Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ದಿವ್ಯತೆಯ ಪಥ ಯೋಗ

Thursday, 21.06.2018, 3:03 AM       No Comments

ಯೋಗದಿನದ ಹಿನ್ನೆಲೆ

ದೈಹಿಕ, ಮಾನಸಿಕ ಹಾಗೂ ಅಧ್ಯಾತ್ಮದ ಮೂಲಕ ದೇಹ ಮತ್ತು ಮನಸ್ಸಿನ ಸಾಮರಸ್ಯ ಕಾಪಾಡುವ ಶಕ್ತಿಯುಳ್ಳ ಯೋಗ ಭಾರತ ಮೂಲದ್ದು. ಇದಕ್ಕೆ ಸುಮಾರು ಐದು ಸಾವಿರ ವರ್ಷಗಳ ಇತಿಹಾಸವಿದೆ. ಜೂನ್ 21ರಂದು ಯೋಗ ದಿನವನ್ನು ಆಚರಿಸುವ ಬಗ್ಗೆ 2014ರ ಡಿಸೆಂಬರ್ 11ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಘೋಷಿಸಲಾಯಿತು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2014ರ ಸೆಪ್ಟೆಂಬರ್ 27ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಯೋಗದ ಕುರಿತಾಗಿ ಮಾತನಾಡಿದ ನಂತರ ಇಂಥದ್ದೊಂದು ಘೋಷಣೆ ಹೊರಬಿತ್ತು. ಆ ಸಭೆಯಲ್ಲಿ ಅವರು, ‘ಯೋಗವು ಭಾರತಕ್ಕೆ ಸಾಂಪ್ರದಾಯಿಕವಾಗಿ ಬಂದಿರುವ ಅತ್ಯಮೂಲ್ಯ ಉಡುಗೊರೆ. ಮನಸ್ಸು ಮತ್ತು ದೇಹದ ಸ್ವಾಸ್ಥ್ಯವನ್ನು ಕಾಪಾಡಬಲ್ಲ; ಯೋಚನೆ ಮತ್ತು ಕ್ರಿಯೆಯ ನಡುವೆ ಸಾಮರಸ್ಯ ಮೂಡಿಸಬಲ್ಲ; ಮನುಷ್ಯ ಮತ್ತು ನಿಸರ್ಗದ ನಡುವೆ ಸಮತೋಲನ ಕಾಪಾಡಬಲ್ಲ; ಆರೋಗ್ಯ ಮತ್ತು ಜೀವನಕ್ರಮ ಸುಧಾರಿಸಿಕೊಳ್ಳಲು ನೆರವಾಗಬಲ್ಲ ಗುಣವು ಯೋಗಕ್ಕಿದೆ. ಯೋಗ ಎಂದರೆ ಕೇವಲ ವ್ಯಾಯಾಮವಲ್ಲ, ಬದಲಿಗೆ ನಮ್ಮೊಳಗಿನ ನಮ್ಮತನವನ್ನು ಕಂಡುಕೊಳ್ಳಬಲ್ಲ ಶಕ್ತಿ ಇದಕ್ಕಿದೆ. ಜೊತೆಗೆ ಜಗತ್ತು ಹಾಗೂ ನಿಸರ್ಗದ ಕುರಿತು ಅರಿಯಬಲ್ಲ ಮಹಾಶಕ್ತಿಯೂ ಇದಕ್ಕಿದೆ’ ಎಂದಿದ್ದರು. ‘ಆಯನ ಸಂಕ್ರಾಂತಿ’ಯ ದಿನವಾದ ಜೂನ್ 21ರಂದು ಯೋಗ ದಿನ ಆಚರಿಸಿದರೆ ಒಳ್ಳೆಯದು ಎಂದು ಹೇಳಿದ್ದ ಅವರು, ಈ ದಿನದ ಮಹತ್ವವನ್ನು ತಿಳಿಹೇಳಿದ್ದರು.

ಯೋಗಕ್ಕೆ ವಿಶ್ವಮಾನ್ಯತೆ ದಕ್ಕಿಸಿಕೊಟ್ಟವರು ಪ್ರಧಾನಿ ಮೋದಿ. 43 ದೇಶಗಳ ಜನ ಯೋಗದ ಲಾಭ ಪಡೆಯುತ್ತಿದ್ದಾರೆ. ಸ್ವತಃ ಯೋಗಪಟುವಾದ ಪ್ರಧಾನಿ; ವಿವಿಧ ಆಸನಗಳು, ಪ್ರಾಣಾಯಾಮ, ಧ್ಯಾನವನ್ನು ನಿತ್ಯ ಅಭ್ಯಸಿಸುವುದರ ಜತೆಗೆ ವಿಶ್ವಕ್ಕೆ ಯೋಗದ ಲಾಭ ಸಿಗುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದ್ದರು. ಹೀಗಾಗಿ 2014ರ ಡಿಸೆಂಬರ್ 11ರಂದು ವಿಶ್ವಸಂಸ್ಥೆ ಜೂನ್ 21ನ್ನು ‘ವಿಶ್ವ ಯೋಗ ದಿನ’ ಎಂದು ಘೋಷಿಸಿತು. ಇತ್ತೀಚೆಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಕಿದ್ದ ಫಿಟ್​ನೆಸ್ ಸವಾಲಿಗೆ ಪ್ರತಿಯಾಗಿ ಪ್ರತಿ ಮುಂಜಾನೆ ಅಭ್ಯಾಸ ಮಾಡುವ ಯೋಗಾಸನ, ವ್ಯಾಯಾಮದ ವಿಡಿಯೋವನ್ನು ಟ್ವೀಟ್ ಮಾಡಿದ್ದರು.

ಮೊದಲ ಯೋಗದಿನ

ಭಾರತದಲ್ಲಿ ಮೊಟ್ಟಮೊದಲ ಬಾರಿಗೆ 2015ರ ಜೂನ್ 21ರಂದು ನರೇಂದ್ರ ಮೋದಿ ವಿಶ್ವ ಯೋಗ ದಿನವನ್ನು ಉದ್ಘಾಟಿಸಿದರು. ದೆಹಲಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 35,985 ಜನ ಭಾಗಿಯಾಗಿದ್ದು, ‘ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ನಲ್ಲಿ ಎರಡು ದಾಖಲೆ ಸೃಷ್ಟಿಸಿತು. ಒಂದೇ ಸ್ಥಳದಲ್ಲಿ, ಏಕಕಾಲದಲ್ಲಿ ಇಷ್ಟೊಂದು ಮಂದಿ ಭಾಗಿಯಾಗಿರುವುದು ಒಂದು ದಾಖಲೆಯಾದರೆ, ಹಲವು ರಾಷ್ಟ್ರದವರು ಏಕಕಾಲದಲ್ಲಿ ಈ ದಿನ ಆಚರಿಸಿದ್ದು ಇನ್ನೊಂದು ದಾಖಲೆ. ಅಮೆರಿಕ, ಚೀನಾ ಸೇರಿದಂತೆ 170 ದೇಶಗಳಲ್ಲಿ ವಿಶ್ವ ಯೋಗದಿನ ಆಚರಿಸಲಾಯಿತು.

ಎರಡನೇ ಯೋಗದಿನ

‘ಯುವ ಜನರೊಂದಿಗೆ ಸಂಪರ್ಕ’ ಧ್ಯೇಯವಾಕ್ಯದೊಂದಿಗೆ ಎರಡನೆಯ ವಿಶ್ವ ಯೋಗದಿನವನ್ನು ಆಚರಿಸಲಾಯಿತು. ಸಾಧ್ಯವಾದಷ್ಟರ ಮಟ್ಟಿಗೆ ಯುವಕರನ್ನು ಯೋಗದೆಡೆಗೆ ಆಕರ್ಷಿತರನ್ನಾಗಿ ಮಾಡುವುದು ಇದರ ಉದ್ದೇಶವಾಗಿತ್ತು. ಅಂದು ಚಂಡೀಗಢದಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ ಪ್ರದರ್ಶನ ನೀಡಿದರು. ಇದರಲ್ಲಿ 30 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು. 2016 ಮತ್ತು 2017ರಲ್ಲಿ ವಿಶ್ವಸಂಸ್ಥೆಯ 192 ಸದಸ್ಯ ರಾಷ್ಟ್ರಗಳು ಯೋಗದಿನದಲ್ಲಿ ಭಾಗಿಯಾದವು.

ಮೂರನೇ ಯೋಗದಿನ

ಕೇಂದ್ರ ಮತ್ತು ರಾಜ್ಯಗಳ ಹಲವು ಪ್ರಖ್ಯಾತ ಯೋಗಕೇಂದ್ರಗಳ ಆಶ್ರಯದಲ್ಲಿ ಆಯುಷ್ ಸಚಿವಾಲಯವು, ‘ಆರೋಗ್ಯಕ್ಕಾಗಿ ಯೋಗ’ ಧ್ಯೇಯವಿಟ್ಟುಕೊಂಡು ಮೂರನೇ ವಿಶ್ವ ಯೋಗದಿನ ಆಚರಿಸಿತು. ಅಂದು ನಡೆದ ಲಖನೌದಲ್ಲಿ ಯೋಗ ಕಾರ್ಯಕ್ರಮದಲ್ಲಿ 51 ಸಾವಿರಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ನಂತರ ನವದೆಹಲಿಯ ಪ್ರವಾಸಿ ಭಾರತೀಯ ಕೇಂದ್ರದಲ್ಲಿ 2017ರ ಅಕ್ಟೋಬರ್ 10-11ರಂದು ಮೂರನೇ ಯೋಗದಿನವನ್ನು ಆಚರಿಸಲಾಯಿತು.

ಪ್ರಧಾನಿ ಸಂದೇಶದ ಮುಖ್ಯಾಂಶಗಳು

  1. ಕಾಯಿಲೆಯಿಂದ ಮುಕ್ತಗೊಂಡು ಆರೋಗ್ಯದೆಡೆಗಿನ ಪಥವೇ ಯೋಗದ ಮಾರ್ಗ. ಇತರರನ್ನು ಕೂಡ ನಮ್ಮಂತೆಯೇ ಕಾಣುವುದನ್ನು ಯೋಗ ಕಲಿಸುತ್ತದೆ.
  2. ಆಧುನಿಕ ಜೀವನಶೈಲಿಯ ಒತ್ತಡದಿಂದ ಸಕ್ಕರೆ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡ ಜನರನ್ನು ಬಾಧಿಸುತ್ತಿದೆ. ಒತ್ತಡ ಮತ್ತು ಖಿನ್ನತೆಗಳು ಇಂದಿನ ಸಮಾಜದಲ್ಲಿ ನಿಶ್ಶಬ್ದ ಹಂತಕರಂತೆ ಜನರನ್ನು ಕಾಡುತ್ತಿವೆ. ಯೋಗಾಭ್ಯಾಸದಿಂದ ಒತ್ತಡ ಮುಕ್ತವಾಗಿ, ಸಂಯಮಪೂರ್ಣ ಹಾಗೂ ಶಾಂತಿಯುತ ಜೀವನಶೈಲಿ ನಮ್ಮದಾಗುತ್ತದೆ.
  3. ಸನಾತನ ಭಾರತದ ಋಷಿಗಳು ಮಾನವಕುಲಕ್ಕೆ ನೀಡಿದ ಅತ್ಯಮೂಲ್ಯ ಉಡುಗೊರೆ ಯೋಗ. ಪ್ರತಿದಿನ ಬೆಳಗ್ಗೆ ಎದ್ದು ಅಭ್ಯಾಸ ಮಾಡಿದರೆ ಮಾತ್ರ ಯೋಗ ಎನಿಸುವುದಿಲ್ಲ. ಸಂಪೂರ್ಣ ಅರಿವು ಮತ್ತು ಶ್ರದ್ಧೆಯಿಂದ ದಿನನಿತ್ಯದ ಕೆಲಸಗಳನ್ನು ಕೈಗೊಂಡಾಗ ಅದು ಕೂಡ ಯೋಗದ ಭಾಗವಾಗಿರುತ್ತದೆ.

ಡೆಹ್ರಾಡೂನ್​ನಲ್ಲಿ ಅಧಿಕೃತ ಕಾರ್ಯಕ್ರಮ

ನಾಲ್ಕನೇ ವಿಶ್ವ ಯೋಗ ದಿನದ ಅಧಿಕೃತ ಕಾರ್ಯಕ್ರಮ ಈ ಸಲ ಉತ್ತರಾಖಂಡದ ಡೆಹ್ರಾಡೂನ್ ಅರಣ್ಯ ಸಂಶೋಧನಾ ಸಂಸ್ಥೆಯ (ಎಫ್​ಆರ್​ಐ) ಆವರಣದಲ್ಲಿ ನಡೆಯುತ್ತಿದೆ. 450 ಹೆಕ್ಟೇರ್ ವಿಸ್ತೀರ್ಣ ಈ ಸಂಸ್ಥೆಯ ಆವರಣದ 2.5 ಹೆಕ್ಟೇರ್ ಪ್ರದೇಶದಲ್ಲಿ ಯೋಗವೇದಿಕೆ ಸಿದ್ಧವಾಗಿದೆ.

ಮೋದಿ ನೇತೃತ್ವ

 1) ಪಾಲ್ಗೊಳ್ಳುವ ಯೋಗಾಸಕ್ತರ ಸಂಖ್ಯೆ 50 ಸಾವಿರ 2) ಬೆಳಗ್ಗೆ 6.45ರಿಂದ ಆರಂಭ 3) ಡೆಹ್ರಾಡೂನ್, ಹರಿದ್ವಾರ, ಹೃಷಿಕೇಶಗಳಿಂದ ಒಂದು ಸಾವಿರ ಬಸ್ ಸೌಕರ್ಯ

ಏನೇನು ಇರಲಿವೆ?

  1. 25 ಆಂಬ್ಯುಲೆನ್ಸ್ , ವೈದ್ಯಕೀಯ ಸೌಲಭ್ಯ
  2. 16 ಕಡೆ ರ್ಪಾಂಗ್ ಸೌಲಭ್ಯ
  3. 10 ಘಟಕ ಇರುವ 50 ಶೌಚಗೃಹ
  4. 3 ಲೀಟರ್ ಸಾಮರ್ಥ್ಯದ 40 ಟ್ಯಾಂಕರ್

 

ಯೋಗವೇ ನಮ್ಮ ಸಂಸ್ಕೃತಿ

| ಯೋಗಿ ಆದಿತ್ಯನಾಥ ಗೋರಖನಾಥ ಸಂಸ್ಥಾನದ ಪೀಠಾಧಿಪತಿ, ಉತ್ತರ ಪ್ರದೇಶ ಸಿಎಂ

ಕಾವಿಧಾರಿಯಾಗಿ ಒಂದು ಮಠದ ಆಡಳಿತ ನಡೆಸಿದ್ದರಿಂದ ಹಿಡಿದು ಅದೇ ಕಾವಿ ಧರಿಸಿಯೇ ಪ್ರಸ್ತುತ ಉತ್ತರ ಪ್ರದೇಶ ಸರ್ಕಾರದ ಮುಖ್ಯಮಂತ್ರಿಯಾಗಿ ಜನಮೆಚ್ಚುಗೆ ಗಳಿಸಿರುವವರು ಯೋಗಿ ಆದಿತ್ಯನಾಥ. ಕಳೆದ ವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಲಖನೌನಲ್ಲಿ ಯೋಗಗುರು ಬಾಬಾ ರಾಮದೇವ್ ಜತೆಗೆ ವೇದಿಕೆಯ ಮೇಲೆ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದ ಆದಿತ್ಯನಾಥ್, ನೆರೆದಿದ್ದ ಸಾವಿರಾರು ಯೋಗಾಸಕ್ತರಿಗೆ ಮಾರ್ಗದರ್ಶನ ಕೂಡ ಮಾಡಿದ್ದರು. ಯೋಗ ಆರಂಭಿಸಿದ ಶಂಕರರು ಮಹಾ ಯೋಗಿ. ಅವರು ಈ ದೇಶದ ಪ್ರತಿ ಕಣದಲ್ಲೂ ಇದ್ದಾರೆ. ವಿಶ್ವ ಯೋಗ ದಿನ ಜನರ ಅಭಿಯಾನವಾಗಬೇಕು. ಯೋಗ ನಮ್ಮ ಸಂಸ್ಕೃತಿ. ಇದನ್ನು ನೀಡಿದ ನಮ್ಮ ಹಿರಿಯರಿಗೆ ಕೃತಜ್ಞತೆ ಸಲ್ಲಿಸೋಣ’.

ಹಸನಾದ ಜೀವನಕ್ಕೆ ಪ್ರಬಲ ಸಾಧನ

| ಶ್ರೀ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮಿ ಯದುಗಿರಿ ಯತಿರಾಜ ಮಠ

ಜೀವನವನ್ನು ಹಸನುಗೊಳಿಸಲು ಪ್ರಾಚೀನಕಾಲದಿಂದಲೂ ಋಷಿಗಳು ಪ್ರಬಲವಾದ ಸಾಧನವನ್ನು ನಮಗೆ ನೀಡಿದ್ದಾರೆ. ಅದೇ ಯೋಗ. ಪ್ರಮುಖವಾಗಿ ಪ್ರತಿ ವ್ಯಕ್ತಿಯ, ಪ್ರತಿದಿನದ ನಡೆ-ನುಡಿಗಳು ಸುಸಂಸ್ಕೃತವಾಗಿ, ಆನಂದಮಯವಾಗಿ ಇರಬೇಕಾದರೆ ಅದಕ್ಕೆ ಯೋಗ ಮತ್ತು ಧ್ಯಾನಗಳು ಬೇಕೆಂಬುದು ಪ್ರಾಚೀನರ ಆಶಯವಾಗಿತ್ತು. ವ್ಯಕ್ತಿಯ ಶರೀರ, ಬುದ್ಧಿ ಮತ್ತು ಮನಸ್ಸು – ಈ ಮೂರನ್ನೂ ಸುಸ್ಥಿತಿಯಲ್ಲಿ ಇಡಲು ಅಷ್ಟಾಂಗಯೋಗದ ಪರಿಕಲ್ಪನೆಯನ್ನು ಋಷಿಗಳು ನೀಡಿದ್ದಾರೆ. ಇಲ್ಲಿ ನಮಗೆ ಧ್ಯಾನವೇ ಪ್ರಧಾನ ಸಂಗತಿಯಾಗಿ ಕಾಣುತ್ತದೆ. ಪೂರ್ವಾಶ್ರಮದಿಂದ ಧ್ಯಾನ ಮತ್ತು ಯೋಗದ ನಂಟು ಇದೆ. 40 ವರ್ಷಗಳಿಂದ ನಿತ್ಯ ಬ್ರಾಹ್ಮೀಮುಹೂರ್ತದಲ್ಲಿ ಎರಡರಿಂದ ಮೂರು ತಾಸು ಧ್ಯಾನದಲ್ಲಿ ಕಳೆಯುವುದು ಅಭ್ಯಾಸವಾಗಿದೆ. ವಿಶ್ವ ಯೋಗ ದಿನಾಚರಣೆಯನ್ನು ನಮ್ಮ ಸಂಸ್ಥಾನವೂ ಪ್ರತಿ ವರ್ಷ ಸಂಭ್ರಮದಿಂದ ಆಚರಿಸುತ್ತದೆ. ತಜ್ಞರು ನೂರಾರು ಯೋಗಾರ್ಥಿಗಳಿಗೆ ಯೋಗ ಬೋಧಿಸುತ್ತಾರೆ. ಲೋಕದ ಹಿತಕ್ಕಾಗಿ ಯೋಗ ರಾಜಮಾರ್ಗವಾಗಲಿ ಎಂಬುದು ನಮ್ಮ ಹಾರೈಕೆ.

ವಿಶ್ವಶಾಂತಿಗೆ ಪೂರಕ

| ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು, ಹರಿಹರಪುರ ಚಿಕ್ಕಮಗಳೂರು

ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡು ನಮ್ಮ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಗುರಿಯೆಡೆಗೆ ಸಮರ್ಪಕವಾಗಿ ಬಳಸಿಕೊಳ್ಳಲು ಯೋಗ ಬಹು ದೊಡ್ಡ ಸಾಧನವಾಗಿದೆ. ಯೋಗದ ಪರಮೋಚ್ಚ ಗುರಿ ಪರಮಾತ್ಮನ ತತ್ವವನ್ನು ಅನುಭವದಲ್ಲಿ ಅರಿತುಕೊಳ್ಳುವುದಾಗಿದೆ. ಲೌಕಿಕ ಜೀವನದಲ್ಲಿ ನಿಜವಾದ ಉನ್ನತಿ ಬಯಸುವ ಪ್ರತಿಯೊಬ್ಬರೂ ಬದುಕಿನುದ್ದಕ್ಕೂ ‘ಯೋಗ’ಜೀವನ ನಡೆಸಬೇಕು. ಮಾನವತ್ವದ ವಿಕಾಸಕ್ಕೆ, ಸಾಮಾಜಿಕ ಸಾಮರಸ್ಯಕ್ಕೆ, ನೈತಿಕ ಮೌಲ್ಯಗಳ ವೃದ್ಧಿಗೆ ಮತ್ತು ಅಂತಿಮವಾಗಿ ವಿಶ್ವಶಾಂತಿಗೆ ಯೋಗ ಬೇಕೇ ಬೇಕು. ಪ್ರತಿಯೊಬ್ಬರ ಬದುಕಿಗೆ ಬೆಳಕಾಗುವ ಯೋಗಜೀವನ ನಡೆಸುವ ದೃಢಸಂಕಲ್ಪವನ್ನು ಈ ಸಂದರ್ಭದಲ್ಲಿ ಮಾಡಬೇಕಿದೆ.


ಚೈತನ್ಯ ಕಾಪಾಡುವ ಪದ್ಧತಿ

| ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಬಾಳೆಹೊನ್ನೂರು

ನಿತ್ಯದ ಧಾರ್ವಿುಕ ವಿಧಿ, ಪೂಜಾದಿಗಳನ್ನು ನೆರವೇರಿಸುವುದರೊಂದಿಗೆ 300ಕ್ಕೂ ಹೆಚ್ಚು ಕಿ.ಮೀ. ಪ್ರಯಾಣ, ನೂರಾರು ಭಕ್ತರ ಕ್ಷೇಮ ವಿಚಾರಿಸಿ ಅನುಗ್ರಹ, ಸಾರ್ವಜನಿಕ ಸಭೆ, ಸಮಾರಂಭ, ಆಶೀರ್ವಚನ, ಧಾರ್ವಿುಕ ಚಿಂತನ, ಲೇಖನ ರಚನೆ, ವಿವಿಧ ರಂಗದ ಗಣ್ಯರ ಭೇಟಿ, ಸಂಸ್ಥಾನದ ವಿವಿಧ ಕಾರ್ಯಸಾಧನೆ ಬಗ್ಗೆ ಅವಲೋಕನ ಮತ್ತು ಮಾರ್ಗದರ್ಶನ – ಇವೆಲ್ಲವಕ್ಕೂ ಚೈತನ್ಯ ಕಾಪಾಡಿಕೊಳ್ಳಲು ಕಳೆದ 35 ವರ್ಷಗಳಿಂದ ನಮಗೆ ನೆರವಾಗಿರುವುದೇ ಯೋಗ. ನಾವು ಎಷ್ಟೇ ಕಾರ್ಯಒತ್ತಡದಲ್ಲಿದ್ದರೂ ಬೆಳಗಿನ 30 ನಿಮಿಷ ಸಮಯವನ್ನು ಯೋಗಕ್ಕೆ ಮೀಸಲಾಗಿಟ್ಟಿದ್ದೇವೆ. ಇದು ದಿನವಿಡೀ ಉತ್ಸಾಹ ಮತ್ತು ಉಲ್ಲಾಸ ಮೂಡಿಸುತ್ತದೆ. ಕೇಂದ್ರ ಸರ್ಕಾರ ವಿಶ್ವ ಯೋಗ ದಿನಾಚರಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದು ಹೆಮ್ಮೆಯ ಸಂಗತಿ. ಜೂ. 21ರಂದು ಎಲ್ಲರೂ ಒಟ್ಟಿಗೆ ಸೇರಿ ಯೋಗ ಮಾಡುವ ಅವಕಾಶ ಸಿಕ್ಕಿರುವುದು ಈ ದೇಶದ ಜನರ ಸೌಭಾಗ್ಯ. ಭಾರತೀಯ ಸಂಸ್ಕೃತಿಯ ಪ್ರತೀಕವೇ ಆದ ಯೋಗದಿಂದ ಎಲ್ಲರಿಗೂ ಆರೋಗ್ಯ, ಶಾಂತಿ, ಸಾಧನೆ ಮತ್ತು ಸಮೃದ್ಧಿ ಲಭಿಸಲಿ. ಬದುಕು ಉಲ್ಲಸಿತವಾಗಲಿ.

ಅಸೀಮ ವಿಶ್ವವ್ಯಾಪಿ

| ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ ಮಂತ್ರಾಲಯ ಮಠ

ಯಾಂತ್ರಿಕಮಯವಾಗಿರುವ ದಿನಮಾನಗಳಲ್ಲಿ ಯಾರಿಗೂ ಸಮಯವೇ ಇಲ್ಲದಂತಾಗಿದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಇದು ಮಾರಕ ಪರಿಣಾಮ ಬೀರಿದೆ. ಯಾವುದೇ ಅತ್ಯಾಧುನಿಕ ಔಷಧಕ್ಕಿಂತ ಸಾವಿರಾರು ವರ್ಷಗಳಿಂದ ನಮ್ಮ ಋಷಿ ಮುನಿಗಳು ಕಂಡುಕೊಂಡಿರುವ ಯೋಗವಿದ್ಯೆ ನಮ್ಮ ಸಂಜೀವಿನಿಯಾಗಿದೆ. ಯೋಗ ದಿನಾಚರಣೆ ಒಂದು ವಿಶಿಷ್ಟ ಕಾರ್ಯಕ್ರಮ. ಇದು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ನಾವು ನಿತ್ಯ ಬೆಳಗ್ಗೆ ಮತ್ತು ಸಂಜೆ ಒಂದು ತಾಸು ವಿವಿಧ ಆಸನ, ಭಸ್ತ್ರಿಕಾ ಸೇರಿ ಅನೇಕ ಪ್ರಾಣಾಯಾಮ ಅಭ್ಯಾಸ ಮಾಡುತ್ತೇವೆ. ಮಠದ ಶ್ರೀ ಗುರುಸಾರ್ವಭೌಮ ವಿದ್ಯಾಪೀಠ ಮತ್ತು ಎಲ್ಲ ಶಾಲೆಗಳಲ್ಲಿ ನಿತ್ಯ ಯೋಗ ಕಡ್ಡಾಯ. ಯೋಗತಜ್ಞರನ್ನು ಕರೆಸಿ ಆಗಾಗ್ಗೆ ತರಬೇತಿ ಕಾರ್ಯಾಗಾರ ಆಯೋಜಿಸುತ್ತೇವೆ. ಯೋಗ ಯಾವುದೇ ಜಾತಿ, ಪ್ರಾಂತ್ಯ, ದೇಶಕ್ಕೆ ಸೀಮಿತವಲ್ಲ. ಇದು ವಿಶ್ವವ್ಯಾಪಿ. ಎಲ್ಲರೂ ಯೋಗ ಮಾಡಿ ಆರೋಗ್ಯ, ಆನಂದ, ಮತ್ತು ಸ್ವಸ್ಥ ದೇಶನಿರ್ವಣಕ್ಕೆ ಮುಂದಾಗಿ.

ದಿವ್ಯತೆಗೆ ತಲುಪಿಸುವ ಮಾರ್ಗ

| ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮೂಡಬಿದಿರೆ ಜೈನಮಠ

ಸರ್ವಜೀವಿಗಳಲ್ಲೂ ದಿವ್ಯ ಶಕ್ತಿ ಇರುತ್ತದೆ. ಅದು ಪ್ರಕಟಗೊಳ್ಳಲು, ದಿವ್ಯ ಹಂತ ತಲುಪಲು ಅತ್ಯಂತ ಉತ್ತಮ ಮತ್ತು ವಿಶಿಷ್ಟ ಮಾರ್ಗ ಯೋಗ. ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಭಾವನಾತ್ಮಕ ವಿಕಸನಕ್ಕೆ ಯೋಗ ಕ್ರಿಯೆ ದಿವ್ಯ ಔಷಧ. ನಾವು ನಿತ್ಯ ಒಂದು ತಾಸು ಯೋಗ, ಧ್ಯಾನಕ್ಕೆ ಸಮಯ ಮೀಸಲಿಟ್ಟಿದ್ದೇವೆ. ಶೀರ್ಷಾಸನ, ಶಲಭಾಸನ ನಮಗೆ ಬಹಳ ಪ್ರಿಯವಾದ ಆಸನಗಳು. ಧಾರ್ವಿುಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಈ ಆಸನ ಅತ್ಯಂತ ಶಕ್ತಿಪ್ರದಾನ ಮಾಡಿದೆ. ಯೋಗದಿನಾಚರಣೆಗೆ ಪ್ರಧಾನಿ ಮೋದಿ ಕರೆ ಕೊಟ್ಟಿರುವುದು ಅತ್ಯಂತ ಶ್ಲಾಘನೀಯ ಸಂಗತಿ. ಇದು ಭಾರತೀಯರಿಗೆ ಮಾತ್ರವಲ್ಲ, ವಿಶ್ವದ ಎಲ್ಲ ಮಾನವಕೋಟಿಗೆ ಆರೋಗ್ಯ ನೀಡುವ ಕರೆಯಾಗಿದೆ. ನಾವು ಈ ಬಾರಿ ಕ್ಯಾಲಿಫೋರ್ನಿಯಾದಲ್ಲಿ ವಿಶ್ವ ಯೋಗ ದಿನಾಚರಣೆ ಮಾಡುತ್ತಿದ್ದೇವೆ. ನಮ್ಮ ನೂರಾರು ಶಿಷ್ಯವರ್ಗ ಮತ್ತು ಮಠದ ಭಕ್ತರು ಅಲ್ಲಿ ಯೋಗಕ್ಕಾಗಿ ಸೇರುತ್ತಿದ್ದಾರೆ. ಆರೋಗ್ಯವಂತ ವಿಶ್ವದ ನಿರ್ವಣಕ್ಕೆ ಯೋಗ ಉಪಾಸನೆಗೆ ಶರಣಾಗೋಣ.

ಅಗಣಿತ ಲಾಭ

| ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಉತ್ತರಾದಿ ಮಠ

ವಿಶ್ವಕ್ಕೆ ಭಾರತದ ಪ್ರಾಚೀನರು ನೀಡಿದ ಬಹಳ ದೊಡ್ಡ ಕೊಡುಗೆಗಳಲ್ಲಿ ಯೋಗವೂ ಒಂದು. ಧರ್ವಚರಣೆಗೆ ಶರೀರ ಬಹು ಮುಖ್ಯವಾದ ಸಾಧನ. ಇದರ ರಕ್ಷಣೆಗೆ ಇರುವ ಶ್ರೇಷ್ಠ ಉಪಾಯವೇ ಯೋಗ. ಸಕಲ ದೋಷ ನಿವಾರಿಸಿ ಶರೀರ ಮತ್ತು ಮನಸ್ಸನ್ನು ಭಗವಂತನ ಸೇವೆಗೆ, ಸ್ಮರಣೆಗೆ ನಿರ್ಮಲಗೊಳಿಸುವ ಯೋಗವನ್ನು ಪ್ರತಿಯೊಬ್ಬರೂ ಅನುಷ್ಠಾನ ಮಾಡಿಕೊಳ್ಳಬೇಕು. ಯೋಗದಲ್ಲಿ ಯಾವುದೇ ಸೈಡ್ ಎಫೆಕ್ಟ್ ಎಂಬುದು ಇಲ್ಲ. ನಾವು ನಿತ್ಯ ಬ್ರಾಹ್ಮೀಮುಹೂರ್ತದಲ್ಲೇ ಯೋಗಸಾಧನೆ ಮಾಡಿಕೊಳ್ಳುತ್ತೇವೆ. ಇದರಿಂದ ಅಗಣಿತ ಲಾಭಗಳಿವೆ. ಸಕಲರೂ ಯೋಗದಿಂದ ಅನುಗ್ರಹೀತರಾಗಬೇಕು ಎಂಬುದು ನಮ್ಮ ಅಪೇಕ್ಷೆ.


ಪ್ರಪಂಚಕ್ಕೆ ನೀಡಿದ ಕೊಡುಗೆ

| ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪೇಜಾವರ ಮಠ ಉಡುಪಿ

ಭಾರತ ಪ್ರಪಂಚಕ್ಕೆ ನೀಡಿದ ಬಹು ದೊಡ್ಡ ಕೊಡುಗೆ ಯೋಗ. ಇಂದು ಯೋಗ ಜಗತ್ತನ್ನು ವ್ಯಾಪಿಸಿದೆ. ವಿದೇಶಿಯರೂ ಯೋಗವನ್ನು ಸ್ವಾಗತಿಸುತ್ತಿದ್ದಾರೆ. ಯೋಗದಿಂದ ದೈಹಿಕ ಹಾಗೂ ಮಾನಸಿಕ ಶಕ್ತಿ ಬೆಳೆಸಿಕೊಳ್ಳಬಹುದು. ಇದು ಎಲ್ಲರಿಗೂ ಅಗತ್ಯ. ಯೋಗಾಸನದಿಂದ ದೇಹಕ್ಕೆ ಬಲ ಮತ್ತು ಮನಸ್ಸಿಗೆ ಸ್ಥೈರ್ಯ ಪ್ರಾಪ್ತವಾಗುತ್ತದೆ. ಆರೋಗ್ಯವೃದ್ಧಿಯೂ ಸಾಧ್ಯ. ಇಂದು ವಿಶ್ವಾದ್ಯಂತ ಯೋಗದಿನಾಚರಣೆ ನಡೆಯುತ್ತಿ ರುವುದು ದೇಶಕ್ಕೆ ಹಾಗೂ ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ಎಲ್ಲ ವರ್ಗದ ಜನರು ಜಾತಿ-ಮತ ಭೇದವಿಲ್ಲದೆ ಇದರಲ್ಲಿ ಸಹಕರಿಸಬೇಕು ಎಂಬುದು ನಮ್ಮ ಅಪೇಕ್ಷೆ.

ದೇಹ, ಮನಸ್ಸುಗಳ ಸಾಮರಸ್ಯ

| ಶ್ರೀ ಶ್ರೀ ರವಿಶಂಕರ್

ದೇಹ, ಮನಸ್ಸು ಮತ್ತು ಆತ್ಮವನ್ನು ಒಂದಾಗಿಸುವ ಪ್ರಕ್ರಿಯೆಯೇ ಯೋಗ. ಯೋಗ ನಿಮ್ಮನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ. ಉಸಿರಾಟದ ಪ್ರಕ್ರಿಯೆಗಳು, ಧ್ಯಾನ ಮತ್ತು ಕೆಲವು ಸರಳ ವ್ಯಾಯಾಮ ಮಾಡಿದಾಗ ಒತ್ತಡ ನಿವಾರಣೆಯಾಗುತ್ತದೆ. ಇದರಿಂದ ನಿಮ್ಮ ದೇಹದಲ್ಲಿ ಒಳಿತಿನ ಭಾವನೆ ಉಂಟಾಗಿ, ಆಂತರ್ಯದಿಂದ ಸಂತೋಷವುಂಟಾಗುತ್ತದೆ. ನಿಮ್ಮಲ್ಲಿ ಒಳಿತಿನ ಭಾವನೆಯಿದ್ದು, ಸಂತೋಷವಾಗಿದ್ದರೆ, ನೀವು ಹಿಂಸಾತ್ಮಕರಾಗಿರುವುದಿಲ್ಲ. ಯಾರಾದರೂ ಹಿಂಸಾಚಾರದಲ್ಲಿ ತೊಡಗಿದ್ದರೆ ಆ ಹಿಂಸೆಯ ಹಿಂದೆ ಕೋಪ, ಆಶಾಭಂಗವಿದೆಯೆಂದು ತಿಳಿಯಿರಿ. ಯೋಗ ಎಂದರೆ ಮಿಳಿತವಾಗುವುದು, ಚಿಕ್ಕ ಮನಸ್ಸು ದೊಡ್ಡ ಮನಸ್ಸಿನೊಡನೆ ಮಿಳಿತವಾಗುವುದು ಮತ್ತು ಇದರಿಂದ ದೇಹ, ಮನಸ್ಸು ಮತ್ತು ಉಸಿರಿನ ನಡುವೆ ಸಾಮರಸ್ಯವನ್ನು ತರುವುದು. ದೇಹ ಮತ್ತು ಮನಸ್ಸು ಕೂಡಿರದಿದ್ದರೆ, ಅದು ಯೋಗವಲ್ಲ. ಯೋಗ ಅವುಗಳನ್ನು ಸಾಮರಸ್ಯಕ್ಕೆ ತರುತ್ತವೆ.


ಮನೆಮಾತಾದ ಬಾಬಾ

| ಬಾಬಾ ರಾಮದೇವ್ ಯೋಗಗುರು

ವಿಶಿಷ್ಟ ಯೋಗಾಸನ ಶಿಬಿರಗಳ ಮೂಲಕ ಕೋಟ್ಯಂತರ ಜನರ ದೈಹಿಕ, ಮಾನಸಿಕ ಸಮಸ್ಯೆಗಳಿಗೆ ಪರಿಹಾರ ನೀಡುವುದರಿಂದ ಮನೆಮಾತಾದವರು ಬಾಬಾ ರಾಮದೇವ್. ಅಮಿತಾಭ್ ಬಚ್ಚನ್ ಸೇರಿ ನಟ-ನಟಿಯರು, ರಾಜಕೀಯ ಧುರೀಣರು ರಾಮದೇವ್ ಅವರಿಂದ ಯೋಗದೀಕ್ಷೆ ಪಡೆದುಕೊಂಡಿದ್ದಾರೆ. 2017ರಲ್ಲಿ ಬಾಬಾ ಮಾರ್ಗದರ್ಶನದಲ್ಲಿ 54,522 ಮಂದಿ ಅಹಮದಾಬಾದ್​ನಲ್ಲಿ ಒಟ್ಟಿಗೆ ಯೋಗಾಭ್ಯಾಸ ನಡೆಸುವ ಮೂಲಕ ಗಿನ್ನೆಸ್ ದಾಖಲೆ ನಿರ್ವಿುಸಿದರು.


ವಿಶ್ವಕ್ಕೆ ದಿವ್ಯಸಂದೇಶ

| ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪುತ್ತಿಗೆ ಮಠ

ನಿತ್ಯವೂ ಬೆಳಗ್ಗೆ ಎದ್ದು ಸ್ನಾನ, ಪೂಜೆ ಇತ್ಯಾದಿ ಚಟುವಟಿಕೆ ಮಾಡುತ್ತೇವೆ. ಹೀಗೆ ಯೋಗವೂ ನಮ್ಮ ಬೆಳಗಿನ ಚಟುವಟಿಕೆಯಲ್ಲಿ ಅವಿಭಾಜ್ಯ ಅಂಗ. ಕಳೆದ 20 ವರ್ಷಗಳಿಂದ ಇದು ಸಾಗಿದೆ. ಯೋಗ ನಮ್ಮ ಮುಂಜಾನೆಯ ದಿನಚರಿಯ ಭಾಗವಾಗಿದೆ. ಯಾವುದೇ ದೇಶ, ರಾಜ್ಯ, ಪ್ರದೇಶದಲ್ಲಿರಲಿ, ಕನಿಷ್ಠ 30 ನಿಮಿಷದ ಯೋಗಾಭ್ಯಾಸ, ಪ್ರಾಣಾಯಾಮ ನಿಲ್ಲಿಸಿಲ್ಲ. ಇದು ನಮ್ಮ ಎಲ್ಲ ವೇದ ಪಾಠಶಾಲೆ, ಶಿಕ್ಷಣಸಂಸ್ಥೆಗಳಲ್ಲೂ ನಿತ್ಯ ನಡೆಯುವ ಪ್ರಕ್ರಿಯೆ. ಇಂದು ಮೊಬೈಲ್ ಫೋನ್ ಯುಗ. ಇದರ ಬಳಕೆ ಎಲ್ಲರಿಗೂ ಹೆಚ್ಚಾಗಿ ಏಕಾಗ್ರತೆಯೇ ಇಲ್ಲದಂತಾಗಿದೆ. ಯಾವುದೇ ಕೆಲಸಕ್ಕೆ ಆಸಕ್ತಿ ಇಲ್ಲದಂತಾಗಿದೆ. ಮಾನಸಿಕವಾಗಿ ಎಲ್ಲರೂ ಕುಗ್ಗಿದ್ದಾರೆ. ಯುವಕರಲ್ಲಿ ಮಹತ್ವಾಕಾಂಕ್ಷೆ ಇಲ್ಲವಾಗಿದೆ. ಉತ್ಸಾಹ ಮತ್ತು ಕ್ರಿಯಾಶೀಲತೆ ಹೆಚ್ಚಾಗಲು ಇಂದು ಯೋಗ ಎಲ್ಲರಿಗೂ ಬೇಕು. ಮಕ್ಕಳಿಗೆ ಕಡ್ಡಾಯವಾಗಿ ಬೇಕು. ಯಾವುದೇ ಕರ್ಮದಲ್ಲಿ ಪರಿಪೂರ್ಣತೆ ಸಾಧಿಸುವುದು ಯೋಗದ ಗುರಿ. ಆ ನಿಟ್ಟಿನಲ್ಲಿ ಎಲ್ಲರ ಯತ್ನ ಸಾಗಲಿ.

ಸರ್ವ ದುಃಖಗಳ ವಿಯೋಗ

| ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ರಾಮಚಂದ್ರಾಪುರಮಠ

ಯೋಗವೆಂದರೆ ವಿಯೋಗ. ಹಾಗೆಂದು ಹೇಳಿದವನು ಶ್ರೀಕೃಷ್ಣ. ತಂ ವಿದ್ಯಾತ್ ದುಃಖಸಂಯೋಗವಿಯೋಗಂ ಯೋಗಸಂಜ್ಞಿತಮ್| (ಭ.ಗೀ.: 6.23) ಯೋಗವೆಂದರೆ ಸರ್ವದುಃಖಗಳ ವಿಯೋಗ. ಎಲ್ಲ ದುಃಖಗಳ ಪರಿಹಾರ ಯೋಗದಲ್ಲಿದೆ ಎನ್ನುವ ಭಾವ. ಆದುದರಿಂದಲೇ ಯೋಗ ಸಕಲ ಜೀವಗಳಿಗೂ ಪ್ರಸ್ತುತ. ಅದರ ಮುಖ್ಯ ಉದ್ದೇಶ ಆನಂದದ ಪರಿಪೂರ್ಣತೆ. ಶಾಶ್ವತ ಶಾಂತಿ. ಅದುವೇ ಯೋಗದ ಮುಖ್ಯ ಉದ್ದೇಶ. ಹಾಗೆ ನೋಡಿದರೆ, ಪ್ರತಿದಿನವೂ ಯೋಗದಿನವೇ ಆಗಬೇಕು.


ಪ್ರಾಣಾಯಾಮ ನಿತ್ಯದ ಕ್ರಮ

| ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ

ರಾಜ್ಯದ ಮುಖ್ಯಮಂತ್ರಿ ನಿತ್ಯವೂ ಪ್ರಾಣಾಯಾಮ ಮಾಡುತ್ತಾರೆ. ದಿನನಿತ್ಯದ ಕಾರ್ಯದ ಒತ್ತಡಗಳ ನಡುವೆಯೂ ಪ್ರಾಣಾಯಾಮವನ್ನು ತಪ್ಪಿಸುವುದಿಲ್ಲ. ಅನಾರೋಗ್ಯ ಎದುರಾದರೂ ಪ್ರಾಣಾಯಾಮ ನಿಲ್ಲಿಸಿಲ್ಲ. ‘ಯೋಗ ಎಂದರೆ ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗಾಯೋಗ ಎಂದು ಭಾವಿಸಿದ್ದು, ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವ ಹಿನ್ನೆಲೆಯಲ್ಲಿ ಯೋಗ ಮಾಡುತ್ತಾರೆ. ಯೋಗ ಮಾಡುವುದರಿಂದ ಹೆಚ್ಚು ಉಲ್ಲಸಿತನಾಗಿರುತ್ತೇನೆ. ಜನಜಂಗುಳಿಯ ಮಧ್ಯೆಯೂ ದಿನವಿಡೀ ತನ್ಮಯತೆ ಸಾಧಿಸಲು ಯೋಗ ನೆರವಾಗಿದೆ’ ಎನ್ನುತ್ತಾರೆ ಕುಮಾರಸ್ವಾಮಿ.

ಮುಖ್ಯಮಂತ್ರಿಗೆ ಫಿಟ್​ನೆಸ್ ಚಾಲೆಂಜ್

ಅನೇಕ ದಿನಗಳಿಂದ ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ‘ಹಮ್ ಫಿಟ್ ತೋ ಇಂಡಿಯಾ ಫಿಟ್’ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಆಹ್ವಾನಕ್ಕೆ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿದ ತೀಕ್ಷ್ಣ ಪ್ರತಿಕ್ರಿಯೆ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು.


ಮಂಡಿನೋವಿಗೆ ದೊರೆತ ಪರಿಹಾರ

| ಎಚ್.ಡಿ. ದೇವೇಗೌಡ ಮಾಜಿ ಪ್ರಧಾನಿ

ತೀವ್ರ ಮಂಡಿನೋವಿನಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಅದಕ್ಕೆ ಪರಿಹಾರ ಕಂಡುಕೊಂಡಿದ್ದು ಯೋಗದಿಂದ. ಏಳು ವರ್ಷಗಳಿಂದ ಶಿಸ್ತುಬದ್ಧವಾಗಿ ಯೋಗಾಭ್ಯಾಸ ಮಾಡುತ್ತಿರುವ ಅವರಿಗೆ ಮಂಡಿನೋವಿನಿಂದ ಮುಕ್ತಿ ಸಿಕ್ಕಿದೆ. ದೇವೇಗೌಡರು ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರುವ ಶ್ರೀ ಜಯಸರಸ್ವತಿ ಯೋಗಸಂಸ್ಥೆಯ ಯೋಗಗುರು ಕಾರ್ತಿಕ್ ಅವರಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ. ಗೌಡರು 78ನೇ ವಯಸ್ಸಿನಲ್ಲಿ ಯೋಗ ಕಲಿಸುವಂತೆ ಕೇಳಿದಾಗ ಕಾರ್ತಿಕ್ ಅವರಿಗೂ ಅಚ್ಚರಿ. ಆದರೆ ಸವಾಲಿನಂತೆ ತೆಗೆದುಕೊಂಡು ವಿವಿಧ ಆಸನಗಳನ್ನು ಹೇಳಿಕೊಟ್ಟಿದ್ದಾರೆ. ಗೌಡರಿಗೆ ಈಗ 85 ವರ್ಷ. ನಿತ್ಯ ಒಂದು ಗಂಟೆ ಅಭ್ಯಾಸ ಮಾಡುತ್ತಾರೆ. ‘ಆರಂಭದಲ್ಲಿ ಎರಡು ತಿಂಗಳ ಕಾಲ ವಿವಿಧ ವ್ಯಾಯಾಮಗಳನ್ನು ಮಾಡಿಸಲಾಯಿತು. ಆ ನಂತರ ಯೋಗಾಸನ ಪ್ರಾರಂಭಿಸಲಾಯಿತು. ಗೌಡರಿಗೆ ಸಾಕಷ್ಟು ರಾಜಕೀಯ ಒತ್ತಡ ಇದೆ. ಆದರೆ ಅವರೇನು ಯೋಗಾಸನ ಮಾಡುವುದನ್ನು ಬಿಟ್ಟಿಲ್ಲ. ಆದ್ದರಿಂದಲೇ ಅವರಿಗೆ ಒಳ್ಳೆಯ ಫಲಿತಾಂಶ ಸಿಕ್ಕಿದೆ’ ಎನ್ನುತ್ತಾರೆ ಕಾರ್ತಿಕ್. ‘ಗೌಡರು ಯೋಗ ಕಲಿಯಲು ಮುಂದಾದಾಗ ನಾನು ಅದನ್ನು ಸವಾಲಿನಂತೆ ತೆಗೆದುಕೊಂಡೆ. ಅವರು ಸಹ ಕಲಿಯಲೇಬೇಕು ಎಂಬ ಉತ್ಸಾಹ ತೋರಿಸಿದರು. ಗೌಡರಂತಹ ಹಿರಿಯರು ಯೋಗ ಕಲಿಯಲು ಮುಂದಾಗುವುದರಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನೆಯಾಗುತ್ತದೆ. ಗೌಡರ ಹುಮ್ಮಸ್ಸು ನನಗೆ ಇಷ್ಟ’ ಎಂದರು.

ಮಾನಸಿಕ ದೈಹಿಕ ನೆಮ್ಮದಿ ಹೆಚ್ಚಳ

| ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ

‘ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು. ಯೋಗದಿಂದ ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ನೆಮ್ಮದಿ ದೊರೆಯುತ್ತದೆ. ನಾನು ಪ್ರತಿನಿತ್ಯ ಯೋಗ ಮಾಡುತ್ತೇನೆ. ಪ್ರಾಣಾಯಾಮಗಳನ್ನು ದಿನಚರಿಯಂತೆ ಪಾಲಿಸುತ್ತೇನೆ. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗಿದೆ. ಮುಖ್ಯಮಂತ್ರಿ ಆಗುವ ಮುನ್ನ ಸಣ್ಣಪುಟ್ಟ ವ್ಯಾಯಾಮ ಮತ್ತು ವಾಕಿಂಗ್ ಮಾಡುತ್ತಿದ್ದೆ. 2004ರಿಂದ ಇದ್ದ ಸ್ಲೀಪ್ ಅಪ್ನಿಯಾ ಕಾಯಿಲೆ ಯೋಗ ಆರಂಭದ ನಂತರ ನಿಯಂತ್ರಣಕ್ಕೆ ಬಂದಿದೆ. ಕೆಲವು ಆಸನಗಳು ಹಾಗೂ ಪ್ರಾಣಾಯಾಮ ಮಾಡುತ್ತೇನೆ. ಪ್ರತಿನಿತ್ಯ ಬೆಳಗ್ಗೆ ವಾಕಿಂಗ್ ಜತೆಗೆ 30-40 ನಿಮಿಷ ಯೋಗ ಹಾಗೂ ಪ್ರಾಣಾಯಾಮಕ್ಕೆ ಮೀಸಲಿಟ್ಟಿದ್ದೆ. ಚುನಾವಣೆ ಕಾರಣ ಕೆಲವು ದಿನಗಳಿಂದ ಯೋಗ ಮಾಡಲು ಆಗಿಲ್ಲ. ಇದೀಗ ಧರ್ಮಸ್ಥಳದಲ್ಲಿ ಪ್ರಕೃತಿಚಿಕಿತ್ಸೆಗೆ ದಾಖಲಾಗಿದ್ದೇನೆ. ಮತ್ತೆ ಯೋಗ ಶುರು ಮಾಡುತ್ತೇನೆ. ಯುವಕರು ಯೋಗ ಮಾಡುವ ಮೂಲಕ ದೈಹಿಕ, ಮಾನಸಿಕ ದೃಢತೆ ಹೊಂದಬೇಕು.’

ನನ್ನ ಜೀವನದ ಬಹುಮುಖ್ಯ ಭಾಗ

| ಡಿ.ವಿ. ಸದಾನಂದಗೌಡ ಕೇಂದ್ರ ಅಂಕಿ-ಅಂಶ ಮತ್ತು ಯೋಜನಾ ಅನುಷ್ಠಾನ ಖಾತೆ ಸಚಿವ

‘ಯೋಗ ನನ್ನ ಜೀವನದ ಬಹುಮುಖ್ಯ ಭಾಗ. ಯೋಗದಿಂದ ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿ ದೊರೆತಿದೆ. ನಿತ್ಯ ನಾನು ಯೋಗಾಭ್ಯಾಸ ಮಾಡುತ್ತೇನೆ. ಇದರಿಂದ ನನಗೆ ಕೆಲಸದ ಒತ್ತಡ ಕಡಿಮೆ ಮಾಡಲು ಸಹಕಾರಿಯಾಗಿದೆ.

ನಾನು ಸೂರ್ಯನಮಸ್ಕಾರವನ್ನು ದೈನಂದಿನ ಚಟುವಟಿಕೆಯ ಭಾಗವಾಗಿ ಮಾಡಿಕೊಂಡಿದ್ದೇನೆ. ಅದರ ಜತೆಗೆ ಇತರೆ ಯೋಗಾಸನಗಳನ್ನೂ ಮಾಡುತ್ತೇನೆ. ಅನೇಕ ವರ್ಷಗಳಿಂದ ಯೋಗ ಮಾಡುತ್ತಿರುವುದರಿಂದ ಪ್ರತಿದಿನದ ಮನಸ್ಸನ್ನು ಘಾಸಿಗೊಳಿಸುವ ಕಾರ್ಯದ ಒತ್ತಡದ ನಡುವೆಯೂ ನಾನು ಖುಷಿಯಿಂದಿರಲು ಸಾಧ್ಯವಾಗಿದೆ. ‘ಯೋಗ ಬಲ್ಲವನಿಗೆ ರೋಗವಿಲ್ಲ’ ಎಂಬ ನಾಣ್ಣುಡಿಯಂತೆ ಯೋಗ ಮಾಡುವುದರಿಂದ ನನ್ನ ಆರೋಗ್ಯ ವೃದ್ಧಿಯಾಗಿದೆ. ಯೋಗ ನಮ್ಮ ಸಂಸ್ಕೃತಿ, ಪರಂಪರೆ, ಅನುಭವವನ್ನು ವಿಶ್ವಕ್ಕೆ ಪರಿಚಯಿಸಿದೆ. ಭಾರತೀಯ ಪರಂಪರೆಯ ಭಾಗವಾದ ಯೋಗವು ಪ್ರಧಾನಿ ನರೇಂದ್ರ ಮೋದಿಯವರಿಂದ ಇಡೀ ವಿಶ್ವಕ್ಕೆ ಪರಿಚಿತವಾಗಿದೆ. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸಗಳ ಒಂದು ಗುಂಪಾಗಿರುವ ಯೋಗವನ್ನು ನಿತ್ಯಕರ್ಮದಂತೆ ಮಾಡಬೇಕು. ಆರೋಗ್ಯವನ್ನು ಸ್ವಸ್ಥವಾಗಿಟ್ಟುಕೊಳ್ಳಲು ಯೋಗ ಅವಶ್ಯ. ರೋಗಗಳನ್ನು ದೂರವಿಡಲು ಪ್ರತಿಯೊಬ್ಬರೂ ಯೋಗ ಮಾಡಬೇಕು.’


ಧ್ಯಾನ ಮಾತ್ರ ಬಿಡುವುದಿಲ್ಲ

| ಬಿ.ಎಸ್. ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ

ಎಷ್ಟೇ ಕೆಲಸದ ಒತ್ತಡ ಇದ್ದರೂ ಮೆಡಿಟೇಷನ್, ಕೆಲವು ಆಸನಗಳು, ವಾಕಿಂಗ್ ಹಾಗೂ ವ್ಯಾಯಾಮ ಮಾತ್ರ ಬಿಡುವುದಿಲ್ಲ. ಕಳೆದ ಹಲವು ವರ್ಷಗಳಿಂದ ಇಷ್ಟನ್ನು ಬದುಕಿನ ಅಂಗವಾಗಿ ಮಾಡಿಕೊಂಡಿದ್ದೇನೆ. ಇದರಿಂದ ಒತ್ತಡ ನಿವಾರಣೆ ಹಾಗೂ ಮಾನಸಿಕ ಉಲ್ಲಾಸ ಸಾಧ್ಯವಾಗಿದೆ. ಪ್ರತಿನಿತ್ಯ ಬೆಳಗ್ಗೆ 15ರಿಂದ 20 ನಿಮಿಷಗಳ ಕಾಲ ಧ್ಯಾನ ಮಾಡುತ್ತೇನೆ. ಎಲ್ಲ ಜಂಜಾಟಗಳನ್ನು ಮರೆತು ಧ್ಯಾನದ ಮೊರೆ ಹೋಗುವುದರಿಂದ ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಆನಂತರ ಕೆಲವು ಸರಳ ಆಸನಗಳನ್ನು ಮಾಡುತ್ತೇನೆ. ಬಳಿಕ ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ವಾಕಿಂಗ್ ಮಾಡುತ್ತೇನೆ. ಇದು ನನ್ನ ಆರೋಗ್ಯದ ಗುಟ್ಟು ಸಹ. ಚುನಾವಣೆಯ ಸಂದರ್ಭದಲ್ಲಿ ಸಾಕಷ್ಟು ಒತ್ತಡ ಇದ್ದಾಗಲೂ ಮೆಡಿಟೇಷನ್ ಮಾತ್ರ ಬಿಡಲಿಲ್ಲ. ನನ್ನ ಆರೋಗ್ಯದ ಸಲುವಾಗಿ ಇಷ್ಟು ಸಮಯ ಮೀಸಲಿಟ್ಟು, ನಂತರ ಜನರ ಪರ ಕೆಲಸಗಳ ಕಡೆ ಗಮನ ಹರಿಸುತ್ತೇನೆ. ಇಡೀ ದಿನ ಅಷ್ಟೇ ಉಲ್ಲಾಸದಿಂದ ಇರುವುದಕ್ಕೂ ಇದೇ ಕಾರಣವಾಗಿದೆ. ಜನರ ಆರೋಗ್ಯ ಉತ್ತಮವಾಗಿರಬೇಕು ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಯೋಗಕ್ಕೆ ಮಹತ್ವ ನೀಡಿದ್ದಾರೆ.

ಉತ್ಸಾಹಭರಿತ ಜೀವನಕ್ಕೆ ಆಧಾರ

| ಅನಂತಕುಮಾರ್ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ

‘ಜಗತ್ತಿನಾದ್ಯಂತ ವಿವಿಧ ಸಮುದಾಯದ ಜನರಿದ್ದರೂ ಎಲ್ಲರ ದೇಹ ರಚನೆ ಒಂದೇ. ಅದೇ ರೀತಿ ಅವರಿಗೆ ಒದಗುವ ಅನಾರೋಗ್ಯಗಳಿಗೂ ಒಂದೇ ರೀತಿಯ ಪರಿಹಾರ ಸಿಗುವುದಿದ್ದರೆ ಅದು ಭಾರತದ ಮೂಲಕ ಯೋಗದಿಂದ. ನಮ್ಮ ತಂದೆಯವರು ಕುಸ್ತಿಪಟುವಾಗಿದ್ದರು. ನನಗೆ, ತಮ್ಮ, ತಂಗಿಗೂ ವ್ಯಾಯಾಮ, ಕುಸ್ತಿ ಅಭ್ಯಾಸ ಮಾಡಿಸುತ್ತಿದ್ದರು. ಅಲ್ಲಿಂದಲೇ ಆರೋಗ್ಯದ ಬಗ್ಗೆ ಕಾಳಜಿಗೆ ನಾಂದಿಯಾಯಿತು. ನಂತರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದಾಗ ಯೋಗಾಭ್ಯಾಸ ಹಾಗೂ ಆರೋಗ್ಯಕರ ಜೀವನ ಶೈಲಿಗೆ ಮತ್ತಷ್ಟು ಪುಷ್ಟಿ ಸಿಕ್ಕಿತು. ತುರ್ತಪರಿಸ್ಥಿತಿಯಲ್ಲಿ ಬಂಧಿಯಾಗಿದ್ದಾಗಿನಿಂದ, ಅಂದರೆ ಸರಿಸುಮಾರು 40 ವರ್ಷಗಳಿಂದ ನಿರಂತರ ಯೋಗಾಭ್ಯಾಸದಲ್ಲಿ ನಿರತನಾಗಿದ್ದೇನೆ. ನನ್ನ ಶ್ರೀಮತಿಯವರಾದ ತೇಜಸ್ವಿನಿಯವರು, ಇಬ್ಬರು ಪುತ್ರಿಯರು, ಅಳಿಯ, ತಮ್ಮ, ತಂಗಿ, ಅವರ ಮಕ್ಕಳು ಎಲ್ಲರೂ ಯೋಗಾಭ್ಯಾಸ ಮಾಡುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ, ನಮ್ಮ ಜತೆಯಲ್ಲೇ ಇರುವ ನಮ್ಮ ಅತ್ತೆಯವರು 79ರ ವಯೋಮಾನದಲ್ಲೂ ಯೋಗ, ಪ್ರಾಣಾಯಾಮ ತಪ್ಪಿಸುವುದಿಲ್ಲ. ಇಷ್ಟೂ ವರ್ಷಗಳಲ್ಲಿ ಸಾರ್ವಜನಿಕ ಜೀವನದಲ್ಲಿ ಅತ್ಯಂತ ಸಕ್ರಿಯವಾಗಿ ತೊಡಗಿಕೊಳ್ಳಲು ಯೋಗವೇ ಮೂಲಾಧಾರ.

ಬಿ.ಕೆ.ಎಸ್. ಅಯ್ಯಂಗಾರ್, ಅಜಿತಕುಮಾರ್, ಬಾಬಾ ರಾಮದೇವ್, ಶ್ರೀ ಶ್ರೀ ರವಿಶಂಕರ್ ಗುರೂಜಿ ಸೇರಿದಂತೆ ಅನೇಕರು ದಶಕಗಳಿಂದ ಪ್ರಚುರಗೊಳಿಸಿದ್ದ ಯೋಗಕ್ಕೆ ಪ್ರಧಾನಿಯವರು ಜಾಗತಿಕ ಮನ್ನಣೆ ದೊರಕಿಸಿದ್ದಾರೆ. ವಿಶ್ವದ ನೂರಾರು ದೇಶಗಳು ಯೋಗದಿನ ಆಚರಿಸುವಂತಹ ವಾತಾವರಣ ನಿರ್ಮಾಣ ಮಾಡಿದ ಮೋದಿಯವರು, ಪ್ರತಿನಿತ್ಯ ಯೋಗಾಭ್ಯಾಸ ಮಾಡುತ್ತ ಸ್ವತಃ ಮುಂದೆ ನಿಂತು ಎಲ್ಲರನ್ನೂ ಮುನ್ನಡೆಸುತ್ತಿದ್ದಾರೆ.’

ಉತ್ತಮ ಆರೋಗ್ಯಕ್ಕೆ ನಿತ್ಯದ ಅಗತ್ಯ

| ಡಾ. ದೇವಿಶೆಟ್ಟಿ ಹೃದ್ರೋಗತಜ್ಞ

ಯೋಗದಿಂದ ಹೃದಯಕ್ಕೆ ಬಹಳ ಅನುಕೂಲಗಳಿವೆ. ಶ್ವಾಸಕೋಶ ಮತ್ತು ಉಸಿರಾಟದ ತೊಂದರೆಯಿಂದ ಪಾರಾಗಬಹುದು. ಪ್ರತಿನಿತ್ಯ ಪ್ರಾಣಾಯಾಮ ಮಾಡುವುದರಿಂದ ಉಸಿರಾಟದ ಮೇಲೆ ನಿಯಂತ್ರಣ ಸಾಧಿಸಬಹುದು. ಮೊದಲೆಲ್ಲ 60 ವರ್ಷ ಮೇಲ್ಪಟ್ಟವರಿಗೆ ಹೃದಯಸಂಬಂಧಿ ಕಾಯಿಲೆ ಬರುತ್ತಿತ್ತು. ಇಂದು ಯುವಜನತೆಯಲ್ಲೇ ಕಾಣಿಸಿಕೊಳ್ಳುತ್ತಿದೆ. ಬದಲಾಗುತ್ತಿರುವ ಆಹಾರಪದ್ಧತಿ ಮತ್ತು ಜೀವನಶೈಲಿಯಲ್ಲಿ ಉತ್ತಮ ಆರೋಗ್ಯ ಕಂಡುಕೊಳ್ಳಬೇಕಾದಲ್ಲಿ ಪ್ರತಿನಿತ್ಯ ಯೋಗ ಮಾಡಬೇಕು. ನಾನೂ ರೋಗಿಗಳಿಗೆ ಇದನ್ನೇ ಹೇಳುತ್ತೇನೆ. ಬೆಳಗ್ಗೆ ಟ್ರೆಡ್​ವಿುಲ್​ನಲ್ಲಿ ಓಡಿದ ನಂತರ ಕೆಲವು ನಿಮಿಷಗಳ ಕಾಲ ಧ್ಯಾನ ಮಾಡುತ್ತೇನೆ. ಪ್ರತಿನಿತ್ಯ ಒಂದೊಂದು ಯೋಗಾಸನ ಮಾಡುತ್ತೇನೆ. ಇದರಿಂದ ಸಾಕಷ್ಟು ಲಾಭ ಪಡೆದಿದ್ದೇನೆ. ವೈದ್ಯರು ಔಷಧ ನೀಡುವುದರ ಜತೆಗೆ ಯೋಗ ಮಾಡಿದರೆ ಕಾಯಿಲೆಯಿಂದ ಮುಕ್ತರಾಗಬಹುದು. ಅಲ್ಲದೆ, ಕಾಯಿಲೆಗಳನ್ನು ದೀರ್ಘಕಾಲ ಮುಂದೂಡಬಹುದು.


ನೃತ್ಯಕ್ಕೂ ಅಂಟಿದ ನಂಟು

| ರಾಗಿಣಿ ಚಂದ್ರನ್ ನೃತ್ಯಗಾರ್ತಿ

ಯೋಗಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾರು ಬೇಕಾದರೂ ಮಾಡಬಹುದು. ನಾನು ಜಿಮ್ಲ್ಲಿ ವರ್ಕೌಟ್ ಮಾಡುವುದರ ಜತೆಗೆ ವಾರಕ್ಕೆ ಕನಿಷ್ಠ ಮೂರು ದಿನ ತಪ್ಪದೆ ಯೋಗ ಮಾಡುತ್ತೇನೆ. ಈಗ ಬದಲಾಗುತ್ತಿರುವ ಜೀವನಶೈಲಿ ಗಮನಿಸಿದರೆ ಪ್ರತಿದಿನ ಕನಿಷ್ಠ 15 ನಿಮಿಷವಾದರೂ ಎಲ್ಲರೂ ಯೋಗ ಮಾಡಬೇಕಿರುವುದು ಆವಶ್ಯಕ. ನಾನು ಮೂಲತಃ ಡಾನ್ಸರ್ ಆಗಿರುವುದರಿಂದ ಯೋಗದಿಂದಾಗಿ ನನ್ನ ಫ್ಲೆಕ್ಸಿಬಿಲಿಟಿ ಜಾಸ್ತಿ ಆಗುವುದರ ಜತೆಗೆ ಹಲವು ವಿಚಾರಗಳಲ್ಲಿ ಅನುಕೂಲವಾಗಿದೆ. ಉಸಿರಾಟದ ತಂತ್ರಗಳ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದೇನೆ. ಉದಾಹರಣೆಗೆ ಕಥಕ್ ನೃತ್ಯ ಮಾಡಬೇಕೆಂದರೆ ವೇದಿಕೆಯಲ್ಲಿ ಎರಡು ಗಂಟೆ ನಿರಂತರ ನರ್ತಿಸಬೇಕಾಗುತ್ತದೆ. ಅದಕ್ಕೆ ಅನುಕೂಲ ಆಗುವಂತೆ ಯೋಗದಲ್ಲಿ ಉಸಿರಾಟದ ಟೆಕ್ನಿಕ್​ಗಳನ್ನು ಹೇಳಿಕೊಡುತ್ತಾರೆ. ಪ್ರಜ್ವಲ್ ಮತ್ತು ನಾನು ಜತೆಯಾಗಿ ಪ್ರತಿದಿನ ಹತ್ತು ಬಾರಿ ಸೂರ್ಯ ನಮಸ್ಕಾರ ಮಾಡುತ್ತೇವೆ.

ಇಡೀ ದಿನ ಸಂತಸ

| ಅನಿತಾ ಭಟ್ ನಟಿ

ದೇಹ ಹಾಗೂ ಮನಸ್ಸು ಎರಡನ್ನೂ ಆರೋಗ್ಯಯುತವಾಗಿಟ್ಟುಕೊಳ್ಳುವಲ್ಲಿ ಯೋಗದ ಪಾತ್ರ ಬಹಳ ದೊಡ್ಡದಿದೆ. ನಾವು ಯೋಗ ಮಾಡಿದಾಗ ನಮ್ಮ ದೇಹದಲ್ಲಿ ಡೊಪಮೈನ್ ಎಂಬ ರಾಸಾಯನಿಕ ಉತ್ಪಾದನೆ ಆಗುತ್ತದೆ. ಈ ರಾಸಾಯನಿಕ ಉತ್ಪತ್ತಿ ಆದಾಗ ಮನುಷ್ಯ ಸಂತೋಷವಾಗಿರುತ್ತಾನೆ. ಹಾಗಾಗಿ ಬೆಳಗ್ಗೆ ಎದ್ದ ತಕ್ಷಣ ಯೋಗ ಮಾಡಿದರೆ ಇಡೀ ದಿನ ನಾವು ಆನಂದವಾಗಿರಬಹುದು. ಇನ್ನು ಯೋಗದ ಜತೆ ಧ್ಯಾನ ಮಾಡುವುದರಿಂದ ಜೀವನದಲ್ಲಿ ಎದುರಾಗುವ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ನಾವು ಧ್ಯಾನ ಮಾಡುವುದರಿಂದ ನಮ್ಮನ್ನೇ ನಾವು ಸಮಾಲೋಚಿಸಿಕೊಳ್ಳಲು ಸಹಕಾರಿಯಾಗುತ್ತದೆ. ನನ್ನ ಮೇಲೆ ಯೋಗದ ಪ್ರಭಾವ ಎಷ್ಟೆಂದರೆ ನಾನು ಯೋಗಕೇಂದ್ರವನ್ನು ಆರಂಭಿಸುತ್ತಿದ್ದೇನೆ. ಯೋಗದಿಂದ ದುಃಖವೂ ಕಡಿಮೆಯಾಗುತ್ತದೆ. ಜೀವನದಲ್ಲಿ ಒಂದು ಮಹತ್ತರ ಬದಲಾವಣೆ ತರುವ ನಿಟ್ಟಿನಲ್ಲಿ ಯೋಗ ಸಹಕಾರಿ.

ಯೋಗದ ಗುರು ಈಶ್ವರ

| ಸುಧಾರಾಣಿ ನಟಿ

ಯೋಗದ ಇತಿಹಾಸದ ಬಗ್ಗೆ ಹೇಳಲೇಬೇಕಾಗಿಲ್ಲ. ಯೋಗದ ಗುರು ಈಶ್ವರ. ದೇವಾನುದೇವತೆಗಳು ಯೋಗ ಮಾಡುತ್ತಿದ್ದರು ಎಂಬ ಪ್ರತೀತಿ ಇದೆ. ಇಂಥ ಯೋಗ ಮಾಡುವುದರಿಂದ ದೇಹಕ್ಕೆ ಮಾತ್ರವಲ್ಲ, ಮನಸ್ಸು, ಉಸಿರಾಟ ಹೀಗೆ ಎಲ್ಲವೂ ಹತೋಟಿಗೆ ಬರುತ್ತವೆ. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ ಕೂಡ. ಜಿಮ್ ಮಾಡಬೇಕು ಎಂದಾದರೆ ಜಿಮ್ೇ ಹೋಗಬೇಕು. ಅಲ್ಲಿ ವ್ಯಾಯಾಮ ಮಾಡಲು ಇಂಥದ್ದೇ ಶೂಗಳನ್ನು ಧರಿಸಬೇಕು ಎಂಬ ನಿಯಮ ಇರುತ್ತದೆ. ಆದರೆ ಯೋಗಾಸನ ಮಾಡಲು ಹಾಗೇನಿಲ್ಲ. ಅದಕ್ಕೆ ಒಬ್ಬ ಗುರು ಇದ್ದರೆ ಸಾಕು. ಇನ್ನು ಜಿಮ್ ಮಾಡಿದಾಗ ಕೆಲವು ಮಾಂಸಖಂಡಗಳಿಗೆ ವ್ಯಾಯಾಮ ಆಗುವುದೇ ಇಲ್ಲ. ಆದರೆ ಈ ಕೊರತೆಯನ್ನು ಯೋಗದ ಮೂಲಕ ನೀಗಿಸಿಕೊಳ್ಳಬಹುದು. ನಾನು ಚಿಕ್ಕ ವಯಸ್ಸಿನಿಂದ ಯೋಗ ಮಾಡುತ್ತ ಬಂದಿದ್ದೇನೆ. ಈಗಲೂ ಅಷ್ಟೇ, ಪ್ರತಿನಿತ್ಯ ತಪ್ಪದೆ ಯೋಗ ಮಾಡುತ್ತೇನೆ.


ಆರೋಗ್ಯದ ಜತೆ ಉದ್ಯೋಗ

| ಸಂಗೀತಾ ಭಟ್ ನಟಿ

ಕೆಲವೊಮ್ಮ ಸಾಕಷ್ಟು ಕೆಲಸ ಮಾಡಿ ಮಾನಸಿಕವಾಗಿ ಆಯಾಸಗೊಂಡಿರುತ್ತೇವೆ. ಅಂಥ ಸಂದರ್ಭದಲ್ಲಿ ರಿಫ್ರೆಷ್ ಆಗಲು ಯೋಗ ಸಹಾಯಕ. ಯಾವುದೋ ಸಮಸ್ಯೆಯಲ್ಲಿ ಸಿಲುಕಿಕೊಂಡು ಉಪಾಯವೇ ಇಲ್ಲದೆ ಆಲೋಚಿಸುತ್ತಿರುವಾಗಲೂ ಹತ್ತೇ ನಿಮಿಷ ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮ ಮಾಡಿ ಪರಿಹಾರ ಕಂಡುಕೊಳ್ಳಬಹುದು. ದೇಹದ ತೂಕ ಕಡಿಮೆ ಮಾಡಿಕೊಳ್ಳುವಲ್ಲಿ ನನಗೆ ಯೋಗ ಹೆಚ್ಚು ಸಹಾಯಕವಾಗಿದೆ. ನಾನು ಚಿಕ್ಕವಳಾಗಿದ್ದಾಗಲೇ ಅಪ್ಪ ಯೋಗದ ಬಗ್ಗೆ ತಿಳಿಹೇಳುತ್ತಿದ್ದರು. ಅದರ ಬೆಲೆ ಈಗ ಅರಿವಿಗೆ ಬಂದಿದೆ. ಎಲ್ಲೆಡೆ ಯೋಗದ ಬಗ್ಗೆ ಜಾಗೃತಿ ಮೂಡುತ್ತಿರುವುದರಿಂದ ಕಲಿಸುವವರಿಗೂ ಬೇಡಿಕೆ ಹೆಚ್ಚಿದೆ.

ಈವರೆಗೂ ಜಿಮ್​ಗೆ  ಕಾಲಿಟ್ಟಿಲ್ಲ

| ರಾಧಿಕಾ ಚೇತನ್ ನಟಿ

ಚಿಕ್ಕ ವಯಸ್ಸಿನಲ್ಲೇ ನಾನು ಯೋಗ ಕಲಿತೆ. ಯೋಗ ಥೆರಪಿಯಲ್ಲಿ ಡಿಪ್ಲೊಮಾ ಕೂಡ ಮಾಡಿದ್ದೇನೆ. ಒಂದು ದಿನ ಯೋಗ ಮಾಡಲಿಲ್ಲ ಎಂದರೆ ಏನೋ ಕಳೆದುಕೊಂಡಂತಾಗುತ್ತದೆ. ನಾನು ಈವರೆಗೂ ಜಿಮ್ಕ ಲಿಟ್ಟಿಲ್ಲ! ಸೂರ್ಯನಮಸ್ಕಾರ, ಸರ್ವಾಂಗಾಸನ ನನ್ನ ಫೇವರಿಟ್. ಒಬ್ಬ ಆರೋಗ್ಯವಂತ ವ್ಯಕ್ತಿ ಯೋಗ ಮಾಡಬಹುದು. ಆರೋಗ್ಯದ ಸಮಸ್ಯೆ ಇದ್ದವರೂ ಅದನ್ನು ಗುಣಪಡಿಸಿಕೊಳ್ಳಲು ಯೋಗ ಮಾಡಬಹುದು. ಇಂದಿನ ಜನತೆ ಒಂದಿಲ್ಲೊಂದು ಮಾನಸಿಕ ತೊಳಲಾಟದಿಂದ ಬಳಲುತ್ತಿದೆ. ಅದನ್ನೆಲ್ಲ ನಿಯಂತ್ರಣದಲ್ಲಿಡಲು ಯೋಗವೇ ಸೂಕ್ತ. ಎಲ್ಲ ವರ್ಗದವರ, ಎಲ್ಲ ಆರೋಗ್ಯ ಸಮಸ್ಯೆಗಳಿಗೂ ಇದರಲ್ಲಿ ಪರಿಹಾರವಿದೆ. ಶೂಟಿಂಗ್ ಇದ್ದಾಗಲೂ ನಾನು ಯೋಗಾಭ್ಯಾಸ ಮಿಸ್ ಮಾಡುವುದಿಲ್ಲ.

| ಶಿಲ್ಪಾ ಶೆಟ್ಟಿ ಬಾಲಿವುಡ್ ನಟಿ ಫಿಟ್​ನೆಸ್ ತಜ್ಞೆ

ಬಳುಕುವ ಬಳ್ಳಿಯಂಥ ಮೈಮಾಟಕ್ಕೆ ಹೆಸರುವಾಸಿಯಾದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಒಂದು ಮಗುವಿನ ತಾಯಿಯಾದ ಬಳಿಕವೂ ಫಿಟ್​ನೆಸ್ ಉಳಿಸಿಕೊಂಡಿದ್ದಾರೆ. ನಿಯತ ವ್ಯಾಯಾಮದ ಜತೆಗೆ ಯೋಗ ತಮ್ಮ ಆರೋಗ್ಯದ ಗುಟ್ಟು ಎಂದು ಹಲವು ಕಡೆ ಹೇಳಿಕೊಂಡಿದ್ದಾರೆ. ಕ್ವಿಕ್ ಫಿಕ್ಸ್ ಯೋಗ, ಟೋಟಲ್ ಬಾಡಿ ಯೋಗ ಹೆಸರಿನ ವಿವಿಧ ಭಂಗಿಯ ಯೋಗಾಸನಗಳ ಸಿಡಿಯನ್ನು ಶಿಲ್ಪಾ ಬಿಡುಗಡೆಗೊಳಿಸಿದ್ದಾರೆ. ‘ಡೇರಿ ಆಫ್ ಎ ಡೊಮೆಸ್ಟಿಕ್ ದಿವಾ’ ಎಂಬ ಪುಸ್ತಕವೊಂದನ್ನು ಶಿಲ್ಪಾ ಇತ್ತೀಚೆಗೆ ರಚಿಸಿದರು. ಈ ಪುಸ್ತಕದಲ್ಲಿ; ಆರೋಗ್ಯಕರ ಖಾದ್ಯಗಳು, ಕಡಿಮೆ ಕೊಬ್ಬು, ಹೆಚ್ಚು ನಾರಿನಂಶಗಳಿಂದ ಕೂಡಿದ ದಿನನಿತ್ಯ ಸೇವಿಸಬಲ್ಲ ರುಚಿಕರ ತಿನಿಸುಗಳ ಬಗ್ಗೆ ಮಾಹಿತಿ ನೀಡಿದ್ದಾರೆ.


ಉಲ್ಲಾಸಮಯ ಮನಸ್ಸಿಗೆ ಕಾರಣ

| ಗಣೇಶ್ ನಟ

‘ತುಂಬ ವರ್ಷಗಳಿಂದ ನಾನು ಯೋಗ ಮಾಡುತ್ತಿದ್ದೇನೆ. ಕೆಲಸದ ಒತ್ತಡದಲ್ಲಿ ಕೆಲವೊಮ್ಮೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಅದಕ್ಕೆಂದೇ ಸಮಯ ಮೀಸಲಿಟ್ಟಿದ್ದೇನೆ. ವಾರದಲ್ಲಿ ಕಡ್ಡಾಯವಾಗಿ ಯೋಗ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಮಿಸ್ ಮಾಡುವುದಿಲ್ಲ. ಇತ್ತೀಚೆಗೆ ಮಾರ್ಷಲ್ ಆರ್ಟ್ಸ್ ಕಲಿಕೆ ಆರಂಭಿಸಿದ್ದೇನೆ. ವರ್ಕ್​ಔಟ್ ಕೂಡ ಮಾಡುತ್ತೇನೆ. ಇದೆಲ್ಲ ಮಾಡಿದರೂ, ಯೋಗ ಮಾಡುವುದನ್ನು ಮರೆಯುವುದಿಲ್ಲ. ಯಾಕೆಂದರೆ, ಯೋಗ ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಇಡೀ ದಿನ ಉಲ್ಲಾಸದಿಂದ ಇರಬಹುದು. ನಾನು ಮತ್ತು ನನ್ನ ಜತೆ ಮಗಳು ಚಾರಿತ್ರ್ಯ ಯೋಗ ಮಾಡುತ್ತೇವೆ.


ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗ

| ಎಸ್.ಎಲ್. ಭೈರಪ್ಪ ಖ್ಯಾತ ಕಾದಂಬರಿಕಾರರು

ಯೋಗಾಭ್ಯಾಸವನ್ನು ಮಾಡುವುದು ಬಹಳಾ ಒಳ್ಳೆಯದು. ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಕಾರಿಯಾಗುತ್ತದೆ. ನಾನೂ ಸುಮಾರು ಇಪ್ಪತ್ತು ವರ್ಷಗಳ ಕಾಲ ಯೋಗಾಭ್ಯಾಸ ಮಾಡುತ್ತಿದ್ದೆ. ನಂತರ ನಿಲ್ಲಿಸಿದೆ. ಸತತವಾಗಿ ಯೋಗ ಮಾಡುವುದರಿಂದ ಮನಸ್ಸು ದಿನವಿಡೀ ಉಲ್ಲಾಸದಿಂದ ಇರುತ್ತದೆ ಹಾಗು ಬುದ್ಧಿಯೂ ಚುರುಕಾಗುತ್ತದೆ. ಇದು ನನ್ನ ಅನುಭವ. ಯುವಕರು ಯೋಗಾಭ್ಯಾಸವನ್ನು ರೂಢಿಮಾಡಿಕೊಳ್ಳಬೇಕು. ಅದರಿಂದ ಆರೋಗ್ಯವಂತರಾಗಿ, ದೃಢಕಾಯರಾಗಿರಬಹುದು.


 

Leave a Reply

Your email address will not be published. Required fields are marked *

Back To Top