ಪ್ರಾಣಾಯಾಮ ಮಾಡುವವರು ಯಾವ ಆಸನದಲ್ಲಿ (ಭಂಗಿಯಲ್ಲಿ) ಕುಳಿತುಕೊಳ್ಳಬೇಕು ಎನ್ನುವುದು ಬಹು ಮುಖ್ಯ. ಆಸನಗಳನ್ನು ಮಾಡುವವನು ತನಗೆ ಸೂಕ್ತವೆನಿಸಿದ ಅಥವಾ ಯೋಗಾಸನಪಟು ತನಗೆ ಸಲಹೆ ನೀಡಿರುವ ಆಸನಗಳನ್ನು ಮಾಡಿದ ಮೇಲೆ ಪ್ರಾಣಾಯಾಮವನ್ನು ಮಾಡಬಹುದು. ಆಸನಗಳನ್ನು ಮಾಡಿದ ಮೇಲೆ ದೇಹಕ್ಕೆ ಒಂದು ಸಿದ್ಧತೆಯ ಸ್ಥಿತಿ ಪ್ರಾಪ್ತವಾಗುತ್ತದೆ. ಆಸನಗಳ ಅಭ್ಯಾಸದ ಬಳಿಕ ಪ್ರಾಣಾಯಾಮ ಮಾಡುವ ಮೊದಲು ಸ್ವಲ್ಪ ಹೊತ್ತು ವಿರಾಮ ಅಗತ್ಯವೆಂಬುದನ್ನು ಸಾಧಕ ಲಕ್ಷ್ಯಲ್ಲಿರಿಸಿಕೊಳ್ಳಬೇಕು.
ಪ್ರಾಣಾಯಾಮದ ಅಭ್ಯಾಸಿಯು ವಿವಿಧ ಆಸನಗಳ ಅಭ್ಯಾಸಕ್ಕೆ ಮೊದಲು ಕೂಡ ಪ್ರಾಣಾಯಾಮ ಮಾಡಬಹುದೆಂಬ ಅಭಿಪ್ರಾಯವೂ ಇದೆ. ಆದರೆ ಯೋಗಾಸನಗಳನ್ನು ನಿತ್ಯವೂ ಮಾಡುವವರು ಬೆಳಗ್ಗೆ ಯೋಗಾಸನ ಮಾಡಿದ್ದರೆ, ಸಂಜೆಯ ವೇಳೆಯನ್ನು ಪ್ರಾಣಾಯಾಮಕ್ಕೆ ಮೀಸಲಿಡಬಹುದೆಂಬ ಕಿವಿಮಾತನ್ನೂ ಕೆಲವು ಯೋಗಾಸನ ಗುರುಗಳು ನೀಡುತ್ತಾರೆ.
ಪ್ರಾಣಾಯಾಮಕ್ಕೆ ಕುಳಿತುಕೊಳ್ಳುವವರು ಸ್ವಸ್ತಿಕಾಸನ, ಭದ್ರಾಸನ, ವೀರಾಸನ, ಬದ್ಧಕೋಣಾಸನ, ಪದ್ಮಾಸನ ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಬಹುದು. ಬೆನ್ನುಮೂಳೆ, ಕತ್ತು ಮತ್ತು ತಲೆಯನ್ನು ನೇರವಾಗಿ ಇರಿಸಿಕೊಳ್ಳುವುದು ಬಹಳ ಮುಖ್ಯವೆಂಬುದನ್ನು ಸಾಧಕ ಮರೆಯಕೂಡದು. ಈ ಆಸನವೂ ಅನುಕೂಲಕರವಲ್ಲ ಎನಿಸಿದ್ದರೆ ಸುಖಾಸನದಲ್ಲಿ ಕುಳಿತು ಅಭ್ಯಾಸ ಮಾಡಬಹುದು.
ಸ್ವಸ್ತಿಕಾಸನ: ಎರಡೂ ಕೈಗಳನ್ನು ಎರಡೂ ತೊಡೆಗಳ ಕೆಳಗಿರಿಸಿ ಶರೀರವನ್ನು ನೇರಗೊಳಿಸಿ ಪ್ರಶಾಂತವಾಗಿ ಕುಳಿತುಕೊಳ್ಳುವ ಭಂಗಿಗೆ ಸ್ವಸ್ತಿಕಾಸನ ಎನ್ನುವರು (ಜಾನೂವೋನ್ತರೇ ಸಮ್ಯಕ್ ಕೃತ್ವಾ ಪಾದತಲೇ ಉಭೇ | ಋಜುಕಾಯಃ ಸಮಾಸೀನಃ ಸ್ವಸ್ತಿಕಂ ತತ್ ಪ್ರಚಕ್ಷತೇ ||). ನೆಲದ ಮೇಲೆ ಚಾಪೆ ಅಥವಾ ಕಂಬಳಿ ಹಾಸಿ ಕುಳಿತುಕೊಳ್ಳಿ. ಬಲಪಾದವನ್ನು ಎಡತೊಡೆಯ ಬುಡದಲ್ಲಿ ಇಡಿ. ಎಡಪಾದವನ್ನು ಬಲತೊಡೆಯ ಬುಡದಲ್ಲಿ ಇಡಿ. ನೆಟ್ಟಗೆ ಕುಳಿತುಕೊಳ್ಳಿ. ಕೈಗಳನ್ನು ನೇರವಾಗಿ ಎರಡೂ ಮಂಡಿಗಳ ಮೇಲೆ ಇರಿಸಿ, ಬೆರಳುಗಳನ್ನು ಚಿನ್ಮುದ್ರೆಯಲ್ಲಿ ಇರಿಸಿಕೊಳ್ಳಿ. ಬೆನ್ನುಹುರಿಯನ್ನು ನೆಟ್ಟಗೆ ಇರಿಸಿಕೊಂಡು ಹತ್ತು ಬಾರಿ ಉಸಿರಾಡಿ.
ಲಾಭಗಳು: ಈ ಆಸನ ಬೆನ್ನನ್ನು ಸಹಜವಾಗಿ, ನೇರವಾಗಿ ಇರಿಸಿಕೊಳ್ಳಲು ತುಂಬಾ ಸಹಾಯಕ. ಪ್ರಾಣಾಯಾಮಕ್ಕೆ ಸೂಕ್ತವಾದ ಆಸನ ಇದು. ಪ್ರಾಣಾಯಾಮ-ಧ್ಯಾನಕ್ಕೆ ಪೂರಕ ಆಸನಗಳಾದ ಪದ್ಮಾಸನ, ಸಿದ್ಧಾಸನದಂತಹ ಶಾಸ್ತ್ರೀಯ ಆಸನಗಳನ್ನು ಮಾಡಲಾಗದವರು ಇದನ್ನು ಅಳವಡಿಸಿಕೊಳ್ಳಬಹುದು. ಶರೀರದ ಕೆಳಭಾಗದ ಸ್ನಾಯುಗಳ ಹಿಗ್ಗುವಿಕೆ ಸಹಕಾರಿ. ಮಂಡಿಯ ಹಿಂಭಾಗದ ಸ್ನಾಯುರಜ್ಜು ಹಾಗೂ ನಿತಂಬದ ಸ್ನಾಯುಗಳು ಬಲಗೊಳ್ಳುವುವು.
ವಿಶೇಷವಾಗಿ ಕ್ರೀಡಾಪಟುಗಳಿಗೆ ಲಾಭದಾಯಕ. ಬೆನ್ನುಮೂಳೆಯ ಹಿತವಾದ ಸೆಳೆತದಿಂದ ಅದರ ಕ್ರಮಬದ್ಧ ಜೋಡಣೆ ಹಾಗೂ ಬಲ ಪಡೆಯಲು ಅನುಕೂಲ. ಜನನಾಂಗಗಳ ಕಾರ್ಯಕ್ಷಮತೆ ಹಾಗೂ ಲೈಂಗಿಕ ಆರೋಗ್ಯ ಗುಣಸಂವರ್ಧನೆಗೆ ತಕ್ಕ ಆಸನ. ಮನಸ್ಸಿನ ಶಾಂತತೆ ಹಾಗೂ ಪ್ರಸನ್ನತೆಗೆ ಅತ್ಯಂತ ಪ್ರಶಸ್ತ ಆಸನ. ಕೆಳಬೆನ್ನಿನ ಸ್ನಾಯು ಸೆಳೆತದಿಂದ ಮುಕ್ತಿ ಪಡೆಯಬಹುದು. ಜೀರ್ಣಕ್ರಿಯೆ ಸುಗಮವಾಗುತ್ತದೆ.