ರಂಭಾಪುರಿ ಪೀಠದಲ್ಲಿ ಯುಗಮಾನೋತ್ಸವ

ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಮನುಷ್ಯನಿಗೆ ಮಾನಸಿಕ ನೆಮ್ಮದಿ ಸಿಗುವುದು ಅಧ್ಯಾತ್ಮದಲ್ಲಿ ಮಾತ್ರ. ಅಂತಹ ಅಧ್ಯಾತ್ಮದ ಅರಿವಿಗೆ ಸಂಸ್ಕಾರ ಅಗತ್ಯ. ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಧರ್ಮ-ಸಂಸ್ಕಾರವನ್ನು ನೀಡುವ ಬಹುದೊಡ್ಡ ಪರಂಪರೆಯ ಮೂಲ ಪ್ರವರ್ತಕರು ಜಗದ್ಗುರು ಶ್ರೀ ರೇಣುಕಾಚಾರ್ಯರು. ರಂಭಾಪುರಿ ಪೀಠದಲ್ಲಿ ನಡೆಯಲಿರುವ ಯುಗಮಾನೋತ್ಸವ ನಿಮಿತ್ತ ಈ ವಿಶೇಷ ಲೇಖನ.

| ಪ್ರಶಾಂತ ರಿಪ್ಪನ್​ಪೇಟೆ

ಸನಾತನ ಹಿಂದುಸಂಸ್ಕೃಗೆ ಯುಗಯುಗಗಳ ಸುದೀರ್ಘ ಇತಿಹಾಸವಿದೆ. ಆ ಇತಿಹಾಸಕ್ಕೆ ಪೂರಕವಾದ ಆಚರಣೆಗಳು, ಸಂಪ್ರದಾಯಗಳನ್ನು ಇಂದಿಗೂ ಕಾಣಬಹುದು. ಅಂತಹ ಆಚರಣೆಗಳಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವವೂ ಒಂದು.

ಶ್ರೀಮದ್ವೀರಶೈವ ಮಹಾಮತದ ಸಂಸ್ಥಾಪಕರಾದ ಪಂಚಾಚಾರ್ಯ ಜಗದ್ಗುರುಗಳಲ್ಲಿ ಪ್ರಥಮ ಆಚಾರ್ಯರಾದ ಜಗದ್ಗುರು ಶ್ರೀರೇಣುಕಾಚಾರ್ಯರು ಯುಗಯುಗಗಳಲ್ಲೂ ಅವತಾರವೆತ್ತಿ ಭೂತಲದಲ್ಲಿ ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ತೆಲಂಗಾಣ ರಾಜ್ಯದ ನಲಗೊಂಡ ಜಿಲ್ಲೆಯ ಕೊಲ್ಲಿಪಾಕಿ ಶ್ರೀ ಸ್ವಯಂಭೂ ಸೋಮೇಶ್ವರಲಿಂಗದಿಂದ ಪಾಲ್ಗುಣ ಶುದ್ಧ ತ್ರಯೋದಶಿಯಂದು ಅವತರಿಸಿದ ದಿನವನ್ನೇ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವವನ್ನಾಗಿ ಆಚರಿಸಲಾಗುತ್ತದೆ. ಜಗದ್ಗುರು ಶ್ರೀ ರೇಣುಕಾಚಾರ್ಯರು ಅಗಸ್ತ್ಯಗೆ ತತ್ವೋಪದೇಶವನ್ನು ಮಾಡಿ ಮಲಯಾಚಲದ ಪರ್ವತಶ್ರೇಣಿಯಲ್ಲಿ ಪೃಥ್ವಿತತ್ವದ ಸಂಕೇತವಾದ ಹಸಿರುಧ್ವಜವನ್ನು ಹಿಡಿದು ಭದ್ರಾನದಿ ದಂಡೆಯಲ್ಲಿ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಪೀಠವನ್ನು ಸಂಸ್ಥಾಪಿಸಿದ್ದಾರೆ. ಶ್ರೀರಂಭಾಪುರಿ ಪೀಠದಲ್ಲಿ ಪ್ರತಿ ವರ್ಷ ಪಾಲ್ಗುಣ ಶುದ್ಧ ತ್ರಯೋದಶಿಯಂದು ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಒಂದು ವಾರ ಜಾತ್ರೆ ನಡೆಯುತ್ತದೆ. ಈ ಜಾತ್ರಾಮಹೋತ್ಸವದ ನಿಮಿತ್ತ ಇದೇ ಮಾ. 17ರಿಂದ 22ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಕ: ಮಾನವ ಮಹಾದೇವನಾಗುವ ಶಿವಾದ್ವೈತ ಸಿದ್ಧಾಂತವನ್ನು ಭೂತಲದಲ್ಲಿ ಪ್ರತಿಪಾದಿಸಿದ ಜಗದ್ಗುರು ಶ್ರೀ ರೇಣುಕಾದಿ ಪಂಚಾಚಾರ್ಯರು ದೇಶದ ವಿವಿಧೆಡೆಗಳಲ್ಲಿ ಪಂಚಪೀಠಗಳನ್ನು ಸ್ಥಾಪಿಸಿ ಆ ಪರಂಪರೆಗೆ ಭದ್ರ ಬುನಾದಿಯನ್ನು ಹಾಕಿದ್ದಾರೆ. ಜಗದ್ಗುರು ಶ್ರೀ ರೇಣುಕಾಚಾರ್ಯರು ಕೊಲ್ಲಿಪಾಕಿಯಿಂದ ಲೋಕಸಂಚಾರ ಗೈಯುತ್ತ ಮಲಯಾಚಲಕ್ಕೆ ಬಂದು ಮಹಾಮುನಿ ಅಗಸ್ತ್ಯನ್ನು ನಿಮಿತ್ತ ಮಾಡಿಕೊಂಡು ಜಗತ್ತಿನ ಸಮಸ್ತ ಮಾನವರನ್ನುದ್ದೇಶಿಸಿ ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿದರು. ಹಾಗೆ ಮಾಡಿದ ಉಪದೇಶದ ಸಾರವೇ ರೇಣುಕಾಗ್ರಸ್ತ್ಯ ಸಂವಾದರೂಪದಲ್ಲಿ ರಚಿಸಲ್ಪಟ್ಟ ಸಿದ್ಧಾಂತಶಿಖಾಮಣಿ. ವೀರಶೈವಸಿದ್ಧಾಂತದಲ್ಲಿ ಜಾತಿ-ಮತದ ಹಂಗಿಲ್ಲ, ಸ್ತ್ರೀ-ಪುರುಷರೆಂಬ ಭೇದವಿಲ್ಲ, ಮೇಲು-ಕೀಳೆಂಬ ತರತಮವಿಲ್ಲ. ಜಗದ್ಗುರು ಶ್ರೀ ರೇಣುಕಾಚಾರ್ಯರ ತತ್ತ ್ವಸಿದ್ಧಾಂತಗಳು ಬೋಧನೆಗೆ ಸೀಮಿತವಾಗದೆ; ಸಮಾಜದ ಸುಧಾರಣೆಗೂ ಸಾಕ್ಷೀಭೂತವಾಗಿವೆ. ಕೊಲ್ಲಿಪಾಕಿ ಎಂಬ ಪದವು ಕೊಲನುಪಾಕ, ಕುಲ್ಯಪಾಕ ಎಂಬ ಪದದ ರೂಪಾಂತರ ಶಬ್ದ. ಈ ಪದದ ಅರ್ಥ ‘ಕುಲವನ್ನು ಪಾವನಗೊಳಿಸು’. ಇದಕ್ಕೆ ಪೂರಕವೆಂಬಂತೆ 18 ಜಾತಿ ಜನಾಂಗಗಳಿಗೂ ಮಠಗಳನ್ನು ಕಟ್ಟಿ, ಎಲ್ಲ ಮಠಗಳಿಗೂ ಶಿಷ್ಯರನ್ನು ನೇಮಿಸಿ ಸರ್ವರಿಗೂ ಸಂಸ್ಕಾರ ನೀಡಿದವರು ಜಗದ್ಗುರು ಶ್ರೀ ರೇಣುಕಾಚಾರ್ಯರು. ಅವರು ಸ್ಥಾಪಿಸಿರುವ ಹದಿನೆಂಟು ಮಠಗಳ ಕುರುಹುಗಳು ಇಂದಿಗೂ ಕೊಲ್ಲಿಪಾಕಿ ಕ್ಷೇತ್ರದಲ್ಲಿವೆ.

ಅಭಿನವ ರೇಣುಕ ಶ್ರೀ ವೀರಸೋಮೇಶ್ವರ ಜಗದ್ಗುರುಗಳು: ಜಗದ್ಗುರು ಶ್ರೀ ರೇಣುಕಾಚಾರ್ಯ ಪರಂಪರೆಯ ವೀರಸಿಂಹಾಸನ ಮಹಾಪೀಠದಲ್ಲಿ ಇಲ್ಲಿಯವರೆಗೆ 120 ಜಗದ್ಗುರುಗಳು ಪೀಠಾರೋಹಣ ಮಾಡಿದ್ದು, ಸದ್ಯ ಇರುವ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು 121ನೆಯ ಜಗದ್ಗುರು ಗಳಾಗಿದ್ದು, ಅಭಿನವ ರೇಣುಕರೆಂಬ ಬಿರುದಾಂಕಿತ ರಾಗಿದ್ದ್ದಾರೆ. ಶ್ರೀಪೀಠದ ಇತಿಹಾಸದಲ್ಲಿ ಅಭೂತಪೂರ್ವ ಅಭಿವೃದ್ಧಿಗಳ ಮೂಲಕ ಭಕ್ತರಿಗೆ ಸಕಲ ಸೌಲಭ್ಯಗಳನ್ನು ಒದಗಿಸುವುದರ ಜೊತಗೆ ಪೀಠದ ಪರಂಪರೆಯಲ್ಲೇ ನ ಭೂತೋ ನ ಭವಿಷ್ಯತಿ ಎಂಬಂತೆ ಕಾರ್ಯ ಮಾಡುತ್ತಿದ್ದಾರೆ. ಪೀಠದ ಅಭಿವೃದ್ಧಿ ಹಾಗೂ ಧರ್ಮದ ಔನ್ನತ್ಯಕ್ಕಾಗಿ ಹಗಲಿರುಳೆನ್ನದೆ ದೇಶಾದ್ಯಂತ ಸಂಚರಿಸಿ ಭಕ್ತರಲ್ಲಿ ಧರ್ಮಜಾಗೃತಿ ಹಾಗೂ ಸಂಸ್ಕಾರವನ್ನು ನೀಡುವಲ್ಲಿ ಶ್ರಮಿಸುತ್ತಿರುವ ಪೂಜ್ಯರು; ಪರಂಪರೆ, ಸಮಾಜದ ಸಮನ್ವಯಕ್ಕಾಗಿ ಹಲವು ಮಹತ್ವದ ನಿರ್ಧಾರ ಕೈಗೊಂಡು ಪಂಚಪೀಠಗಳ ಪರಂಪರೆಗೆ ಹೊಸ ಘನತೆ ತಂದುಕೊಟ್ಟಿದ್ದಾರೆ. 27 ವರ್ಷಗಳ ಹಿಂದೆ ವೀರಸಿಂಹಾಸನ ಆರೋಹಣ ಮಾಡಿದ ನಂತರ ಪೀಠದ ಪರಂಪರೆಯಲ್ಲಿ ನಡೆಯುತ್ತಿದ್ದ ದಸರಾ ದರ್ಬಾರ್ ಶರನ್ನವರಾತ್ರಿ ಉತ್ಸವ, ಇನ್ನಿತರ ಕಾರ್ಯಗಳನ್ನು ವಿಶ್ವವ್ಯಾಪಕಗೊಳಿಸಿದ್ದಾರೆ.

ಜಗದ್ಗುರು ಶ್ರೀ ರೇಣುಕಾಚಾರ್ಯ ಪ್ರಶಸ್ತಿ

ಪಾಲ್ಗುಣಮಾಸದ ಶುದ್ಧ ತ್ರಯೋದಶಿಯಂದು (ಮಾ.19) ನಾಡಿನಾದ್ಯಂತ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿಯನ್ನು ಆಚರಿಸಲಾಗುತ್ತದೆ. ಅಂತೆಯೇ ರೇಣುಕಾಚಾರ್ಯರಿಂದಲೇ ಸಂಸ್ಥಾಪಿಸಲ್ಪಟ್ಟ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಪೀಠದಲ್ಲಿ ಜಯಂತಿ ಯುಗಮಾನೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವು ಸಾಧಕರಿಗೆ ಜಗದ್ಗುರು ಶ್ರೀ ರೇಣುಕಾಚಾರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. 1 ಲಕ್ಷ ರೂ. ನಗದು, ಕಂಚಿನ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುವ 2019ನೇ ಸಾಲಿನ ಪ್ರಶಸ್ತಿಯನ್ನು ಕನ್ನಡದ ಕಬೀರ ಎಂದೆ ಪ್ರಸಿದ್ಧರಾಗಿರುವ ಪ್ರವಚನಕಾರ ಪದ್ಮಶ್ರೀ ಇಬ್ರಾಹಿಂ ಸುತಾರ್ ಅವರಿಗೆ ನೀಡಲಾಗುತ್ತದೆ. 19ರಂದು ಶ್ರೀ ರಂಭಾಪುರಿ, ಶ್ರೀ ಪೇಜಾವರ ಹಾಗೂ ಶ್ರೀ ಸುತ್ತೂರು ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 17ಕ್ಕೆ ಹರಿದ್ರಾಲೇಪನ ಮತ್ತು ಧ್ವಜಾರೋಹಣದೊಂದಿಗೆ ಆರಂಭವಾಗುವ ಜಾತ್ರಾಮಹೋತ್ಸವದಲ್ಲಿ 18ರಂದು ದೀಪೋತ್ಸವ, ಕುಂಕುಮೋತ್ಸವ, 19ರಂದು ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ ಮತ್ತು ಧಮೋತ್ತೇಜಕ ಜಾಗೃತಿ ಸಮಾವೇಶ, 20ರಂದು ಶಯನೋತ್ಸವ, ಕೆಂಡಾರ್ಚನೆ, 21ರಂದು ವಸಂತೋತ್ಸವ ಹಾಗೂ 22ರಂದು ಭದ್ರಾತೀರದಲ್ಲಿ ಸುರಗಿ ಸಮಾರಾಧನೆ ನಡೆಯಲಿದೆ.