ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಭಾನುವಾರ ತಡರಾತ್ರಿ ರೌಡಿಯೊಬ್ಬನ ಹತ್ಯೆಗೆ ಸಾಕ್ಷಿಯಾಗಿದೆ. ಕಳ್ಳತನ, ಸುಲಿಗೆ ಸೇರಿ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾದ ವಿಘ್ನೇಶ್ ಕೊಲೆಯಾದವ.
ಭಾನುವಾರ ತಡರಾತ್ರಿ ವಿಘ್ನೇಶ್ ಚಹಾ ಕುಡಿಯಲು ಜೆ.ಸಿ. ನಗರದ ರಾಮಕೃಷ್ಣ ಬ್ಲಾಕ್ನಲ್ಲಿರುವ ಬೇಕರಿಯೊಂದರ ಮುಂದೆ ನಿಂತಿದ್ದ. ಅಲ್ಲಿಗೆ ಬಂದ 5-6 ಜನರ ತಂಡ ಈತನನ್ನು ಸುತ್ತುವರಿದು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಯಿತು. ಗಂಭೀರವಾಗಿ ಗಾಯಗೊಂಡಿದ್ದ ವಿಘ್ನೇಶ್ನನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತಾದರೂ, ಆತ ಸ್ಥಳದಲ್ಲೇ ಮೃತಪಟ್ಟಿದ್ದ ಎನ್ನಲಾಗಿದೆ.
ಮಹಾಲಕ್ಷ್ಮೀ ಲೇಔಟ್ನ ನಿವಾಸಿಯಾಗಿದ್ದ ವಿಘ್ನೇಶ್ನನ್ನು ಮಹಾಲಕ್ಷ್ಮೀ ಲೇಔಟ್ನ ಮತ್ತೊಬ್ಬ ರೌಡಿ ಮುಖೇಶ್ ಮತ್ತಾತನ ಸಹಚರರು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೆಲದಿನಗಳ ಹಿಂದೆ ಈತನೊಂದಿಗೆ ವಿಘ್ನೇಶ್ ಗಲಾಟೆ ಮಾಡಿಕೊಂಡಿದ್ದ. ಈ ವೈಷಮ್ಯದ ಹಿನ್ನೆಲೆಯಲ್ಲಿ ಈತನ ಹತ್ಯೆಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿದ್ದಾರೆ. (ದಿಗ್ವಿಜಯ ನ್ಯೂಸ್)