More

    ಯೋಗಕ್ಷೇಮ| ಯೋಗಾಸನಗಳನ್ನು ಯಾರು ಅಭ್ಯಾಸ ಮಾಡಬಹುದು?

    ಯೋಗಕ್ಷೇಮ| ಯೋಗಾಸನಗಳನ್ನು ಯಾರು ಅಭ್ಯಾಸ ಮಾಡಬಹುದು?ಹೌದು, ಈ ಪ್ರಶ್ನೆ ಸಹಜವೇ. ಯೋಗ ಬರಿ ಋಷಿ ಮುನಿಗಳಿಗೆ, ನಿವೃತ್ತರಿಗೆ, ಸಾಧಕರಿಗೆ ಕಡೆಗೆ ರೋಗಿಗಳಿಗೆ ಎಂಬ ಕಲ್ಪನೆ ಹಬ್ಬಿ ಬಿಟ್ಟಿದೆ. ಯೋಗ ಸ್ವಾಸ್ಥ್ಯ ಜೀವನಕ್ಕೆ ಸುಯೋಗ್ಯ ಬದುಕಿಗೆ ನೆಮ್ಮದಿಯ ಬಾಳಿಗೆ ಎಂಬ ಅಂಶ ಗಮನಾರ್ಹ.

    ಯುವಾ ವೃದ್ಧೋತಿ ವೃದ್ಧೋವಾ, ವ್ಯಾಧಿತೋ ದುರ್ಬಲೋಪಿವಾ |

    ಅಭ್ಯಾಸಾತ್ ಸಿದ್ಧಮಾಪ್ನೋತಿ ಸರ್ವ ಯೊಗೇಶ್ವತಂದ್ರಿತಾಃ ||

    ಎಂಬಂತೆ ಯುವಕರು, ವೃದ್ಧರು, ಅತಿವೃದ್ಧರೂ, ವ್ಯಾಧಿತರೂ, ದುರ್ಬಲರೂ ಕೂಡ ನಿರಂತರವಾದ ಅಭ್ಯಾಸದಿಂದ ಪ್ರಾಪ್ತ ಸಿದ್ಧಿಯನ್ನು ಪಡೆಯಬಲ್ಲರು ಎಂಬ ಅಂಶ ಮನನೀಯ. ಆದರೂ ಸಾಮಾನ್ಯವಾಗಿ ಎಂಟು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಸನ ಪ್ರಾಣಾಯಾಮ ಅಭ್ಯಾಸ ಬೇಡ. ಅವರಿಗೆ ಶರೀರ ಸಡಿಲಗೊಳಿಸುವ ಯೌಗಿಕ ವ್ಯಾಯಾಮ ಸೂಕ್ತ. ಹಾಮೋನುಗಳ ಉತ್ಪಾದನೆಯಲ್ಲಿ ವ್ಯತ್ಯಾಸವಾಗಿ ಶಾರೀರಿಕ ಬೆಳವಣಿಗೆಯಲ್ಲೂ ಏರುಪೇರಾಗಬಹುದೆಂಬ ಕಾರಣದಿಂದ ಚಿಕ್ಕ ಪ್ರಾಯದ ಮಕ್ಕಳಿಗೆ ಇದರ ಅಭ್ಯಾಸ ಬೇಡವೆಂದು ಹೇಳಲಾಗುತ್ತದೆ.

    ಯೋಗಾಸನಗಳ ಸಂಖ್ಯೆ: ಯೋಗಾಸನಗಳ ಸಂಖ್ಯೆ ಎಷ್ಟು ಎಂಬುದು ನಿಜಕ್ಕೂ ಕುತೂಹಲಕಾರಿ ಪ್ರಶ್ನೆ. ಆಸನಾನಿ ಸಮಸ್ತಾನಿ ಯಾವಂತು ಜೀವ ಜಂತವಃ ಎನ್ನುತ್ತದೆ ಘೕರಂಡ ಸಂಹಿತೆ. ಸೃಷ್ಟಿಯಲ್ಲಿ ಎಷ್ಟು ಜೀವರಾಶಿಗಳಿವೆಯೋ ಅಷ್ಟು ಬಗೆಯ ಆಸನಗಳಿವೆಯಂತೆ! 84 ಲಕ್ಷ ಜೀವರಾಶಿ ಅಷ್ಟೇ ಸಂಖ್ಯೆಯ ಯೋಗಾಸನಗಳಿದೆಯಂತೆ. ಆದರೆ ಇಷ್ಟೂ ಆಸನಗಳ ವಿವರವನ್ನು ಯಾವುದೇ ಯೋಗ ಗ್ರಂಥಗಳಲ್ಲಿ ಕಾಣಸಿಗುವುದಿಲ್ಲ. ಪ್ರತಿಯೊಂದು ಜೀವಿಯೂ ಕುಳಿತುಕೊಳ್ಳುವ, ಮಲಗುವ, ನಿಲ್ಲುವ ಒಂದೊಂದು ಭಂಗಿಯೂ ಒಂದೊಂದು ಆಸನವೇ. ಪ್ರಾಣಿಗಳ, ಪಕ್ಷಿಗಳ,ಋಷಿಗಳ, ಗಿಡಮರಗಳ ಹೆಸರನ್ನು ಹೊತ್ತು ಅನೇಕ ಆಸನಗಳಿಗೆ. ಅವುಗಳಲ್ಲಿ ಎಂಬತ್ನಾಲ್ಕು ಮುಖ್ಯ ಆಸನಗಳೆಂದು ಘೕರಂಡ ಸಂಹಿತೆ ಹೇಳುತ್ತದೆ. ಒಂದೊಂದು ಆಸನಗಳಲ್ಲೂ ರೂಪಾಂತರಗಳನ್ನು ಮಾಡಿ ನೂರಾರು ಆಸನಗಳನ್ನು ಅಭ್ಯಸಿಸುವ, ಪ್ರದರ್ಶಿಸುವ ಅಭ್ಯಾಸ ಇಂದು ರೂಢಿಯಲ್ಲಿದೆ. ಹಾಗಾಗಿ ನಿರ್ದಿಷ್ಟವಾಗಿ ಇಂತಿಷ್ಟೇ ಆಸನಗಳು ಎಂದು ಹೇಳಲು ಸಾಧ್ಯವಾಗುವುದಿಲ್ಲ.

    ಅಭ್ಯಾಸದ ಹಂತದಲ್ಲಿಯೂ ಅಷ್ಟೆ, ಕಲಿಕೆಯ ಹಂತದಲ್ಲಿ ಎಷ್ಟೇ ಆಸನಗಳನ್ನು ಕಲಿತರೂ ಅಭ್ಯಾಸದ ಹಂತದಲ್ಲಿ ನಮ್ಮ ಆರೋಗ್ಯಕ್ಕೆ ಅಗತ್ಯವಾದ, ನಮಗಿರುವ ತೊಂದರೆಗಳಿಗೆ ಉಪಶಮನಕಾರಿಯಾಗಬಲ್ಲ ಆಸನಗಳಾವುವೆಂಬುದನ್ನು ಸ್ಪಷ್ಟವಾಗಿ ಅರ್ಥೈಸಿಕೊಂಡು ಅವುಗಳ ಅಭ್ಯಾಸವನ್ನು ನಿರಂತರವಾಗಿ ಮುಂದುವರೆಸಿದಲ್ಲಿ ಆರೋಗ್ಯ ರಕ್ಷಣೆಯಲ್ಲಿ ಅವು ಹೆಚ್ಚು ಪರಿಣಾಮಕಾರಿಯಾಗಬಲ್ಲವು.

    ಪ್ರಾಣಾಯಾಮಕ್ಕೆ ಸೂಕ್ತ ಆಸನ: ವೀರಾಸನ:

    ಏಕಂ ಪಾದಂ ತಥೈಕಸ್ಮಿನ್ ವಿನ್ಯಸೇದೂರುಣಿ ಸ್ಥಿರಮ್

    ಇತರಸ್ಮಿಂಸ್ತಥಾ ಚೋರುಂ ವೀರಾಸನಮಿತೀರಿತಮ್ ||

    ಒಂದು ಪಾದವನ್ನು (ವಿರುದ್ಧ) ತೊಡೆಯ ಮೇಲೆಯೂ ಇನ್ನೊಂದು ತೊಡೆಯನ್ನು ಮತ್ತೊಂದು ಪಾದದ ಮೇಲೆಯೂ ಇರಿಸಿದರೆ ವೀರಾಸನವೆನಿಸುತ್ತದೆ.

    1. ನೆಲದ ಮೇಲೆ ಚಾಪೆ ಅಥವಾ ಕಂಬಳಿ ಹಾಸಿ ಕುಳಿತುಕೊಳ್ಳಿ.

    2. ಬಲಗಾಲನ್ನು ಮಡಚಿ ಎಡತೊಡೆಯ ಮೇಲೆ ಬರುವಂತೆ, ಎಡಗಾಲನ್ನು ಮಡಚಿ ಬಲತೊಡೆಯ ಕೆಳಗೆ ಬರುವಂತೆ ಇಟ್ಟುಕೊಳ್ಳಿ. 3. ಎರಡೂ ಪಾದಗಳು ಹಿಮ್ಮುಖ ಚಾಚಿಕೊಂಡಿರಲಿ.

    4. ಬೆನ್ನು ಹಾಗೂ ಕತ್ತನ್ನು ನೇರವಾಗಿ ಇಟ್ಟುಕೊಳ್ಳಿ.

    5. ಕೈಗಳೆರಡನ್ನೂ ಚಿನ್ಮುದ್ರೆಯಲ್ಲಿ ತೊಡೆಯ ಮೇಲೆ ಇಟ್ಟುಕೊಳ್ಳಿ.

    ಈ ಆಸನ ಮಂಡಿ, ತೊಡೆಗಳು ಹಾಗೂ ಪಾದಗಳ ನೋವನ್ನು ನಿವಾರಿಸುತ್ತದೆ, ಇದರ ಇನ್ನೊಂದು ವಿಶೇಷವೆಂದರೆ ಊಟವಾದ ಬಳಿಕವೂ ಈ ಆಸನವನ್ನು ಹಾಕಬಹುದು. ಆಹಾರ ಜೀರ್ಣವಾಗಲು ಸಹಕಾರಿ. ಪಾದಕಮಾನು ಹಾಗೂ ಚಪ್ಪಟೆ ಪಾದ ನಿವಾರಣೆಗೆ ಸಹಕಾರಿ. ಜೀರ್ಣಶಕ್ತಿವರ್ಧಕ ಹಾಗೂ ಋತುಬಂಧ ಸಮಸ್ಯೆ ಪರಿಹಾರಕ. ಧ್ಯಾನಕ್ಕೂ ಅನುಕೂಲವಾದ ಆಸನ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts