ಕಲಾದಗಿ (ಬಾಗಲಕೋಟೆ): ಕಾರಹುಣ್ಣಿಮೆ ಪ್ರಯುಕ್ತ ಬುಧವಾರ ಸಂಜೆ ಎಲ್ಲೆಡೆ ಎತ್ತುಗಳನ್ನು ಓಡಿಸಿ ಕರಿ ಹರಿಯುವ ಸಂಭ್ರಮ ಕಂಡು ಬಂದರೆ, ಸಮೀಪದ ಅಂಕಲಗಿಯಲ್ಲಿ ಮಾತ್ರ ಅನೇಕ ವರ್ಷಗಳ ಸಂಪ್ರದಾಯದಂತೆ ಯುವಕರನ್ನು ಓಡಿಸಿ ಕರಿ ಹರಿಸಿದ್ದು ಮಾತ್ರ ವಿಶೇಷವಾಗಿತ್ತು.
ಸಂಪ್ರದಾಯದಂತೆ ಗ್ರಾಮದ ಶ್ರೀ ಲಕ್ಷ್ಮೀ ಗುಡಿಯಲ್ಲಿ ಕರಿ ಹರಿಯುವ ಐವರು ಯುವಕರಿಗೆ ಬಿಳಿಜೋಳ, ಗೋಧಿ, ಸಜ್ಜಿ, ನವಣೆ, ಶೇಂಗಾ ಹಾಗೂ ಮುಂಗಾರು ಬೆಳೆ ಎಂದು ಸಾಂಕೇತಿಕವಾಗಿ ಬೆಳೆಗಳ ಹೆಸರನ್ನಿಟ್ಟು ಆನಂತರ ಆ ಯುವಕರನ್ನು ದೇವಿ ಗುಡಿ ಹೊರಭಾಗದಿಂದ ಅಗಸಿಯವರೆಗೆ ಕರಿ ಹರಿಯಲು ಓಡಿಸಲಾಯಿತು.
ಕರಿ ಹರಿಯಲು ನಿಂತಿದ್ದ ರವಿ ಪೂಜಾರಿ, ಗಿರೀಶ ಬಿಲಕೇರಿ, ರಾಮನಗೌಡ ಪರಚನಗೌಡರ, ಲಕ್ಷ್ಮಣ ಕುರುಬರ ಹಾಗೂ ಲಕ್ಷ್ಮ್ಮಣ ಮೆಳ್ಳಿಗೇರಿ ಎಂಬುವವರು ಲಕ್ಷ್ಮೀಗುಡಿಯಿಂದ ಓಡಲಾರಂಭಿಸಿ ಅಗಸಿಯ ಬಳಿ ಕೊಬ್ಬರಿ, ಬೇವಿನ ತಪ್ಪಲ ಕಟ್ಟಿರುವ ಹಗ್ಗವನ್ನು ದಾಟಿ ಮುನ್ನುಗ್ಗುವುದರ ಮೂಲಕ, ಅಲ್ಲಿ ಕಟ್ಟಿದ್ದ ಕೊಬ್ಬರಿಯನ್ನು ಕಿತ್ತುಕೊಂಡು ಕರಿ ಹರಿದರು.
ಯಾವ ಬೆಳೆಯ ಹೆಸರಿನ ಯುವಕ ಮುನ್ನುಗ್ಗುವನೋ ಆ ಬೆಳೆ ಆ ವರ್ಷ ಹುಲುಸಾಗಿ ಬೆಳೆಯುತ್ತದೆ ಎಂಬ ನಂಬಿಕೆ ಇರುವುದರಿಂದ ಈ ಬಾರಿ ಮುಂಗಾರು ಬೆಳೆಗಳೆಂದು ಸಾಂಕೇತಿಕವಾಗಿ ಗುರುತಿಸಿದ್ದ ಗಿರೀಶ ಬಿಲಕೇರಿ ಎಲ್ಲರಿಗಿಂತ ಮುಂದೆ ಓಡಿ ಕರಿ ಹರಿದಿದ್ದರಿಂದ ಮುಂಗಾರು ಬೆಳೆಗಳು ಹುಲಸಾಗಿ ಬೆಳೆಯುತ್ತವೆ ಎಂದು ನಂಬಲಾಯಿತು.
ಹೀಗೇಕೆ?: ಇದು ಬಹಳ ವರ್ಷಗಳ ಹಿಂದಿನ ಮಾತು. ಅದೊಮ್ಮೆ ಕರಿ ಹರಿಯಲು ಓಡಿಸಿದ ಎತ್ತೊಂದು ಕರಿ ಹರಿಯದೆ ಬೇರೆ ಊರಿಗೆ ಓಡಿಹೋಯಿತು. ಅಂದಿನಿಂದ ಈ ಊರಲ್ಲಿ ಕರಿಹರಿಯುವ ಸಂಪ್ರದಾಯ ನಿಲ್ಲಬಾರದೆಂದು ವಿವಾಹಿತ ಯುವಕರನ್ನೆ ಎತ್ತುಗಳ ಬದಲಿಗೆ ಓಡಿಸಲಾರಂಭಿಸಲಾಯಿತು. ಬೇರೆ ಊರಿನ ಕರಿಹರಿಯುವ ಎತ್ತು ಅಲ್ಲಿಂದ ಊರಿಗೆ ಬಂದಾಗ ಮತ್ತೆ ಎತ್ತುಗಳು ಕರಿಹರಿಯುವ ಸಂಪ್ರದಾಯ ಪುನರಾರಂಭವಾಗುತ್ತದೆ ಎನ್ನುತ್ತಾರೆ ಗ್ರಾಮದ ಹಿರಿಯರು.
ಎಲ್ಲೆಡೆಯೂ ಸಂಭ್ರಮ: ಗ್ರಾಮ ಸೇರಿದಂತೆ ಆಸುಪಾಸಿನ ಇನ್ನುಳಿದ ಊರುಗಳಲ್ಲಿ ಎತ್ತುಗಳನ್ನು ಶೃಂಗರಿಸಿ ಕರಿ ಹರಿಯಲು ಓಡಿಸುವುದರ ಮೂಲಕ ಅನ್ನದಾತರು ಸಂಭ್ರಮಿಸಿದ್ದು ಕಂಡುಬಂತು.