ಟಿಕ್​ಟಾಕ್​ ಗೀಳಿಗೆ ಬಿದ್ದ, ಬ್ಯಾಕ್​ ಫ್ಲಿಪ್​ ಮಾಡಲು ಹೋಗಿ ಬೆನ್ನುಮೂಳೆ ಮುರಿದುಕೊಂಡ: ಚಿಕಿತ್ಸೆಗೆ ಹಣ ಹೊಂದಿಸಲು ಪರದಾಟ

ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯಲ್ಲಿ ಟಿಕ್​ಟಾಕ್​ ಮೊಬೈಲ್​ ಆ್ಯಪ್​ನಲ್ಲಿ ಬ್ಯಾಕ್​ ಫ್ಲಿಪ್​ ಸಾಹಸದ ವಿಡಿಯೋ ಅಳವಡಿಸಲು ಪ್ರಯತ್ನಿಸಿದ ಯುವಕ ಈಗ ಬೆನ್ನುಮೂಳೆ ಮುರಿದುಕೊಂಡು ಹಾಸಿಗೆ ಹಿಡಿದಿದ್ದಾನೆ.

ಕುಮಾರ್​ ಗಾಯಗೊಂಡವನು. ಟಿಕ್​ಟಾಕ್​ನಲ್ಲಿ ವಿಡಿಯೋ ಅಳವಡಿಸಲು ಬ್ಯಾಕ್​ ಫ್ಲಿಪ್​ ಮಾಡಲು ಕುಮಾರ್​ ನಿರ್ಧರಿಸಿದ್ದ. ಅದರಂತೆ ತನ್ನ ಸ್ನೇಹಿತರ ಜತೆಗೂಡಿ ಈ ಸಾಹಸದ ವಿಡಿಯೋ ಚಿತ್ರೀಕರಿಸಲು ಮುಂದಾಗಿದ್ದ.

ಸ್ಲೋಮೋಷನ್​ನಲ್ಲಿ ಓಡಿ ಬಂದ ಆತ ಸ್ನೇಹಿತನ ಎರಡೂ ಅಂಗೈಗಳ ಮೇಲೆ ಪಾದ ಊರಿ ಹಿಂಬದಿಗೆ ನೆಗೆದ. ಆದರೆ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನಾಗಲಿ ಅಥವಾ ತಯಾರಿಯನ್ನಾಗಲಿ ಮಾಡಿಕೊಳ್ಳದ ಪರಿಣಾಮ ಕತ್ತಿನ ಮೇಲೆ ಲ್ಯಾಂಡ್​ ಆಗಿ ಬೆನ್ನುಮೂಳೆ ಮುರಿದುಕೊಂಡಿದ್ದಾನೆ. ಕತ್ತಿನ ಮೂಳೆಗೆ ಕೂಡ ಪೆಟ್ಟಾಗಿದೆ. ಸದ್ಯ ಈತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಆರ್ಕೆಷ್ಟ್ರಾದಲ್ಲಿ ಸಿಂಗರ್​, ಡ್ಯಾನ್ಸರ್​
ಬ್ಯಾಕ್​ ಫ್ಲಿಪ್​ ಸಾಹಸ ಮಾಡುವ ಯತ್ನದಲ್ಲಿ ಬೆನ್ನುಮೂಳೆ ಮುರಿತಕ್ಕೆ ಒಳಗಾಗಿರುವ ಕುಮಾರ್​ ರಾಮು ಮೆಲೋಡೀಸ್​ ಆರ್ಕೆಷ್ಟ್ರಾದಲ್ಲಿ 8 ವರ್ಷಗಳಿಂದ ಡ್ಯಾನ್ಸರ್​ ಕಂ ಸಿಂಗರ್​ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಶನಿವಾರ ಈ ಸಾಹಸ ಮಾಡಲು ಹೋಗಿ ಗಾಯಗೊಂಡಿದ್ದಾನೆ. ಈತನ ಚಿಕಿತ್ಸೆಗೆ ಅಂದಾಜು 10 ಲಕ್ಷ ರೂ.ಗೂ ಹೆಚ್ಚು ಹಣ ಬೇಕಾಗಿದೆ. ಇದನ್ನು ಹೊಂದಿಸಲು ಈತನ ಪಾಲಕರು ಪರದಾಡುತ್ತಿದ್ದಾರೆ. (ದಿಗ್ವಿಜಯ ಟಿವಿ)

 

Leave a Reply

Your email address will not be published. Required fields are marked *