ಧ್ಯಾನದಿಂದ ಉತ್ತಮ ಆರೋಗ್ಯ

| ಗೋಪಾಲಕೃಷ್ಣ ದೇಲಂಪಾಡಿ

ನನ್ನ ಎಂಟು ವರ್ಷದ ಮಗನಿಗೆ ಉಗ್ಗುವಿಕೆ ಸಮಸ್ಯೆ ಇದೆ. ವಾಕ್​ಶ್ರವಣ ತಜ್ಞರ ಬಳಿ ತೋರಿಸಿದ್ದೇವೆ. ಒಂದು ವರ್ಷವಾದರೂ ಸಮಸ್ಯೆ ಬಗೆಹರಿದಿಲ್ಲ. ಪರಿಹಾರ ಸೂಚಿಸಿ.

| ಸುಷ್ಮಾ ಚಾಮರಾಜನಗರ

ಉಗ್ಗುವಿಕೆ ಸಮಸ್ಯೆಯ ನಿಯಂತ್ರಣಕ್ಕೆ ಕೆಲವು ಆಸನಗಳು ಸಹಕಾರಿ. ಅರ್ಧಚಕ್ರಾಸನ, ಪಾದಹಸ್ತಾಸನ, ಶಶಾಂಕಾಸನ, ಉಷ್ಟ್ರಾಸನ, ಸಿಂಹಾಸನ, ಸರ್ವಾಂಗಾಸನ, ಮತ್ಸಾ್ಯಸನ, ಭುಜಂಗಾಸನ, ಧನುರಾಸನ, ಶವಾಸನ. ಹತ್ತು ನಿಮಿಷಗಳ ಧ್ಯಾನದ ಅಭ್ಯಾಸ ನಡೆಸಲು ಮಗನನ್ನು ತರಬೇತುಗೊಳಿಸಿ. ನೀವು ಕಲಿತು ಮಗನಿಗೂ ಅಭ್ಯಾಸಕ್ಕೆ ಪ್ರೇರೇಪಿಸಿ.

ಗಂಟಲು, ಸ್ವರಸಂಬಂಧಿ ಸಮಸ್ಯೆಗಳ ನಿಯಂತ್ರಣಕ್ಕೆ ಶಂಖಮುದ್ರೆ ಸಹಕಾರಿ. ಪ್ರಾಣಾಯಾಮಗಳಲ್ಲಿ ಭ್ರಮರಿ, ಉಜ್ಜಾಯೀ ಶೀತಲಿ ಸಹಕಾರಿ. ವಿಶೇಷವಾಗಿ ಮಂತ್ರಮುದ್ರೆಗಳು ಈ ಸಮಸ್ಯೆಯ ತಡೆಗೆ ಸಹಕಾರಿ. ಮಂತ್ರಮುದ್ರೆಗಳಲ್ಲಿ ಮಂತ್ರ ಪಠಿಸಿದಾಗ ಸೌಂಡ್ ಥೆರಪಿಯಾಗಿ ಬಲು ಬೇಗನೆ ಪರಿಹಾರ ಕಂಡುಕೊಳ್ಳಬಹುದು.

ನಿತ್ಯ ಬೆಳಗ್ಗೆ ಚಿನ್ಮುದ್ರೆಯಲ್ಲಿ ಇಪ್ಪತ್ತೊಂದು ಬಾರಿ ಓಂಕಾರ ಪಠಣ ಮಾಡಲಿ. ಚಿನ್ಮುದ್ರೆಯಲ್ಲಿ 108 ಬಾರಿ ‘ಓಂ ನಮೋ ನಾರಾಯಣಾಯ’ ಎಂದು; ಶಂಖಮುದ್ರೆಯಲ್ಲಿ 108 ಬಾರಿ ‘ಓಂ ನಮೋ ಭಗವತೇ ವಾಸುದೇವಾಯ’ ಎಂದು ಪಠಿಸಲು ಮಗನಿಗೆ ತಿಳಿಸಿ.

ಎರಡು ತಿಂಗಳಿಂದ ನಡೆದಾಡುವಾಗ ದೇಹ ವಾಲುತ್ತದೆ. ಆದರೆ ತಲೆ ಸುತ್ತುವುದಿಲ್ಲ. ಯಾವ ಆಸನ, ಮುದ್ರೆಗಳು ಸೂಕ್ತ?

| ನೇಹಾ ಮೋಂತಿಮಾರು

ನೀವು ತಿಳಿಸಿದಂತೆ ನಡೆದಾಡುವಾಗ ವಾಲುವ ನಿಯಂತ್ರಣಕ್ಕೆ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಧ್ಯಾನ, ನಾಡೀಶುದ್ಧಿ ಪ್ರಾಣಾಯಾಮ ಅಭ್ಯಾಸ ಮಾಡಿ. ಆಗ ಮನಸ್ಸಿಗೆ ಆಳ ವಿಶ್ರಾಂತಿ ದೊರೆತು ವಾಲುವ ಸಮಸ್ಯೆಯ ನಿಯಂತ್ರಣ ಸಾಧ್ಯ.

ಸೂಚಿತ ಆಸನಗಳು: ಪರ್ವತಾಸನ, ವಜ್ರಾಸನ, ಶಶಾಂಕಾಸನ, ಮಾರ್ಜಾಲಾಸಾನ, ಮಕರಾಸನ, ಅಧೋಮುಖ ಶ್ವಾನಾಸನಗಳ ಅಭ್ಯಾಸ ನಡೆಸಿ. ದಿನಕ್ಕೆ ಮೂರು ಬಾರಿ ಶವಾಸನವನ್ನು ಮಾಡಿ. ಮನಸ್ಸಿನ ಆಳ ವಿಶ್ರಾಂತಿ ಮತ್ತು ನೆಮ್ಮದಿಗೆ ಸರಳ ಧ್ಯಾನದ ಅಭ್ಯಾಸ ಮಾಡಿ. ನಿಯತವಾಗಿ ಧ್ಯಾನದ ಅಭ್ಯಾಸ ಮಾಡಿದಾಗ ದೈಹಿಕ, ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ.

ಮುದ್ರೆಗಳು: ಪ್ರಾಣಮುದ್ರೆ, ಚಿನ್ಮುದ್ರೆ, ಶೂನ್ಯ ಮುದ್ರೆ, ಆಕಾಶಮುದ್ರೆ.

ಧ್ಯಾನದ ವಿಧಾನ: ಜಮಖಾನದ ಮೇಲೆ ಸುಖಾಸನ ಅಥವಾ ಸಿದ್ದಾಸನದಲ್ಲಿ ಕುಳಿತುಕೊಳ್ಳಿ. ಬೆನ್ನು, ಕುತ್ತಿಗೆ, ತಲೆ ನೆಲಕ್ಕೆ ಲಂಬವಾಗಿರಲಿ. ದೇಹ ಸಡಿಲವಾಗಿರಲಿ. ಮುಖದಲ್ಲಿ ಪ್ರಸನ್ನತೆ ಇರಲಿ. ಕಣ್ಣು ಮೃದುವಾಗಿ ಮುಚ್ಚಿರಲಿ. ಎಡಗೈ ಮೇಲೆ ಬಲಗೈಯನ್ನು ಇರಿಸಿ ಧ್ಯಾನಮುದ್ರೆ ಮಾಡಿ. ಈ ಸ್ಥಿತಿಯಲ್ಲಿ ಶ್ವಾಸೋಚ್ಛಾಸವನ್ನು ಗಮನಿಸುತ್ತ ಐದರಿಂದ ಹತ್ತು ನಿಮಿಷ ಕಾಲ ಧ್ಯಾನಸ್ಥಿತಿಯಲ್ಲಿರಿ. ನಂತರ ವಿಶ್ರಮಿಸಿ. ನಿರಂತರ ಯೋಗ-ಧ್ಯಾನ-ಪ್ರಾಣಾಯಾಮಗಳಿಂದ ಆರೋಗ್ಯ ಉತ್ತಮಗೊಳ್ಳಲು ಸಾಧ್ಯ.

ನೀವೂ ಪ್ರಶ್ನೆ ಕೇಳಿ

ಯೋಗದ ಮೂಲಕ ಹಲವು ರೋಗಗಳಿಗೆ ಪರಿಹಾರವಿದೆ. ಅನೇಕರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಯೋಗ ಅಂಕಣಕಾರರು ಉತ್ತರ ನೀಡಲಿದ್ದಾರೆ. ಆಸಕ್ತರು ವಯಸ್ಸು, ಸಮಸ್ಯೆ, ಅದರ ತೀವ್ರತೆ, ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧೋಪಚಾರ ಇತ್ಯಾದಿಗಳನ್ನು ಸಂಕ್ಷಿಪ್ತವಾಗಿ ಬರೆದು ಕಳಿಸಬಹುದು. ಆದ್ಯತೆ ಮೇರೆಗೆ ನಮ್ಮ ಯೋಗ ಅಂಕಣಕಾರರು ಸಲಹೆ, ಸೂಚನೆ ನೀಡಲಿದ್ದಾರೆ.

ವಿಳಾಸ: ಸಂಪಾದಕರು, ಯೋಗಕ್ಷೇಮ ಪ್ರಶ್ನೋತ್ತರ ವಿಭಾಗ, ವಿಜಯವಾಣಿ, ನಂ. 24, ಸಾಯಿರಾಂ ಟವರ್ಸ್, ಮೊದಲ ಮಹಡಿ, ಐದನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18. ಇಮೇಲ್: [email protected]