Wednesday, 12th December 2018  

Vijayavani

Breaking News

ಸಂಶೋಧನೆ ಮತ್ತು ಅಭಿವೃದ್ಧಿ ವಲಯದ ನಿರ್ಲಕ್ಷ್ಯ ಸಲ್ಲ

Monday, 16.04.2018, 3:04 AM       No Comments

ಭ್ಯ ಅಂಕಿ-ಅಂಶಗಳನ್ನಾಧರಿಸಿ ಹೇಳುವುದಾದರೆ, ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆಂಡ್ ಡಿ) ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಭಾರತ ಸುಸ್ಥಿತಿಯಲ್ಲಿರಬೇಕಿತ್ತು. ಆದರೆ ವಾಸ್ತವ ಹಾಗಿದೆಯೇ ಎಂಬುದು ಪರಿಶೀಲನಾರ್ಹ ವಿಚಾರ. 2014ರ ವರ್ಷವೊಂದರಲ್ಲೇ 27,327ಕ್ಕೂ ಹೆಚ್ಚು ಡಾಕ್ಟರೇಟ್ ಪದವಿಗಳನ್ನು (ಈ ಪೈಕಿ ಶೇ. 56ರಷ್ಟು ಪ್ರಮಾಣದ ಪುರಸ್ಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ದಕ್ಕಿದ್ದು, ಈ ಬಾಬತ್ತಿಗೆ ಸಂಬಂಧಿಸಿದಂತೆ ಚೀನಾ ಮತ್ತು ಅಮೆರಿಕಗಳ ನಂತರದ ಸ್ಥಾನದಲ್ಲಿ ಭಾರತವಿದೆ ಎಂಬುದು ಗಮನಾರ್ಹ ಸಂಗತಿ) ನೀಡಲಾಗಿರುವುದು ನಮ್ಮಲ್ಲಿನ ಸಂಶೋಧಕರ ಬಾಹುಳ್ಯಕ್ಕೆ ಕುಂದುಬಂದಿಲ್ಲ ಎಂಬುದಕ್ಕೆ ಸಾಕ್ಷಿ. ಪ್ರತಿ ದಶಲಕ್ಷ ಜನಸಂಖ್ಯೆಗಿದ್ದ ನಮ್ಮ ಸಂಶೋಧಕರ ತಲಾ ಸಂಖ್ಯೆಯು 2000ನೇ ಇಸವಿಯಲ್ಲಿ 110ರಷ್ಟಿದ್ದುದು 2015ರ ವೇಳೆಗೆ 218ಕ್ಕೂ ಮೀರಿದೆ. ಇಷ್ಟಾಗಿಯೂ, ವಿಶ್ವದ ಅಗ್ರಗಣ್ಯ 100 ವಿಶ್ವವಿದ್ಯಾಲಯಗಳ ಪೈಕಿ ‘ಭಾರತದ್ದು’ ಎಂದು ಹೇಳಿಕೊಳ್ಳುವಂಥ ಒಂದು ಕೂಡ ಇಲ್ಲ; ಇಂಥ ‘ಟಾಪ್-500’ ಪಟ್ಟಿಯಲ್ಲಿ ಭಾರತದ 8 ವಿಶ್ವವಿದ್ಯಾಲಯಗಳು ಮಾತ್ರವೇ ಸ್ಥಾನ ಕಂಡುಕೊಳ್ಳುವುದು ಸಾಧ್ಯವಾಗಿದೆ. ಅರ್ಹತೆಯಿರುವವರು ಎನ್ನಲಾದ ನಮ್ಮ ಇಂಜಿನಿಯರುಗಳ ಪೈಕಿ ಶೇ. 80ಕ್ಕೂ ಹೆಚ್ಚು ಮಂದಿ ಉದ್ಯೋಗದಲ್ಲಿ ನೇಮಕಗೊಳ್ಳಲು ಅನರ್ಹರು ಎನ್ನುತ್ತದೆ 2016ರ “National Employability Report’ ಎಂಬ ವರದಿ. 2016ರಲ್ಲಿ ಭಾರತದಲ್ಲಿ ಕೇವಲ 46,904 ಪೇಟೆಂಟ್​ಗಳ ಸಲ್ಲಿಕೆಯಾಗಿದ್ದು, ಈ ಪೈಕಿ ಶೇ. 28ರಷ್ಟು ಪಾಲು ಮಾತ್ರವೇ ಭಾರತೀಯ ನಿವಾಸಿಗಳದ್ದಾಗಿದೆ; ತನ್ಮೂಲಕ ದೇಶನಿವಾಸಿಗಳ ಪೇಟೆಂಟ್ ಸಲ್ಲಿಕೆ ಚಟುವಟಿಕೆ ಸಂಬಂಧಿತ ವಿಶ್ವ ಶ್ರೇಯಾಂಕದಲ್ಲಿ ಭಾರತ 10ನೇ ಸ್ಥಾನವನ್ನು ಪಡೆದಂತಾಗಿದೆ. ಈ ವಲಯಕ್ಕೆ ಸಂಬಂಧಿಸಿದಂತೆ 2016ರಲ್ಲಿ ದಕ್ಷಿಣ ಕೊರಿಯಾ-208,830, ಜಪಾನ್-318,381, ಅಮೆರಿಕ-605,571ರಷ್ಟು ಮತ್ತು ಚೀನಾ-1,352,646ಕ್ಕೂ ಹೆಚ್ಚು ಪೇಟೆಂಟ್​ಗಳನ್ನು ಸಲ್ಲಿಸಿವೆ.

ಆರ್ ಆಂಡ್ ಡಿ ಕ್ಷೇತ್ರದ ಮೇಲಿನ ಭಾರತದ ಒಟ್ಟಾರೆ ವೆಚ್ಚವು 2005 ಮತ್ತು 2015ರ ನಡುವಿನ ದಶಕದ ಅವಧಿಯಲ್ಲಿ 3 ಪಟ್ಟು (24,117 ಕೋಟಿ ರೂ.ನಿಂದ 85,326 ಕೋಟಿ ರೂ.ಗೆ) ಹೆಚ್ಚಿದ್ದರೆ, 2016-17ರ ವರ್ಷದಲ್ಲಿ ಇದು ಬಹುತೇಕ 1 ಲಕ್ಷ ಕೋಟಿಯನ್ನು ಮುಟ್ಟಿದೆ ಎನ್ನುತ್ತದೆ ತಜ್ಞವರದಿಯೊಂದು. ಅಂದರೆ, 2005ರಲ್ಲಿ 217 ಕೋಟಿ ರೂ.ನಷ್ಟಿದ್ದ, ಆರ್ ಆಂಡ್ ಡಿ ವಲಯದ ಮೇಲಿನ ತಲಾ ವೆಚ್ಚ, 2015ರ ವೇಳೆಗೆ 659 ಕೋಟಿ ರೂ.ಗೇರಿದೆ. ಆದಾಗ್ಯೂ, ಈ ಖರ್ಚಿನಲ್ಲಿ ಬಹುಪಾಲು ಬಂದಿದ್ದು ಸರ್ಕಾರಿ ಸಂಪನ್ಮೂಲಗಳಿಂದ ಎನ್ನಬೇಕು; 2015ರಲ್ಲಿ ಈ ಬಾಬತ್ತಿಗೆಂದು ಕೇಂದ್ರ ಸರ್ಕಾರ ಮಾಡಿದ ವೆಚ್ಚದ ಪ್ರಮಾಣ ಶೇ. 45.1ರಷ್ಟಿದ್ದರೆ, ಖಾಸಗಿ ಉದ್ಯಮಗಳ ಕೊಡುಗೆ ಶೇ. 38.1ರಷ್ಟಿತ್ತು. ಸಾರ್ವಜನಿಕ ವಲಯದ ಆರ್ ಆಂಡ್ ಡಿ ವಿಭಾಗವು ರಕ್ಷಣೆ ಮತ್ತು ಶಕ್ತಿ/ಇಂಧನ ಸಂಬಂಧಿತ ಅನ್ವಯಗಳ ಮೇಲೂ (ಶೇ. 81.3ಕ್ಕೂ ಹೆಚ್ಚಿನ ಕೊಡುಗೆ ಬಂದಿದ್ದು ಕೇವಲ 8 ವೈಜ್ಞಾನಿಕ ಸಂಸ್ಥೆಗಳಿಂದ), ಖಾಸಗಿ ವಲಯವು ಔಷಧವಸ್ತು ತಯಾರಿಕೆ-ಮಾರಾಟ ಮತ್ತು ಸಾಗಣೆ ಕ್ಷೇತ್ರದ ಮೇಲೂ ಪ್ರಧಾನ ಗಮನ ಹರಿಸುವ ಪ್ರವೃತ್ತಿ ಕಂಡುಬಂತು. ಪಶ್ಚಿಮ ರಾಷ್ಟ್ರಗಳಿಗೆ ಹೋಲಿಸಿದಾಗ, ಆರ್ ಆಂಡ್ ಡಿ ವಲಯದ ಮೇಲಿನ ಖರ್ಚುವೆಚ್ಚಕ್ಕೆ ಉನ್ನತ ಶಿಕ್ಷಣ ಸಂಸ್ಥೆಗಳು ನೀಡಿದ ಕೊಡುಗೆ ನೀರಸವಾಗಿತ್ತು ಎನ್ನಬೇಕು; 2015ರಲ್ಲಿ ಚೀನಾ (ಶೇ. 7) ಮತ್ತು ಕೆನಡಾ (ಶೇ. 40ಕ್ಕೂ ಹೆಚ್ಚು)ಗಳಲ್ಲಿ ದಾಖಲಾದ ಕೊಡುಗೆಗಳಿಗೆ ಹೋಲಿಸಿದಾಗ ನಮ್ಮಲ್ಲಿದು ಶೇ. 4ರಷ್ಟಿದ್ದುದು ಈ ಮಾತಿಗೆ ಪುಷ್ಟಿ ನೀಡುತ್ತದೆ. ಆದರೆ ಈ ಯಾವ ಅಂಶಗಳಿಂದಲೂ ಧಕ್ಕೆಯೇನೂ ಆಗಿಲ್ಲ್ಲ ನಮ್ಮ ಸರ್ಕಾರ ಮಾಡುತ್ತಿರುವ ವೆಚ್ಚವು, ಅಮೆಜಾನ್ ಅಥವಾ ಆಲ್ಪಬೆಟ್ ಕಂಪನಿಗಳು ಮಾಡುವ ಆರ್ ಆಂಡ್ ಡಿ ವೆಚ್ಚಕ್ಕೆ ಸರಿಸಮಾನವಾಗಿದ್ದರೆ, ಆರ್ ಆಂಡ್ ಡಿ ವೆಚ್ಚದ ಆಧಾರದ ಮೇಲೆ ಜಾಗತಿಕ ಮಟ್ಟದಲ್ಲಿ ಪಟ್ಟಿ ಮಾಡಲಾದ 2500 ಅಗ್ರಗಣ್ಯ ಕಂಪನಿಗಳ ಯಾದಿಯಲ್ಲಿ 26 ಭಾರತೀಯ ಕಂಪನಿಗಳಷ್ಟೇ ಸ್ಥಾನಗಳಿಸಲು ಸಾಧ್ಯವಾಗಿದೆ. ಈ ವಲಯದ 10 ಅಗ್ರಗಣ್ಯ ಕಂಪನಿಗಳ ಯಾದಿಯಲ್ಲಿ ಭಾರತದ ಖಾಸಗಿ ಕಂಪನಿಗಳ ಹಾಜರಿ ಇಲ್ಲ. ಈ ನಿಟ್ಟಿನಲ್ಲಿ ಚೀನಾ ಬಹುತೇಕ ಎಲ್ಲದರಲ್ಲೂ ತನ್ನತನ ಮೆರೆದಿದೆ.

ಪ್ರತಿ ಸಂಶೋಧಕರ ಮೇಲೆ ಮಾಡಲಾಗುವ ಸರಾಸರಿ ಆರ್ ಆಂಡ್ ಡಿ ವೆಚ್ಚವು, ರಷ್ಯಾ, ಕೆನಡಾ, ಅಷ್ಟೇಕೆ ಬ್ರಿಟನ್ ನಿಗದಿಪಡಿಸಿರುವ ಮಟ್ಟಗಳಿಗಿಂತಲೂ ಮೇಲೇರುತ್ತಿದೆ. ಆದರೆ ಜಿಡಿಪಿಯ ಶೇಕಡವಾರು ಪಾಲಿನ ಪರಿಭಾಷೆಯಲ್ಲಿ ಈ ವೆಚ್ಚವು ಈಗಲೂ ಗಣನೀಯವಾಗಿ ಹಿಂದುಳಿದಿದೆ ಎನ್ನಬೇಕು- 2015ರಲ್ಲಿ, ತನ್ನ ಜಿಡಿಪಿಯ ಶೇ. 0.69ರಷ್ಟು ಪಾಲನ್ನು ಭಾರತ ಖರ್ಚುಮಾಡಿದೆ (ಈ ಪಾಲು ಕಳೆದ ದಶಕದಿಂದ ನಿಂತಲ್ಲೇ ನಿಂತಿದೆ). “BRICS’ ಗುಂಪಿಗೆ ಸೇರಿದ ಇತರ ದೇಶಗಳನ್ನು ಪರಿಗಣಿಸಿದಾಗಲೂ, ಆರ್ ಆಂಡ್ ಡಿ ವೆಚ್ಚಕ್ಕೆ ಸಂಬಂಧಿಸಿದಂತೆ ದಕ್ಷಿಣ ಆಫ್ರಿಕಾ ಮಾತ್ರವೇ ಭಾರತಕ್ಕಿಂತ ಹಿಂದುಳಿದಿರುವುದು ಕಂಡುಬರುತ್ತದೆ. ಖಾಸಗಿ ಕಂಪನಿಗಳು ಮತ್ತು ಸಾರ್ವಜನಿಕ ವಿಶ್ವವಿದ್ಯಾಲಯಗಳಿಂದ ಸಂಗ್ರಹಿಸಲಾದ ಗಣನೀಯ ಮೊತ್ತದ ನೆರವಿನೊಂದಿಗೆ ಭಾರತ ತನ್ನ ಆರ್ ಆಂಡ್ ಡಿ ವೆಚ್ಚವನ್ನು ಕನಿಷ್ಠಪಕ್ಷ ದುಪ್ಪಟ್ಟುಗೊಳಿಸಬೇಕು ಹಾಗೂ ಮಹತ್ತರ ಅನ್ವಯದ ಉದ್ದೇಶ ಹೊಂದಿರುವ ಆರ್ ಆಂಡ್ ಡಿ ವಲಯಗಳ ಮೇಲೆ ರಾಜ್ಯ ಸರ್ಕಾರಗಳೂ ಗಮನ ಹರಿಸಬೇಕು. ಇನ್ನು, ಖರ್ಚುವೆಚ್ಚದ ಹಂಚಿಕೆಯೂ ಗಣನೀಯ ನಿರ್ಬಂಧಕ್ಕೊಳಗಾಗಿದೆ. ಆರ್ ಆಂಡ್ ಡಿ ವೆಚ್ಚಕ್ಕೆ ಸಂಬಂಧಿಸಿ ಸರ್ಕಾರ ಐತಿಹಾಸಿಕ ಎಂಬ ರೀತಿಯಲ್ಲಿ ಉತ್ತೇಜನ ನೀಡಿದೆ- ತಂತ್ರಜ್ಞಾನ ಆಮದಿನ ಮೇಲೆ ಶೇ. 5ರ ಸೆಸ್ ವಿಧಿಸುವುದಕ್ಕೆ ‘ಸಂಶೋಧನೆ ಮತ್ತು ಅಭಿವೃದ್ಧಿ ಸೆಸ್ ಕಾಯ್ದೆ, 1986’ ಅನುವು ಮಾಡಿಕೊಡುವುದರಿಂದಾಗಿ, ದೇಶೀಯವಾಗಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನಗಳಿಗೆ ಧನಸಹಾಯ ಒದಗುತ್ತದೆ. ಆದರೆ ಈ ಸೆಸ್​ನ ಹಂಚಿಕೆ ಕೂಡ ಸಮರ್ಪಕವಾಗಿಲ್ಲ. ಈ ಮಧ್ಯೆ, ಧನಸಹಾಯ/ಸಾಲಸೌಲಭ್ಯದ ಕೊರತೆಯ ಭಾಗಶಃ ಕಾರಣದಿಂದಾಗಿ, ಶೇ. 90ಕ್ಕೂ ಹೆಚ್ಚಿನ ಭಾರತೀಯ ನವೋದ್ಯಮಗಳು ವೈಫಲ್ಯದ ಭೀತಿ ಎದುರಿಸುತ್ತಿವೆ. ಆದ್ದರಿಂದ ಸಾಲಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ತೀವ್ರ ಸುಧಾರಣೆಗೆ ಮುಂದಾಗಬೇಕಿದೆ.

ಸಂಶೋಧನೆ ಮತ್ತು ಅಭಿವೃದ್ಧಿ ವಲಯಕ್ಕೆ ಮಾಡಲಾದ ವೆಚ್ಚವು ಪೇಟೆಂಟ್​ಗಳಾಗಿ ರೂಪಾಂತರಗೊಳ್ಳುವುದಕ್ಕೆ ಸಾಂಸ್ಥಿಕ ನಿರ್ಬಂಧಗಳು ಅಡಚಣೆ ಒಡ್ಡಬಹುದು. ಲಭ್ಯ ಮಾಹಿತಿಯ ಪ್ರಕಾರ, ಅನ್ವಯಗಳಿಗೆ ಸಂಬಂಧಿಸಿದಂತೆ ನೋಂದಾಯಿಸಲಾದ ಪೇಟೆಂಟ್​ಗಳ ಪೈಕಿ ಶೇ. 28ರಷ್ಟು ಮಾತ್ರವೇ ಅಂತಿಮವಾಗಿ ಸಲ್ಲಿಕೆಯಾಗುತ್ತವೆ. ಅದೇ ವೇಳೆಗೆ, ವಿಶ್ವದ ಪ್ರಮುಖ ಆರ್ಥಿಕತೆಗಳನ್ನು ಪರಿಗಣಿಸಿದಾಗ, ಭಾರತದಲ್ಲಿ ಪೇಟೆಂಟ್​ಗೆ

ಅನುಮತಿಸುವುದಕ್ಕೆ ತೆಗೆದುಕೊಳ್ಳಲಾಗುವ ಕಾಲಾವಧಿಯು ಅತಿಹೆಚ್ಚೇ ಎನಿಸುವ ಮಟ್ಟದಲ್ಲಿದ್ದು, ಪೇಟೆಂಟ್ ಅವಲೋಕನ/ಪರಿಶೀಲನೆಗೆಂದು ಸಲ್ಲಿಸುವ ಕೋರಿಕೆ ಹಾಗೂ ಈ ನಿಟ್ಟಿನಲ್ಲಿ ಸಂಬಂಧಿತ ಕಚೇರಿಯು ಕೈಗೊಳ್ಳುವ ಅಂತಿಮ ಕ್ರಮಕ್ಕೆ 6-7 ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಂಡಿರುವ ನಿದರ್ಶನಗಳಿವೆ. ಇದಕ್ಕೆ ಹೋಲಿಸಿದಾಗ ದಕ್ಷಿಣ ಕೊರಿಯಾ ಮತ್ತು ಚೀನಾದಲ್ಲಿ ಪೇಟೆಂಟ್ ತೀರ್ವನಕ್ಕೆ ಕ್ರಮವಾಗಿ 16 ಮತ್ತು 22 ತಿಂಗಳು ಹಿಡಿಯುತ್ತವೆ. 2014 ಮತ್ತು 2017ರ ನಡುವೆ, 50 ಕೋಟಿ ರೂ.ಗೂ ಹೆಚ್ಚಿನ ವೆಚ್ಚದಲ್ಲಿ 13 ಸಾವಿರಕ್ಕೂ ಹೆಚ್ಚು ಪೇಟೆಂಟ್​ಗಳನ್ನು ಸಲ್ಲಿಸಿದ ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಪರಿಷತ್ತು(Council of Scientific & Industrial Research- CSIR),, ಹಣಕಾಸಿನ ಕೊರತೆಯಿಂದಾಗಿ CSIR-Tech ಎಂಬ ತನ್ನ ವಾಣಿಜ್ಯ ವಿಭಾಗವನ್ನು ಮುಚ್ಚಬೇಕಾಗಿಬಂತು. ಭಾರತದ ಬೌದ್ಧಿಕ ಸ್ವತ್ತಿನ ಹಕ್ಕುಗಳ (Intellectual Property Rights) ಕಾರ್ಯನೀತಿಯನ್ನು ಮಾರ್ಪಡಿಸುವುದಕ್ಕೆ ಇದು ಸೂಕ್ತ ಸಮಯವಾಗಿದೆ; ಆರಂಭಿಕ ಹಂತದಲ್ಲಿ ಯಾವುದೇ ರೀತಿಯ ರಾಯಧನವನ್ನು ಪಾವತಿಸದಿರುವುದರ ಆಧಾರದ ಮೇಲೆ, ಸಲ್ಲಿಕೆಯಾದ ಪೇಟೆಂಟ್​ಗಳನ್ನು ಬಳಸಿಕೊಳ್ಳುವುದಕ್ಕೆ ಹಾಗೂ ಗಣನೀಯ ಪ್ರಮಾಣದಲ್ಲಿ ವಾಣಿಜ್ಯಿಕ ಪ್ರಯೋಜನ ದಕ್ಕುವಂತಾದಾಗ ಆದಾಯವನ್ನು ಹಂಚಿಕೊಳ್ಳುವುದಕ್ಕೆ ನವೋದ್ಯಮಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯನೀತಿಗೆ ತಿದ್ದುಪಡಿಯಾಗಬೇಕಿದೆ.

ಸರಕು ಆಧರಿತ ಬೆಳವಣಿಗೆಯಿಂದ, ಬಂಡವಾಳ ಹಾಗೂ ಬೌದ್ಧಿಕ ಸ್ವತ್ತು ಆಧರಿತ ಬೆಳವಣಿಗೆಯೆಡೆಗೆ ರಾಷ್ಟ್ರವೊಂದರ ‘ಶಕ್ತಿಪಥ’ವನ್ನು ಬದಲಾಯಿಸುವ ಗುರಿಯಿಟ್ಟುಕೊಂಡು ಸಂಶೋಧನೆ ಮತ್ತು ಅಭಿವೃದ್ಧಿ ವಲಯಕ್ಕೆ ಮಾಡುವ ಖರ್ಚಿನಿಂದಾಗುವ ಪರಿಣಾಮ/ಪ್ರಭಾವ ಈಗಾಗಲೇ ಬಹುತೇಕರ ಗಮನಕ್ಕೆ ಬಂದಿರುವಂಥದ್ದು. ದಕ್ಷಿಣ ಕೊರಿಯಾ ಈ ನಿಟ್ಟಿನಲ್ಲಿ ಗಮನ ಸೆಳೆಯುವ ಹೆಸರು. ಕಳೆದ 45 ವರ್ಷಗಳ ಇತಿಹಾಸವನ್ನು ಪರಿಗಣಿಸಿದಾಗ, ದಕ್ಷಿಣ ಕೊರಿಯಾದ ಜಿಡಿಪಿ 12 ಪಟ್ಟು ಹೆಚ್ಚಿದ್ದು, 1965ರಲ್ಲಿ ಜಿಡಿಪಿಯ ಶೇ. 0.26ರಷ್ಟನ್ನು ಸಂಶೋಧನೆ ಮತ್ತು ಅಭಿವೃದ್ಧಿ ವಲಯಕ್ಕೆ ಖರ್ಚುಮಾಡಿದ್ದ ಈ ದೇಶ, 2011ರಲ್ಲಿ ಇದೇ ಬಾಬತ್ತಿಗೆ ಶೇ. 4.04ಕ್ಕೂ ಹೆಚ್ಚು ಪಾಲನ್ನು ವಿನಿಯೋಗಿಸಿದೆ. ಜತೆಗೆ, 2011ರಲ್ಲಿ ಈ ವಲಯಕ್ಕಾಗಿರುವ ಒಟ್ಟು ವೆಚ್ಚದಲ್ಲಿ ಖಾಸಗಿ ಕಂಪನಿಗಳ ಪಾಲೇ ಶೇ. 76.5ರಷ್ಟಿದೆ ಎನ್ನುತ್ತವೆ ಅಂಕಿ-ಅಂಶಗಳು. ಆದ್ದರಿಂದ, ಸಂಶೋಧನೆ ಮತ್ತು ಅಭಿವೃದ್ಧಿ ವಲಯಕ್ಕೆ ಸಂಬಂಧಿಸಿದಂತಿರುವ ಭಾರತದ ಚಟುವಟಿಕೆಗಳ ಸ್ಥಿತಿಗತಿಯು ಭವ್ಯವಾಗಬೇಕೆಂದಾದಲ್ಲಿ, ಈ ವಲಯಕ್ಕೆ ಗಣನೀಯ ಗಮನ ನೀಡಬೇಕಾದ್ದು ಈ ಕ್ಷಣದ ಅನಿವಾರ್ಯತೆಯಾಗಿದೆ.

(ಲೇಖಕರು ಯುವನಾಯಕರು ಮತ್ತು ಲೋಕಸಭಾ ಸದಸ್ಯರು)

Leave a Reply

Your email address will not be published. Required fields are marked *

Back To Top