
ನೆಲಮಂಗಲ: ನಿತ್ಯ ಯೋಗಭ್ಯಾಸ ಮಾಡುವುದರಿಂದ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ ಏಕಾಗ್ರತೆ ಗಳಿಸಿ ವಿದ್ಯಾರ್ಥಿಗಳು ಶಿಕ್ಷಣದ ಪ್ರಗತಿ ಸಾಧಿಸಬಹುದಾಗಿದೆ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಪವಾಡ ಶ್ರೀ ಬಸವಣ್ಣ ದೇವರ ಮಠದ ಆವರಣದಲ್ಲಿ ಶ್ರೀ ಬಸವೇಶ್ವರ ಸಂಜೀವಿನಿ ಯೋಗ ವೆಲ್‌ನೆಸ್ ಸೆಂಟರ್ ಹಾಗೂ ವಿವಿಧ ಯೋಗ ಕೇಂದ್ರಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವಶಾಂತಿ ಯಜ್ಞ ಮತ್ತು ಹೊಸವರ್ಷ ಆಚರಣೆಯಲ್ಲಿ ಮಾತನಾಡಿದರು.
ರಾಜಮಹಾರಾಜರ ಕಾಲದಲ್ಲಿ ಮಹತ್ಕಾರ್ಯ ಕೈಗೊಳ್ಳುವ ಮುನ್ನ ಯಾಗ ಯಜ್ಞ ಮಾಡುವ ಪ್ರತೀತಿ ಇತ್ತು. ಆಧುನಿಕತೆ ದಿನಗಳಲ್ಲಿ ಯಜ್ಞಗಳ ಬದಲಿಗೆ ಹೋಮ ಮಾಡಲಾಗುತ್ತಿದೆ. ಔತಣಕೂಟ, ಮೋಜುಮಸ್ತಿ ಮಾಡುವ ಮೂಲಕ ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ಹೊಸವರ್ಷ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಆದರೆ ಸಹಸ್ರಸಂಖ್ಯೆಯ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ವಿಶ್ವಶಾಂತಿ ಯಜ್ಞದ ಪರಿಚಯಿಸುವ ಸಂಕಲ್ಪ ಮಾಡಿರುವ ಯೋಗ ಶಾಲೆಯ ವಿಶಿಷ್ಟ ಚಿಂತನೆ ಅರ್ಥಪೂರ್ಣವಾಗಿದೆ ಎಂದರು.
ವಿದ್ಯಾರ್ಥಿಗಳಿಂದ ಸಂಕಲ್ಪ ಮತ್ತು ಪ್ರಾರ್ಥನೆ: ಯಜ್ಞದಲ್ಲಿ ಪಾಲ್ಗೊಂಡಿದ್ದ ಶ್ರೀ ಬಸವೇಶ್ವರ ಸಮೂಹ ಶಿಕ್ಷಣ ಸಂಸ್ಥೆಗಳ ಸಹಸ್ರಸಂಖ್ಯೆಯ ವಿದ್ಯಾರ್ಥಿಗಳು ಯಜ್ಞಕ್ಕೆ ಅವಿಸ್ಸನ್ನು ಅರ್ಪಿಸಿ ಉತ್ತಮ ಜ್ಞಾನಾರ್ಜನೆಗೆ ಸಂಕಲ್ಪ ಮಾಡಿದಲ್ಲದೇ ಲೋಕಕಲ್ಯಾಣಾಕ್ಕಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಯೋಗದ ಮಹತ್ವದ ಕುರಿತು ವಿಚಾರಗಳನ್ನು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ವಿ.ರಾಮಸ್ವಾಮಿ, ಸಾಹಿತಿ ಎಂ.ವಿ.ನೆಗಳೂರು, ವೀರಶೈವ ಲಿಂಗಾಯತ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಆರ್.ನಾಗರಾಜು, ಬಸವೇಶ್ವರ ವೆಲ್‌ನೆಸ್ ಯೋಗ ಶಾಲೆ ಶಿಕ್ಷಕ ಶ್ರೀರಂಗಧಾಮ್, ಸಾಧನ ಯೋಗಕೇಂದ್ರದ ಅಧ್ಯಕ್ಷ ವಾದಿರಾಜ್, ಯೋಗಶಿಕ್ಷಕಿ ಲತಾ ಮತ್ತಿತರರಿದ್ದರು.