ಯೋಗಿ ಆದಿತ್ಯನಾಥ್​ ಜನ್ಮದಿನಕ್ಕೆ ಮೋದಿ ಶುಭಾಶಯ: ಡೈನಾಮಿಕ್​ ಸಿಎಂ ಎಂದು ಪ್ರಶಂಸಿಸಿದ ಪ್ರಧಾನಿ

ಲಖನೌ: ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಕೋಮುಗಲಭೆಯನ್ನು ಹತ್ತಿಕ್ಕುವಲ್ಲಿ ಕಠಿಣ ಕ್ರಮ ಕೈಗೊಂಡು ಹೆಸರು ಮಾಡಿರುವ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಇಂದು 47ನೇ ಜನ್ಮದಿನದ ಸಂಭ್ರಮದಲ್ಲಿ ಇದ್ದಾರೆ.

ಯೋಗಿ ಆದಿತ್ಯನಾಥ್​ ಅವರ ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಅನುರಾಗ್​ ಠಾಕೂರ್​,ಸಂಸದೆ ಶೋಭಾ ಕರಂದ್ಲಾಜೆ ಸೇರಿ ಹಲವರು ಶುಭಾಶಯ ಕೋರಿದ್ದಾರೆ.

ಯೋಗಿಯವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಟ್ವೀಟ್​ ಮಾಡಿರುವ ನರೇಂದ್ರ ಮೋದಿ, ಯೋಗಿ ಜೀಯವರು ಡೈನಾಮಿಕ್​ ಮುಖ್ಯಮಂತ್ರಿ. ಉತ್ತರ ಪ್ರದೇಶದ ರಾಜ್ಯದ ಚಿತ್ರಣವನ್ನು ಬದಲಿಸಿದ್ದಾರೆ. ಕೃಷಿ, ಉದ್ಯಮ ಕ್ಷೇತ್ರಗಳನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ದಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕಾನೂನು ಸುವ್ಯವಸ್ಥೆಯನ್ನು ಬಲಗೊಳಿಸಿದ್ದಾರೆ. ಒಟ್ಟಾರೆ ರಾಜ್ಯವನ್ನು ಬದಲಿಸುವಲ್ಲಿ ಪ್ರಶಂಸನೀಯ ಕೆಲಸ ಮಾಡಿದ್ದಾರೆ. ಅವರು ಆರೋಗ್ಯವಂತರಾಗಿ ದೀರ್ಘಕಾಲ ಬಾಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದಿದ್ದಾರೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ಕೂಡ ಟ್ವೀಟ್​ ಮಾಡಿದ್ದು, ಯೋಗಿ ಆದಿತ್ಯನಾಥ್​ ಅವರ ರ್ಮರ್ಗದರ್ಶನದಲ್ಲಿ ಉತ್ತರ ಪ್ರದೇಶ ಪ್ರಗತಿ ಪಥದಲ್ಲಿ ಸಾಗುತ್ತಿದೆ. ಅಭಿವೃದ್ಧಿಯಲ್ಲಿ ದಾಖಲೆ ಬರೆಯಲಿರುವುದು ನಿಶ್ಚಿತ ಎಂದು ಹೇಳಿ ಹುಟ್ಟುಹಬ್ಬದ ಶುಭಾಶಯಗಳು ಎಂದಿದ್ದಾರೆ.

ಆದಿತ್ಯನಾಥ್​ ಅವರು 1972ರಲ್ಲಿ ಉತ್ತರಖಾಂಡದ ಪೌರಿ ಘರ್​ವಾಲ್​ ಜಿಲ್ಲೆಯ ಪಂಚೂರ್​ ಹಳ್ಳಿಯಲ್ಲಿ ಜನಿಸಿದ್ದಾರೆ. ಅವರ ಪೂರ್ವಾಶ್ರಮದ ಹೆಸರು ಅಜಯ್​ ಸಿಂಗ್​ ಬಿಸ್ತ್​. ಹೇಮಾವತಿ ನಂದನ್ ಬಹುಗುಣ ಘರವಾಲ್ ವಿಶ್ವವಿದ್ಯಾಲಯದಲ್ಲಿ ಗಣಿತದಲ್ಲಿ ಪದವಿ ಪಡೆದಿದ್ದಾರೆ.

ರಾಮ ಮಂದಿರ ನಿರ್ಮಾಣ ಚಳವಳಿಯಲ್ಲಿ 1990ರಲ್ಲಿ ಯೋಗಿ ತೊಡಗಿಸಿಕೊಂಡರು. ಗೋರಖ್​ನಾಥ್​ ಮಠದ ಪ್ರಧಾನ ಅರ್ಚಕ ಮಹಂತ ಅವೈದ್ಯನಾಥ್ ಅವರ ಪ್ರಭಾವಕ್ಕೊಳಗಾಗಿ ಅವರ ಶಿಷ್ಯರಾದರು.

Leave a Reply

Your email address will not be published. Required fields are marked *