ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿದ ಎರಡು ಕೋಮಿನ ಯುವಕರು

ಯಲ್ಲಾಪುರ: ಎರಡು ಕೋಮಿನ ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಘರ್ಷಣೆ ನಡೆದು ಇಬ್ಬರು ಗಾಯಗೊಂಡ ಘಟನೆ ಪಟ್ಟಣದ ಜಡ್ಡಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಪಟ್ಟಣದ ಬೆಲ್ ರಸ್ತೆಯ ಸಂತೆ ಮಾರುಕಟ್ಟೆಯಲ್ಲಿ ಎರಡು ಕೋಮಿನ ಯುವಕರ ಬೈಕ್ ಪರಸ್ಪರ ತಗುಲಿತು ಎಂಬ ಕಾರಣಕ್ಕೆ ಜಗಳ ನಡೆದಿದೆ. ನಂತರ ಜಡ್ಡಿಯಲ್ಲಿ ಇದೇ ನೆಪದಲ್ಲಿ ಒಂದು ಕೋಮಿನ ಯುವಕರು ಇನ್ನೊಂದು ಕೋಮಿನ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಜಡ್ಡಿಯ ಚೇತನ್ ಹಾಗೂ ಮಂಜುನಾಥ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ಠಾಣೆ ಮತ್ತು ಆಸ್ಪತ್ರೆಯ ಎದುರು ಜನ ಜಮಾಯಿಸಿದ್ದರು. ಸಿಪಿಐ ಡಾ.ಮಂಜುನಾಥ ನಾಯಕ ಸ್ಥಳಕ್ಕೆ ಭೇಟಿ ನೀಡಿದ್ದು, ಹಲ್ಲೆ ನಡೆಸಿದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ.