More

    ಸರ್ಕಾರಕ್ಕೆ ಯೋಜನಾ ಆಯೋಗದ ಭರಪೂರ ಶಿಫಾರಸು; ತುಮಕೂರಲ್ಲಿ ವಿಮಾನ ನಿಲ್ದಾಣ ನಿರ್ಮಾಣ 

    ಬೆಂಗಳೂರು:  2020ರ ಮಾ. 5ರಂದು ಮಂಡನೆಯಾಗುವ ರಾಜ್ಯ ಬಜೆಟ್​ಗೆ ಪೂರಕವಾಗಿ ಯೋಜನಾ ಆಯೋಗವೂ ಸರ್ಕಾರಕ್ಕೆ ಭರಪೂರ ಶಿಫಾರಸುಗಳನ್ನು ಮಾಡಿದೆ. ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ 14 ಇಲಾಖೆಗಳೊಂದಿಗೆ ಸಭೆ ನಡೆಸಿ ಸರ್ಕಾರಕ್ಕೆ ಮಾಡಿದ ಶಿಫಾರಸಿನ ಕುರಿತು ಬುಧವಾರ ಸುದ್ದಿಗಾರರಿಗೆ ವಿವರಣೆ ನೀಡಿದರು.

    ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದಂತೆ ಇಲಾಖೆಗಳ ಕಾರ್ಯಕ್ಷಮತೆ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದು, ಮುಂದೆ ಮಾಡಬೇಕಾದ ಕಾರ್ಯಗಳ ಬಗ್ಗೆ ಶಿಫಾರಸು ಮಾಡಿದ್ದೇವೆ ಎಂದು ತಿಳಿಸಿದರು. ಬೆಂಗಳೂರು ವಿಮಾನ ನಿಲ್ದಾಣದ ನಂತರ 10 ವರ್ಷಗಳಲ್ಲಿ ಯಾವುದೇ ವಿಮಾನ ನಿಲ್ದಾಣ ನಿರ್ವಿುಸಿಲ್ಲ. ಮುಂದಿನ ಮೂರು ವರ್ಷಗಳಲ್ಲಿ ಮೂರು ಜಿಲ್ಲೆಗಳಿಗೆ ಒಂದರಂತೆ 10 ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಯೋಜನೆಯನ್ನು ತಡಮಾಡದೆ ಅನುಷ್ಠಾನಗೊಳಿಸುವಂತೆ ಆಯೋಗ ಸಲಹೆ ಮಾಡಿದೆ ಎಂದು ಹೇಳಿದರು.

    ಬೆೆಂಗಳೂರಿನಲ್ಲಿ 2ನೇ ನಿಲ್ದಾಣ ಮಾಡಲು ಸ್ಥಳ ಹುಡುಕಾಟ ನಡೆದಿದೆ. ಕೋಲಾರವು ಗಡಿಭಾಗವಾಗಿರುವುದರಿಂದ, ಸ್ಮಾರ್ಟ್ ಸಿಟಿಯಾದ ತುಮಕೂರಲ್ಲಿ ನಿಲ್ದಾಣ ನಿರ್ವಿುಸಿದರೆ ಚೆನ್ನೈ- ಬೆಂಗಳೂರು- ಮುಂಬೈ ಕಾರಿಡಾರ್ ಯೋಜನೆಗೆ ಅನುಕೂಲ. ಕಲಬುರಗಿ ವಿಮಾನ ನಿಲ್ದಾಣದ ರೀತಿ ಬೀದರ್ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ವಿುಸಲು ಯೋಜನಾ ಇಲಾಖೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಇನ್ನೊಂದು ತಿಂಗಳಲ್ಲಿ 20 ಕೋಟಿ ರೂ. ಅನುದಾನ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.

    ಹೊಸ ವಿಮಾನ ನಿಲ್ದಾಣ ಬರುವ ಕಡೆ ಇಂಡಸ್ಟ್ರಿಯಲ್ ಟೌನ್​ಶಿಪ್, ನಾಲೆಜ್ ಸಿಟಿ ಅಥವಾ ಇನ್ನೋವೇಶನ್ ಸಿಟಿಗಳನ್ನು ಪಿಪಿಪಿ ಮಾದರಿಯಲ್ಲಿ ನಿರ್ವಿುಸಿ ಅಭಿವೃದ್ಧಿ ಕೇಂದ್ರಗಳನ್ನಾಗಿ ಮಾಡಬಹುದಾಗಿದೆ ಎಂದು ಯೋಜನಾ ಆಯೋಗ ತಿಳಿಸಿದೆ.

    ತದಡಿ ಅಭಿವೃದ್ಧಿ: ಗದಗ, ಕೊಪ್ಪಳ, ಕೊಡಗು, ಚಿಕ್ಕಮಗಳೂರಿ ನಲ್ಲೂ ವಿಮಾನ ನಿಲ್ದಾಣ ಸ್ಥಾಪನೆಯಾದರೆ, ಈ ಜಿಲ್ಲೆಗಳಲ್ಲೂ ವಿವಿಧ ಕೈಗಾರಿಕೆ ಹೂಡಿಕೆ ಹಾಗೂ ಪ್ರವಾಸೋದ್ಯಮಕ್ಕೆ ಆಕರ್ಷಿಸಬಹುದು. ಬೆಂಗಳೂರು- ಮೈಸೂರು ನಡುವೆ 1 ಗಂಟೆಯಲ್ಲಿ ತಲುಪಲು ಹಾಗೂ ಬೆಂಗಳೂರು- ಕಲಬುರಗಿ ಸಂಪರ್ಕವನ್ನು ಕಡಿಮೆ ಅವಧಿಯಲ್ಲಿ ತಲುಪಲು ಭೌತಿಕ ಮತ್ತು ಆರ್ಥಿಕ ವಿಷಯವನ್ನೊಳಗೊಂಡ ವಿವರವಾದ ಪ್ರಸ್ತಾವನೆ ಕಳಿಸಲು ತಿಳಿಸಲಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ತದಡಿಯಲ್ಲಿ ಯಾವುದೇ ಪರಿಸರ ಸಂಬಂಧ ಸಮಸ್ಯೆ ಇಲ್ಲದಿರುವುದರಿಂದ ಬಂದರು, ವಿಮಾನ ನಿಲ್ದಾಣ, ರೈಲು ಸಂಪರ್ಕವನ್ನು ಪಿಪಿಪಿ ಮಾದರಿಯಲ್ಲಿ ಸೇರಿಸಿದರೆ ಆ ಭಾಗದ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ತಿಳಿಸಲಾಗಿದೆ.

    ಯೋಜನಾ ಮಂಡಳಿಗೆ ನೀತಿ ಆಯೋಗದ ಲೇಪನ?

    ರಾಜ್ಯ ಯೋಜನಾ ಆಯೋಗ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಉದ್ದೇಶದಿಂದ, ಆಯೋಗದ ಸ್ವರೂಪ ಬದಲಿಸಲು ಪುಟ್ಟಸ್ವಾಮಿ ಚಿಂತನೆ ನಡೆಸಿದ್ದಾರೆ. ಕೇಂದ್ರದಲ್ಲಿರುವ ನೀತಿ ಆಯೋಗದಂತೆ ರೂಪಿಸುವ ಬಗ್ಗೆ ಚರ್ಚೆ ನಡೆಸಿರುವುದನ್ನು ಬಹಿರಂಗಪಡಿಸಿದ್ದಾರೆ. ಗುಜರಾತ್, ಕೇರಳ, ತಮಿಳುನಾಡು ಸೇರಿ ವಿವಿಧ ರಾಜ್ಯಗಳಲ್ಲಿ ಆಯೋಗದ ಕಾರ್ಯನಿರ್ವಹಣೆ ಅಧ್ಯಯನ ನಡೆಸಲು ಸಹ ಅವರು ಉದ್ದೇಶಿಸಿದ್ದಾರೆ.

    ಪ್ರಮುಖ ಶಿಫಾರಸುಗಳು

    • ಪ್ರವಾಸೋದ್ಯಮ ಇಲಾಖೆಯ ಪ್ರಸ್ತುತ ಜಿಡಿಪಿ ಕೊಡುಗೆ ಶೇ.14.8 ಇದ್ದು, ಇದನ್ನು ಶೇ.25ಕ್ಕೆ ಏರಿಸಲು ಉತ್ತರ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ.
    • ಕ್ರೀಡಾಂಗಣದ ಕೊರತೆ ಇರುವ ಕಡೆಗಳಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ನೀಡಿದ ಜಾಗದ ಲಭ್ಯತೆ ಇದ್ದರೆ ಕ್ರೀಡಾಂಗಣವಾಗಿ ಅಭಿವೃದ್ಧಿಪಡಿಸಬಹುದು.
    • ಜಿಂದಾಲ್ ಅಕಾಡೆಮಿಯಂತೆ ಸಿಎಸ್​ಆರ್ ಮತ್ತು ಪಿಪಿಪಿ ಮಾದರಿಯಲ್ಲಿ ಮಕ್ಕಳಿಗೆ ಕ್ರೀಡಾ ತರಬೇತಿ ನೀಡುವ ಬಗ್ಗೆ ಸಾಧ್ಯತೆ ಅನ್ವೇಷಿಸಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ.
    • 4,600 ಹಳ್ಳಿಗಳಿಗೆ ಕೆಎಸ್​ಆರ್​ಟಿಸಿ ಸಂಪರ್ಕ ಸಾಧ್ಯವಾಗಿಲ್ಲ. ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್ ಮೂಲಕ ಸಂಪರ್ಕ ತಯಾರಿಸಿ ಸಲ್ಲಿಸುವಂತೆ ಸೂಚನೆ.
    • ರಾಜ್ಯದಲ್ಲಿ ಶೌಚಗೃಹ ವ್ಯವಸ್ಥೆ ಇರದ ಬಸ್ ನಿಲ್ದಾಣಗಳಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಶೌಚಗೃಹಗಳನ್ನು ನಿರ್ವಿುಸಲು ಅನುದಾನ ಪಡೆದುಕೊಳ್ಳಬೇಕು. ಹಾಲಿ ಇರುವ ಶೌಚಗೃಹಗಳನ್ನು ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts