ಪ್ರಚೋದನಕಾರಿ ಭಾಷಣ ಮಾಡಿ ನೀತಿ ಸಂಹಿತೆ ಉಲ್ಲಂಘನೆ: ಯೋಗಿ ಮತ್ತು ಮಾಯಾಗೆ ಪ್ರಚಾರ ಮಾಡದಂತೆ ಇಸಿ ನಿರ್ಬಂಧ

ನವದೆಹಲಿ: ಮೇರಠ್​ ಮತ್ತು ದೇವ್​ಬಂದ್​ನಲ್ಲಿ ಚುನಾವಣಾ ಪ್ರಚಾರ ಮಾಡುವಾಗ ಮತೀಯ ವಿಚಾರವನ್ನು ಪ್ರಸ್ತಾಪಿಸಿ ಪ್ರಚೋದನಾಕಾರಿ ಭಾಷಣ ಮಾಡಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಮಾಡದಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಮತ್ತು ಮಾಜಿ ಸಿಎಂ ಮಾಯಾವತಿ ಅವರನ್ನು ಚುನಾವಣಾ ಆಯೋಗ ನಿರ್ಬಂಧಿಸಿದೆ.

ನ್ಯಾಯಾಲಯದ ಸೂಚನೆಗೆ ಮೇರೆಗೆ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿದೆ. ಇದರ ಪ್ರಕಾರ ಚುನಾವಣ ಪ್ರಚಾರ ಮಾಡದಂತೆ ಯೋಗಿ ಅವರನ್ನು 72 ಗಂಟೆ ಹಾಗೂ ಮಾಯಾವತಿ ಅವರನ್ನು 48 ತಾಸು ನಿರ್ಬಂಧಿಸಲಾಗಿದೆ.

ಉಭಯ ನಾಯಕರು ಸಂವಿಧಾನದ 324ನೇ ಪರಿಚ್ಛೇದವನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಚುನಾವಣಾ ಆಯೋಗದ ನಿಯಮದ ಪ್ರಕಾರ ಇದು ದುರ್ವರ್ತನೆ ಎನಿಸಿಕೊಳ್ಳುತ್ತದೆ. ಆದ್ದರಿಂದ, ಇವರಿಬ್ಬರನ್ನೂ ಪ್ರಚಾರ ಮಾಡದಂತೆ ನಿರ್ಬಂಧಿಸಲಾಗುತ್ತಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಉತ್ತರ ಪ್ರದೇಶದಲ್ಲಿ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಭೆಗಳಲ್ಲಿ ಯೋಗಿ ಆದಿತ್ಯನಾಥ ಭಾರತೀಯ ಸೇನೆಯನ್ನು ಮೋದಿ ಅವರ ಸೇನೆ ಎಂದು, ನಿಮಗೆ ಅಲಿಯಲ್ಲಿ ನಂಬಿಕೆ ಇದ್ದರೆ ನಮಗೆ ಬಜರಂಬಲಿಯಲ್ಲಿ ನಂಬಿಕೆ ಇದೆ ಎಂದು ಹೇಳುವ ಮೂಲಕ ಮತೀಯವಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರು.

ಇವರಂತೆ ಮಾಯಾವತಿ ಕೂಡ ಶಹರನ್​ಪುರ್​ ಮತ್ತು ಬರೇಲಿ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ಮಾಡುತ್ತಾ ಮತ ವಿಭಜನೆಯಾಗದಂತೆ ಮುಸ್ಲಿಮರು ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಉಭಯ ನಾಯಕರ ಹೇಳಿಕೆಗಳ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​, ಉಭಯ ನಾಯಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ವಿಫಲವಾಗಿದ್ದಕ್ಕೆ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿದೆ. (ಏಜೆನ್ಸೀಸ್​)