ಭಾರತೀಯ ಅಧ್ಯಾತ್ಮವೇ ಯುವ ಚೈತನ್ಯದ ಜೀವಾಳ

ಯುವಜನತೆಯ ಪಾಲಿಗೆ ಪ್ರತಿ ಕ್ಷೇತ್ರದಲ್ಲೂ ಒಬ್ಬೊಬ್ಬ ‘ಹೀರೋ’ ಇರುತ್ತಾನೆ. ಆ ‘ಹೀರೋ’ ನಡೆ- ನುಡಿಗಳನ್ನು ಪ್ರತ್ಯಕ್ಷವಾಗಿಯೋ- ಪರೋಕ್ಷವಾಗಿಯೋ ಅನುಸರಿಸುತ್ತಿರುತ್ತಾರೆ. ದಕ್ಷ ಪೊಲೀಸ್ ಅಧಿಕಾರಿ ರವಿ ಡಿ. ಚನ್ನಣ್ಣವರ್ ಅಂಥ ‘ಹೀರೋ’ಗಳಲ್ಲೊಬ್ಬರು ಎಂದರೆ ಅತಿಶಯೋಕ್ತಿಯಲ್ಲ. ಕಠಿಣ ಪರಿಶ್ರಮದಿಂದ ವ್ಯಾಸಂಗ ಮಾಡಿ, ಸಮಾಜದಲ್ಲಿ ಕಾನೂನು- ಸುವ್ಯವಸ್ಥೆ ಕಾಪಾಡುವಂಥ ಮಹತ್ತರ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ರಾಷ್ಟ್ರೀಯ ಯುವದಿನ ಅಂಗವಾಗಿ ವಿಜಯವಾಣಿ, ದಿಗ್ವಿಜಯ 247 ನ್ಯೂಸ್ ಜಯನಗರದ ಎನ್​ಎಂಕೆಆರ್​ವಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಯುವಜನತೆ ಭಾರತೀಯ ಸಂಸ್ಕೃತಿಯ ಹಿರಿಮೆ-ಗರಿಮೆ ಅರಿತುಕೊಂಡು ಉನ್ನತ ಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂಬ ಸಾರ್ಥಕ ಸಂದೇಶ ರವಾನಿಸಿದರು.

ಯುವಜನತೆ ಹುರಿದುಂಬಿಸಿದ ಡಿಸಿಪಿ ರವಿ ಡಿ. ಚನ್ನಣ್ಣವರ್ | ಎನ್​ಎಂಕೆಆರ್​ವಿ ಕಾಲೇಜಿನಲ್ಲಿ ಯಶಸ್ವಿ ಸಂವಾದ

ಬೆಂಗಳೂರು: ಉಪನಿಷತ್ತಿನ ‘ಸಾ ವಿದ್ಯಾ ಯಾ ವಿಮುಕ್ತಯೆ’ ವಾಕ್ಯದಂತೆ ಯಾವ ವಿದ್ಯೆ ನಮ್ಮನ್ನು ಪಾರು ಮಾಡುತ್ತ ದೆಯೋ ಅದೇ ನಿಜ ಶಿಕ್ಷಣ. ಆತ್ಮಹತ್ಯೆ ಮಾಡಿಕೊಳ್ಳುವಂತಹ ಶಿಕ್ಷಣ ನಮಗೆ ಬೇಕಾಗಿಲ್ಲ. ಶಿಕ್ಷಣ ಸುಂದರ ಬದುಕು ಕಟ್ಟಿಕೊಳ್ಳಲು ದಾರಿಯಾಗಬೇಕು. ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಅರ್ಜುನನಿಗೆ ನೀಡಿದ ಉಪದೇಶದಲ್ಲಿ ಎಲ್ಲ ಸಮಸ್ಯೆಗಳಿಗೂ ಉತ್ತರವಿದೆ. ಅದರ ಒಳಾರ್ಥ ಅರಿಯಬೇಕಿದೆ. ಬ್ರಹ್ಮಚರ್ಯದ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಲಿಯಬೇಕು. ಸರ್ಕಾರ ಬಜೆಟ್ ಸಿದ್ಧಪಡಿಸುವಂತೆ ನಮ್ಮ ಜೀವನದಲ್ಲಿ ಸಹ ಸೂಕ್ತ ವೇಳಾಪಟ್ಟಿ ಹಾಕಿಕೊಳ್ಳಬೇಕು…

ದಕ್ಷ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣವರ್ ಯುವಪೀಳಿಗೆಗೆ ಆತ್ಮವಿಶ್ವಾಸದ ಮಾತುಗಳಿವು. ರಾಷ್ಟ್ರೀಯ ಯುವ ದಿನದ ಅಂಗವಾಗಿ ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಜಯನಗರದ ಎನ್​ಎಂಕೆಆರ್​ವಿ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಯುವ ಸಂವಾದದಲ್ಲಿ ಯುವ ಶಕ್ತಿಯ ಮಹತ್ವದ ಜತೆಗೆ ವಾಸ್ತವ ಪ್ರಪಂಚದ ದರ್ಶನ ಮಾಡಿಸಿದರು.

ರಾಮಕೃಷ್ಣ ಪರಮಹಂಸ, ತಾಯಿ ಶಾರದೆ, ಸ್ವಾಮಿ ವಿವೇಕಾನಂದರು ಬಿಟ್ಟುಹೋದ ತತ್ವ-ಸಿದ್ಧಾಂತಗಳು ವಿಶ್ವಕ್ಕೇ ಬೆಳಕಾಗಿವೆ. ಅಷ್ಟೇ ಅಲ್ಲ, ಸ್ವಾಮಿ ವಿವೇಕಾನಂದರ ಶಿಸ್ತುಬದ್ಧ ಬದುಕು ಯುವಸಮೂಹ ಅನುಕರಿಸುವ ಮೂಲಕ ದೇಶದ ಶಕ್ತಿಯಾಗಿ ಹೊರಹೊಮ್ಮಬೇಕಿದೆ. ಬದುಕಿದ್ದ ಅಲ್ಪಾವಧಿಯಲ್ಲಿಯೇ ಜಗತ್ತಿನಾದ್ಯಂತ ಹಿಂದು ಧರ್ಮದ ತಿರುಳನ್ನು ಪರಿಚಯಿಸಿದ ಸ್ವಾಮಿ ವಿವೇಕಾನಂದರು ನನ್ನ ಬದುಕಿನಲ್ಲಿಯೂ ಅತೀವ ಪ್ರಭಾವ ಬೀರಿದ್ದಾರೆ. ಅಷ್ಟೇ ಅಲ್ಲ, ಇನ್ನು ಮುಂದೆ ಸಹ ಒಳ್ಳೆಯ ಕಾರ್ಯ ಮಾಡಿದರೆ ಅದಕ್ಕೂ ವಿವೇಕಾನಂದರೇ ಪ್ರೇರಣೆ. ಹೀಗಾಗಿ ಯುವಜನತೆ ಕಾಲೇಜು ಶಿಕ್ಷಣದ ಜತೆಗೆ ಉಪನಿಷತ್ತು, ವೇದಾಂತ, ಮಹಾಕಾವ್ಯದಲ್ಲಿನ ಸದ್ವಿಚಾರವನ್ನು ಸ್ವೀಕರಿಸಿ, ಸನ್ಮಾರ್ಗದಲ್ಲಿ ಸಾಗಬೇಕಿದೆ. ಅದೇ ರೀತಿ, ಹಣ, ಅಧಿಕಾರದ ಆಸೆಗೆ ಅನ್ಯಮಾರ್ಗ ತುಳಿಯದೆ ಸತ್ಯದ ಹಾದಿಯಲ್ಲಿ ನಡೆಯಬೇಕೆಂದು ಕರೆ ನೀಡಿದರು.

ಈ ಜಗತ್ತಿನಲ್ಲಿ ಅಸಾಧ್ಯ ಎನ್ನುವುದು ಯಾವುದೂ ಇಲ್ಲ. ಅಷ್ಟಾವಧಾನ, ಶತಾವಧಾನ ಸಿದ್ಧಿಸಿಕೊಂಡವರು ನಮ್ಮ ನಡುವೆಯೇ ಇದ್ದಾರೆ. ಹೀಗಾಗಿ ಶಾಲಾ ಶಿಕ್ಷಣದ ಬಳಿಕ ರಾಮಕೃಷ್ಣ ಮಠಗಳಂತಹ ಧಾರ್ವಿುಕ ಕೇಂದ್ರಕ್ಕೆ ಭೇಟಿ ನೀಡಿ ಎಂದು ಸಲಹೆ ನೀಡಿದರು.

ಸಮಾಜದಲ್ಲಿ ಬಲಿಷ್ಠರಾಗಿ ಮುನ್ನುಗ್ಗಿ: ಸದಾ ಹಿತವನ್ನೇ ಬಯಸುವ ಪಾಲಕರನ್ನು ಗೌರವಿಸುವುದು ಮಕ್ಕಳ ಆದ್ಯ ಕರ್ತವ್ಯ. ಹೀಗಾಗಿ ಪಾಲಕರ ಬಳಿ ಸತ್ಯವನ್ನೇ ನುಡಿ ಯುವ ಪರಿಪಾಠ ಬೆಳೆಸಿಕೊಳ್ಳ ಬೇಕು. ಅಷ್ಟೇ ಅಲ್ಲ, ಕೆಟ್ಟ ಆಲೋವ ಚನೆಗಳಿಂದ ಅಂತರವನ್ನು ಕಾಯ್ದುಕೊಳ್ಳಬೇಕು. ಹರೆಯ ದಲ್ಲಿ ಪ್ರೀತಿ- ಪ್ರೇಮದ ಆಕರ್ಷಣೆಗೆ ಒಳಗಾಗಿ, ಮೂಲ ಉದ್ದೇಶದ ಗುರಿ ತಪ್ಪಬಾರದು. ಹೆತ್ತವರ ಇಚ್ಛೆಗೆ ವಿರುದ್ಧವಾಗಿ ನಡೆಯುವುದು ತರವಲ್ಲ ಎಂದರು. ಪೊಲೀಸ್ ಇಲಾಖೆಯಲ್ಲೂ ಮಹಿಳಾ ಶಕ್ತಿ ಹೆಚ್ಚುತ್ತಿದೆ.

ಮಹಿಳೆಯರು ಅಬಲೆಯರಲ್ಲ ಸಬಲೆಯರು

ಎನ್ನುವುದನ್ನು ಸಾಬೀತು ಮಾಡುತ್ತಿದ್ದಾರೆ. ಪ್ರತಿ ಮಹಿಳೆಯೂ ಬಲಿಷ್ಠವಾಗಿ ದುಷ್ಟರನ್ನು ಎದುರಿ ಸಲು ಸಮರ್ಥರಾಗಬೇಕು. ಆಗಅಪರಾಧಗಳು ಸಹ ಕಡಿಮೆಯಾ ಗುತ್ತದೆ ಎಂದರು. ಎನ್​ಎಂಕೆಆರ್​ವಿ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಸ್ನೇಹ ಲತಾ ನಾಡಿಗೇರ್, ಪತ್ರಿ ಕೋದ್ಯಮ ವಿಭಾಗದ ಪ್ರಾಧ್ಯಾಪಕ ಮನೋಜ್ ಹಾಗೂ ವಿಜಯವಾಣಿ ಡೆಪ್ಯೂಟಿ ಎಡಿಟರ್ ರಾಘವೇಂದ್ರ ಗಣಪತಿ ಉಪಸ್ಥಿತರಿದ್ದರು.

ಮಿಸ್ಡ್ ಪರ್ಸನ್ ಆಪ್​ಗೆ ಮೆಚ್ಚುಗೆ

ವಿವಿಧ ಸಂದರ್ಭಗಳಲ್ಲಿ ಕಾಣೆ ಆದವರನ್ನು ಹುಡುಕಲು ನೆರವಾಗುವಂತೆ ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರು ರೂಪಿಸಿರುವ ‘ಮಿಸ್ಡ್ ಪರ್ಸನ್​ಆಪ್’ಗೆ ರವಿ ಡಿ. ಚನ್ನಣ್ಣವರ್ ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ‘ವಿಜಯವಾಣಿ’ಯ ಸಾಮಾಜಿಕ ಕಳಕಳಿಗೆ ಅಭಿನಂದನೆ ಸಲ್ಲಿಸಿದರು.

ಮುಕ್ತವಾಗಿ ಉತ್ತರಿಸಿದ ದಕ್ಷ ಅಧಿಕಾರಿ

ಕೆಲಸದ ಒತ್ತಡದ ನಡುವೆಯೂ ರವಿ ಡಿ. ಚನ್ನಣ್ಣವರ್ ವಿದ್ಯಾರ್ಥಿಗಳೊಂದಿಗೆ ತಮ್ಮ ಅಮೂಲ್ಯ ಸಮಯ ಕಳೆದರು. ಅಷ್ಟೇ ಅಲ್ಲ, ಕಾನೂನಿನ ಬಗ್ಗೆ ಅರಿವು ಮೂಡಿಸುವ ಜತೆಗೆ ಪೊಲೀಸ್ ಕಾರ್ಯವೈಖರಿ ಬಗ್ಗೆ ತಿಳಿಸಿದರು. ಐಪಿಸಿ ಸೆಕ್ಷನ್ ಪ್ರಕಾರ ಮಾನ, ಜೀವ ಹಾಗೂ ಆಸ್ತಿ ಹಾನಿಗೆ ಒಳಗಾಗುವ ಪರಿಸ್ಥಿತಿಯಲ್ಲಿ ವ್ಯಕ್ತಿ ಸ್ವಯಂರಕ್ಷಣೆಗೆ ಮುಂದಾಗುವ ಸಂದರ್ಭದಲ್ಲಿ ಸಂಭವಿಸುವ ಅಪರಾಧವನ್ನು ಕಾನೂನಿನ ಅಡಿಯಲ್ಲಿ ಮಾಫಿ ಮಾಡಲಾಗುವುದು. ಇನ್ನು ಪೊಲೀಸ್ ಠಾಣೆಯಲ್ಲಿ ದಾಖಲಾಗುವ ಎಲ್ಲ ಪ್ರಕರಣಗಳಿಗೂ ಪ್ರಾತಿನಿಧ್ಯ ನೀಡುವುದು ನಮ್ಮ ಕರ್ತವ್ಯ. ಬಡ, ಮಧ್ಯಮ ವರ್ಗದವರು ಅಧಿಕಾರದ ಚುಕ್ಕಾಣಿ ಹಿಡಿದಲ್ಲಿ ಈ ಸಮಾಜದಲ್ಲಿ ವ್ಯವಸ್ಥೆ ಸುಧಾರಿಸಲಿದೆ. ಉಳಿದಂತೆ ನಮ್ಮ ಕಾನೂನಿನಲ್ಲಿ ವಿವೇಚನೆಗೆ ಬಿಟ್ಟ ಅಧಿಕಾರವೇ ಹೆಚ್ಚಿದ್ದು, ಅದಕ್ಕೆ ಅನುಸಾರವಾಗಿ ನಡೆದುಕೊಳ್ಳಬೇಕಾಗುತ್ತದೆ. ಕಾನೂನಿನ ಬಗ್ಗೆ ಎಷ್ಟೇ ಅರಿವು ಮೂಡಿದ್ದರೂ ಅದೆಷ್ಟೋ

ಪ್ರಕರಣಗಳು ಬೆಳಕಿಗೆ ಬರದೆ ಮರೆಯಾಗುತ್ತಿವೆೆ. ಬೆಂಗಳೂರಿನ ಪಶ್ಚಿಮ ವಿಭಾಗದ ವ್ಯಾಪ್ತಿಯಲ್ಲಿ 18 ಪೊಲೀಸ್ ಠಾಣೆಯಿದ್ದು, 45 ಲಕ್ಷ ಜನ ವಾಸಿಸುತ್ತಿದ್ದಾರೆ. ಪ್ರತಿ ವರ್ಷ 8 ಸಾವಿರ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿದೆ. ಆದರೆ, ಇದೇ ವೇಳೆ ಅಂದಾಜು 20 ಸಾವಿರ ಪ್ರಕರಣ ಬೆಳಕಿಗೆ ಬರುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಮನಸ್ಸಿನ ಮೇಲೆ ಹತೋಟಿ ಅತ್ಯಗತ್ಯ

ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದ ನಾನು ಶಿಕ್ಷಣದ ಜತೆಗೆ ಅರೆಕಾಲಿಕ ಉದ್ಯೋಗ ಮಾಡುತ್ತಿದ್ದೆ. ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ಹಾಜರಾತಿಯಲ್ಲಿ ಕಡೆಯ ಸ್ಥಾನದಲ್ಲಿರುವ ನಾನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೇವಲ 23 ದಿನ ಓದಿ, ಶೇ.89 ಅಂಕದೊಂದಿಗೆ ತೇರ್ಗಡೆಯಾದೆ. ಅದೇ ರೀತಿ, ಪಿಯುಸಿ ದಿನಗಳಲ್ಲಿ ಪೇಪರ್ ಹಾಕುವುದರ ಜತೆಗೆ ಥಿಯೇಟರ್ ಬಾಯ್, ಬಾರ್ ಮತ್ತು ರೆಸ್ಟೋರೆಂಟ್​ನಲ್ಲಿ ಕೆಲಸ ಮಾಡಿ ಶೈಕ್ಷಣಿಕ ವೆಚ್ಚವನ್ನು ಭರಿಸಿಕೊಂಡೆ. ನನಗೂ ಸಿನಿಮಾ ವೀಕ್ಷಿಸಬೇಕು, ನಾನ್​ವೆಜ್ ಊಟ ಮಾಡಬೇಕು, ಉತ್ತಮ ಗೆಳತಿ ಹೊಂದಬೇಕು..ಹೀಗೆ ನನ್ನಲ್ಲಿ ಅಂಕುರಿಸಿದ ಆಸೆಗಳನ್ನು ಬರೆದಿಟ್ಟುಕೊಳ್ಳಲು ಆರಂಭಿಸಿದೆ. ಐಪಿಎಸ್ ಮುಗಿಸಿ, ಸೇವೆಗೆ ನಿಯೋಜನೆಗೊಂಡ ಬಳಿಕ ಆಸೆಗಳನ್ನೆಲ್ಲ ತೀರಿಸಿಕೊಂಡೆ ಎಂದು ರವಿ ಡಿ. ಚನ್ನಣ್ಣವರ್ ಹಳೇ ದಿನಗಳನ್ನು ನೆನಪಿಸಿಕೊಂಡರು.

ಶಿಕ್ಷಣ ಬಿಟ್ಟು ಗೋವಾಕ್ಕೆ ಹೊರಟಿದ್ದೆ

ಪಿಯುಸಿಯಲ್ಲಿ ಪಠ್ಯ ಆಧಾರಿತ ಸೀಮಿತ ಶಿಕ್ಷಣದಿಂದ ನನ್ನ ಅಸ್ತಿತ್ವದ ಬಗ್ಗೆ ಪ್ರಶ್ನೆಗಳು ಮೂಡಲಾರಂಭಿಸಿದವು. ಇದರಿಂದ ಅರ್ಧದಲ್ಲಿಯೇ ಶಿಕ್ಷಣ ತೊರೆದು ಗೋವಾಕ್ಕೆ ತೆರಳಲು ಮುಂದಾಗಿದ್ದೆ. ಆದರೆ, ನನ್ನನ್ನು ರಾಮಕೃಷ್ಣ ಆಶ್ರಮದ ಯತಿಗಳೊಬ್ಬರು ತಡೆದು ಸತ್ಯದ ದರ್ಶನ ಮಾಡಿಸಿದರು. ಅಂದುಕೊಂಡಿದ್ದನ್ನು ಸಾಧಿಸಲೇಬೇಕೆಂಬ ಸ್ವಾಮಿ ವಿವೇಕಾನಂದರಂತಹ ಮಹಾನುಭಾವರ ಸಂದೇಶ ಹಠವನ್ನೂ ಹುಟ್ಟಿಸಿತು ಎಂದು ರವಿ ಡಿ.ಚನ್ನಣ್ಣವರ್ ಹೇಳಿದರು.

ಒಂದು ಪ್ರಶ್ನೆ ಬದುಕು ಬದಲಿಸಿತು

ವಿದ್ಯಾರ್ಥಿಯಾಗಿದ್ದಾಗ ನಮ್ಮ ಊರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಉಪದೇಶ ನೀಡುತ್ತಿದ್ದರು. ಈ ವೇಳೆ ಹಿಂದೆ ಕುಳಿತ ನಾನು ‘ಸ್ವಾಮೀಜಿ ನೀವು ಹೇಳುತ್ತಿರುವುದು ಆದರ್ಶ ಸಮಾಜದಲ್ಲಿ ಬದುಕುವ ಪಾಠ. ಇದಕ್ಕೆ ವಿರುದ್ಧವಾದ ವಾತಾವರಣ ಇಲ್ಲಿದ್ದು, ಸಮಾನತೆ, ಅಸಹಿಷ್ಣುತೆಯಲ್ಲಿ ಬದುಕುತ್ತಿದ್ದೇವೆ’ ಎಂದು ಹೇಳಿದೆ. ಇದನ್ನು ಶಾಂತರಾಗಿ ಕೇಳಿದ ಸ್ವಾಮೀಜಿ, ನನ್ನನ್ನು ಆಶ್ರಮಕ್ಕೆ ಕರೆದೊಯ್ದು ಹಂತಹಂತವಾಗಿ ಸತ್ಯದ ಅರಿವು ಮಾಡಿಸಿದರು ಎಂದು ರವಿ ಡಿ. ಚನ್ನಣ್ಣನವರ್ ತಿಳಿಸಿದರು.

ಹೆಣ್ಣು ಮಕ್ಕಳು ಯಾವ ರೀತಿ ಬಲಿಷ್ಠವಾಗಿ ಹೋರಾಡಬೇಕೆನ್ನು ವುದನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ಅದೇ ರೀತಿ, ನಮ್ಮಲ್ಲಿ ಆತ್ಮವಿಶ್ವಾಸ ಸಹ ಮೂಡಿತು. ಇನ್ನು ಹೆಣ್ಣು ಮಕ್ಕಳು ಸಹಚ ಅಧಿಕಾರಕ್ಕೆ ಬರಬೇಕೆನ್ನುವ ಮಾತು ಸ್ಪೂರ್ತಿಯಾಯಿತು.

| ವರ್ಷಿಣಿ ಬಿಬಿಎ ವಿದ್ಯಾರ್ಥಿನಿ