ಚನ್ನಗಿರಿ: ಊರಬಾಗಿಲ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳದ 14 ನೇ ವರ್ಷದ ಗಣಪತಿ ವಿಸರ್ಜನೆಗೆ ವಿಹಿಂಪ ಪ್ರಾಂತೀಯ ಸಂಯೋಜಕ ಪ್ರಭಂಜನಸೂರ್ಯ ಹಾಗೂ ಚಂದ್ರಶೇಖರ್ ವಾಹನ ಚಾಲನೆ ಮಾಡುವ ಮೂಲಕ ಭಾನುವಾರ ಚಾಲನೆ ನೀಡಿದರು.
ಗಣೇಶ ಮೂರ್ತಿಯ ಶೋಭಾಯಾತ್ರೆ ಆರಂಭಕ್ಕೂ ಮುನ್ನ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹಾಗೂ ತುಮ್‌ಕೋಸ್ ಅಧ್ಯಕ್ಷ ಎಚ್.ಎಸ್.ಶಿವಕುಮಾರ್ ತೆಂಗಿನಕಾಯಿ ಒಡೆದು ಭಕ್ತಿ ಸಮರ್ಪಿಸಿದರು.
ಗಣೇಶ ಮೂರ್ತಿ ಮೆರವಣಿಗೆಯು ಕಲ್ಲುಸಾಗರ ರಸ್ತೆ, ಗಣಪತಿ ವೃತ್ತ, ನೃಪತುಂಗ ರಸ್ತೆ, ಉಪ್ಪಾರ ಬೀದಿ ರಸ್ತೆ, ರಾಷ್ಟ್ರೀಯ ಹೆದ್ದಾರಿ, ಜೂನಿಯರ್ ಕಾಲೇಜು ರಸ್ತೆ ಮೂಲಕ ಗಣಪತಿ ಹೊಂಡಕ್ಕೆ ಆಗಮಿಸಿತು. ಬಳಿಕ ಮೂರ್ತಿಗೆ ಪೂಜೆ ಸಲ್ಲಿಸಿ, ವಿಸರ್ಜನೆ ಮಾಡಲಾಯಿತು.
ನಾಸಿಕ್ ಡೋಲು, ಚಂಡೆ, ಬೊಂಬೆ ಕುಣಿತ, ಡೊಳ್ಳು ಮತ್ತಿತರ ಕಲಾತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ರಾಮ, ಹನುಮಂತ, ಛತ್ರಪತಿ ಶಿವಾಜಿ ಮಹಾರಾಜ್, ಭಾರತಮಾತೆ, ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ, ಭಾವಚಿತ್ರಗಳ ಕಳೆತಂದವು. ಎರಡು ಪ್ರತ್ಯೇಕ ಡಿಜೆಗಳಿಗೆ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದರು.
ಪಟ್ಟಣದ ಮುಖ್ಯ ಬೀದಿಗಳಲ್ಲಿ ಗಣೇಶ ಬರುತ್ತಿದ್ದಂತೆ ಮಹಿಳೆಯರು ಮನೆ ಮುಂದೆ ರಂಗೋಲಿ ಹಾಕಿ, ಮೂರ್ತಿಗೆ ಪೂಜೆ ಸಲ್ಲಿಸಿದರು. ಎಲ್ಲ ಕಡೆ ಬಾಳೆಕಂದು, ಮಾವಿನಸೊಪ್ಪು ಕಟ್ಟಿ ಅಲಂಕಾರ ಮಾಡಲಾಗಿತ್ತು. ಕೇಸರಿ ಬಾವುಟಗಳು ರಾರಾಜಿಸುತ್ತಿದ್ದವು.
ಗಣಪತಿ ವೃತ್ತ, ಬಸ್‌ನಿಲ್ದಾಣ ಮತ್ತು ಮುಖ್ಯವೃತ್ತಗಳಲ್ಲಿ ಶ್ರೀರಾಮ, ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಿದ್ದರು. ಭಕ್ತರಿಗಾಗಿ ಮಧ್ಯಾಹ್ನದ ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಶೋಭಾಯಾತ್ರೆಯಲ್ಲಿ ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ, ವಿಹಿಂಪ ಜಿಲ್ಲಾ ಗೌರವಾಧ್ಯಕ್ಷ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಎನ್.ರವಿಚಂದ್ರ, ಬಿಜೆಪಿ ತಾಲೂಕು ಉಪಾಧ್ಯಕ್ಷ ಕಾಯಿ ಮಂಜಣ್ಣ ಇದ್ದರು.
ಚನ್ನಗಿರಿ, ಶಿವಮೊಗ್ಗ, ಭದ್ರಾವತಿ, ಹೊಳೆಹೊನ್ನೂರು, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಹೊಳಲ್ಕೆರೆ, ಅಜ್ಜಂಪುರ, ಬೀರೂರು ಮತ್ತಿತರ ಸ್ಥಳಗಳ ಜನರು ಆಗಮಿಸಿದ್ದರು.
ಮೆರವಣಿಗೆ ಶಾಂತಯುತವಾಗಿ ನಡೆಯಲು ಇಬ್ಬರು ಎಎಸ್‌ಪಿ, ಐವರು ಡಿಎಸ್‌ಪಿ, 12 ಸಿಪಿಐ, 20 ಪಿಎಸ್‌ಐ, 40 ಎಎಸ್‌ಐ, 330 ಪೊಲೀಸರು, 75 ಗೃಹರಕ್ಷಕದಳ ಮತ್ತು 2 ಡ್ರೋನ್, 20 ಬೈನಾಕ್ಯೂಲರ್ ಬಳಸಲಾಗಿತ್ತು.
ಕಾರ್ಯಕರ್ತರ ನಡುವೆ ವಾಗ್ವಾದ: ಗಣಪತಿ ವಿರ್ಸಜನೆ ಶೋಭಾಯಾತ್ರೆಗೆ ಚಾಲನೆ ಕೊಡುವ ವಿಚಾರವಾಗಿ ಮಾಡಾಳು ವಿರೂಪಾಕ್ಷಪ್ಪ ಮತ್ತು ಎಚ್.ಎಸ್.ಶಿವಕುಮಾರ್ ಬಣದ ಕಾರ್ಯಕರ್ತರ ನಡುವೆ ಪ್ರಾರಂಭದಲ್ಲಿ ವಾಗ್ವಾದ ನಡೆಯಿತು. ಮೊದಲು ಮೆರವಣಿಗೆಗೆ ವಿಎಚ್‌ಪಿಯವರಿಂದ ಚಾಲನೆ ದೊರೆಯಿತು. ಆದರೂ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ತೆಂಗಿನಕಾಯಿ ಒಡೆದು ಮೆರವಣಿಗೆಯಲ್ಲಿ ಭಾಗವಹಿಸಿದರು. ನಂತರ ಶಿವಕುಮಾರ್ ತೆಂಗಿನಕಾಯಿ ಒಡೆದರು.
ಮೆರವಣಿಗೆಯ ಡಿಜೆ ಇಟ್ಟಿದ್ದ ಟ್ರಾೃಕ್ಟರ್ ಮೇಲೆ ಮಾಡಾಳು ಮಲ್ಲಿಕಾರ್ಜುನ ಕುಳಿತರು. ಬಳಿಕ ಶಿವಕುಮಾರ್ ಅವರನ್ನೂ ಕೂರಿಸಬೇಕು ಎಂದು ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. 15 ನಿಮಿಷ ಡಿಜೆಯನ್ನು ಮುಂದೆ ಹೋಗಲು ಬಿಡದೆ ನಿಲ್ಲಿಸಿದ್ದರು. ಪೊಲೀಸರು ಎರಡು ಪ್ರಸಂಗದಲ್ಲಿ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.