ನೀವು ಒಂಟಿಯಲ್ಲ: ಹುತಾತ್ಮ ಯೋಧನ ತಂದೆಗೆ ಸೇನಾಧಿಕಾರಿ ಸಾಂತ್ವನ ಹೇಳಿದ ಫೋಟೋ ವೈರಲ್​

ನವದೆಹಲಿ: ಕಳೆದ ಶನಿವಾರ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್​ನಲ್ಲಿ ಉಗ್ರರ ವಿರುದ್ಧದ ಗುಂಡಿನ ಕಾಳಗದಲ್ಲಿ ಹುತಾತ್ಮರಾದ 34 ರಾಷ್ಟ್ರೀಯ ರೈಫಲ್ಸ್​ನ ಯೋಧ ಲ್ಯಾನ್ಸ್​ ನಾಯಕ್​ ನಜೀರ್​ ಅಹಮದ್​ ವಾನಿ ಅಂತ್ಯಕ್ರಿಯೆ ಸಂದರ್ಭದಲ್ಲಿ ಅವರ ತಂದೆಗೆ ಸೇನಾಧಿಕಾರಿಯೊಬ್ಬರು ಸಾಂತ್ವನ ಹೇಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಕಳೆದ ಸೋಮವಾರ ಕುಲ್ಗಾಮ್​ ಜಿಲ್ಲೆಯ ಯೋಧನ ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ನೂರಾರು ಗ್ರಾಮಸ್ಥರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಹುತಾತ್ಮ ಯೋಧನ ತಂದೆಗೆ ಸೇನೆಯ ಹಿರಿಯ ಅಧಿಕಾರಿಯೊಬ್ಬರು ಸಾಂತ್ವನ ಹೇಳಿದರು.

ಸೇನಾಧಿಕಾರಿ ಸಾಂತ್ವನ ಹೇಳುತ್ತಿರುವ ಫೋಟೋವನ್ನು ಭಾರತೀಯ ಸೇನೆ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡು, ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಡಿಬರಹ ಬರೆದಿತ್ತು. ಈ ಫೋಟೋ 1000 ಕ್ಕೂ ಹೆಚ್ಚು ಬಾರಿ ರಿಟ್ವೀಟ್​ ಆಗಿದ್ದು, 3 ಸಾವಿರಕ್ಕಿಂತ ಹೆಚ್ಚಿನ ಜನರು ಲೈಕ್​ ಮಾಡಿದ್ದಾರೆ. ಜತೆಗೆ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರತೀಯ ಸೇನೆಯ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)