- ಹೊಟ್ಟೆಯ ಬೊಜ್ಜು ಬಂದಿದೆ. ಇದನ್ನು ಕರಗಿಸಲು ಯಾವ ಆಸನಗಳನ್ನು ಮಾಡಬೇಕು?
| ಯೂನುಸ್ ಮುಲ್ಲಾ ಗೋಕಾಕ್
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಮಯ, ತಾಳ್ಮೆ ಅಗತ್ಯವಿದೆ. ಪ್ರತಿ ದಿನವೂ ಯೋಗ ಮಾಡುವುದರಿಂದ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದು.
ಸಮರ್ಪಣೆ ಮತ್ತು ಶಿಸ್ತಿನಿಂದ ಮಾಡಿದರೆ ತೂಕ ಯಾ ಹೊಟ್ಟೆಯ ಬೊಜ್ಜು ಇಳಿಸಿಕೊಳ್ಳಲು ಮತ್ತು ಆಕಾರದಲ್ಲಿರಲು ಯೋಗ ನಿಮಗೆ ಸಹಾಯ ಮಾಡುತ್ತದೆ. ಹೆಚ್ಚಿನ ಒತ್ತಡದ ಜೀವನ, ಅನಾರೋಗ್ಯಕರ ಆಹಾರಪದ್ಧತಿ, ಅನುವಂಶಿಕತೆ, ವ್ಯಾಯಾಮ ಕೊರತೆ, ಹೆಚ್ಚಿನ ಸಿಹಿ ಆಹಾರ ಸೇವನೆ ಇತ್ಯಾದಿ ಹೊಟ್ಟೆಯ ಬೊಜ್ಜಿಗೆ ಕಾರಣವಾಗುತ್ತದೆ. ಸರಿಯಾದ ಆಹಾರಕ್ರಮ, ಉತ್ತಮ ಫಿಟ್ನೆಸ್ ದಿನಚರಿಯೊಂದಿಗೆ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು.
ಸೂಚಿತ ಆಸನಗಳು: ಸರಳ ವ್ಯಾಯಾಮಗಳು, ಸೂರ್ಯನಮಸ್ಕಾರ, ಯೋಗಾಸನಗಳಲ್ಲಿ ತಾಡಾಸನ, ಅರ್ಧಚಕ್ರಾಸನ, ಪಾದಹಸ್ತಾಸನ, ಪರಿವೃತ್ತ ತ್ರಿಕೋನಾಸನ, ಪಾಶ್ವೋತ್ಥಾನಾಸನ, ಉತ್ಥಿತ ಪಾರ್ಶ್ವಕೋನಾಸನ, ಪದ್ಮಾಸನ, ಪಶ್ಚಿಮೋತ್ಥಾನಾಸನ, ಶಶಾಂಕಾಸನ, ಮಂಡೂಕಾಸನ, ಉಷ್ಟ್ರಾಸನ, ನೌಕಾಸನ, ವಕ್ರಾಸನ, ಅರ್ಧಮತ್ಸ್ಯೇಂದ್ರಾಸನ, ಮರೀಚ್ಯಾಸನ, ಊರ್ಧ್ವಪ್ರಸಾರಿತ ಪಾದಾಸನ, ಜಠರ ಪರಿವೃತ್ತಾಸನ, ಸಂಪೂರ್ಣ ಪವನಮುಕ್ತಾಸನ, ಹಲಾಸನ, ಸರಳ ಭುಜಂಗಾಸನ, ಧನುರಾಸನ, ಚಕ್ರಾಸನ, ಶವಾಸನ ಮಾಡಿ. ಗುರುಮುಖೇನ ಕಲಿತು ಆರಂಭದಲ್ಲಿ ಸಾಧ್ಯವಾಗುವ ಆಸನಗಳನ್ನು ಮಾತ್ರ ಮಾಡಿ. ಸತತ ಆರು ತಿಂಗಳು ಅಭ್ಯಾಸ ಮಾಡಿ ನಿರೀಕ್ಷಿತ ಫಲಿತಾಂಶ ಪಡೆಯಬಹುದು.
- ನನಗೆ ಮೊದಲಿಗೆ ಸೊಂಟನೋವು ಕಾಣಿಸಿಕೊಂಡಿತು. ಸ್ವಲ್ಪ ದಿನ ಸುಮ್ಮನಿದ್ದು ನಂತರ ವೈದ್ಯರ ಬಳಿ ಹೋದೆ. ಮಾತ್ರೆ ಕೊಟ್ಟರು. ಸ್ವಲ್ಪ ದಿನದಲ್ಲಿ ನೋವು ಹೋಯಿತು. ವಾಕಿಂಗ್ ಆರಂಭಿಸಿದೆ. ಬಲಗಾಲು ನೋವು ಆರಂಭವಾಯಿತು. ವೈದ್ಯರು ಇನ್ನಷ್ಟು ಪೇನ್ ಕಿಲ್ಲರ್ ಕೊಟ್ಟರು. ಕಾಲು ಜೋಮು ಬರುತ್ತದೆ. ಯಾವುದಾದರೂ ಆಸನ ಸೂಚಿಸಿ.
| ಟಿ.ವಿ. ಶಿವಪ್ರಕಾಶ್ ಶಿವಮೊಗ್ಗ
ಕಾಲುಗಳಲ್ಲಿನ ನರಗಳ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುವ ಅಥವಾ ರಕ್ತದ ಹರಿವನ್ನು ಕಡಿಮೆ ಮಾಡುವ ಸ್ಥಾನದಲ್ಲಿ ಕುಳಿತುಕೊಳ್ಳುವುದರಿಂದ ಜೋಮು ಉಂಟಾಗುತ್ತದೆ.
ಇದಕ್ಕೆ ನಿರ್ದಿಷ್ಟ ಕಾಲು ಮತ್ತು ಪಾದದ ಹಿಗ್ಗಿಸುವ ವ್ಯಾಯಾಮ ಅಭ್ಯಾಸ ಮಾಡಿ. ಯೋಗವು ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಮುಂಜಾನೆ ಎದ್ದು ಖಾಲಿ ಹೊಟ್ಟೆಯಲ್ಲಿ ಧ್ಯಾನ, ಪ್ರಾಣಾಯಾಮ, ಹಾಗೂ ಸೂಕ್ಷ್ಮ ವ್ಯಾಯಾಮಗಳನ್ನು ಮಾಡಿ. ಅನಂತರ ಮಲಗಿಕೊಂಡು ಒಂದೊಂದು ಕಾಲಿನಲ್ಲಿ ಸೊನ್ನೆ ಬರೆಯುವ ವ್ಯಾಯಾಮವನ್ನು ಆರು ಬಾರಿ ಮಾಡಿ.
ಸಾಧ್ಯವಾದರೆ ಆಸನಗಳಲ್ಲಿ ತ್ರಿಕೋನಾಸನ, ಪ್ರಸಾರಿತ ಪಾದೋತ್ಥಾನಾಸನ, ಬದ್ಧಕೋನಾಸನ, ಮಾರ್ಜಾಲಾಸನ, ಉತ್ಥಿತ ಏಕಪಾದಾಸನ, ಸರ್ವಾಂಗಾಸನ, ಮಕರಾಸನ, ಏಕಪಾದ ಶಲಭಾಸನ, ಶವಾಸನ ಅಭ್ಯಾಸ ಮಾಡಿ. ಕಷ್ಟವಾದರೆ ಧ್ಯಾನ, ಪ್ರಾಣಾಯಾಮವನ್ನು ಕುರ್ಚಿಯಲ್ಲಿ ಕುಳಿತು ಅಭ್ಯಾಸ ಮಾಡಿ. ಮುದ್ರೆಗಳಲ್ಲಿ ಪ್ರಾಣಮುದ್ರೆ, ವಾಯುಶೂನ್ಯ ಮುದ್ರೆ ಅಭ್ಯಾಸ ಮಾಡಿ.