‘ಯೋಗಿ ಸಂತನೂ ಅಲ್ಲ, ರಾಜಕಾರಣಿಯೂ ಅಲ್ಲ’

ಬೆಂಗಳೂರು: ಚುನಾವಣೆ ಪ್ರಚಾರದ ವೇಳೆ ಆಂಜನೇಯ ಒಬ್ಬ ದಲಿತ ಎಂಬ ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರ ವಿರುದ್ಧ ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಯೋಗಿ ಅವರ ನಡವಳಿಕೆ ಅತ್ತ ಸಂತನಂತೂ ಇಲ್ಲ, ಇತ್ತ ರಾಜಕಾರಣಿಯಂತೆಯೂ ಇಲ್ಲ ಎಂದು ಅವರು ಛೇಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್​ಐ ಜತೆಗೆ ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ” ಸಂತರೂ ಆಗಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸಮಾಜಕ್ಕೆ ಮಾದರಿ ಎನಿಸುವ ಕಾರ್ಯಗಳನ್ನು ಮಾಡಬೇಕು. ಆಗ ಮಾತ್ರ ಸಂತನೊಬ್ಬ ರಾಜಕಾರಣಿಯಾಗಿ ಎಷ್ಟು ಬದಲಾವಣೆ ಮಾಡಿದ ಎಂದು ಜನ ಮಾತನಾಡಲು ಸಾಧ್ಯ. ಆದರೆ, ಯೋಗಿ ದೇವರನ್ನು ದಲಿತರೆನ್ನುತ್ತಾರೆ, ರಾಜಕೀಯದೊಳಗೆ ಅಲಿ, ಬಜರಂಗಬಲಿಯನ್ನು ಕರೆತರುತ್ತಾರೆ. ಇದು ಸಮಾಜದಲ್ಲಿ ಬಿರುಕು ತರುತ್ತದೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವಿಚಾರವಾಗಿ ನರೇಂದ್ರ ಮೋದಿ ಅವರನ್ನೂ ಟೀಕಿಸಿರುವ ಖರ್ಗೆ, ” ಪ್ರಧಾನಿ ನರೇಂದ್ರ ಮೋದಿ ಅವರು ಯೋಗಿ ಆದಿತ್ಯನಾಥರ ಹೇಳಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಪ್ರಧಾನಿಯಾಗಿ ಅವರು ಇಂಥ ಹೇಳಿಕೆಗಳನ್ನು ತಡೆದು ಮಾದರಿಯಾಗಬೇಕಿತ್ತು. ಆದರೆ, ಅವರು ಬೀದಿ ಜಗಳದಂಥ ರಾಜಕಾರಣವನ್ನು ಪ್ರೋತ್ಸಾಹಿಸುತ್ತಿದ್ದಾರೆ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ವಾರ ರಾಜಸ್ಥಾನದ ಆಳ್ವಾರ್​ನಲ್ಲಿ ಪ್ರಚಾರ ನಡೆಸುತ್ತಿದ್ದ ಯೋಗಿ ಆದಿತ್ಯನಾಥ್​ ಅವರು, ಹನುಮಂತ ಒಬ್ಬ ಬುಡಗಟ್ಟಿನವ, ಅರಣ್ಯವಾಸಿ, ದಲಿತ ಎಂದು ಹೇಳಿಕೆ ನೀಡಿದ್ದರು.

ಹನುಮಂತನನ್ನು ದಲಿತ ಎಂದ ಯುಪಿ ಸಿಎಂ ಯೋಗಿಗೆ ಲೀಗಲ್​ ನೋಟಿಸ್​