ಥೈರಾಯ್ಡ್​ ಸಮಸ್ಯೆ ನಿವಾರಕ ಮುದ್ರೆಗಳು

ನನಗೆ ಮೂರು ವರ್ಷಗಳಿಂದ ಥೈರಾಯ್ಡ್​ ಸಮಸ್ಯೆ ಇದೆ. ನಿತ್ಯವೂ ಅಲೋಪತಿ ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ. ಈಗ 75 ಕೆ.ಜಿ. ಇದ್ದೇನೆ. ಈಜು, ನಡಿಗೆ ಒಂದು ಗಂಟೆ ಮಾಡಿದರೂ ತೂಕ ಕಡಿತಗೊಳಿಸಲು ಆಗುತ್ತಿಲ್ಲ. ಸೂಕ್ತ ಸಲಹೆ ನೀಡಿ.

| ನಾಗೇಂದ್ರ ವೈಕುಂಠಯ್ಯ 45 ವರ್ಷ.

ಒತ್ತಡ ಹಾಗೂ ಥೈರಾಯ್್ಡ ನಡುವೆ ಸಂಪರ್ಕವಿದೆ. ಕಡಿಮೆ ಹಾಮೋನುಗಳನ್ನು ಬಿಡುಗಡೆ ಮಾಡಿದರೆ ಹೈಪೋಥೈರಾಯ್್ಡ ಎಂದು ಕರೆಯಲಾಗುತ್ತದೆ. ದೇಹದ ತೂಕ ಹೆಚ್ಚಾಗುವುದೇ ಇದರ ಸಮಸ್ಯೆ. ಕೆಲವು ಯೋಗಾಸನಗಳು ಒತ್ತಡ ನಿಯಂತ್ರಿಸುತ್ತದೆ. ಥೈರಾಯ್್ಡ ಕ್ರಿಯೆಯನ್ನು ಸುಧಾರಿಸುವಲ್ಲಿ ಯೋಗದ ಧನತ್ಮಾಕ ಪರಿಣಾಮವನ್ನು ಪಡೆಯಬಹುದು. ಆದರೆ ಥೈರಾಯ್್ಡ ಅಸಮತೋಲನವನ್ನು ಪೂರ್ಣ ಗುಣಪಡಿಸಲು ಸಾಧ್ಯವಿಲ್ಲ. ಯೋಗವು ಪೂರಕ ಚಿಕಿತ್ಸೆಯಾಗಿದೆ. ಮನಸ್ಸಿನ ಒತ್ತಡ ನಿಯಂತ್ರಣಕ್ಕೆ ಹಾಗೂ ಶಾಂತಿಗೆ ಯೋಗ ತುಂಬಾ ಪ್ರಯೋಜನಕಾರಿ.

ಸೂಚಿತ ಆಸನ, ಮುದ್ರೆಗಳು: ಅರ್ಧಚಕ್ರಾಸನ, ಪರ್ಯಂಕಾಸನ, ಸೇತುಬಂಧ ಸರ್ವಾಂಗಾಸನ, ಹಲಾಸನ, ಭುಜಂಗಾಸನ. ಶಂಖಮುದ್ರೆಯನ್ನು 40 ನಿಮಿಷ ಅಭ್ಯಾಸ ನಡೆಸಿ. ಓಂ ನಮೋ ಭಗವತೇ ವಾಸುದೇವಾಯ ಎಂದು 108 ಬಾರಿ ಪಠಿಸಿ. ಚಿನ್ಮುದ್ರೆ, ಪ್ರಾಣಮುದ್ರೆ, ಹೃದಯಮುದ್ರೆ ತಲಾ ಹತ್ತು ನಿಮಿಷ ಅಭ್ಯಾಸ ಮಾಡಿ. ಯೋಗ, ಮುದ್ರೆಗಳನ್ನು ಗುರುಮುಖೇನವೇ ಕಲಿತರೆ ಒಳಿತು. ಹಸಿವೆ ಆದಾಗಲೇ ಆಹಾರ ಸೇವಿಸಿ. ತುಟಿ ಮುಚ್ಚಿ ಆಹಾರವನ್ನು ಬಾಯಿಯಲ್ಲಿ ಜಗಿದು ಸೇವಿಸಿ. ಚಿಂತೆ ಬಿಡಿ. ಖುಷಿಯಾಗಿರಿ. ಯೋಗದ ಆರಂಭದಲ್ಲಿ ಮಾಡುವ ನೆಕ್ ರೊಟೋಶನ್ ಥೈರಾಯ್್ಡ ಗ್ರಂಥಿಯ ಆರೋಗ್ಯವರ್ಧನೆಗೆ ಸಹಕಾರಿ.

ನನಗೆ ಡಯಾಬಿಟಿಕ್ ಮತ್ತು ಮೂತ್ರಕೋಶದ (ಬ್ಲಾಡರ್) ಸಮಸ್ಯೆ ಇದೆ. ಆಗಾಗ್ಗೆ ಸುಸ್ತು ಆಗುತ್ತದೆ. ಏನು ಮಾಡಲಿ?

| ಅಮರೇಶ ಪಾಟೀಲ ಕೊಪ್ಪಳ

ಯೋಗಭಂಗಿಗಳು ಮತ್ತು ಉಸಿರಾಟದ ವ್ಯಾಯಾಮಗಳು ಮಧುಮೇಹ ನಿಯಂತ್ರಣಕ್ಕೆ ಸಹಕಾರಿ. ಇವು ಮೇದೋಜೀರಕ ಗ್ರಂಥಿಗೆ ರಕ್ತದ ಹರಿವನ್ನು ಸುಧಾರಿಸುವ ಮೂಲಕ ಅಂಗಾಂಗಗಳನ್ನು ಸುಸ್ಥಿತಿಯಲ್ಲಿರಿಸುತ್ತವೆ. ದೇಹಕ್ಕೆ ಇನ್ಸುಲಿನ್ ಉತ್ಪಾದಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಸೂಚಿತ ಆಸನಗಳು, ಮುದ್ರೆಗಳು: ಪಾದಾಂಗುಷ್ಠಾಸನ, ಜಾನುಶೀರ್ಷಾಸನ, ಬ್ರಹ್ಮಮುದ್ರೆಯಲ್ಲಿ ಶಶಾಂಕಾಸನ, ಸರ್ವಾಂಗಾಸನ, ಯೋಗಮುದ್ರೆ, ಹಲಾಸನ, ಸುಪ್ತವಜ್ರಾಸನ, ಅರ್ಧಮತ್ಸ್ಯೇಂದ್ರಾಸನ, ಶಲಭಾಸನ, ಧನುರಾಸನ ಮತ್ತು ಶವಾಸನ ಮಾಡಿ. ಮೂತ್ರಕೋಶದ ಸುಸ್ಥಿತಿಗೆ ಪಾದಾಹಸ್ತಾಸನ, ಪಾರ್ಶ್ವಕೋನಾಸನ, ವೀರಭದ್ರಾಸನ, ಪರಿವೃತ್ತ ತ್ರಿಕೋನಾಸನ, ಬದ್ಧಕೋನಾಸನ, ಜಾನುಶೀರ್ಷಾಸನ, ಮಂಡೂಕಾಸನ, ಸೇತುಬಂಧ ಉತ್ಥಾನ ಪಾದಾಸನ ದಿನವೂ ಮಾಡಿ. ಧನುರಾಸನ, ಶಲಭಾಸನದ ನಂತರ ಶವಾಸನ ಮಾಡುವುದರಿಂದ ನಿಮ್ಮ ದೈಹಿಕ, ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ. ಇದನ್ನು ನೀವೇ ಅವಲೋಕಿಸಬಹುದು. ದಿನಕ್ಕೆ ಮೂರು ಬಾರಿ ನಾಡೀಶುದ್ಧಿ ಪ್ರಾಣಾಯಾಮ, ಕಪಾಲಭಾತಿ ಕ್ರಿಯೆ, ಅಗ್ನಿಸಾರ ಕ್ರಿಯೆ, ಉಡ್ಡಿಯಾನಬಂಧ ಸಹಕಾರಿ. ಮಧುಮೇಹದ ಹತೋಟಿಗೆ ಅಪಾನಮುದ್ರೆಯನ್ನು 40 ನಿಮಿಷ, ಹೃದಯ ಮುದ್ರೆ, ಚಿನ್ಮುದ್ರೆ, ಪ್ರಾಣಮುದ್ರೆ ಅಭ್ಯಾಸದಿಂದ ಚೈತನ್ಯ ಹೆಚ್ಚುತ್ತದೆ. ನರದೌರ್ಬಲ್ಯ, ಆಯಾಸವನ್ನು ಪರಿಹರಿಸಿ ಶರೀರದಲ್ಲಿ ಲವಲವಿಕೆ ತುಂಬುತ್ತದೆ.