ನನಗೆ ಕೆಮ್ಮು ಇದೆ. ಕಡಿಮೆಯಾಗಿಲ್ಲ. ಯೋಗ-ಮುದ್ರೆಗಳ ಪರಿಹಾರ ತಿಳಿಸಿ?
| ವರದರಾಜ್ ಮಂಗಳೂರು
ಕೆಮ್ಮು ಎನ್ನುವುದು ಲೋಳೆಯ ಗಂಟಲನ್ನು ತೆರವುಗೊಳಿಸುವ ಸಾಮಾನ್ಯ ಕ್ರಿಯೆ. ವಾಯುಮಾರ್ಗಗಳು ಲೋಳೆ, ಹೊಗೆ ಅಥವಾ ಧೂಳಿನಂತಹ ಕಣಗಳಿಂದ ಮುಚ್ಚಿ ಹೋದಾಗ ಕೆಮ್ಮು ಒಂದು ಪ್ರತಿಫಲಿತ ಪ್ರತಿಕ್ರಿಯೆಯಾಗಿ ಬರುತ್ತದೆ. ಅದು ಕಣವನ್ನು ತೆರವುಗೊಳಿಸಲು ಮತ್ತು ಉಸಿರಾಟವನ್ನು ಸುಲಭಗೊಳಿಸಲು ಪ್ರಯತ್ನಿಸುತ್ತದೆ. ಹಲವು ವಿಧದ ಕೆಮ್ಮುಗಳಿವೆ. ಕೆಮ್ಮು ಎರಡು ಅಥವಾ ಮೂರು ವಾರ ಸುಧಾರಿಸದಿದ್ದಲ್ಲಿ ಒಮ್ಮೆ ವೈದ್ಯರನ್ನು ಭೇಟಿ ಮಾಡುವುದು ಕ್ಷೇಮ. ಯೋಗದ ಕೆಲವು ಭಂಗಿಗಳು ಕೆಮ್ಮು ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಬಿಳಿ ರಕ್ತಕಣಗಳು ವೈರಸ್ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಸೂಚಿತ ಆಸನಗಳು: ಪಾದಹಸ್ತಾಸನ, ಶಶಾಂಕಾಸನ, ಉಷ್ಮಾಸನ, ಸಾಲಂಬ ಸರ್ವಾಂಗಾಸನ, ಹಲಾಸನ, ಮತ್ಸ್ಯಾಸನ, ಅಧೋಮುಖ ಶ್ವಾನಾಸನ, ಶವಾಸನ ಮಾಡಿ. ಆರಂಭದಲ್ಲಿ ಸಾಧ್ಯವಾಗುವ ಆಸನಗಳನ್ನು ಅಭ್ಯಾಸ ಮಾಡಿ. ಇದರೊಂದಿಗೆ ನಾಡಿಶುದ್ಧಿ, ಉಜ್ಜಾಯೀಗಳನ್ನು ಮುಂಜಾನೆ ಆಭ್ಯಾಸ ಮಾಡುವುದು ಒಳಿತು. ಮುದ್ರೆಗಳಲ್ಲಿ ಭ್ರಮರ ಮುದ್ರೆ ಇಪ್ಪತ್ತು ನಿಮಿಷ, ಲಿಂಗ ಮುದ್ರೆ ಹತ್ತು ನಿಮಿಷ (ಓಂ ನಮಃ ಶಿವಾಯ 108 ಬಾರಿ ಪಠಿಸಿ) ಅಭ್ಯಾಸ ಮಾಡಿ. ಶಂಖಮುದ್ರೆಯನ್ನು 30 ನಿಮಿಷ, ಪ್ರಾಣಮುದ್ರೆಯನ್ನು 10 ನಿಮಿಷದಂತೆ 48 ದಿನ ಅಭ್ಯಾಸ ಮಾಡಿ.
ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಯಾವೆಲ್ಲ ಯೋಗಾಭ್ಯಾಸ ಮಾಡಬೇಕು?
| ಸೀಮಾ ಚಿತ್ರದುರ್ಗ (32 ವರ್ಷ)
ಯೋಗವು ಅತ್ಯುತ್ತಮವಾದ ಸ್ವ ಆರೈಕೆ ಸಾಧನವಾಗಿದೆ. ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಇದು ಮಾನವರಿಗೆ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಂಬಲವನ್ನು ನೀಡಿದೆ. ಮಹಿಳೆಯರ ಜೀವನದಲ್ಲಿ ಸಂತಾನೋತ್ಪತ್ತಿ ಜೀವನ ಚಕ್ರ, ದೈಹಿಕ ಹಾಮೋನುಗಳ ಪರಿವರ್ತನೆ ಮುಟ್ಟಿನ, ಪ್ರಸಾವಾನಂತರದ ಅವಧಿ ಇತ್ಯಾದಿಗಳಲ್ಲಿ ಆರೋಗ್ಯ ಕಾಪಾಡುವುದು ಅಗತ್ಯ. ನಿಯಮಿತವಾದ ಯೋಗಾಭ್ಯಾಸ ಮಹಿಳೆಯರಿಗೆ (ವ್ಯಾಯಾಮ ಕೊರತೆ ಇದ್ದಾಗ) ಪ್ಯಾರಾ ಸಿಂಪಥೆಟಿಕ್ ನರಮಂಡಲದ (ವಿಶ್ರಾಂತಿಗೆ) ಪ್ರಚೋದನೆಯ ಮೂಲಕ ಕೇಂದ್ರ ನರಮಂಡಲವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ರೋಗ ಲಕ್ಷಣಗಳ ನಿಯಂತ್ರಣ, ದೇಹದಲ್ಲಿಯ ಒತ್ತಡ ಕಡಿಮೆಯಾಗುತ್ತದೆ. ಆಳವಾದ ವಿಶ್ರಾಂತಿ ದೊರಕುತ್ತದೆ. ಆಸನಗಳ ಅಭ್ಯಾಸವು ಸೆಳೆತಕ್ಕೆ ಸಂಬಂಧಿಸಿದ ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಂಗಾಂಶಗಳಿಗೆ ಆಮ್ಲಜನಕಯುಕ್ತ ರಕ್ತದ ಹರಿವನ್ನು ಹೆಚ್ಚಿಸಲು ನೆರವಾಗುತ್ತದೆ.
ಸೂಚಿತ ಆಸನಗಳು: ಅರ್ಧಚಕ್ರಾಸನ, ಪಾದಹಸ್ತಾಸನ, ವೀರಭದ್ರಾಸನ, ಬದ್ಧಕೋನಾಸನ, ಜಾನುಶೀರ್ಷಾಸನ, ಮಂಡೂಕಾಸನ, ಊರ್ಧ್ವ ಪ್ರಸಾರಿತ ಪಾದಾಸನ, ವಿಪರೀತಕರಣೀ, ಹಲಾಸನ, ಭುಜಂಗಾಸನ, ಧನುರಾಸನ, ವೀರಾಸನ ಇತ್ಯಾದಿ ನಂತರ ಶವಾಸನ ಮಾಡಿ. ಪ್ರಾಣಾಯಾಮ ಧ್ಯಾನ ತಲಾ ಹತ್ತು ನಿಮಿಷ ಅಭ್ಯಾಸ ಮಾಡುವುದು ಒಳಿತು.