ಯೋಗಾಸಕ್ತರ ಕಲರವ, ವಚನಾನಂದ ಶ್ರೀಗಳ ನೇತೃತ್ವದಲ್ಲಿ ಬೃಹತ್ ಯೋಗ ಜಾಥಾ

ದಾವಣಗೆರೆ: ಬೆಳ್ಳಂಬೆಳಗ್ಗೆ ಹಿತಕರ ವಾತಾವರಣ. ನಗರದ ಮೋತಿ ವೀರಪ್ಪ ಕಾಲೇಜು ಮೈದಾನ ಯೋಗಾಸಕ್ತರಿಂದ ತುಂಬಿತ್ತು. ಭಾರತದ ಸನಾತನ ವಿದ್ಯೆಯಾದ ಯೋಗವನ್ನು ಕಲಿಯುವ, ಜೀವನದಲ್ಲಿ ಅಳವಡಿಸಿಕೊಳ್ಳುವ ಇಚ್ಛೆಯೊಂದಿಗೆ ಅವರೆಲ್ಲ ಸೇರಿದ್ದರು.

ಜಿಲ್ಲಾಡಳಿತ, ಜಿಪಂ, ಆಯುಷ್ ಇಲಾಖೆ, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿ, ಎನ್‌ಸಿಸಿ, ಜಿಲ್ಲಾ ವರದಿಗಾರರ ಕೂಟ, ಪೊಲೀಸ್, ಪದವಿಪೂರ್ವ ಶಿಕ್ಷಣ, ಸಾರ್ವಜನಿಕ ಶಿಕ್ಷಣ ಇಲಾಖೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಪತಂಜಲಿ ಯೋಗ ಸಮಿತಿ ಹಾಗೂ ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬುಧವಾರ ಬೃಹತ್ ಯೋಗ ಜಾಥಾ ಆಯೋಜಿಸಲಾಗಿತ್ತು.

ಶಾಲಾ ಕಾಲೇಜು ವಿದ್ಯಾರ್ಥಿಗಳು, ಯೋಗ ಸಂಘಟನೆಗಳ ಪದಾಧಿಕಾರಿಗಳು, ಅಧಿಕಾರಿಗಳು, ಮಹಿಳೆಯರು, ವಿದೇಶಿ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ವಯೋಮಾನದವರು ಭಾಗವಹಿಸಿದ್ದರು. ಶ್ವಾಸಗುರು, ಹರಿಹರದ ಶ್ರೀ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಪ್ರಾತ್ಯಕ್ಷಿಕೆಯ ಮೂಲಕ ಯೋಗವನ್ನು ತಿಳಿಸಿಕೊಟ್ಟರು.

ಧ್ಯಾನ ಮುದ್ರೆ, ನಮಸ್ಕಾರ ಮುದ್ರೆಯೊಂದಿಗೆ ಯೋಗಾಭ್ಯಾಸ ಆರಂಭಿಸಿದರು. ಉಸಿರಾಟ ಕ್ರಿಯೆ ನಿಯಂತ್ರಿಸುವುದನ್ನು ಹೇಳಿಕೊಟ್ಟರು. ಓಂಕಾರ ಸ್ವರ ಮೈದಾನವನ್ನು ಆವರಿಸಿತು. ಎಲ್ಲರ ಮುಖದಲ್ಲಿ ಮಂದಹಾಸ, ಪ್ರಸನ್ನತೆಯಿತ್ತು.
ಕೈಗಳನ್ನು ಉಜ್ಜಿ ಮುಖ, ಕುತ್ತಿಗೆಗೆ ಸವರುವುದನ್ನು ಹೇಳಿಕೊಟ್ಟು ಅದರಿಂದ ವಿದ್ಯಾರೇಖೆ, ಜ್ಞಾನರೇಖೆ, ಅನ್ನರೇಖೆಗಳು ಜಾಗೃತವಾಗುತ್ತವೆ ಎಂದು ತಿಳಿಸಿದರು.

ಜವಳಿ ವರ್ತಕ ಬಿ.ಸಿ. ಉಮಾಪತಿ, ಬ್ರಹ್ಮಾಕುಮಾರಿ ಈಶ್ವರೀಯ ವಿವಿಯ ಲೀಲಕ್ಕ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಯು. ಸಿದ್ದೇಶಿ, ಬಿಇಒ ಸಿದ್ದಪ್ಪ, ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ ರಾಯ್ಕರ್, ಬ್ಯಾಂಕ್ ಅಧಿಕಾರಿಗಳಾದ ಚಲಪತ್‌ರಾವ್, ಎಚ್.ಬಿ. ಸುರೇಶ್, ಪ್ರಭಾಕರ್, ಶಿಕ್ಷಣ ಇಲಾಖೆಯ ಶಿವಶಂಕರ್, ಶಿವಪ್ಪ ಇದ್ದರು.

Leave a Reply

Your email address will not be published. Required fields are marked *