ನೀರಿನ ನಿರ್ವಹಣೆ ಮಾಡದಿದ್ದರೆ ಗಂಡಾಂತರ


ವಿಜಯವಾಣಿ ಸುದ್ದಿಜಾಲ ಹಾಸನ
ನೀರಿನ ಅಸಮರ್ಪಕ ನಿರ್ವಹಣೆಯಿಂದ ಹನಿ ನೀರಿಗೂ ತತ್ವಾರ ಎದುರಾಗಿದ್ದು, ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯ ಇನ್ನಷ್ಟು ಘೋರವಾಗಿರುತ್ತದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಕಳವಳ ವ್ಯಕ್ತಪಡಿಸಿದರು.
ಶಾಂತಿಗ್ರಾಮ ಸಮೀಪದ ಮಡೆನೂರು ಕೃಷಿ ಮಹಾವಿದ್ಯಾಲಯ ಸಂಶೋಧನಾ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ವಚ್ಛ ಮೇವ ಜಯತೆ ಹಾಗೂ ಜಲಾಮೃತ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಪರಿಸರಕ್ಕೆ ಅಪಾಯ ಎದುರಾಗಿರುವ ಈ ಸಂದರ್ಭದಲ್ಲಿ ಎಲ್ಲ ಇಲಾಖೆಗಳ ಕಾರ್ಯಕ್ರಮಗಳನ್ನು ಸಂಯೋಜಿಸಿ, ಜಲಸಂವರ್ಧನೆಗೆ ಆದ್ಯತೆ ನೀಡಬೇಕಾಗುತ್ತದೆ. ಪ್ರತಿ ನಗರ, ಪಟ್ಟಣ, ಗ್ರಾಮ ಮತ್ತು ಮನೆಗಳಲ್ಲಿ ಘನ ಹಾಗೂ ದ್ರವ ತ್ಯಾಜ್ಯವನ್ನು ವ್ಯವಸ್ಥಿತ ನಿರ್ವಹಣೆ ಮೂಲಕ ಪರಿಸರ ಸ್ವಚ್ಛತೆ ಕಾಪಾಡಬೇಕು. ಆ ಮೂಲಕ ಎಲ್ಲರೂ ತಮ್ಮ ಸಾಮಾಜಿಕ ಜವಾಬ್ದಾರಿ ನಿಭಾಯಿಸಬೇಕು ಎಂದರು.
ಜಿಲ್ಲಾಧಿಕಾರಿ ಅಕ್ರಂ ಪಾಷಾ ಮಾತನಾಡಿ, ದೇಶದಲ್ಲಿ ಸ್ವಚ್ಛತೆ ಮತ್ತು ಜಲಮೂಲಗಳ ಸಂರಕ್ಷಣೆಯ ಮಹತ್ವ ಮತ್ತು ಅನಿವಾರ್ಯಗಳನ್ನು ಮನಗಂಡಿರುವ ಸರ್ಕಾರ ಆಂದೋಲನದ ರೂಪ ನೀಡಿವೆ. ಸಾರ್ವಜನಿಕರೂ ಇದರಲ್ಲಿ ಕೈ ಜೋಡಿಸಬೇಕಿದೆ ಎಂದರು.
ಪರಿಸರದ ಸಂರಕ್ಷಣೆ ಮತ್ತು ಜಲಸಂವರ್ಧನೆ ನಮ್ಮ ಆದ್ಯತೆ ಹಾಗೂ ಧ್ಯೇಯವಾಗಬೇಕು. ನಮ್ಮ ಪೀಳಿಗೆ ಪರಿಸರವನ್ನು ಅತ್ಯಂತ ಹೆಚ್ಚು ಹಾನಿ ಮಾಡಿದ್ದು, ಈಗಲಾದರೂ ಅದನ್ನು ಸರಿಪಡಿಸುವ ಪ್ರಯತ್ನ ಪ್ರಾರಂಭಿಸಬೇಕು. ಸರ್ಕಾರ ಅಂತರ್ಜಲದ ವೃದ್ಧಿ ಹಾಗೂ ಜಲಸಂರಕ್ಷಣೆಗೆ ಜಲಾಮೃತ ಯೋಜನೆ ಜಾರಿಗೆ ತಂದಿದ್ದು ಸಮುದಾಯದ ಸಹಭಾಗಿತ್ವದೊಂದಿಗೆ ಇದನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಪಂ ಸಿಇಒ ಡಾ.ಕೆ.ಎನ್.ವಿಜಯ್ ಪ್ರಕಾಶ್ ಮಾತನಾಡಿ, ಜನರ ಮನ ಪರಿವರ್ತನೆಯಿಂದ ಮಾತ್ರ ಬದಲಾವಣೆ ಸಾಧ್ಯ ಎಂದರು. ನೀರಿನ ಬಗ್ಗೆ ಅರಿವು, ಸಂರಕ್ಷಣೆ, ಜಲಮೂಲಗಳ ಸೃಷ್ಟಿ ಮತ್ತು ಹಸಿರು ಹೊದಿಕೆಯನ್ನು ಹೆಚ್ಚಿಸುವುದಕ್ಕೆ ಸಮುದಾಯದ ಸಹಭಾಗಿತ್ವ ಮುಖ್ಯವಾಗುತ್ತದೆ. ನೀರಿನ ಬಳಕೆಯಲ್ಲಿ ಪ್ರಜ್ಞಾಪೂರ್ವಕ ಬದಲಾವಣೆಯನ್ನು ನಾಡಿನ ಜನತೆಯಲ್ಲಿ ಕಾಣಬೇಕಿದೆ ಎಂದರು.
ಸಸಿ ನೆಡುವ ಗುರಿ: ಜಿಲ್ಲಾದ್ಯಂತ ಈ ಬಾರಿ 45.40 ಲಕ್ಷ ಗಿಡ ನೆಡುವುದು ನಮ್ಮ ಗುರಿಯಾಗಿದೆ. ಜಿಲ್ಲಾ ಪಂಚಾಯಿತಿ ವತಿಯಿಂದ 96 ಸಣ್ಣ ನೀರಾವರಿ, 250 ಕೆರೆಗಳ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ಬಹು ಕಮಾನಿನ ಅಣೆಕಟ್ಟುಗಳನ್ನು ನಿರ್ಮಿಸಲು ಕ್ರಮ ಕೈಗೊಂಡಿದ್ದು 1335ಕ್ಕೂ ಅಧಿಕ ಚೆಕ್ ಡ್ಯಾಂಗಳನ್ನು ನಿರ್ಮಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.
ಉಪವಿಭಾಗಾದಿಕಾರಿ ಡಾ.ಎಚ್.ಎಲ್.ನಾಗರಾಜ್ ಮಾತನಾಡಿ, ಅಂತರ್ಜಲ ಸಂರಕ್ಷಣೆ, ಕೆರೆಗಳ ಪುನಶ್ಚೇತನ ಹಾಗೂ ಜಲ ಮರು ಪೂರ್ಣಕ್ಕೆ ಜಲಾಮೃತ ಯೋಜನೆ ವರದಾನವಾಗಿದೆ. ಈಗಾಗಲೇ ಅನೇಕ ಕೆರೆಗಳನ್ನು ಈ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದ್ದು, ಪ್ರತಿ ಗ್ರಾಮದಲ್ಲಿ ಸಾರ್ವಜನಿಕರು ಈ ಕಾರ್ಯದಲ್ಲಿ ತೊಡಗಿ ಭೂ ದೇವಿಗೆ ಕೊಡುಗೆ ಸಲ್ಲಿಸಬೇಕು ಎಂದರು.
ತಾಪಂ ಅಧ್ಯಕ್ಷ ನಿಂಗೇಗೌಡ, ಜಿಪಂ ಸದಸ್ಯ ಹನುಮೇಗೌಡ, ಜಿಪಂ ಉಪ ಕಾರ್ಯದರ್ಶಿ ಪುಟ್ಟಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ಸಿವರಾಂಬಾಬು ಮಾತನಾಡಿದರು. ಜಿಪಂ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್, ಜಿಪಂ ಯೋಜನಾಧಿಕಾರಿ ಅರುಣ್ ಕುಮಾರ್, ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ, ತಾಪಂ ಸದಸ್ಯ ಸುರೇಂದ್ರ, ಮಹಾವಿದ್ಯಾಲಯ ಡೀನ್ ಡಾ. ದೇವಕುಮಾರ್ ಹಾಜರಿದ್ದರು.
ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಪರಿಸರ ಜಾಗೃತಿ ಸಂದೇಶ ಸಾರುವ ಚಿತ್ರವನ್ನು ಬಿಡುಗಡೆ ಮಾಡಲಾಯಿತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್‌ಕಾರ್ನಾಡ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಚಿತ್ರ
11ಎಚ್‌ಎಸ್ 7
ಹಾಸನ ತಾಲೂಕಿನ ಮಡೆನೂರು ಕೃಷಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಸ್ವಚ್ಛ ಮೇವ ಜಯತೆ ಹಾಗೂ ಜಲಾಮೃತ ಯೋಜನೆಗೆ ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದರು. ಜಿಪಂ ಉಪಾಧ್ಯಕ್ಷ ಎಚ್.ಪಿ.ಸ್ವರೂಪ್, ಡಿಸಿ ಅಕ್ರಂ ಪಾಷಾ, ಜಿಪಂ ಸಿಇಒ ಡಾ. ಕೆ.ಎನ್.ವಿಜಯಕುಮಾರ್, ಡಿಎಫ್‌ಒ ಎಂ. ಸಿವರಾಮ್ ಬಾಬು ಹಾಗೂ ಇತರರು ಇದ್ದಾರೆ.

Leave a Reply

Your email address will not be published. Required fields are marked *