ಯುವಜನೋತ್ಸವ ನಿತ್ಯೋತ್ಸವವಾಗಲಿ

ಬೆಳಗಾವಿ: ವಿದ್ಯಾರ್ಥಿಗಳ ಪ್ರತಿಭೆಗೆ ಯುವಜನೋತ್ಸವ ಮುಖ್ಯ ವೇದಿಕೆಯಾಗಿದೆ. ಯುವಜನೋತ್ಸವ ನಿತ್ಯೋತ್ಸವ ಆಗಬೇಕು ಎಂದು ಜಾನಪದ ವಿದ್ವಾಂಸ ಡಾ.ಬಸವರಾಜ ಜಗಜಂಪಿ ಹೇಳಿದ್ದಾರೆ.

ನಗರದ ಲಿಂಗರಾಜ ಮಹಾವಿದ್ಯಾಲಯದ ಕೇಂದ್ರ ಸಭಾಗೃಹದಲ್ಲಿ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಾಗೂ ಕೆಎಲ್‌ಇ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಅಂತರ ಕಾನೂನು ಮಹಾವಿದ್ಯಾಲಯಗಳ ವಲಯ ಮಟ್ಟದ ಎರಡು ದಿನಗಳ ಯುವಜನೋತ್ಸವ ಕಾರ್ಯಕ್ರಮದಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತೀಯ ಸಂಸ್ಕೃತಿ ಕಾಪಾಡುವುದು ಯುವಶಕ್ತಿ ಜವಾಬ್ದಾರಿಯಾಗಿದೆ. ದೇಶದಲ್ಲಿ ಪಾಂಡಿತ್ಯ, ಕೌಶಲ್ಯ ಹಾಗೂ ಪ್ರತಿಭೆಗಳಿಗೆ ಕೊರತೆಯಿಲ್ಲ. ಇಂದು ಭಾರತೀಯ ಸಂಸ್ಕೃತಿ ಜಾಗತಿಕ ಮಟ್ಟದಲ್ಲಿ ತನ್ನ ವಿಶಿಷ್ಟವಾದ ಬೆಳಕನ್ನು ಚೆಲ್ಲಿದೆ. ನಾಡಿನ ಜಾನಪದ ಕಲಾವಿದರು ಯಾವುದೇ ಶಾಲೆ-ಕಾಲೇಜುಗಳಿಗೆ ಹೋಗಿ ಕಲಿತವರಲ್ಲ. ಆದರೆ, ಅವರು ರಚಿಸಿದ ಸಾಹಿತ್ಯ ವಿಶ್ವವಿದ್ಯಾಲಯದ ಕಟ್ಟೆ ಹತ್ತಿತು. ಜಾನಪದವೇ ನಮ್ಮ ಉಸಿರು ಮತ್ತು ಶಕ್ತಿ. ಅಂತಹ ಜಾನಪದ ಸಾಹಿತ್ಯ ಮತ್ತು ಕಲೆಯನ್ನು ಜೀವಂತವಾಗಿಡುವ ಜವಾಬ್ದಾರಿ ಇಂದಿನ ಯುವಜನಾಂಗದ್ದಾಗಿದೆ ಎಂದರು. ಯುವಕರು ಯಂತ್ರ, ತಂತ್ರಜ್ಞಾನದ ದಾಸರಾಗಿ ಸಂಸ್ಕೃತಿಯನ್ನೇ ಮರೆಯುತ್ತಿದ್ದಾರೆ. ಇದರಿಂದ ನಾಡಿನ ಸಂಸ್ಕೃತಿ ಅಪಾಯದಲ್ಲಿದೆ. ಸಾಮಾಜಿಕ ಜಾಲತಾಣದ ಪ್ರಭಾವದಿಂದ ಅಂತ್ಯಸಂಸ್ಕಾರಕ್ಕೆ ಹೋದರೂ ನಾವು ಸೆಲ್ಫಿಗೆ ಮಾರುಹೋಗುತ್ತಿದ್ದೇವೆ. ಇದು ಕಳವಳಕಾರಿ ಬೆಳವಣಿಗೆಯಾಗಿದೆ.

ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಆರ್.ಬಿ.ಬೆಲ್ಲದ ಮಾತನಾಡಿ, ಯುವ ಪ್ರತಿಭೆಗಳಿಗೆ ಒಳ್ಳೆಯ ಅವಕಾಶವನ್ನು ಯುವಜನೋತ್ಸವ ನೀಡಿದೆ. ಇಲ್ಲಿ ಸ್ಪರ್ಧೆ ಮುಖ್ಯವಲ್ಲ, ಪಾಲ್ಗೊಳ್ಳುವುದು ಮುಖ್ಯ. ವಿದ್ಯಾರ್ಥಿ ಜೀವನದಲ್ಲಿ ನಮ್ಮ ಸಾಂಸ್ಕೃತಿಕ ಚಿಂತನೆಗೆ ಇದೊಂದು ವೇದಿಕೆಯಾಗಬೇಕು. ವಿದ್ಯಾರ್ಥಿಗಳ ಸೃಜನಾತ್ಮಕ ಹಾಗೂ ಸಾಂಸ್ಕೃತಿಕ ಕಲೆಗಳಿಗೆ ಯುವಜನೋತ್ಸವ ಮುನ್ನುಡಿ ಬರೆಯುತ್ತದೆ. ಈ ನಿಟ್ಟಿನಲ್ಲಿ ಕಾನೂನಿನ ವಿದ್ಯಾರ್ಥಿಗಳು ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳ್ಳದೆ ಪರಂಪರೆಯಿಂದ ಬಂದಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರತಿಭೆ ಹೊರಹಾಕಬೆಕು ಎಂದರು. ಡಾ.ಉಮಾ ಹಿರೇಮಠ, ವಿಜಯ ಮುರದಂಡೆ, ಜ್ಯೋತಿ ಹಿರೇಮಠ, ಸವಿತಾ ಪಟ್ಟಣಶೆಟ್ಟಿ, ಸುಪ್ರಿಯಾ ಸ್ವಾಮಿ, ಅಶ್ವಿನಿ ಪರಪ್ಪ ಆಗಮಿಸಿದ್ದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಜಯಸಿಂಹ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾರ್ಜುನ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಯುವಜನೋತ್ಸವದ ಸಂಯೋಜಕಿ ಗೋಪಿಕಾ ಹೊಸಮನಿ ವಂದಿಸಿದರು. ಪೂರ್ಣಿಮಾ ಕಾಜಗಾರ ನಿರೂಪಿಸಿದರು. ರಾಜ್ಯದ ಸುಮಾರು 12 ಕಾನೂನು ಮಹಾವಿದ್ಯಾಲಯಗಳ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು.