ಶಾಸಕಿ ಅನಿತಾ ಕುಮಾರಸ್ವಾಮಿಗೆ ಝುಡ್ ಶ್ರೇಣಿ ಭದ್ರತೆ

| ಕೀರ್ತಿನಾರಾಯಣ ಸಿ.

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪತ್ನಿ, ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಜೀವ ಬೆದರಿಕೆ ಇರುವ ಮಾಹಿತಿ ಹಿನ್ನೆಲೆಯಲ್ಲಿ ‘ಝುಡ್’ ಶ್ರೇಣಿ ಭದ್ರತೆ ಒದಗಿಸುವಂತೆ ರಾಜ್ಯ ಪೊಲೀಸ್ ಇಲಾಖೆಗೆ ಗುಪ್ತದಳ ಪತ್ರ ಬರೆದಿದೆ.

ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ಪರ-ವಿರೋಧದ ಸಂದರ್ಭ ದಲ್ಲಿ ಈ ಹಿಂದೆ ಸಚಿವರಾಗಿದ್ದ ವಿನಯ್ ಕುಲಕರ್ಣಿ ಅವರಿಗೆ ಗುಪ್ತದಳ ಸೂಚನೆ ಮೇರೆಗೆ ಝುಡ್ ಶ್ರೇಣಿ ಭದ್ರತೆಯನ್ನು ಒದಗಿಸಲಾಗಿತ್ತು ಅದನ್ನು ಹೊರತುಪಡಿಸಿ ರಾಜ್ಯದಲ್ಲಿ ಪ್ರಸ್ತುತ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮಾತ್ರ ಝುಡ್ ಶ್ರೇಣಿ ಸೆಕ್ಯುರಿಟಿ ಇದೆ.

ಕರ್ನಾಟಕ ಮುಖ್ಯಮಂತ್ರಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಭದ್ರತೆ ಒದಗಿಸುವ ಗ್ರೀನ್ ಬುಕ್-2005 ಮಾರ್ಗಸೂಚಿ ಪ್ರಕಾರ ಹಾಗೂ ಸದ್ಯದ ಪರಿಸ್ಥಿತಿಯಲ್ಲಿ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅನಿತಾ ಕುಮಾರಸ್ವಾಮಿ ಅವರಿಗೆ ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿ ಅನ್ವಯ ಝೆಡ್ ಶ್ರೇಣಿ ಭದ್ರತೆ ಒದಗಿಸುವಂತೆ ಬೆಂಗಳೂರು, ಹುಬ್ಬಳ್ಳಿ- ಧಾರವಾಡ, ಮೈಸೂರು ಮತ್ತು ಮಂಗಳೂರು ಕಮಿಷನರ್​ಗಳಿಗೆ ಹಾಗೂ ಎಲ್ಲ ಜಿಲ್ಲಾ ಎಸ್ಪಿಗಳಿಗೆ ಡಿ.9ರಂದು ಗುಪ್ತದಳ ಎಡಿಜಿಪಿ ಲಿಖಿತ ಸೂಚನೆ ಕೊಟ್ಟಿದ್ದಾರೆ.

ಕೇಂದ್ರ ಸರ್ಕಾರದ ಯೆಲ್ಲೋ ಬುಕ್ ಅನ್ವಯ ಭದ್ರತೆ ಒದಗಿಸುವ ಜತೆಗೆ ಶಾಸಕರ ವಾಸಸ್ಥಳ, ಪ್ರಯಾಣದ ಸಂದರ್ಭದಲ್ಲಿ, ಸಾರ್ವಜನಿಕ ಭೇಟಿ, ಸಮಾರಂಭಗಳಲ್ಲಿ ಪಾಲ್ಗೊಳ್ಳುವ ವೇಳೆ ಆಯಾ ಸರಹದ್ದಿನ ಪೊಲೀಸರೂ ಕೂಡ ಹೆಚ್ಚುವರಿ ಭದ್ರತೆ ಒದಗಿಸುವಂತೆ ನಿರ್ದೇಶನ ನೀಡಲಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಂಡಿದೆ.

ಕಾರಣವೇನು?: ಉಪ ಚುನಾವಣೆ ಸಂದರ್ಭದಲ್ಲಿ ನಡೆದ ಜೆಡಿಎಸ್ ಅಭ್ಯರ್ಥಿ ಟಿಕೆಟ್ ಆಯ್ಕೆ ವಿಚಾರ ಹಾಗೂ ಇತ್ತೀಚೆಗೆ ನಡೆದ ಚನ್ನಪಟ್ಟಣ ಜೆಡಿಎಸ್ ಕಚೇರಿಗೆ ನುಗ್ಗಿ ಪೀಠೋಪಕರಣ ಧ್ವಂಸ ಪ್ರಕರಣದ ಹಿನ್ನೆಲೆಯಲ್ಲಿ ಅನಿತಾ ಕುಮಾರಸ್ವಾಮಿ ಅವರಿಗೆ ಭದ್ರತೆ ಹೆಚ್ಚಿಸಲು ಸೂಚನೆ ಬಂದಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಝುಡ್ ಶ್ರೇಣಿ ಭದ್ರತೆ ಹೇಗಿರುತ್ತೆ?

ಬೆಂಗಾವಲಿಗೆ ಸಿಎಆರ್/ಡಿಎಆರ್​ನ 22 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುತ್ತದೆ. 1 ಬುಲೆಟ್ ಪ್ರೂಫ್ ಕಾರು ಹಾಗೂ ಮತ್ತೊಂದು ಪೈಲಟ್ ಕಾರು ನೀಡಲಾಗುತ್ತದೆ. ದಿನದ 24 ಗಂಟೆಯೂ ಭದ್ರತೆ ಇರುತ್ತದೆ. ಬೆದರಿಕೆ ಇಲ್ಲವೇ ಜೀವಕ್ಕೆ ಹಾನಿಯಾಗುವುದಿಲ್ಲ ಎಂಬುದು ಗುಪ್ತದಳ ಮಾಹಿತಿಯಿಂದ ದೃಢಪಟ್ಟ ನಂತರ ಭದ್ರತೆ ವಾಪಸ್ ಪಡೆಯಲಾಗುತ್ತದೆ.

ಯಾರ್ಯಾರಿಗೆ ಈ ಸೆಕ್ಯುರಿಟಿ?

ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಝುಡ್ ಶ್ರೇಣಿ ಭದ್ರತೆ ಒದಗಿಸಲು ಅವಕಾಶವಿದೆ. ಸಚಿವರು, ಶಾಸಕರು, ಸ್ಪೀಕರ್ ಅಥವಾ ಇನ್ನಾವುದೇ ಪ್ರಭಾವಿ ವ್ಯಕ್ತಿಗೆ ಜೀವ ಬೆದರಿಕೆ ಇರುವುದು ಖಚಿತವಾದರೆ ಝುಡ್ ಸೆಕ್ಯುರಿಟಿ ಒದಗಿಸುವ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಗಿದೆ.

 

Leave a Reply

Your email address will not be published. Required fields are marked *