ಯುವ ಕ್ರೀಡಾಪಟುಗಳು ಧೈರ್ಯಶಾಲಿಗಳಾಗಬೇಕು

ಬೆಂಗಳೂರು: ಕ್ರೀಡಾಪಟುಗಳು ಧೈರ್ಯಶಾಲಿಗಳಾದರಷ್ಟೇ ಉತ್ತಮ ಸಾಧನೆ ಮಾಡಲು ಸಾಧ್ಯ. ಗೆದ್ದವರನ್ನಷ್ಟೇ ಕ್ರೀಡಾಪಟು ಎನ್ನುವುದಿಲ್ಲ. ಸ್ಪರ್ಧೆಯಲ್ಲಿ ಭಾಗಿಯಾಗುವ ಪ್ರತಿಯೊಬ್ಬರು ಕ್ರೀಡಾಪಟುಗಳೇ ಎಂದು ರಾಜ್ಯಪಾಲ ವಜುಬಾಯಿ ವಾಲಾ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಒಲಿಂಪಿಕ್ ಭವನದಲ್ಲಿ ಗುರುವಾರ ನಡೆದ 2018ನೇ ಸಾಲಿನ ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿದ ಅವರು, ‘ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಮುನ್ನುಗ್ಗಬೇಕು ಎಂದು ಹೇಳಿದರು. ಕೆ.ಗೋವಿಂದರಾಜು ಸಾರಥ್ಯದ ಕರ್ನಾಟಕ ಒಲಿಂಪಿಕ್ ಸಂಸ್ಥೆ ಕೂಡ ಕ್ರೀಡಾಪಟುಗಳಿಗೆ ಉತ್ತಮ ನಿರ್ವಹಣೆ ತೋರಲು ವೇದಿಕೆ ಸೃಷ್ಟಿಸಿಕೊಡುತ್ತಿದೆ. ಕ್ರೀಡಾಪಟುಗಳು ಕೇಳುವುದಕ್ಕೂ ಮೊದಲೇ ಕೆಒಎ ಎಲ್ಲವನ್ನೂ ಸಿದ್ಧತೆ ಮಾಡಿಕೊಡುತ್ತದೆ ಎಂದು ಕೆಒಎ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಪೂಜಾರ ಶತಕ ನೆನೆದ ರಾಜ್ಯಪಾಲರು: ಮೆಲ್ಬೋರ್ನ್​ನಲ್ಲಿ ನಡೆಯು ತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಶತಕ ಸಿಡಿಸಿದ ತವರಿನ ಹುಡುಗ ಚೇತೇಶ್ವರ ಪೂಜಾರ ಆಟವನ್ನು ಭಾಷಣದ ವೇಳೆ ರಾಜ್ಯಪಾಲರು ಸ್ಮರಿಸಿದರು. ಗುಜರಾತ್​ನ ರಾಜ್​ಕೋಟ್ ಮೂಲದವರಾದ ವಜುಬಾಯಿ ವಾಲಾ, 1980ರಲ್ಲಿ ಆ ನಗರದ ಮೇಯರ್ ಆಗಿದ್ದ ಅವಧಿಯಲ್ಲಿ ಹಾಕಿ, ಕ್ರಿಕೆಟ್, ಫುಟ್​ಬಾಲ್, ಒಳಾಂಗಣ ಸ್ಟೇಡಿಯಂಗಳನ್ನು ನಿರ್ವಿುಸಿದ್ದ ಬಗ್ಗೆ ಮೆಲುಕು ಹಾಕಿದರು. ಕ್ರಿಕೆಟ್ ಕ್ರೀಡಾಂಗಣ ನಿರ್ವಣವಾದ ಬಳಿಕ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಇಂಗ್ಲೆಂಡ್​ನಂಥ ವಿದೇಶಿ ತಂಡಗಳು ರಾಜ್​ಕೋಟ್​ಗೆ ಆಗಮಿಸಿದವು. ಜತೆಗೆ ಪೂಜಾರ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ಅದೇ ಊರಿನವರು ಎಂದರು. ಕ್ರೀಡಾಂಗಣಗಳು ನಿರ್ವಣವಾದರೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಬರುತ್ತಾರೆ ಎಂದರು. ಟಿವಿ ನೋಡುವುದನ್ನು ಬಿಟ್ಟು ಕ್ರೀಡೆಯಲ್ಲಿ ಹೆಚ್ಚು ಭಾಗಿಯಾಗಬೇಕು, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ದೇಶಕ್ಕೆ ಹೆಸರು ತರಬೇಕೆಂದು ಯುವ ಕ್ರೀಡಾಪಟುಗಳಿಗೆ ಕರೆ ನೀಡಿದರು.

12 ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರದಾನ: ಅಥ್ಲೀಟ್ ಚೇತನ್ ಬಿ, ಬ್ಯಾಡ್ಮಿಂಟನ್ ಆಟಗಾರ್ತಿ ಮಿಥುಲಾ, ಕಬಡ್ಡಿ ಆಟಗಾರ ಸುಖೇಶ್ ಹೆಗ್ಡೆ ಹಾಗೂ ಬಾಸ್ಕೆಟ್​ಬಾಲ್ ಆಟಗಾರ್ತಿ ಸಂಜನಾ ರಮೇಶ್ ಸಹಿತ 12 ಹಾಲಿ ಕ್ರೀಡಾಪಟುಗಳಿಗೆ ಕೆಒಎ-2018 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತ ಶೂಟರ್ ತೇಜಸ್ ಕೆ. ಸಮಾರಂಭಕ್ಕೆ ಗೈರಾದರು. ಒಂದು ಲಕ್ಷ ನಗದು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇಬ್ಬರು ಮಾಜಿ ಕ್ರೀಡಾಪಟುಗಳು, ಮೂವರು ಕ್ರೀಡಾ ಪ್ರೋತ್ಸಾಹಕರನ್ನು ಸನ್ಮಾನಿಸಲಾಯಿತು.