ಭಾರತಕ್ಕೆ ಮರಳಿ ಬರುವ ಯೋಚನೆ ಇಲ್ಲ: ಝಾಕಿರ್​ ನಾಯ್ಕ್​

ನವದೆಹಲಿ: ನಾನು ಭಾರತಕ್ಕೆ ಈಗಲೇ ಮರಳಿ ಬರುತ್ತಿಲ್ಲ. ಮರಳುತ್ತಿದ್ದೇನೆ ಎಂಬ ವದಂತಿ ಸುಳ್ಳು ಮತ್ತು ಆಧಾರ ರಹಿತ ಎಂದು ವಿವಾದಿತ ಇಸ್ಲಾಂ ಬೋಧಕ ಝಾಕಿರ್​ ನಾಯ್ಕ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾನೆ.

ಪ್ರಸ್ತುತ ಭಾರತದ ಕಾನೂನು ಪ್ರಕ್ರಿಯೆಯ ಮೇಲೆ ನನಗೆ ನಂಬಿಕೆ ಇಲ್ಲ. ಭಾರತ ಸರ್ಕಾರ ನ್ಯಾಯಯುತವಾಗಿ ನಡೆದುಕೊಳ್ಳುತ್ತದೆ ಎಂದೆನಿಸುತ್ತಿಲ್ಲ. ಭವಿಷ್ಯದಲ್ಲಿ ನನಗೆ ಭಾರತದಲ್ಲಿ ಸೂಕ್ತ ರಕ್ಷಣೆ ಇದೆ ಎಂದು ಮನವರಿಕೆಯಾದರೆ ನನ್ನ ಮಾತೃಭೂಮಿಗೆ ಖಂಡಿತಾ ಮರಳುತ್ತೇನೆ ಎಂದು ತಿಳಿಸಿದ್ದಾನೆ.

ಈ ಮೊದಲು ಝಾಕಿರ್​ ನಾಯ್ಕ್​ ಮಲೇಷ್ಯಾದಿಂದ ಭಾರತಕ್ಕೆ ಹೊರಟಿದ್ದು, ಬುಧವಾರ ರಾತ್ರಿ ಭಾರತ ತಲುಪುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಮಲೇಷ್ಯಾ ಸರ್ಕಾರದ ಮೂಲಗಳೂ ಈ ವರದಿಯನ್ನು ಖಚಿತಪಡಿಸಿವೆ ಎಂದು ವರದಿ ಮಾಡಲಾಗಿತ್ತು.

ಆದರೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಝಾಕಿರ್​ ಮರಳಿ ಬರುತ್ತಿರುವ ವರದಿಯನ್ನು ತಳ್ಳಿ ಹಾಕಿದೆ. ನಮಗೆ ಅಂತಹ ಯಾವುದೇ ಮಾಹಿತಿ ಇಲ್ಲ, ಇದರ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಎನ್​ಐಎ ವಕ್ತಾರ ಅಲೋಕ್​ ಮಿತ್ತಲ್​ ಹೇಳಿಕೆ ನೀಡಿದ್ದಾರೆ.

ಝಾಕಿರ್​ ನಾಯ್ಕ್​ ವಿರುದ್ಧ ದ್ವೇಷ ಭಾಷಣ ಮೂಲಕ ಪ್ರಚೋದನೆ ನೀಡುತ್ತಿದ್ದ ಮತ್ತು ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಪ್ರಕರಣಗಳ ದಾಖಲಾಗಿದ್ದು, ಎನ್​ಐಎ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಈ ಸಂಬಂಧ ಎನ್​ಐಎ ಮುಂಬೈನ ವಿಶೇಷ ನ್ಯಾಯಾಲಯಕ್ಕೆ 2017ರ ಅಕ್ಟೋಬರ್​ನಲ್ಲಿ ಚಾರ್ಜ್​ ಶೀಟ್​ ಸಲ್ಲಿಸಿದೆ. ಎನ್​ಐಎ ತನ್ನ ಚಾರ್ಜ್​ಶೀಟ್​ನಲ್ಲಿ ಝಾಕೀರ್ ನಾಯಕ್ ಭಯೋತ್ಪಾದನಾ ಚಟುವಟಿಕೆಗಳಿಗೆ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದ. ದ್ವೇಷ ಭಾಷಣಗಳ ಮೂಲಕ ಪ್ರಚೋದನೆ ನೀಡಿ ಸಮುದಾಯಗಳ ನಡುವೆ ವೈರತ್ವ ಹೆಚ್ಚಿಸುವ ಕೆಲಸ ಮಾಡುತ್ತಿದ್ದ ಎಂದು ತಿಳಿಸಿದೆ.

ಝಾಕಿರ್​ 2016ರಲ್ಲಿ ದೇಶ ತೊರೆದಿದ್ದು, ಪ್ರಸ್ತುತ ಮಲೇಷ್ಯಾದ ಪುತ್ರಂಜಯದಲ್ಲಿ ನೆಲೆಸಿದ್ದಾನೆ. (ಏಜೆನ್ಸೀಸ್​)