ಯುವರತ್ನನಿಗೆ ಮಿಲ್ಕಿ ಬ್ಯೂಟಿ ಜೋಡಿ?

ಬೆಂಗಳೂರು: ನಟ ಪುನೀತ್​ರಾಜ್​ಕುಮಾರ್ ಅಭಿನಯದ ‘ಯುವರತ್ನ’ ಚಿತ್ರದ ಶೀರ್ಷಿಕೆಯನ್ನು ಕನ್ನಡ ರಾಜ್ಯೋತ್ಸವದಂದು ಅಭಿಮಾನಿಗಳ ಸಮ್ಮುಖದಲ್ಲಿ ಲಾಂಚ್ ಮಾಡಲಾಗಿದೆ. ‘ರಾಜಕುಮಾರ’ ಚಿತ್ರತಂಡ ಪುನಃ ಒಂದಾಗಿ ಮಾಡುತ್ತಿರುವ ಈ ಚಿತ್ರದ ಕೆಲಸಗಳನ್ನು ನಿರ್ದೇಶಕ ಸಂತೋಷ್ ಆನಂದ್​ರಾಮ್ ಅಚ್ಚುಕಟ್ಟಾಗಿ ಮಾಡಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ನಾಯಕಿ ಯಾರು ಎಂಬುದು ಈಗ ಕೇಳಿಬರುತ್ತಿರುವ ಪ್ರಶ್ನೆ. ಒಂದು ಮೂಲದಿಂದ ಅದಕ್ಕೆ ಉತ್ತರವೂ ಸಿಕ್ಕಿದೆ. ಬಹುಭಾಷಾ ನಟಿ ತಮನ್ನಾ ಭಾಟಿಯಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದು, ಆ ಮೂಲಕ ಪೂರ್ಣಪ್ರಮಾಣದಲ್ಲಿ ನಾಯಕಿಯಾಗಿ ಕನ್ನಡಕ್ಕೆ ಎಂಟ್ರಿ ನೀಡಲಿದ್ದಾರೆ ಎನ್ನಲಾಗಿದೆ.

ತಮನ್ನಾಗೆ ಸ್ಯಾಂಡಲ್​ವುಡ್ ಹೊಸದೇನಲ್ಲ. ನಿಖಿಲ್​ಕುಮಾರ್ ಅಭಿನಯದ ‘ಜಾಗ್ವಾರ್’ ಮತ್ತು ಹೊಂಬಾಳೆ ಸಂಸ್ಥೆ ನಿರ್ವಣದ ‘ಕೆಜಿಎಫ್’ ಸ್ಪೆಷಲ್ ಸಾಂಗ್​ಗಳಲ್ಲಿ ತಮನ್ನಾ ಕಾಣಿಸಿಕೊಂಡಿದ್ದಾರೆ. ಆದರೆ, ನಾಯಕಿಯಾಗಿ ಅವರು ಕನ್ನಡಕ್ಕೆ ಕಾಲಿಡುವುದಕ್ಕೆ ಕಾಲ ಕೂಡಿಬಂದಿರಲಿಲ್ಲ. ಇನ್ನು, ಪುನೀತ್ ಜತೆ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಸದ್ದು ಮಾಡಿದ್ದ ತಮನ್ನಾ, ಕನ್ನಡ ಸಿನಿಮಾಗಳಲ್ಲಿ ನಟಿಸುವ ಆಸೆಯನ್ನು ಬಹುಹಿಂದೆಯೇ ವ್ಯಕ್ತಪಡಿಸಿದ್ದರು. ಇದೀಗ ಆ ಸಮಯ ಕೂಡಿಬಂದಿದೆ ಎಂಬ ಮಾತುಗಳು ಗಾಂಧಿನಗರದ ಅಂಗಳದಿಂದ ಕೇಳಿಬಂದಿವೆ. ನಿರ್ದೇಶಕ ಸಂತೋಷ್ ಬರೆದಿರುವ ನಾಯಕಿ ಪಾತ್ರಕ್ಕೆ ತಮನ್ನಾ ಸೂಕ್ತ ಆಯ್ಕೆ ಎನ್ನಲಾಗಿದ್ದು, ಆ ನಿಟ್ಟಿನಲ್ಲಿ ಚಿತ್ರತಂಡ ಕಾರ್ಯೋನ್ಮುಖವಾಗಿದೆ ಎನ್ನಲಾಗಿದೆ. ಮಾತುಕತೆಗಳು ಚಾಲ್ತಿಯಲ್ಲಿದ್ದು, ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಮತ್ತೊಂದು ಮಾಹಿತಿ ಪ್ರಕಾರ, ‘ಮಹಾನಟಿ’ ಖ್ಯಾತಿಯ ಕೀರ್ತಿ ಸುರೇಶ್ ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ‘ರಾಜಕುಮಾರ’ ನಂತರ ಪುನೀತ್ ರಾಜ್​ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್​ನಲ್ಲಿ ಈ ಸಿನಿಮಾ ಸಿದ್ಧಗೊಳ್ಳುತ್ತಿರುವುದರಿಂದ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಚಿತ್ರದಲ್ಲಿ ಕಾಲೇಜ್ ವಿದ್ಯಾರ್ಥಿಯಾಗಿ ಪುನೀತ್ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ಕಿರಗಂದೂರು ‘ಯುವರತ್ನ’ಕ್ಕೆ ಬಂಡವಾಳ ಹೂಡುತ್ತಿದ್ದಾರೆ.