ಜೀರ್ಣವ್ಯವಸ್ಥೆ ಸರಿಪಡಿಸುವ ಯೋಗ

ನನಗೆ ಮಲಬದ್ಧತೆಯ ಸಮಸ್ಯೆ ಇದೆ. ಪರಿಹಾರ ತಿಳಿಸಿ.

| ಅನು ಶಿವಮೊಗ್ಗ

ಮಲಬದ್ಧತೆ ಎನ್ನುವುದು ಜೀರ್ಣಾಂಗ ವ್ಯವಸ್ಥೆಯ ಒಂದು ಸ್ಥಿತಿ. ಸೇವಿಸಿದ ಆಹಾರ ನಿಧಾನವಾಗಿ ಜೀರ್ಣಾಂಗಗಳ ಮೂಲಕ ಚಲಿಸುತ್ತದೆ. ಹೆಚ್ಚಿನ ಸಂದರ್ಭ ಕರುಳಿನಲ್ಲಿರುವ ಆಹಾರದಿಂದ ಹೆಚ್ಚು ನೀರು ಹೀರಲ್ಪಟ್ಟಿರುವುದರಿಂದ ಸಮಸ್ಯೆ ಕಂಡುಬರುತ್ತದೆ. ಆಗ ಮಲವು ಶುಷ್ಕ ಮತ್ತು ಕಠಿಣವಾಗುತ್ತದೆ. ಸರಾಗವಾಗಿ ಹೊರಬಾರದೆ ಸಂಕಟ ಉಂಟುಮಾಡುತ್ತದೆ. ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚು. ಮಲಬದ್ಧತೆಯಿಂದಾಗಿ ಹೊಟ್ಟೆನೋವು, ಸೆಳೆತ, ಮನಸ್ಸಿನ ಭಾವನೆಗಳ ವ್ಯತ್ಯಾಸ, ವಾಕರಿಕೆ, ಹಸಿವೆ ಆಗದಿರುವುದು ಇತ್ಯಾದಿ ಹೇಳಲಾಗದ ಸಂಕಟ, ಸಮಸ್ಯೆ ಎದುರಾಗುತ್ತದೆ.

ದೈಹಿಕ ನಿಷ್ಕ್ರಿಯತೆ, ಕೆಲವು ಔಷಧಗಳ ಸೇವನೆ, ಬದಲಾದ ಜೀವನಶೈಲಿ, ಕಡಿಮೆ ನೀರು ಸೇವನೆ, ದೈಹಿಕ ಚಟುವಟಿಕೆ ಕೊರತೆಗಳು ಮಲಬದ್ಧತೆಗೆ ಕಾರಣ. ಮಲಬದ್ಧತೆಯ ನಿವಾರಣೆ ಯೋಗ, ಮುದ್ರೆಗಳ ಕ್ರಿಯೆಗಳು ಸಹಕಾರಿಯಾಗುತ್ತದೆ. ಮನಸ್ಸಿನಲ್ಲಿ ಉಂಟಾಗುವ ಒತ್ತಡವನ್ನು ಯೋಗ ನಿವಾರಿಸುತ್ತದೆ. ಯೋಗವು ಜೀರ್ಣಕಾರಿ ವ್ಯವಸ್ಥೆಯನ್ನು ಸರಿಪಡಿಸುತ್ತದೆ. ಜೀರ್ಣಕಾರಿ ಅಂಗಗಳ ಭಾಗಕ್ಕೆ ಮಸಾಜ್ ಮಾಡಿ, ರಕ್ತದ ಹರಿವು ಮತ್ತು ಆಮ್ಲಜನಕದ ಸರಬರಾಜು ಹೆಚ್ಚಿಸುತ್ತದೆ. ಅದರಲ್ಲಿಯೂ ದೇಹ ತಿರುಚುವಿಕೆಯ ಆಸನಗಳು ಮಲಬದ್ಧತೆ ನಿಯಂತ್ರಣಕ್ಕೆ ಸಹಕಾರಿ.

ಸೂಚಿತ ಆಸನಗಳು: ಪಾರ್ಶ್ವತಾಡಾಸನ, ಅರ್ಧಚಕ್ರಾಸನ, ಪಾದಹಸ್ತಾಸನ, ಕಟಿಚಕ್ರಾಸನ, ಬದ್ಧಕೋಣಾಸನ, ಜಾನುಶೀರ್ಷಾಸನ, ಮಂಡೂಕಾಸನ, ಸುಪ್ತವೀರಾಸನ, ಸರ್ವಾಂಗಾಸನ, ಹಲಾಸನ, ಶೀರ್ಷಾಸನ, ವಕ್ರಾಸನ, ಅರ್ಧಮತ್ಸ್ಯೇಂದ್ರಾಸನ, ಮತ್ಸ್ಯಾಸನ. ಮುಂಜಾನೆ ಯೋಗದ ಆರಂಭದಲ್ಲಿ ಸೂಕ್ಷ್ಮ ವ್ಯಾಯಾಮ, ಸಾಧ್ಯವಾದರೆ 6-12 ಬಾರಿ ಸೂರ್ಯನಮಸ್ಕಾರ ಮಾಡಿ. 20 ನಿಮಿಷ ಅಪಾನಮುದ್ರೆ, ಪ್ರಾಣಮುದ್ರೆ, ಚಿನ್ಮುದ್ರೆ ಮಾಡಿ.

ಸೂಚನೆ: ಹಸಿವೆ ಆದಾಗ ಮಾತ್ರ ಆಹಾರ ಸೇವಿಸಿ. ಆಹಾರ ಸೇವಿಸುವಾಗ ತುಟಿ ಮುಟ್ಟಿ ಆಹಾರವನ್ನು ಜಗಿದು ಸೇವಿಸಿ. (ಜೊಲ್ಲುರಸ ಆಹಾರಕ್ಕೆ ಬೆರಕೆಯಾಗಿ ಬಾಯಿಯಲ್ಲಿ ಜೀರ್ಣವಾಗಿ ಹೊಟ್ಟೆಗೆ ಹೋಗುತ್ತದೆ.) ಸೊಪ್ಪು, ತರಕಾರಿ ಹೆಚ್ಚು ಬಳಸಿ. ಊಟ ಮಾಡಿ ಅರ್ಧಗಂಟೆಯ ನಂತರ ಒಂದು ಲೋಟ ನೀರು ಕುಡಿಯಿರಿ. ಮಲಬದ್ಧತೆ ಇರುವವರು ಮುಖ್ಯವಾಗಿ ಬೆಳಗ್ಗೆ ಏಳುವ ಎರಡು ಗಂಟೆ ಮುಂಚೆ ಎರಡರಿಂದ ನಾಲ್ಕು ಗ್ಲಾಸ್ ಶುದ್ಧ ನೀರನ್ನು ಸಾವಕಾಶವಾಗಿ ಕುಡಿಯಿರಿ. ಖಾಲಿ ಹೊಟ್ಟೆಗೆ ಮೇಲಿಂದ ನೀರು ಬಂದಾಗ ಕರುಳಿನಲ್ಲಿರುವ ಗಟ್ಟಿಯಾದ ಬೇಡದ ವಸ್ತುಗಳು ಮೃದುವಾಗಿ ಹೊರಗೆ ಬರಲು ಸಹಾಯವಾಗುತ್ತದೆ. ಇದು ಬಹಳ ಸುಲಭ ವಿಧಾನ.

ಹತ್ತು ವರ್ಷಗಳಿಂದ ನನಗೆ ಮಧುಮೇಹ. ಮಾತ್ರೆ, ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೇನೆ.

| ರಾಮಚಂದ್ರ ಎಸ್.ಎಸ್. ಬೆಂಗಳೂರು

ಸೂಚಿತ ಆಸನಗಳು: ಪಾಶ್ವೋತ್ಥಾನಾಸನ, ಪಾದಹಸ್ತಾಸನ, ಜಾನುಶೀರ್ಷಾಸನ, ಪವನಮುಕ್ತಾಸನ, ಬದ್ಧಕೋಣಾಸನ, ಹಲಾಸನ, ಭುಜಂಗಾಸನ, ಶಲಭಾಸನ. ಅಗ್ನಿಸಾರ ಕ್ರಿಯೆ ಮಾಡಿ. ಇವುಗಳನ್ನು ಹೇಗೆ ಅಭ್ಯಾಸ ಮಾಡಬೇಕೆಂದು ಈ ಹಿಂದಿನ ಅಂಕಣಗಳಲ್ಲಿ ತಿಳಿಸಲಾಗಿದೆ. ಮುದ್ರೆಗಳಲ್ಲಿ ಮುಖ್ಯವಾಗಿ 20 ನಿಮಿಷ ಅಪಾನಮುದ್ರೆ,

10 ನಿಮಿಷ ಪ್ರಾಣಮುದ್ರೆ, ಹೃದಯಮುದ್ರೆ ಮತ್ತು 10 ನಿಮಿಷ ಚಿನ್ಮುದ್ರೆ ಮಾಡಿ.