ಚೇಷ್ಟೆ ಮಾಡುತ್ತ ಬರ್ತ್​ ಡೇ ವಿಶ್​ ಮಾಡಿದ್ದ ಹಾರ್ದಿಕ್​ ಪಾಂಡ್ಯಾಗೆ ಜಹೀರ್​ ಖಾನ್​ ಕೊಟ್ಟ ಎಪಿಕ್​ ರಿಪ್ಲೈ ಹೀಗಿದೆ…

ನವದೆಹಲಿ: ಕ್ರಿಕೆಟರ್ ಹಾರ್ದಿಕ್​ ಪಾಂಡ್ಯ ಎಡವಟ್ಟೊಂದನ್ನು ಮಾಡಿಕೊಂಡು ನೆಟ್ಟಿಗರಿಂದ ಟೀಕೆಗೆ ಒಳಗಾಗುತ್ತಿದ್ದಾರೆ. ಮಾಜಿ ವೇಗಿ ಜಹೀರ್​ ಖಾನ್​ಗೆ ಟ್ವಿಟರ್​ನಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರುತ್ತ ಚೇಷ್ಟೆ ಮಾಡಿದ್ದರು. ಜಹೀರ್​ ಖಾನ್​ ಎಸೆತಕ್ಕೆ ತಾವು ಸಿಕ್ಸರ್​ ಹೊಡೆದ ವಿಡಿಯೋವೊಂದನ್ನು ಶೇರ್​ ಮಾಡಿ, ಹ್ಯಾಪಿ ಬರ್ತ್​ ಡೇ ಜಾಕ್​, ನೀವು ಕೂಡ ನನ್ನಂತೆಯೇ ಚೆಂಡನ್ನು ಮೈದಾನದಿಂದ ಹೊರಹಾಕುತ್ತೀರಿ ಎಂದು ನಂಬಿದ್ದೇನೆ ಎಂದು ಕ್ಯಾಪ್ಶನ್​ ಬರೆದಿದ್ದರು.

ಆದರೆ ವಿಡಿಯೋ ನೋಡಿ, ಕ್ಯಾಪ್ಶನ್ ಓದಿದ ನೆಟ್ಟಿಗರು ಹಾರ್ದಿಕ್​ ಪಾಂಡ್ಯಾಗೆ ಕ್ಲಾಸ್​ ತೆಗೆದುಕೊಂಡಿದ್ದರು. ನಿನ್ನ ದುರಹಂಕಾರವೇ ನಿನ್ನ ಅವನತಿಗೆ ಕಾರಣವಾಗಲಿದೆ. ವಿನಮ್ರವಾಗಿ ಇರು ಎಂಬರ್ಥದ ಕಾಮೆಂಟ್​ಗಳನ್ನು ಬರೆಯುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೀಗ ಹಾರ್ದಿಕ್​ ಪಾಂಡ್ಯಾ ವಿಡಿಯೋ ಪೋಸ್ಟ್​ಗೆ ಜಹೀರ್​ ಖಾನ್​ ಕಡಕ್​ ಆಗಿ ಉತ್ತರಿಸಿದ್ದಾರೆ. ಎಪಿಕ್​ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ಹಾ, ಹಾ, ಹಾ ಎಂದು ಪ್ರಾರಂಭದಲ್ಲಿಯೇ ನಗುವಿನ ಭಾವ ವ್ಯಕ್ತಪಡಿಸಿರುವ ಅವರು, ಹಾರ್ದಿಕ್​ ಪಾಂಡ್ಯಾ ಅವರೇ ನಿಮ್ಮ ಹಾರೈಕೆಗೆ ಕೃತಜ್ಞತೆಗಳು. ನನ್ನ ಬ್ಯಾಟಿಂಗ್ ಕೌಶಲ ನಿಮ್ಮ ಬ್ಯಾಟಿಂಗ್​ನಷ್ಟು ಉತ್ತಮವಾಗಿ ಇರದೆ ಇರಬಹುದು. ಆದರೆ ಇದೇ ಪಂದ್ಯದಲ್ಲಿ ನೀವು ಎದುರಿಸಿದ ನನ್ನ ಮುಂದಿನ ಬೌಲಿಂಗ್​ ಇತ್ತಲ್ಲ, ಅದರಷ್ಟೇ ಚೆನ್ನಾಗಿ ನನ್ನ ಜನ್ಮದಿನದ ಆಚರಣೆಯೂ ಇತ್ತು ಟ್ವೀಟ್​ ಮಾಡಿದ್ದಾರೆ.

ಜಹೀರ್​ ಖಾನ್​ ಅವರ ಈ ಎಪಿಕ್ ರಿಪ್ಲೈಗೆ ನೆಟ್ಟಿಗರೂ ಮೆಚ್ಚಿಕೊಂಡಿದ್ದಾರೆ. ಹಾರ್ದಿಕ್​ ಪಾಂಡ್ಯಾಗೆ ಸರಿಯಾದ ಉತ್ತರ ಎಂದು ಕಾಮೆಂಟ್​ಗಳನ್ನು ಹಾಕುತ್ತಿದ್ದಾರೆ.

ಹಾರ್ದಿಕ್​ ಪಾಂಡ್ಯಾ ಯುಕೆಯಲ್ಲಿ ಬೆನ್ನು ಸರ್ಜರಿಗೆ ಒಳಗಾಗಿ ವಿಶ್ರಾಂತಿಯಲ್ಲಿದ್ದಾರೆ. ತಾವು ಚೇತರಿಸಿಕೊಳ್ಳುತ್ತಿರುವ ಬಗ್ಗೆ ಕೂಡ ಟ್ವಿಟರ್​ನಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದ್ದರು.

Leave a Reply

Your email address will not be published. Required fields are marked *