ಲಾರಿ ಪಲ್ಟಿಯಾಗಿ ಚಾಲಕ ಸಾವು

ಶಿರ್ವ: ಬೈಕಂಪಾಡಿಯ ಕಂಪನಿಯೊಂದರಿಂದ ಕಲ್ಲಿದ್ದಲು ತುಂಬಿಸಿಕೊಂಡು ಕೊಪ್ಪಳಕ್ಕೆ ತೆರಳುತ್ತಿದ್ದ ಲಾರಿಯೊಂದು ಸೋಮವಾರ ರಾತ್ರಿ 11.30ಕ್ಕೆ ರಾಷ್ಟ್ರೀಯ ಹೆದ್ದಾರಿಯ ಕಟಪಾಡಿ ಏಣಗುಡ್ಡೆ ಫಾರೆಸ್ಟ್ ಗೇಟ್ ಬಸ್‌ಸ್ಟಾಂಡ್ ಬಳಿ ಪಲ್ಟಿಯಾಗಿ ಚಾಲಕ, ಬೆಳಗಾವಿ ಚಿಕ್ಕೋಡಿ ಮೂಲದ ವಾಯಿದ್ ದಾವುಲ್ ಸಾಬ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಿಂದ ಲಾರಿ ಕ್ಲೀನರ್, ಚಾಲಕನ ಸಂಬಂಧಿಯಾಗಿರು ಮೋನಿ ಮುನಿರ್ ಗೋರಿ ಎಂಬುವರಿಗೂ ಗಂಭೀರ ಗಾಯವಾಗಿದ್ದು, ಉಡುಪಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತೀ ವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸುತ್ತಿದ್ದ ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ನಿಯಂತ್ರಣ ಕಳೆದುಕೊಂಡು ಲಾರಿ ಪಲ್ಟಿಯಾಗಿದೆ ಎನ್ನಲಾಗಿದೆ. ಲಾರಿ ನಜ್ಜುಗುಜ್ಜಾಗಿದ್ದು, ಕಲ್ಲಿದ್ದಲು ಬಸ್‌ಸ್ಟಾಂಡ್‌ನಲ್ಲಿ ಚೆಲ್ಲಿದೆ.

ಚಾಲಕ ವಾಯಿದ್ ದಾವುಲ್ ಸಾಬ್ ಅವರ ತಲೆ, ಕುತ್ತಿಗೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು, ರಕ್ತದ ಮಡುವಿನಲ್ಲಿದ್ದ ಅವರನ್ನು ಸಾರ್ವಜನಿಕರು ಅಂಬುಲೆನ್ಸ್‌ನಲ್ಲಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.