ಸಣ್ಣ ರೈತರು ಸಾಲದ ಕೂಪದಲ್ಲೇ ನರಳುವಂತಾಗದಿರಲಿ..

ಕೆಲದಿನಗಳ ಹಿಂದೆ 30,000ಕ್ಕೂ ಹೆಚ್ಚು ರೈತರು ಥಾನೆಯಿಂದ ಮುಂಬೈಗೆ ಪಾದಯಾತ್ರೆಯಲ್ಲಿ ತೆರಳಿದ್ದನ್ನು ನೀವೆಲ್ಲ ಗಮನಿಸಿದ್ದೀರಿ; ಪ್ರತಿ ಎಕರೆಗೆ 50,000 ರೂ.ನಿಂದ 1 ಲಕ್ಷ ರೂ.ವರೆಗೆ ಬರ ಪರಿಹಾರ, ಕೃಷಿಸಾಲ ಸಂಪೂರ್ಣ ಮನ್ನಾ ಮುಂತಾದವು ಅವರ ಬೇಡಿಕೆಯಾಗಿದ್ದವು. ನಾಶಿಕ್ ಮತ್ತು ಮರಾಠವಾಡದಂಥ ಜಿಲ್ಲೆಗಳಲ್ಲಿರುವ ಅನೇಕ ಗ್ರಾಮಗಳಲ್ಲಿ ನೀರಿನ ತೀವ್ರ ಕೊರತೆಯಿದ್ದರೆ (ಸರಾಸರಿಯಾಗಿ ಶೇ. 30ಕ್ಕಿಂತಲೂ ಹೆಚ್ಚು), ಅಂದುಕೊಂಡಷ್ಟು ಫಲನೀಡದ ಖಾರಿಫ್ ಬೆಳೆಯಿಂದಾಗಿ ಸಾಲದ ಸುಳಿಯಲ್ಲಿ ಸಿಲುಕಿರುವ ಹಳ್ಳಿಗರು ಸನಿಹದ ಪಟ್ಟಣ-ನಗರಗಳಲ್ಲಿ ದಿನಗೂಲಿ ಕಾರ್ವಿುಕರಾಗಿ ದುಡಿಯಬೇಕಾಗಿ ಬಂದಿದೆ. ಕಳೆದ ಕೆಲ ವರ್ಷಗಳಲ್ಲಿ ವಿದರ್ಭ ಹಾಗೂ ಇತರ ಪ್ರದೇಶಗಳಲ್ಲಿ ಸಂಚರಿಸಿ, ನೀರಿಲ್ಲದೆ ಒಣಗಿಹೋಗಿರುವ ಜಮೀನುಗಳನ್ನು ಕಂಡಿರುವ ನನಗೆ, ಭಾರತದ ಸಣ್ಣ ಮತ್ತು ಅತಿಸಣ್ಣ ರೈತರ ಕ್ಷಣಭಂಗುರ ಜೀವನ ಮತ್ತು ಅವರ ಕೃಷಿಸಾಲ ಮನ್ನಾ ಆಗಲೇಬೇಕಿರುವ ಅನಿವಾರ್ಯತೆ ಇವೆಲ್ಲ ಕಣ್ಣಿಗೆ ಕಟ್ಟಿದಂತಿವೆ (ಇದರ ಹೆಚ್ಚಿನ ವಿವರಗಳನ್ನು ‘A Rural Manifesto’ ಎಂಬ ನನ್ನ ಕೃತಿಯಲ್ಲಿ ಅವಲೋಕಿಸಬಹುದು). ಈ ಬಾರಿ ಮಳೆಯೂ ಸಮರ್ಪಕವಾಗಿ ಆಗಿಲ್ಲವಾದ್ದರಿಂದ, ಮುಂಬರುವ ರಬಿ ಬೆಳೆಯ ಕುರಿತು ರೈತರು ಹೆಚ್ಚಿನ ಭರವಸೆಯನ್ನೇನೂ ಇಟ್ಟುಕೊಳ್ಳುವಂತಿಲ್ಲ.

ಈ ಪ್ರವೃತ್ತಿ ಹೊಸದೇನಲ್ಲ, ವರ್ಷಗಳಿಂದ ಕಾಣುತ್ತಿರುವಂಥದೇ. ತೀರಾ ಇತ್ತೀಚೆಗೆ ಬೆಳಗಾವಿಯಲ್ಲಿ ಸಾವಿರಾರು ಜನರು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆಹಾಕಿ, ಕಬ್ಬುಬಿಲ್ ಪಾವತಿ ಮಾಡುವಂತೆ ಆಗ್ರಹಿಸಿದರು. ಈ ಮಧ್ಯೆ, ಪಂಜಾಬ್​ನಲ್ಲೂ ಇಂಥದೇ ಬೆಳವಣಿಗೆಯಾಗಿದೆ. ಅಲ್ಲಿನ ಭಟಿಂಡಾದ ಒಳನಾಡಿನಲ್ಲಿನ ಸಣ್ಣಪ್ರಮಾಣದ ರೈತರಾಗಿರುವ ರಾಜಿಂದರ್ ಸಿಂಗ್​ರಂಥವರು, ಯಾಂತ್ರೀಕೃತ ಸಲಕರಣೆಗಳನ್ನು ಬಳಸಿಕೊಂಡು ಕತ್ತರಿಸಿದ ಪೈರಿನ ಕೂಳೆಯನ್ನು ಸಂಸ್ಕರಿಸುವುದರ ಬದಲಿಗೆ ಅವನ್ನು ಸುಟ್ಟಿದ್ದಕ್ಕಾಗಿ ರಾಷ್ಟ್ರೀಯ ಮಾಧ್ಯಮಗಳ ಟೀಕೆಗೆ ಗುರಿಯಾಗಿದ್ದಾರೆ; ಇದೊಂದು ಗೊತ್ತು-ಗುರಿಯಿಲ್ಲದ ಸ್ವೇಚ್ಛಾಚಾರದ ವರ್ತನೆ ಎಂಬುದು ಇದಕ್ಕೆ ಕಾರಣ. ಅದೇನೇ ಇರಲಿ, ತುಲನಾತ್ಮಕವಾಗಿ ಸಾಕಷ್ಟು ಸುಸ್ಥಿತಿಯಲ್ಲಿರುವ ರಾಜ್ಯಗಳಲ್ಲೂ ಯಂತ್ರಗಳು/ಸಲಕರಣೆಗಳ ಬಳಕೆ ಸಂಬಂಧಿತ ಆರ್ಥಿಕಸ್ಥಿತಿಯೇ ಅಸ್ತವ್ಯಸ್ತವಾಗಿರುವುದನ್ನು ಇಂಥ ವಾದಗಳು ಉಪೇಕ್ಷಿಸುತ್ತವೆ ಎನ್ನಬೇಕು. ಬೆಳೆಕೂಳೆಯನ್ನು ಸುಟ್ಟುಹಾಕಲು ತಗುಲುವ ವೆಚ್ಚ ಪ್ರತಿ ಎಕರೆಗೆ ಸರಿಸುಮಾರು 2,500 ರೂ.ನಷ್ಟಿದೆ. ಇದಕ್ಕೆ ಹೋಲಿಸಿದಾಗ, ಯಂತ್ರೋಪಕರಣದ ಬಾಡಿಗೆ, ಡೀಸೆಲ್ ಮತ್ತು ಕೂಲಿಪಾವತಿಯ ಖರ್ಚುಗಳೂ ಸೇರಿದಂತೆ ಬೆಳೆಕೂಳೆಯ ಸಂಸ್ಕರಣಾ ಘಟಕವೊಂದರ ವೆಚ್ಚವೇ ಪ್ರತಿ ಎಕರೆಗೆ ಸರಿಸುಮಾರು 6,000 ರೂ.ವರೆಗೆ ಮುಟ್ಟಿಬಿಡುತ್ತದೆ. ಪ್ರಸ್ತುತ, ಬೆಳೆಕೂಳೆಗೆ ಅಂಥ ಗಮನಾರ್ಹ ಆರ್ಥಿಕಮೌಲ್ಯವೇನೂ ಇಲ್ಲದಿರುವುದರಿಂದ ಮತ್ತು ಸಾಲದ ಹೊರೆಯೆಂಬುದು ರೈತರ ಬೆನ್ನೇರಿದ ಬೇತಾಳವಾಗಿರುವುದರಿಂದ, ಬೆಳೆಕೂಳೆಯನ್ನು ಸುಡುವುದೇ ಮಿತವ್ಯಯಕಾರಿಯಾಗಿದೆ ಎನ್ನಬೇಕು.

ಇನ್ನು, ಪಂಜಾಬ್​ನಲ್ಲಿ ಮರುಪಾವತಿಯಾಗಬೇಕಿರುವ ರೈತರ ಸರಾಸರಿ ಸಾಲದ ಮೊತ್ತ ಸರಿಸುಮಾರು 1,19,500ರೂ.ನಷ್ಟಿದೆ. ಬೆಳೆಸಾಲದ ಕಂತುಗಳ ಮರುಪಾವತಿ ನಿಲ್ಲಿಸುವ ಪರಿಪಾಠ ಇಲ್ಲಿನ ರೈತರಲ್ಲಿ ಹೆಚ್ಚುತ್ತಿರುವುದರಿಂದಾಗಿ, ಕೃಷಿ ಸಂಬಂಧಿತ ಅನುತ್ಪಾದಕ ಸಾಲಗಳ ಪ್ರಮಾಣವೇ 9,000 ಕೋಟಿ ರೂ.ಗಳನ್ನೂ ಮೀರಿದೆ ಎನ್ನುತ್ತದೆ ಲಭ್ಯಮಾಹಿತಿ. ಆದ್ದರಿಂದ, ಕೃಷಿವಲಯದ ಬೇಗುದಿಗಳನ್ನು ನಿರ್ವಹಿಸಲೆಂದು ನಮ್ಮ ಕಾರ್ಯವಿಧಾನಗಳನ್ನು ಮರುಪರಿಷ್ಕರಿಸಿಕೊಳ್ಳಬೇಕಾದ ಅಗತ್ಯ ಎದುರಾಗಿದೆ. ಸ್ವಾತಂತ್ರೊ್ಯೕತ್ತರ ಭಾರತದಲ್ಲಿ, ಕೃಷಿಸಾಲ ಮನ್ನಾ ಎಂಬುದಂತೂ ನಿಯತವಾಗಿ ಬಳಕೆಯಾಗುತ್ತಿರುವ ಒಂದು ‘ಕಾರ್ಯನೀತಿ ಸಾಧನ’ವೇ ಆಗಿಬಿಟ್ಟಿದೆ. ಕೃಷಿಯ ಬೆಳವಣಿಗೆ ದಶಕಗಳಿಂದಲೂ ಮುಂಚೂಣಿಯಲ್ಲಿರುವ, ಕೃಷಿಕ್ಷೇತ್ರಕ್ಕೆ ಸಂಬಂಧಿಸಿದ ಅನಿಶ್ಚಿತತೆಗಳನ್ನು ತಗ್ಗಿಸುವುದಕ್ಕಾಗಿನ ಸಾಂಸ್ಥಿಕ ಕಾರ್ಯವಿಧಾನಗಳು ಗಮನಾರ್ಹವಾಗಿ ಅಭಿವೃದ್ಧಿಗೊಂಡಿರುವ ಪಂಜಾಬ್​ನಂಥ ಪ್ರದೇಶದಲ್ಲೂ, ಆಯಾ ಕಾಲಘಟ್ಟದಲ್ಲಿ ಗದ್ದುಗೆ ಅಲಂಕರಿಸುವ ಸರ್ಕಾರಗಳು ಸಾಂಸ್ಥಿಕ ಋಣಭಾರದ ವಿಷಯದಲ್ಲಿ ಸಾಲಮನ್ನಾದಂಥ ಬಾಬತ್ತನ್ನೇ ನೆಚ್ಚುವುದು ವಾಡಿಕೆಯಾಗಿಬಿಟ್ಟಿದೆ; ಆದರೆ, ಸಾಂಸ್ಥಿಕವಲ್ಲದ ಋಣಭಾರಗಳು (ಅಂದರೆ, ಲೇವಾದೇವಿಗಾರರಿಂದ ಪಡೆದಂಥ ಸಾಲಗಳು) ಗ್ರಾಮೀಣ ಆರ್ಥಿಕತೆಯನ್ನು ತುಳಿದುಹಾಕುತ್ತಿವೆ ಎನ್ನಬೇಕು.

ಋಣಭಾರ ಇತ್ಯರ್ಥದ ವೇದಿಕೆಗಳ ಜತೆಜತೆಗೆ, ಋಣಭಾರ ಹೊಂದಾಣಿಕೆಯ ಮಂಡಳಿಗಳು ದಶಕಗಳಿಂದಲೂ ಅಸ್ತಿತ್ವದಲ್ಲಿವೆಯಾದರೂ, ಪರಿಣತರು ಮತ್ತು ನಿಧಿಯ ಕೊರತೆ ಅವುಗಳ ಕಾರ್ಯಚಟುವಟಿಕೆಗೆ ತಡೆಯೊಡ್ಡಿವೆ ಎನ್ನದೆ ವಿಧಿಯಿಲ್ಲ. ಈ ವಿಷಯದಲ್ಲಿ ಹೋಲಿಕೆಗೆ ಪರಿಗಣಿಸುವುದಾದರೆ, ಕೇರಳದ ರಾಜ್ಯ ಸಾಲ ಪರಿಹಾರ ಆಯೋಗವು, ಸಾಂಸ್ಥಿಕ ಮತ್ತು ಅಸಾಂಸ್ಥಿಕ ಸಾಲಗಳೆರಡನ್ನೂ ನಿರ್ವಹಿಸಿದ್ದು, ಕೆಲ ಶೇಕಡವಾರು ಪ್ರಮಾಣದಷ್ಟು ಋಣಭಾರಗಳನ್ನು ಮನ್ನಾ ಮಾಡುವಲ್ಲಿ ಅದು ಸಮರ್ಥವಾಗಿದೆ ಮತ್ತು ಸಾಲ ಮರುಪಾವತಿ ಕುರಿತಾದ ಸಾರ್ವತ್ರಿಕ ತಾತ್ಕಾಲಿಕ ನಿಷೇಧವನ್ನು ಘೋಷಿಸುವಲ್ಲಿ ಯಶಸ್ವಿಯಾಗಿದೆ. ಮಿಕ್ಕ ರಾಜ್ಯಗಳಿಗೂ ಈ ನಡೆ ಮೇಲ್ಪಂಕ್ತಿಯಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ಕಾಣಬರುವ ಇಂಥ ಸಾಲಮರುಪಾವತಿಯ ಅಸಾಮರ್ಥ್ಯವು ಯಾರಿಗೂ ಯಾತನೆಯುಂಟುಮಾಡದ ರೀತಿಯಲ್ಲಿ ಘೋಷಿಸಲ್ಪಡುವಂತಾಗಲು, ಸಾಲ ಇತ್ಯರ್ಥಕ್ಕೆ ಸಂಬಂಧಿಸಿದ ಹಾಗೂ ಸಮಗ್ರ ದೃಷ್ಟಿಕೋನವುಳ್ಳ ಮಾದರಿ ಶಾಸನವೊಂದನ್ನು ರೂಪಿಸುವ ಅಗತ್ಯವಿದೆ. ಇಂಥದೊಂದು ಅಸಾಮರ್ಥ್ಯ ಅಥವಾ ದಿವಾಳಿತನದ ಘೋಷಣೆಗೆ ರೈತರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ನಾವು ಹಿಂಜರಿಯಬಾರದು; ಇಂಥ ಉಪಕ್ರಮಗಳಿಂದಾಗಿ ಒಬ್ಬೊಬ್ಬ ರೈತರೂ ಹೊಸದಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂಥ ಪರಿಸ್ಥಿತಿ ನಿರ್ವಣವಾಗುತ್ತದೆ. ಕೆಲವೊಂದು ಭಾರಿ ಮತ್ತು ಪ್ರಭಾವಿ ಕೈಗಾರಿಕೋದ್ಯಮಿಗಳು ತಾವು ಮಾಡಿದ ಸಾಲ ತೀರಿಸಲಾಗದೆ ಬ್ಯಾಂಕಿಂಗ್ ವ್ಯವಸ್ಥೆಗೆ ಬೆನ್ನುತೋರಿಸಿ ನಿಂತ ಪರಿಣಾಮ, ಅನುತ್ಪಾದಕ ಸಾಲಗಳ ಮೊತ್ತ ಬೆಟ್ಟದಷ್ಟು ಬೆಳೆದಿರುವುದಕ್ಕೆ ಹೋಲಿಸಿದರೆ ಇದು ಏನೇನೂ ಅಲ್ಲ.

ಇಷ್ಟು ಮಾತ್ರವಲ್ಲದೆ, ಕಿರುಸಾಲ ನೀಡಿಕೆ (micro finance) ವ್ಯವಸ್ಥೆಯಲ್ಲೂ ಮತ್ತಷ್ಟು ಸುಧಾರಣೆಗಳಾಗಬೇಕಿವೆ. ಉಳಿತಾಯದ ಪರಿಪಾಠಕ್ಕೆ ಒಂದು ಸುರಕ್ಷಿತ ಮಾಗೋಪಾಯವನ್ನು ಕಲ್ಪಿಸುವ, ತನ್ನ ಸದಸ್ಯರಿಗೆ ಧನಸಾಲ ನೀಡುವ ಮೂಲಕ ಪುಟ್ಟ ಬ್ಯಾಂಕ್ ರೀತಿಯಲ್ಲೇ ಕಾರ್ಯನಿರ್ವಹಿಸುವ ಸ್ವಸಹಾಯ ಗುಂಪುಗಳಿಗೆ ನಾವು ಉತ್ತೇಜಿಸಬೇಕಿದೆ. ಅವಲಂಬಿತರಲ್ಲಿ ಬ್ಯಾಂಕಿಂಗ್ ಪರಿಪಾಠಗಳು/ಚಟುವಟಿಕೆಗಳ ಅಚ್ಚೊತ್ತುವುದರ ಜತೆಜತೆಗೆ, ಸರಾಸರಿ ನಿವ್ವಳ ಆದಾಯ ಮತ್ತು ಉದ್ಯೋಗಾವಕಾಶದಂಥ ದಿಕ್ಸೂಚಿ ಆಯಾಮಗಳ ಮೇಲೆ ನಿರ್ದಿಷ್ಟವಾಗಿ ಒತ್ತುನೀಡುವ ಮೂಲಕ ಇವು ಸಕಾರಾತ್ಮಕ ಆರ್ಥಿಕ ಪರಿಣಾಮವನ್ನು ಬೀರಿರುವುದು ಈಗಾಗಲೇ ಸಾಬೀತಾಗಿದೆ.

ಆದರೆ, ಸ್ವಸಹಾಯ ಗುಂಪುಗಳನ್ನು ಉತ್ತೇಜಿಸುವಲ್ಲಿನ ತಮ್ಮ ಸ್ವಹಿತಾಸಕ್ತಿಯನ್ನು ಗುರುತಿಸುವಲ್ಲಿ ಬ್ಯಾಂಕುಗಳು ಬಹುತೇಕವಾಗಿ ವಿಫಲವಾಗಿವೆ ಎನ್ನಬೇಕು; ಇಂಥ ಗುಂಪುಗಳ ಮೂಲಕ ಬಡವರಿಗೆ ಸಾಲನೀಡುವುದಕ್ಕೆ ತಗಲುವ ವೆಚ್ಚಗಳು ಕಡಿಮೆಯಿರುವುದು, ಪ್ರತಿಕೂಲ ಆಯ್ಕೆ ಮತ್ತು ನೈತಿಕ ಅಪಾಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇಂಥ ಬಾಬತ್ತುಗಳನ್ನು ಬ್ಯಾಂಕುಗಳು ಗುರುತಿಸಿಲ್ಲ ಎನಿಸುತ್ತದೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಕೈಗೊಂಡಿರುವ ಅಧ್ಯಯನಗಳನ್ನು ಪರಿಗಣಿಸುವುದಾದಲ್ಲಿ, ದೊಡ್ಡ ಪ್ರಮಾಣದ ಮಿತವ್ಯಯಗಳಿಗೆ ಅನುವುಮಾಡಿಕೊಡಲೆಂದು ಸ್ವಸಹಾಯ ಗುಂಪುಗಳು ಮತ್ತು ಬ್ಯಾಂಕಿಂಗ್ ವಲಯದ ನಡುವಿನ ಇಂಥ ಬಾಂಧವ್ಯಕ್ಕೆ ಬಲ ತುಂಬುವುದು ಈ ಕ್ಷಣದ ಅನಿವಾರ್ಯತೆಯಾಗಿದೆ; ಒಕ್ಕೂಟಗಳನ್ನು ರೂಪಿಸುವ ಹಾಗೂ ಅಗಾಧ ಪ್ರಮಾಣದಲ್ಲಿ ಮಿತವ್ಯಯ ಸಾಧಿಸುವ ಮೂಲಕ, ಸ್ವಸಹಾಯ ಗುಂಪುಗಳು ಆರ್ಥಿಕವಾಗಿ ಕಾರ್ಯಸಾಧ್ಯ ಅಸ್ತಿತ್ವಗಳಾಗಬಲ್ಲವು ಎಂಬುದನ್ನು ಈ ಎರಡು ರಾಜ್ಯಗಳು ತೋರಿಸಿವೆ. ಅಷ್ಟೇ ಅಲ್ಲ, ಪ್ರಾಯೋಗಿಕ ಯೋಜನೆಗಳ ಮೂಲಕ ವರ್ಧಿಸಲಾದ ಹಾಗೂ ಹಂತಹಂತವಾಗಿ, ಜಾಗರೂಕತೆಯಿಂದ ಬಳಕೆಗೆ ತರಲಾದ, ಷರತ್ತುರಹಿತ ನಿಯತ ಮೂಲಭೂತ ಆದಾಯವು ಸಣ್ಣಪುಟ್ಟ ಕೃಷಿಕರಿಗೆ ತಕ್ಕನಾಗಿರುತ್ತದೆ. ಇಂಥ ಆದಾಯ ನಿಯತವಾಗಿ ದಕ್ಕುವಂತಾದಲ್ಲಿ, ಬಿಕ್ಕಟ್ಟಿನ ಸಂದರ್ಭಗಳಲ್ಲಿ (ಅದು ಕಾಯಿಲೆಯಿರಬಹುದು ಅಥವಾ ಹಸಿವೇ ಇರಬಹುದು), ಸಾಲದ ವಿಷವರ್ತಲದಲ್ಲಿ ಸಿಲುಕುವುದರ ಬದಲಾಗಿ, ವಿವೇಚನೆಯಿಂದ ವರ್ತಿಸುವಂಥ ಚಿತ್ತಸ್ಥಿತಿ ಕೃಷಿಕರಲ್ಲಿ ರೂಪುಗೊಳ್ಳುವುದು ಸಾಧ್ಯವಾಗುತ್ತದೆ. ಅಷ್ಟೇಕೆ, ಬಾಲಕಾರ್ವಿುಕತನದ ಪರಿಪಾಠವನ್ನೂ ಇದು ತಗ್ಗಿಸುವುದರಿಂದಾಗಿ, ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸುವಂಥ ಉತ್ತೇಜಕ ವಾತಾವರಣ ರೂಪುಗೊಂಡು, ಅದು ಹಳ್ಳಿಗಳ ಪರಿವರ್ತನೆಗೂ ಕಾರಣವಾಗುತ್ತದೆ. ಈ ಎಲ್ಲದರ ಪರಿಣಾಮವಾಗಿ ಕೃಷಿಕುಟುಂಬಗಳು ಆದಾಯದಲ್ಲಿ ಸುಸ್ಥಿರ ಹೆಚ್ಚಳ ಕಾಣುವುದಕ್ಕೂ ಸಾಧ್ಯವಾಗುತ್ತದೆ.

ಇನ್ನು, ಕೃಷಿಕರಿಗೆ ನೀಡುವ ಸಾಲಗಳ ಕುರಿತಾದ ನಮ್ಮ ಮಾತಿನ ಧಾಟಿಯೂ ಬದಲಾಗಬೇಕಿದೆ. ಕೃಷಿಕರಿಗೆ ಯಾವುದೇ ತೆರನಾದ ಹಣಕಾಸು ಸೌಲಭ್ಯಗಳನ್ನು (ಅಂದರೆ, ಸಹಾಯಧನಗಳು, ಆಹಾರದ ಹಕ್ಕು, ಸಾಲಮನ್ನಾ ಸೌಕರ್ಯ ಇತ್ಯಾದಿ) ನೀಡುವ ವಿಷಯ ಪ್ರಸ್ತಾಪವಾದಾಗಲೆಲ್ಲ, ಅದು ಯುಕ್ತ ಪರಿಪಾಠವಲ್ಲ ಎಂದು ಹೀಗಳೆಯುವುದು ಭಾರತದ ಕೆಲವೊಂದು ಹಣಕಾಸು ಪಂಡಿತರ ಚಾಳಿಯಾಗಿಬಿಟ್ಟಿದೆ; ಇಂಥವರು ಉದ್ಯಮ ವಲಯಕ್ಕೆ ನೀಡುವ ಇಂಥದೇ ಸವಲತ್ತುಗಳ ಕುರಿತು ಚಕಾರವೆತ್ತದೆ ವಿನಾಯಿತಿ ತೋರಿಸುತ್ತಾರೆ ಎಂಬುದು ಬಹಿರಂಗ ಗುಟ್ಟು!

ನಮ್ಮ ರಾಷ್ಟ್ರೀಯ ಆಯವ್ಯಯವನ್ನು ಕೃಷಿವಲಯದ ಕಡೆಗೆ ತಿರುಗಿಸಬೇಕಾದ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿದೆ; “Agricultural Demand-Side Management Program’ನಂಥ ಕಾರ್ಯಕ್ರಮಗಳಿಗೆ (ಚಾಲ್ತಿಯಲ್ಲಿರುವ ನೀರಾವರಿ ಪಂಪುಗಳನ್ನು ಇಂಧನ-ದಕ್ಷತೆಯ ಮಾದರಿಗಳಿಂದ ಬದಲಿಸುವುದು ಇದರ ಆಶಯ) ಉತ್ತೇಜಿಸುವುದು ಈ ಪೈಕಿಯ ಒಂದು ನಡೆಯಾಗಬಲ್ಲದು. ಬರಗಾಲ ಮತ್ತು ಮಹಾಪೂರದಂಥ ಸಂದರ್ಭಗಳಿಗೆ ಹೊಂದುವಂಥ ದೀರ್ಘಕಾಲೀನ ಗ್ರಾಮೀಣ ಸಾಲನೀತಿಯೊಂದಕ್ಕೆ ಉತ್ತೇಜಿಸುವ ಅಗತ್ಯವಿದೆ. ಮಾರುಕಟ್ಟೆ ಮತ್ತು ಹವಾಮಾನದಲ್ಲಿ ಕಾಣಬರುವ ಅನಿಶ್ಚಿತತೆಗೆ ಪ್ರತಿಯಾಗಿ ಸರ್ಕಾರವೇ ಪ್ರಸ್ತಾವಿಸಿರುವ ಬೆಳೆವಿಮೆಯ ಪರಿಕಲ್ಪನೆ ಒಂದು ಸ್ವಾಗತಾರ್ಹ ಕ್ರಮವಾಗಿದೆ ಎನ್ನಲಡ್ಡಿಯಿಲ್ಲ; ಇಂಥ ಉಪಕ್ರಮಗಳು ಇಲ್ಲದೆಹೋದಲ್ಲಿ, ಸಣ್ಣಪುಟ್ಟ ರೈತರು ಸಾಲದ ಕೂಪದಲ್ಲೇ ನರಳುವಂತಾಗಿ ಕಷ್ಟದಲ್ಲೇ ದಿನದೂಡುವಂತಾಗುತ್ತದೆ. ಹಾಗಾಗದಿರಲಿ ಎಂಬುದೇ ಪ್ರಜ್ಞಾವಂತರ ಆಶಯ ಮತ್ತು ನಿರೀಕ್ಷೆ.

(ಲೇಖಕರು ಯುವನಾಯಕರು ಮತ್ತು ಲೋಕಸಭಾ ಸದಸ್ಯರು)

Leave a Reply

Your email address will not be published. Required fields are marked *