ಫೇಸ್‌ಬುಕ್‌ನಲ್ಲಿ ಪ್ರಿಯತಮನ ಪ್ರೇಮ ಪ್ರಚಾರಕ್ಕೆ ಹೆದರಿದ ಯುವತಿ ಮಾಡಿಕೊಂಡಳು ಅನಾಹುತ!

ವಿಜಯಪುರ: ಪ್ರಿಯಕರನ ಫೇಸ್‌ಬುಕ್‌ನಲ್ಲಿನ ಪ್ರೇಮ ಪ್ರಚಾರದಿಂದ ಹೆದರಿದ ಯುವತಿ ಸೀಮೆ ಎಣ್ಣೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಸಿಂದಗಿ ತಾಲೂಕಿನ ಬೂದಿಹಾಳದ ಪಿ.ಎಚ್. ಗ್ರಾಮದ ಸುಧಾರಾಣಿ ಬಿರಾದಾರ(23) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಸೀಮೆ ಎಣ್ಣೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

ಯುವತಿಯ ಪ್ರಿಯಕರ ಶಿವಾನಂದ ಬಿರಾದಾರ ಎಂಬಾತ ಯುವತಿಯ ಜತೆಗಿದ್ದ ಫೋಟೊವನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅಪಲೋಡ್ ಮಾಡಿದ್ದರಿಂದಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನುವ ಆರೋಪ ಕೇಳಿಬಂದಿದೆ.

ಪಿಯುಸಿಯಿಂದ ಸುಧಾರಾಣಿ ಹಾಗೂ ಕೆರೂಟಗಿ ಗ್ರಾಮದ ಶಿವಾನಂದ ನಡುವೆ ಪರಿಚಯ ಬೆಳೆದಿತ್ತು. ನಂತರ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ. ನಂತರ ಆಗಾಗ ಪಾರ್ಕ್ ಹಾಗೂ ಇನ್ನಿತರ ಕಡೆಗಳಲ್ಲಿ ಸುತ್ತಾಟ ನಡೆಸುತ್ತ ವೇಳೆ ಜತೆಯಾಗಿ ಸೆಲ್ಫಿ ತೆಗೆದುಕೊಂಡಿದ್ದರು. ಈ ಹಿಂದೆ ಯುವತಿ ವಿಜಯಪುರಕ್ಕೆ ಕೋಚಿಂಗ್‌ಗೆಂದು ಹೋಗಿದ್ದಾಗಲೂ ಆಕೆಯನ್ನು ಬಂದು ಭೇಟಿ ಮಾಡುತ್ತಿದ್ದ ಯುವಕ ಈ ಸಂದರ್ಭ ತೆಗೆಸಿಕೊಂಡ ಸೆಲ್ಫಿಗಳನ್ನು ಫೇಸ್‌ಬುಕ್‌ಗೆ ಅಪಲೋಡ್ ಮಾಡಿದ್ದಾನೆ.

ಇದರಿಂದ ಮಾನಸಿಕವಾಗಿ ನೊಂದ ಯುವತಿ ಸೆ.17ರಂದು ಸೀಮೆ ಎಣ್ಣೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ನಿನ್ನೆ ಯುವತಿ ಸುಧಾರಾಣಿ ಮೃತಪಟ್ಟಿದ್ದಾಳೆ. ಯುವತಿ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *