಯಗಳ ಮೂಲಜ್ಞಾನ ಪಡೆದುಕೊಳ್ಳದೆ ಮುಂದಿನ ಕಲಿಕೆ ಸಾಧ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಶಿಕ್ಷಕರಿಗೂ ಹೊಸ ಬೋಧನಾ ಕೌಶಲಗಳನ್ನು ಹೇಳಿಕೊಟ್ಟರು. ಮೊದಲೆಲ್ಲ ಪಾಲಕರಾಗಲಿ, ಶಿಕ್ಷಕರಾಗಲಿ ಇವರ ಕಲಿಕಾಕೇಂದ್ರಕ್ಕೆ ಮಕ್ಕಳನ್ನು ಕಳುಹಿಸಲು ಒಪ್ಪುತ್ತಿರಲಿಲ್ಲ. ಆದರೆ ಕಲಿಕೆಯಲ್ಲಿ ತೀರಾ ಸಾಮಾನ್ಯವಾಗಿದ್ದ ಮಕ್ಕಳೂ ಕೂಡ ಇಲ್ಲಿನ ಪರಿಣಾಮಕಾರಿ ಬೋಧನೆಯಿಂದ ಶಾಲೆಗೆ ಟಾಪರ್ ಆಗುತ್ತಿದ್ದಂತೆ ಉಳಿದ ಪಾಲಕರು ಸ್ವಯಂಪ್ರೇರಣೆಯಿಂದ ಮಕ್ಕಳನ್ನು ಕಳುಹಿಸಲು ಆರಂಭಿಸಿದರು. ಮಕ್ಕಳ ಸಂಖ್ಯೆ ಹೆಚ್ಚುತ್ತಿದ್ದಂತೆ ಬ್ಯಾಚ್​ಗಳಾಗಿಸಲಾಯಿತು. ಕಲಿಸಲು ಮತ್ತಷ್ಟು ಐಐಟಿ ಪದವೀಧರರನ್ನು ಕರೆತರಲಾಯಿತು. ನೋಡುನೋಡುತ್ತಿದ್ದಂತೆ ‘ವಿಕಲ್ಪ’ದ ಮತ್ತಷ್ಟು ಶಾಖೆಗಳು ರೇವಾಡಿ ಜಿಲ್ಲೆಯ ಹಳ್ಳಿಗಳಲ್ಲಿ ಉದಯಿಸಿದವು. ಅಲ್ಲೆಲ್ಲ ಇದೇ ರೀತಿ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದ್ದು, ಶೈಕ್ಷಣಿಕ ಸಾಧನೆ ಗಮನಾರ್ಹವಾಗಿದೆ. ಇಲ್ಲೆಲ್ಲ ಕಲಿಸುವುದಕ್ಕಿಂತ ಸ್ವಯಂಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಆ ನಿಟ್ಟಿನಲ್ಲಿ ಪೂರಕ ವಾತಾವರಣ ನಿರ್ವಿುಸಲಾಗಿದೆ. ಜೀವನದ ಸಣ್ಣ-ಪುಟ್ಟ ಉದಾಹರಣೆಗಳ ಮೂಲಕವೇ ಹೊಸ ವಿಧಾನದಲ್ಲಿ ಕಲಿಸುತ್ತಿರುವುದರಿಂದ ಮಕ್ಕಳು ಈ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಈ ಮೂಲಕ ನವೀನ್ ಹಾಗೂ ಆತನ ಗೆಳೆಯರು ಕಂಡಿದ್ದ ಮೊದಲ ಕನಸು ನನಸಾಗಿದೆ. ನಿಜಾರ್ಥದಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಮುಂದೆ ಶಿಕ್ಷಣದ ‘ವಿಕಲ್ಪ’ (ಆಯ್ಕೆ) ತೆರೆದುಕೊಂಡಿದೆ. ಆದರೆ ಇದಕ್ಕಿಂತ ದೊಡ್ಡ ಗುರಿ ಇವರ ಮುಂದಿತ್ತು. ಅದು, ಗ್ರಾಮೀಣ ವಿದ್ಯಾರ್ಥಿಗಳನ್ನು ಐಐಟಿ ಪರೀಕ್ಷೆಗಳಿಗಾಗಿ ಸಿದ್ಧಗೊಳಿಸುವುದು! ರೇವಾಡಿಯಲ್ಲೇ ಐಐಟಿ ಪ್ರವೇಶ ಪರೀಕ್ಷೆ ಹಾಗೂ ಪ್ರಿ ಮೆಡಿಕಲ್ ಟೆಸ್ಟ್ (ಪಿಎಮ್)ಗೆ ತರಬೇತಿ ಆರಂಭವಾಯಿತು. ಬಾಲಭವನದಲ್ಲಿ ಓದಿಸಲು ಜಿಲ್ಲಾಡಳಿತ ಅನುಮತಿ ನೀಡಿತು.

ಮೊದಲ ಬ್ಯಾಚಲ್ಲೇ 18 ವಿದ್ಯಾರ್ಥಿಗಳು! ಇವರೆಲ್ಲ ಗ್ರಾಮೀಣ ಹಿನ್ನೆಲೆಯಿಂದ ಬಂದ ಕೃಷಿಕ, ಕೃಷಿಕಾರ್ವಿುಕರ ಮಕ್ಕಳು ಎಂಬುದು ವಿಶೇಷ. ಮೊದಲ ಯತ್ನದಲ್ಲೇ 15 ವಿದ್ಯಾರ್ಥಿಗಳು ಐಐಟಿ ಪ್ರವೇಶ ಪರೀಕ್ಷೆ ಪಾಸು ಮಾಡುವಲ್ಲಿ ಯಶಸ್ವಿಯಾದರಲ್ಲದೆ, 7 ವಿದ್ಯಾರ್ಥಿಗಳು ದೇಶದ ಬೇರೆ ಬೇರೆ ಐಐಟಿಗಳಲ್ಲಿ ಪ್ರವೇಶ ಗಿಟ್ಟಿಸಿಕೊಂಡರು! ಇದು ಸಾಧಾರಣ ಸಾಧನೆಯೇನಲ್ಲ, ಕಾರಣ ಈ ಹಳ್ಳಿಯ ಮಕ್ಕಳು ಶಿಕ್ಷಣದ ಮಹತ್ವವನ್ನೂ ಅರಿಯದ ಮುಗ್ಧರಾಗಿದ್ದರು. ಹಾಗಾಗಿ ದೊಡ್ಡ ಕನಸು ಕಾಣುವುದರಿಂದ ವಂಚಿತರಾಗಿದ್ದರು. ಅಂಥವರ ಬಾಳಲ್ಲಿ ಪ್ರಬಲ ಆಶಾವಾದ ಮೂಡಿಸಿ, ಅದಕ್ಕಾಗಿ ಅವರನ್ನು ತಯಾರು ಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ನಂತರದ ಬ್ಯಾಚುಗಳಲ್ಲೂ ಸಾಧನೆಯ ಗ್ರಾಫ್ ಹೆಚ್ಚುತ್ತಲೇ ಸಾಗಿರುವುದು ಗಮನಾರ್ಹ.

ಐಐಟಿ ಪ್ರವೇಶ ಪರೀಕ್ಷೆ ಸಿದ್ಧತೆಗಾಗಿ ಈ ಮಕ್ಕಳಿಗೆ ಪುಸ್ತಕಗಳನ್ನು ತಮ್ಮ ಖರ್ಚಿನಲ್ಲೇ ಒದಗಿಸಿರುವ ಈ ಯುವಸಮೂಹದವರು ಕಳೆದ ಐದು ವರ್ಷಗಳಲ್ಲಿ ಇದಕ್ಕಾಗಿ 15 ಲಕ್ಷ ರೂಪಾಯಿಗಳನ್ನು ತಮ್ಮ ಸಂಬಳದಿಂದಲೇ ಖರ್ಚು ಮಾಡಿದ್ದಾರೆ! ‘ಬೇರೆಯವರಲ್ಲಿ ಹಣಕಾಸು ನೆರವು ಕೋರಿದರೆ ಅವರ ಷರತ್ತು, ನಿಬಂಧನೆಗಳನ್ನು ಒಪ್ಪಬೇಕಾಗುತ್ತದೆ. ಹಾಗಾಗಿ ನಮ್ಮದೇ ದುಡ್ಡುಹಾಕಿ ತರಬೇತಿ ಕೇಂದ್ರ ನಡೆಸುತ್ತಿದ್ದೇವೆ. ಇನ್ನಷ್ಟು ದುಡ್ಡು ಖರ್ಚಾದರೂ ಚಿಂತೆಯಿಲ್ಲ. ಹಳ್ಳಿಗಳಲ್ಲಿರುವ ಶೈಕ್ಷಣಿಕ ವಾತಾವರಣ ಬದಲಾಗಬೇಕು. ಅಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಮುನ್ನೆಲೆಗೆ ತರುವಂತಾಗಬೇಕು. ಅದಕ್ಕಾಗಿಯೇ ‘ವಿಕಲ್ಪ’ ಶ್ರಮಿಸುತ್ತಿದ್ದು, ನಮಗೆ ಬೇಕಿರುವುದು ಸಮಾಜ ಹಾಗೂ ಪಾಲಕರ ಬೆಂಬಲ ಮಾತ್ರ. ಹಳ್ಳಿಗಳಲ್ಲಿ ಅದ್ಭುತ ಪ್ರತಿಭೆಗಳು ಇವೆ ಎಂಬುದನ್ನು ನಾವು ತೋರಿಸಿಕೊಡುತ್ತೇವೆ. ಈ ಮೂಲಕ ಶಿಕ್ಷಣದಿಂದ ದೂರವಾಗಿರುವ ಮಕ್ಕಳ ಬದುಕಲ್ಲೂ ಅಕ್ಷರದ ಬೆಳಕು ಮೂಡಿಸಲು ಯತ್ನಿಸುತ್ತೇವೆ’ ಎನ್ನುತ್ತಾರೆ ನವೀನ್.

ಸಮಾಜದ ನಿಜವಾದ ಉತ್ಕರ್ಷ, ವಿಜಯ ಇಂಥ ಪ್ರಯತ್ನಗಳಲ್ಲೇ ಇದೆಯಲ್ಲವೇ? ಎಲ್ಲ ಬಗೆಯ ಅಂಧಕಾರವನ್ನು ನಿವಾರಿಸುವ ಶಕ್ತಿ ಇರುವುದು ಜ್ಞಾನದ ಬೆಳಕಿಗಿದೆಯಲ್ಲವೇ? ನಿಸ್ವಾರ್ಥವಾಗಿ ಸಮಾಜಕ್ಕೆ ವಿಶಿಷ್ಟ ಕೊಡುಗೆ ನೀಡುವ ಪ್ರಯತ್ನಗಳಿಗೆ ಗೆಲುವು ದೊರಕಿದಾಗ ಸಿಗುವ ಸಂತೃಪ್ತಿ ಎಲ್ಲದಕ್ಕಿಂತಲೂ ಮಿಗಿಲಾದದ್ದು. ಅಲ್ಲವೇ?

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

Leave a Reply

Your email address will not be published. Required fields are marked *

Back To Top