ವಿಜಯನಗರ: ದಾರಿಯಲ್ಲಿ ಫೋನ್ ಹಿಡಿದು ಮಾತನಾಡಿಕೊಂಡು ಹೋಗುವಾಗ ಹಿಂದಿನಿಂದ ಬಂದು ಮೊಬೈಲ್ ಕಸಿದುಕೊಂಡು ಹೋದರೆ ಹೇಗಾಗಬಹುದು? ಪ್ರಶ್ನೆ ಮೊಬೈಲ್ ಬೆಲೆಯದ್ದಲ್ಲ. ಅದರಲ್ಲಿರುವ ಅಮೂಲ್ಯ ಮಾಹಿತಿಯದ್ದು. ಇದೀಗ ಮೊಬೈಲ್ ಕಳ್ಳತನ ನಡೆಸುತ್ತಿದ್ದ ಮೂವರು ಖದೀಮರನ್ನು ಪೊಲೀಸರು ಬಂಧಿಸಿದ್ದು ಅದೆಷ್ಟೋ ಫೋನುಗಳು ಕಳವಾಗುವುದನ್ನು ತಪ್ಪಿಸಿದ್ದಾರೆ.
ಹೊಸಪೇಟೆ ಪಟ್ಟಣ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಮೊಬೈಲ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 94,500 ರೂ. ಬೆಲೆ ಬಾಳುವ 7 ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ಮಂಜುನಾಥ್ ಕೊಂಡಕೊಂದಿ( 20) ಅಬ್ದುಲ್ ರೇಹಮಾನ್( 21) ಮತ್ತು ಲೊಕೇಶ್ ( 24) ಬಂಧಿತರು. ಹೊಸಪೇಟೆಯ ಬಸ್ ನಿಲ್ದಾಣದಲ್ಲಿ ಅನೇಕ ಮೊಬೈಲ್ ಕಳ್ಳತನದ ಪ್ರಕರಣದಲ್ಲಿ ಪೊಲೀಸರು ಇವರನ್ನು ಬಂಧಿಸಿದ್ದಾರೆ. ಸದ್ಯ ಹೊಸಪೇಟೆಯ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.