ಸಾಧನೆಗೆ ಸ್ಫೂರ್ತಿ ತುಂಬಿದ ಯುವ ಸಾಧಕರ ಸಂವಾದ

<ರಾಷ್ಟ್ರೀಯ ಯುವ ದಿನಾಚರಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮ * ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ 24*7 ಆಯೋಜನೆ>

ವಿಜಯವಾಣಿ ಸುದ್ದಿಜಾಲ ಮಂಗಳೂರು
ರಾಷ್ಟ್ರೀಯ ಯುವ ದಿನಾಚರಣೆ ಹಿನ್ನೆಲೆಯಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ 24*7 ನಗರದ ಬಂಟ್ಸ್‌ಹಾಸ್ಟೆಲ್‌ನ ಶ್ರೀ ರಾಮಕೃಷ್ಣ ಕಾಲೇಜು ಸಹಯೋಗದಲ್ಲಿ ಗುರುವಾರ ಆಯೋಜಿಸಿದ ‘ಯುವ ಸಾಧಕರ ಜತೆ ಸಂವಾದ’ ವಿದ್ಯಾರ್ಥಿಗಳಲ್ಲಿ ಸಾಧನೆಗೆ ಸ್ಫೂರ್ತಿ ತುಂಬುವಲ್ಲಿ ಯಶಸ್ವಿಯಾಯಿತು.

ಉದ್ಘಾಟಿಸಿದ ದ.ಕ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್.ಸೆಲ್ವಮಣಿ, ಭವಿಷ್ಯದಲ್ಲಿ ಏನಾಗಬೇಕು ಎಂಬುದನ್ನು ಪದವಿ ಶಿಕ್ಷಣ ಅವಧಿಯಲ್ಲಿಯೇ ನಿರ್ಧಾರಿಸಬೇಕು. ನಿಗದಿ ಗುರಿ ಹೊಂದುವುದು ಮಾತ್ರವಲ್ಲ, ಅದನ್ನು ಸಾಧಿಸುವವರೆಗೆ ಮುಂದುವರಿಯಬೇಕು. ನಮ್ಮ ಸಾಧನೆಗೆ ಆರಂಭದಲ್ಲಿ ಹಿನ್ನಡೆಯಾಗಬಹುದು, ಆಗ ಗೆಳೆಯರು, ಸಂಬಂಧಿಕರಿಂದ ಋಣಾತ್ಮಕ ಸ್ಪಂದನೆ ಸಿಗಬಹುದು. ಆದರೆ, ಅದರೆಡೆಗೆ ಗಮನ ಹರಿಸದೆ ಸಾಧನೆ ಕುರಿತು ಮಾತ್ರ ಆಲೋಚಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮುಖ್ಯ ಅತಿಥಿಯಾಗಿ ಕೋಡ್ ಕ್ರಾಫ್ಟ್ ಟೆಕ್ನಾಲಜಿ ಸಿಇಒ ದೀಕ್ಷಿತ್ ರೈ, ಬಂಟರ ಯಾನೆ ನಾಡವರ ಸಂಘ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ, ಶ್ರೀ ರಾಮಕೃಷ್ಣ ಪದವಿ ಕಾಲೇಜು ಪ್ರಾಂಶುಪಾಲರಾದ ಪ್ರತಿಮಾ ಶೆಟ್ಟಿ, ಎನ್‌ಎಸ್‌ಎಸ್ ಯೋಜನಾಧಿಕಾರಿ ವಿ.ಜಿ.ಭಟ್, ವಿಜಯವಾಣಿ ಮಂಗಳೂರು ಆವೃತ್ತಿ ಸ್ಥಾನೀಯ ಸಂಪಾದಕ ಸುರೇಂದ್ರ ಎಸ್.ವಾಗ್ಳೆ ಉಪಸ್ಥಿತರಿದ್ದರು.

ವಿದ್ಯಾರ್ಥಿ ಮನೋಜ್ ಪ್ರಾರ್ಥಿಸಿದರು. ವಿಜಯವಾಣಿ ವರದಿಗಾರ ಭರತ್‌ರಾಜ್ ಸೊರಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ವರದಿಗಾರ ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ವರದಿಗಾರ ವೇಣುವಿನೋದ್ ಕೆ.ಎಸ್.ವಂದಿಸಿದರು. ಹಿರಿಯ ಉಪಸಂಪಾದಕ ಮೋಹನ್‌ದಾಸ್ ಮರಕಡ ಸಂವಾದ ಕಾರ್ಯಕ್ರಮ ನಿರ್ವಹಿಸಿದರು. ಉದ್ಘಾಟನೆಗೆ ಮುನ್ನ ಕಾಲೇಜು ಆವರಣದ ವಿವೇಕಾನಂದ ಪ್ರತಿಮೆಗೆ ಅತಿಥಿಗಳು ಪುಷ್ಪಾರ್ಚನೆ ಮಾಡಿದರು.

ಸಾಧಕರೊಂದಿಗೆ ಸಂವಾದ
ಐಟಿ ಕ್ಷೇತ್ರದಿಂದ ಕೃಷಿಗೆ ಬಂದು ಯಶಸ್ವಿಯಾದ ವಸಂತ ಕಜೆ, ಚಲನಚಿತ್ರ ನಟ, ನಿರ್ದೇಶಕ ರಾಜ್ ಬಿ.ಶೆಟ್ಟಿ, ಭಾರತದ ಮೊದಲ ವೇಗದ ಚಿತ್ರಗಾರ್ತಿ ಶಬರಿ ಗಾಣಿಗ, ಯುವ ಸಾಹಿತಿ ಮಂಜುನಾಥ್ ಕಾಮತ್, ಆಮ್ ಅನಿಮೇಶನ್ ಸ್ಟುಡಿಯೋದ ವಿವೇಕ್ ಬೋಳಾರ, ಟ್ರಾಫಿಕ್ ಸಬ್‌ಇನ್ಸ್‌ಪೆಕ್ಟರ್ ರವಿ ಪವಾರ್ ಸಂವಾದದಲ್ಲಿ ಭಾಗವಹಿಸಿದ್ದರು. ತಮ್ಮ ಸಾಧನೆಯ ಹಾದಿ ಕುರಿತು ಸಾಧಕರು ಆಡಿದ ಮಾತುಗಳಿಂದ ಸ್ಫೂರ್ತಿ ಪಡೆದ ವಿದ್ಯಾರ್ಥಿಗಳು, ಸಂವಾದ ನಡೆಸಿ ಇನ್ನಷ್ಟು ಮಾಹಿತಿ ಪಡೆದುಕೊಂಡರು. ತಾವು ಯಾವ ರೀತಿ ಸಾಧನೆ ಮಾಡಬಹುದು ಎಂಬ ಬಗ್ಗೆ ಸಾಧಕರಿಂದಲೇ ಸಲಹೆ ಪಡೆದುಕೊಂಡರು.

ಜಿಲ್ಲೆಯಲ್ಲಿ ಸಾಮರ್ಥ್ಯವಂತ ಯುವ ಸಮುದಾಯವಿದೆ. ಪ್ರತಿ ವರ್ಷ ಕನಿಷ್ಠ 10 ಮಂದಿ ಐಎಎಸ್ ಅಧಿಕಾರಿಗಳಾಗಿ ಹೊರಬರಬಹುದು. 2010ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು ವಿಫಲನಾಗಿದ್ದೆ. ಇದನ್ನೇ ಚಾಲೆಂಜ್ ಆಗಿ ತೆಗೆದುಕೊಂಡು 2012ರಲ್ಲಿ ಐಎಫ್‌ಎಸ್‌ನಲ್ಲಿ ಆಯ್ಕೆಯಾದೆ. ಮೂರನೇ ಪ್ರಯತ್ನದಲ್ಲಿ ಐಎಎಸ್ ಅಧಿಕಾರಿಯಾಗಲು ಸಾಧ್ಯವಾಯಿತು.
– ಡಾ.ಆರ್.ಸೆಲ್ವಮಣಿ, ಜಿಪಂ ಸಿಇಒ

ಶೇ.60 ಯುವ ಜನತೆ ಭಾರತದ ಸಂಪತ್ತು. ದೇಶದಲ್ಲಿ ಯುವಜನರ ಸಂಖ್ಯೆ ಹೆಚ್ಚಾಗುತ್ತಿದೆ. ಬೇರೆ ದೇಶದಲ್ಲಿ ಈ ರೀತಿ ಅವಕಾಶ ಇಲ್ಲ. ಯಾವುದೇ ಕೆಲಸ ಮಾಡುವುದಾದರೂ ಸರಿ, ಆಸಕ್ತಿಯಿಂದ ಮಾಡಬೇಕು. ಇದು ಸಾಧನೆಯ ಮೊದಲ ಮೆಟ್ಟಿಲು.
– ದೀಕ್ಷಿತ್ ರೈ, ಸಿಇಒ, ಕೋಡ್ ಕ್ರಾಫ್ಟ್ ಟೆಕ್ನಾಲಜಿ

ಕರಾವಳಿ ಜಿಲ್ಲೆಯ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಪರಿಪಾಠ ಬೆಳೆಸಿಕೊಳ್ಳಬೇಕು. ದುಶ್ಚಟಗಳಿಗೆ ಬಲಿಯಾಗದೆ, ಒಳ್ಳೆಯವರ ಸಂಗ ಮಾಡಿ, ದೇಶಕ್ಕೆ ಉತ್ತಮ ಪ್ರಜೆಗಳಾಗಬೇಕು.
– ವಸಂತ ಶೆಟ್ಟಿ, ಬಂಟರ ಯಾನೇ ನಾಡವರ ಸಂಘದ ಪ್ರಧಾನ ಕಾರ್ಯದರ್ಶಿ