ಇಬ್ಬರು ಯುವಕರ ಹತ್ಯೆ ನಂತರ ಮತ್ತೊಬ್ಬ ಯುವಕನನ್ನು ಅಪಹರಿಸಿದ ಉಗ್ರರು

ಶ್ರೀನಗರ: ಇಬ್ಬರು ಕಾಶ್ಮೀರಿ ಯುವಕರನ್ನು ಅಪಹರಿಸಿ ಕೊಲೆ ಮಾಡಿದ ನಂತರ ಭಯೋತ್ಪಾದಕರು ಭಾನುವಾರ ಮತ್ತೊಬ್ಬ ಯುವಕನನ್ನು ಅಪಹರಿಸುವ ಮೂಲಕ ಜಮ್ಮು ಕಾಶ್ಮೀರದಲ್ಲಿ ಅಟ್ಟಹಾಸ ಮೆರೆಯುತ್ತಿದ್ದಾರೆ.

ದಕ್ಷಿಣ ಕಾಶ್ಮೀರ ಜಿಲ್ಲೆಯಿಂದ ಸುಹೈಲ್​ ಅಹ್ಮದ್​ ಗನೈ ಎಂಬಾತನನ್ನು ಅಪಹರಿಸಿದ್ದಾರೆ. ನಿನ್ನೆಯಷ್ಟೇ ಶೋಪಿಯಾನ್ ಜಿಲ್ಲೆಯಲ್ಲಿ 19 ವರ್ಷದ ಯುವಕನ ಮೃತದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದಾದ ಮರುದಿನವೇ ಮತ್ತೊಬ್ಬ ಯುವಕನ ಅಪಹರಣ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಎರಡು ದಿನಗಳ ಹಿಂದೆ ಅಂದರೆ ಗುರುವಾರ 17 ವರ್ಷದ ಶಾಲಾ ಬಾಲಕನನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದರು. ಭದ್ರತಾ ಪಡೆಗೆ ಉಗ್ರರ ಕುರಿತು ಮಾಹಿತಿ ನೀಡುತ್ತಿದ್ದ ಶಂಕೆಯಲ್ಲಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್)