ಹುಬ್ಬಳ್ಳಿ: ಯುವಕರು ತಂಬಾಕು, ಗುಟ್ಖಾ ಸೇವನೆಯಂಥ ದುಶ್ಚಟಗಳಿಂದ ದೂರವಿರಬೇಕು. ಈ ಸಂಬಂಧ ಯೋಗ ಗುರು ಬಾಬಾ ರಾಮದೇವ್ ಅವರು ಜಾಗೃತಿ ಆಂದೋಲನ ನಡೆಸುವುದಾದರೆ, ಅದಕ್ಕೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್, ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಹೇಳಿದರು.
ಯೋಗ ಚಿಕಿತ್ಸೆ ಹಾಗೂ ಧ್ಯಾನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ತಂಬಾಕು, ಗುಟ್ಖಾ ಸೇವನೆ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ದುಶ್ಚಟ ತ್ಯಜಿಸುವ ರೀತಿಯಲ್ಲಿ ದೇಶಾದ್ಯಂತ ಆಂದೋಲನ ನಡೆಸಬೇಕಿದೆ ಎಂದರು. ರಾಜ್ಯದಲ್ಲಿ ಗುಟ್ಖಾ, ತಂಬಾಕು ಉತ್ಪನ್ನಗಳ ಮಾರಾಟ ಜಾಸ್ತಿ ಇದೆ. 18 ರಾಜ್ಯಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ರಾಜ್ಯದಲ್ಲೂ ನಿಷೇಧಿಸಬೇಕು ಎಂದು ಹೇಳಿದರು. 12 ವರ್ಷ ಹಿಂದೆ ಬಾಬಾ ರಾಮದೇವ್ ಅವರು ಹುಬ್ಬಳ್ಳಿಗೆ ಬಂದು ಯೋಗ ಶಿಬಿರ ನಡೆಸಿಕೊಟ್ಟಿದ್ದರು. ಆಗ, 20 ಸಾವಿರ ಜನ ಶಿಬಿರದ ಪ್ರಯೋಜನ ಪಡೆದಿದ್ದರು. ಈ ಬಾರಿ 5 ದಿನ ಶಿಬಿರ ನಡೆಯಲಿದೆ. ಭಾರತೀಯ ಸಂಸ್ಕೃತಿಯ ಭಾಗವಾದ ಯೋಗವನ್ನು ಬಾಬಾ ರಾಮದೇವ್ ಅಂತಾರಾಷ್ಟ್ರೀಯ ಮಟ್ಟಕ್ಕೆ ಒಯ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಯೋಗಕ್ಕೆ ಬಹಳ ಮಹತ್ವ ಕೊಟ್ಟು ಪ್ರತಿ ವರ್ಷ ಅಂತಾ ರಾಷ್ಟ್ರೀಯ ಯೋಗ ದಿನ ಆಚರಿಸುವಂತೆ ಮಾಡಿದ್ದಾರೆ. ಎಲ್ಲರೂ ಯೋಗ ಕಲಿತು ದಿನಚರಿಯ ಭಾಗವಾಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.