- ಸೂರ್ಯನಮಸ್ಕಾರ ಮಾಡುವುದರಿಂದ ದೊರಕುವ ಪ್ರಯೋಜನಗಳನ್ನು ತಿಳಿಸಿ.
| ಬಿಂದು ಪ್ರಸಾದ್ ಯಾದಗಿರಿ
ಸೂರ್ಯನಮಸ್ಕಾರ ಒಂದು ಸರಳ ಸುಲಭ ಹಾಗೂ ಪರಿಣಾಮಕಾರಿ ವ್ಯಾಯಾಮ. ಇದನ್ನು ಅಶಕ್ತರು,ಅನಾರೋಗ್ಯಪೀಡಿತರು ಕೂಡ ಯಥಾನುಶಕ್ತಿ ಮಾಡಬಹುದು. ರೋಗ ಮುಕ್ತಿಗೆ ಸೂರ್ಯನಮಸ್ಕಾರ ತಾರಕ. ರಕ್ತದೊತ್ತಡ, ಹೃದಯದ ತೊಂದರೆ, ತಲೆಸುತ್ತು, ಮೂರ್ಛೆರೋಗ, ಸಂಧಿವಾತ ಮೊದಲಾದ ಗುರುತರ ತೊಂದರೆಯಿಂದ ಬಳಲುತ್ತಿರುವವರು ನುರಿತ ಶಿಕ್ಷಕರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಬಹುದು. ಸ್ತ್ರೀಯರು ಮುಟ್ಟಾದ ಸಂದರ್ಭ, ಗರ್ಭ ಧರಿಸಿದ ವೇಳೆ ಇದನ್ನು ಮಾಡಬಾರದು.
ಮೂರು ತಿಂಗಳ ನಂತರ ಬಾಣಂತಿಯರು ನಿರ್ಭಯವಾಗಿ ಸೂರ್ಯನಮಸ್ಕಾರದ ಅಭ್ಯಾಸಕ್ಕೆ ತೊಡಗಬಹುದು (ಸಿಸೇರಿಯನ್ ಆಗಿದ್ದರೆ ಆರು ತಿಂಗಳ ನಂತರ) ಮುಂಜಾನೆ ಅಥವಾ ಸಂಜೆ ಅಭ್ಯಾಸ ಮಾಡುವುದರಿಂದ ಉದಯ ಸೂರ್ಯನ ಎಳೆಯ ಕಿರಣಗಳು ಶರೀರವನ್ನು ರ್ಸ³ಸುವುದರಿಂದ ಸೂರ್ಯಸ್ನಾನದ ಲಾಭ ದೊರೆಯುತ್ತದೆ.
ಶರೀರಕ್ಕೆ ಚೈತನ್ಯ ಲಭ್ಯವಾಗಿ ಆರೋಗ್ಯ ಸುಧಾರಣೆಯೂ ಆಗುತ್ತದೆ. ಜಡತ್ವ ದೂರವಾಗಿ ಲವಲವಿಕೆ ಉಂಟಾಗುತ್ತದೆ. ಹಾಗಾಗಿ ಸೂರ್ಯನಮಸ್ಕಾರವನ್ನು ಉಪಾಸನಾ ವ್ಯಾಯಾಮ ಎನ್ನುತ್ತಾರೆ. ಸರ್ವರೋಗ ನಿವಾರಣೆಯಾಗಿ ಅಕಾಲ ಮೃತ್ಯುವಿನಿಂದ ನಾವು ಪಾರಾಗಲು ಇದು ಅತ್ಯಂತ ಸರಳ ಸುಲಭ ಮತ್ತು ಕೆಲವೇ ಸಮಯದಲ್ಲಿ ಮಾಡಬಹುದಾದ ವ್ಯಾಯಾಮ. ಸೂರ್ಯನಮಸ್ಕಾರದಲ್ಲಿ ಶರೀರದ ಪೋಷಣೆ, ರಕ್ಷಣೆ, ಬೆಳವಣಿಗೆಗೆ ಬೇಕಾದ ಎಲ್ಲ ಅಂಶಗಳು ಶರೀರದ ಎಲ್ಲ ಸ್ನಾಯುಸಮೂಹಗಳಿಗೂ ಚಲನೆ ಅಡಕವಾಗಿವೆ.
- ವಜ್ರಾಸನದಿಂದ ಆಗುವ ಲಾಭಗಳು ಏನು? ಅದನ್ನು ಕ್ರಮಬದ್ಧವಾಗಿ ಮಾಡುವ ವಿಧಾನವನ್ನು ವಿವರಿಸಿ.
| ಮೈಲಾರಪ್ಪ ಹೊಸಮನಿ ಹರಪನಹಳ್ಳಿ
ವಜ್ರಾಸನದಿಂದ ಮಂಡಿಯ ಬಿಗಿತ ಶಮನ. ಮಂಡಿಗಳಲ್ಲಿನ ಬಿಗಿತ ಕಡಿಮೆಯಾದರೆ ರಕ್ತಸಂಚಾರ ಸುಗಮವಾಗುತ್ತದೆ. ಸಹಜವಾಗಿ ಆ ಸ್ಥಳದಲ್ಲಿ ನೋವು ಕಡಿಮೆಯಾಗುತ್ತದೆ. ಆರ್ಥರೈಟಿಸ್ನಿಂದ ಮುಕ್ತಿ ಪಡೆಯಲು ಇದೂ ಒಂದು ಆಸನ.
ಮಾಡುವ ಕ್ರಮ: ಒಂದು ಯೋಗ ಮ್ಯಾಟನ್ನು ಹಾಸಿ ಒಂದು ಜಮಖಾನವನ್ನು ಚಿತ್ರದಲ್ಲಿರುವಂತೆ ಮಡಚಿ ಇಟ್ಟುಕೊಳ್ಳಿ. ಮಣಿಕಟ್ಟುಗಳು ಜಮಖಾನದ ಮೇಲೆ ಬರುವಂತೆ ಇರಿಸಿ ಕಾಲುಗಳನ್ನು ಹಿಂದಕ್ಕೆ ಹಾಕಿ ಅರ್ಧ ಕುಳಿತುಕೊಳ್ಳಿ. ಒಂದು ದಿಂಬನ್ನು ತೊಡೆ ಮತ್ತು ಮೀನಖಂಡಗಳ ನಡುವೆ ಇಟ್ಟು ದಿಂಬಿನ ಮೇಲೆ ಪೂರ್ಣವಾಗಿ ಕುಳಿತುಕೊಳ್ಳಿ. ಪೃಷ್ಠಭಾಗವನ್ನು ದಿಂಬಿಗೆ ಒತ್ತಿ ಬೆನ್ನನ್ನು ನೇರಗೊಳಿಸಿ. 3ರಿಂದ 5 ನಿಮಿಷಗಳ ಕಾಲ ಸ್ಥಿತಿಯಲ್ಲಿರಿ. ನಂತರ ನಿಧಾನವಾಗಿ ಎದ್ದು ನಿಂತುಕೊಳ್ಳಿ.
ಈ ಆಸನದಿಂದ ದೊರಕುವ ಪ್ರಯೋಜನಗಳು ಅನೇಕ. ದಿಂಬು ಮತ್ತು ಜಮಖಾನದ ಸಹಾಯದಿಂದ ಮಾಡುವ ಈ ಆಸನದಿಂದ ಮಂಡಿಗಳು ನಿಧಾನವಾಗಿ ಮಡಚಲು ಸುಲಭವಾಗುತ್ತದೆ. ರಕ್ತಚಲನೆ ಸುಗಮವಾಗಿ ನಡೆಯುತ್ತದೆ. ಮಂಡಿಗಳಲ್ಲಿನ ಬಿಗಿತ ಕಡಿಮೆಯಾಗುತ್ತದೆ. ಆರ್ಥರೈಟಿಸ್ ನಿವಾರಣೆಗೆ ಇದೊಂದು ಉತ್ತಮ ಆಸನ.