ನಂ. 1 ಭ್ರಷ್ಟಾಚಾರಿ ಎಂಬ ಕಳಂಕದಲ್ಲೇ ನಿಮ್ಮ ತಂದೆ ಜೀವನ ಅಂತ್ಯಗೊಂಡಿತು ಎಂದು ರಾಹುಲ್‌ಗೆ ಮೋದಿ ತಿವಿತ

ನವದೆಹಲಿ: ಲೋಕಸಭಾ ಚುನಾವಣೆ ಕೊನೆಯ ಘಟ್ಟ ತಲುಪುತ್ತಿರುವಂತೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ನಾಯಕರ ನಡುವಿನ ವಾಗ್ವಾದಗಳು ತಾರಕಕ್ಕೇರಿವೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ವಾಗ್ಧಾಳಿ ನಡೆಸಿದ್ದು, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಜೀವನವು ನಂ.1 ಭ್ರಷ್ಟಾಚಾರ ಎಂಬ ಕಳಂಕದಲ್ಲೇ ಕೊನೆಗೊಂಡಿತು ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಫೇಲ್‌ ಯುದ್ಧವಿಮಾನ ಖರೀದಿಗೆ ಸಂಬಂಧಿಸಿದಂತೆ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದಷ್ಟೇ ರಾಹುಲ್ ಗಾಂಧಿ ಅವರ ಏಕೈಕ ಗುರಿಯಾಗಿದೆ. ನಿಮ್ಮ ತಂದೆ ರಾಜೀವ್‌ ಗಾಂಧಿ ತಮ್ಮ ಆಪ್ತರ ನಡುವೆ ಮಾತ್ರ ಶುದ್ಧ ಹಸ್ತ ಎನಿಸಿಕೊಂಡಿದ್ದರು. ಆದರೆ ಅವರ ಜೀವನ ಭ್ರಷ್ಟಾಚಾರಿ ನಂ.1 ಎಂಬ ಕಳಂಕದಲ್ಲೇ ಕೊನೆಗೊಂಡಿತು ಎಂದು ಆರೋಪಿಸಿದ್ದಾರೆ.

ಪ್ರಧಾನಿ ಮೋದಿ ತಮ್ಮ ಭಾಷಣಗಳಲ್ಲಿ ಬೋಫೋರ್ಸ್‌ ಹಗರಣದ ಕುರಿತು ಪ್ರಸ್ತಾಪಿಸುತ್ತಿದ್ದು, ಹಗರಣಕ್ಕೆ ಸಂಬಂಧಿಸಿದಂತೆ ಸ್ವೀಡನ್‌ ರಕ್ಷಣಾ ಉಪಕರಣಗಳ ತಯಾರಿಕ ಬೋಫೋರ್ಸ್‌ ಕಂಪನಿಯು ರಾಜೀವ್‌ ಗಾಂಧಿಯವರಿಗೆ ಭಾರಿ ಮೊತ್ತದ ಕಿಕ್‌ಬ್ಯಾಕ್‌ ನೀಡಿದೆ ಮತ್ತು ಭಾರತಕ್ಕೆ ಫಿರಂಗಿ ಮತ್ತು ಗನ್‌ ಮಾರಾಟದಲ್ಲೂ ಇತರರು ಇದೇ ಕ್ರಮವನ್ನು ಅನುಸರಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಆದರೆ ರಾಜೀವ್‌ ಗಾಂಧಿಯವರು ಲಂಚ ಸ್ವೀಕರಿಸಿರುವ ಕುರಿತು ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೈಕೋರ್ಟ್‌ ತಿಳಿಸಿತ್ತು.

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪತಿ ಮತ್ತು ರಾಹುಲ್‌ ಗಾಂಧಿ ತಂದೆ ರಾಜೀವ್‌ ಗಾಂಧಿಯನ್ನು 1991ರಲ್ಲಿ ಎಲ್​ಟಿಟಿಇ ಉಗ್ರರ ಆತ್ಮಾಹುತಿ ದಾಳಿಗೆ ಬಲಿಯಾಗಿದ್ದರು.

ಎರಡನೇ ಭಾರಿಗೆ ಗದ್ದುಗೆ ಹಿಡಿಯಲು ಮುಂದಾಗಿರುವ ಮೋದಿ ವಿಪಕ್ಷಗಳ ಮೈತ್ರಿ ವಿರುದ್ಧ ಕಿಡಿಕಾರಿ, ಅವರೆಲ್ಲ ಸೇರಿಕೊಂಡು ನನ್ನ ವ್ಯಕ್ತಿತ್ವವನ್ನು ಹಾಳುಮಾಡುವ ಮೂಲಕ ಕೇಂದ್ರದಲ್ಲಿ ದುರ್ಬಲ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಈ ಮೋದಿ ಹುಟ್ಟುತ್ತಲೇ ಚಿನ್ನದ ಸ್ಪೂನ್‌ ಅನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟಿಲ್ಲ. ಅಥವಾ ಯಾವುದೇ ಶ್ರೀಮಂತ ಕುಟುಂಬದ ಹಿನ್ನೆಲೆಯೂ ಇಲ್ಲ ಎಂಬುದನ್ನು ನಾಮ್‌ಧಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ರಾಹುಲ್‌ ಗಾಂಧಿ ಅವರನ್ನು ಪರೋಕ್ಷವಾಗಿ ತಿವಿದಿದರು. (ಏಜೆನ್ಸೀಸ್)

Leave a Reply

Your email address will not be published. Required fields are marked *