ಕತ್ತು, ತಲೆನೋವು ಪರಿಹಾರಕ್ಕೆ ಯೋಗ ಸೂತ್ರ

  • ಕತ್ತುನೋವು ಆಗಾಗ್ಗೆ ಕಾಡುತ್ತದೆ. ಇದರಿಂದ ತಲೆನೋವು ಸಹ ಆಗಾಗ್ಗೆ ಬರುತ್ತದೆ. ಔಷಧ, ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ. ಯೋಗದ ಮೂಲಕ ಏನಾದರೂ ಪರಿಹಾರ ಇದ್ದರೆ ವಿವರಿಸಿ.

| ಸುರೇಶ ಗೌರಿಬಿದನೂರು

ಕತ್ತು ಮತ್ತು ತಲೆನೋವಿಗೂ ಹಲವು ಕಾರಣಗಳಿವೆ. ಜೀರ್ಣಕ್ರಿಯೆ ಸರಿಯಿಲ್ಲದಿದ್ದರೆ, ಮಲಬದ್ಧತೆ ಇದ್ದರೂ ತಲೆನೋವು ಆಗಾಗ್ಗೆ ಬರುತ್ತದೆ. ಮಾನಸಿಕ ಒತ್ತಡಗಳಿಂದಲೂ ತಲೆನೋವು ಬರುವ ಸಾಧ್ಯತೆ ಬಹಳ. ಚಿಂತೆ, ಬೇಕಾದ ವಸ್ತು ಸಿಗದೆ ಇದ್ದಾಗ ಅದರ ಬಗ್ಗೆಯೇ ಯೋಚಿಸುವುದೂ ನಿಮ್ಮ ತಲೆನೋವಿಗೆ ಕಾರಣವಾಗಬಹುದು. ಇದಕ್ಕೆ ಯೋಗದಲ್ಲಿ ಉತ್ತಮ ಪರಿಹಾರವಿದೆ. ಕತ್ತುನೋವು ಪರಿಹಾರಕ್ಕೆ ಕತ್ತಿನಿಂದ ಕೆಳಬೆನ್ನಿಗೆ ಬೇಕಾದ ಕೆಲವು ಸರಳ ವ್ಯಾಯಾಮಗಳು ಹಾಗೂ ಯೋಗಾಸನಗಳಿವೆ. ಇವುಗಳನ್ನು ಯೋಗ ಸಲಕರಣೆಗಳ ಸಹಾಯದಿಂದ ಮಾಡಬೇಕು.

ಆಸನದ ಮೂಲಕ ಪರಿಹಾರ: ಎಲ್ಲಿ ರಕ್ತಸಂಚಾರ ಸುಗಮವಾಗಿರುತ್ತದೋ ಆ ಭಾಗ ಆರೋಗ್ಯವಾಗಿರುತ್ತದೆ. ಇದು ದೇಹದ ನಿಯಮವೇ ಆಗಿದೆ. ಕೀಲುಗಳಿಗೆ ಮಾಡಿಸುವ ಮರ್ದನ ಮತ್ತು ವ್ಯಾಯಾಮವು ರಕ್ತಸಂಚಾರವನ್ನು ಸುಗಮಗೊಳಿಸುತ್ತದೆ. ಉರಿಯೂತ ಹೆಚ್ಚಿಸುವ ಅಂಶಗಳನ್ನು ತಡೆದುಹಾಕುತ್ತದೆ. ಶಮನಗೊಳಿಸಲು ಶುದ್ಧ ರಕ್ತವನ್ನು ತರುತ್ತದೆ. ರೋಗಿಯ ಕೀಲುಗಳು ಬಹಳ ಜಡವಾಗಿರುವುದರಿಂದ, ಪ್ರಾರಂಭದಲ್ಲಿ ಬಹಳ ನೋವು ಸಹಿಸಬೇಕಾಗುತ್ತದೆ. ನೋವನ್ನು ನಿವಾರಿಸಲು ಈಗ ಔಷಧದ ಸಹಾಯ ಬೇಕು. ಕೀಲುಗಳ ಚಲನೆ ಸುಲಭವಾದಂತೆಲ್ಲಾ ಔಷಧವನ್ನು ಹಂತ ಹಂತವಾಗಿ ನೀವು ಕಡಿಮೆ ಮಾಡಬಹುದು. ಕಡೆಗೆ ಒಂದು ದಿನ ಸಂಪೂರ್ಣ ಔಷಧ ನಿಲ್ಲಿಸಿ ಯೋಗ ಮುಂದುವರಿಸಬಹುದು.

ದೀರ್ಘಾವಧಿ ಪರಿಹಾರ: ಶೀಘ್ರವಾಗಿ ಗುಣಮುಖರಾಗಲು ಕೆಲವು ಚಲನೆಗಳನ್ನು ನೀವು ದಿನಕ್ಕೆ ಹಲವು ಬಾರಿ ಅಭ್ಯಾಸ ಮಾಡಬೇಕು. ನಿಂತು ಮಾಡುವ, ತಿರುಗುವ ಮತ್ತು ತಲೆ ಕೆಳಗಾಗಿ ಮಾಡುವ ಎಲ್ಲಾ ಆಸನಗಳು ಈ ಸಮಸ್ಯೆಗೆ ಉಪಯೋಗಿ. ಯೋಗದ ಧನಾತ್ಮಕ ಪರಿಣಾಮವು ಫಲಕಾರಿ. ಮಾತ್ರವಲ್ಲ, ದೀರ್ಘಾವಧಿಯವರೆಗೆ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ.

ಕತ್ತಿನಲ್ಲಿ ನೋವಿರುವ ಎಲ್ಲರಿಗೂ ಸಾಮಾನ್ಯವಾಗಿ ಕತ್ತಿನ ಸ್ನಾಯುಗಳಲ್ಲಿ ಬಿಗಿತ-ಸೆಳೆತ ಇರುವುದರಿಂದ ಕತ್ತನ್ನು ಚಲಿಸಲು ಕಷ್ಟವಾಗುತ್ತದೆ. ಬೆನ್ನು ಹಾಗೂ ಕತ್ತಿನ ಭಾಗವನ್ನು ಹೇಗೆ ಹಿಗ್ಗಿಸಬಹುದು, ಬಗ್ಗಿಸಬಹುದು ಮತ್ತು ಹಿಂದೆ-ಮುಂದೆ ಬಾಗಿಸಬಹುದು ಎಂಬುದನ್ನು ನುರಿತ ಯೋಗ ಶಿಕ್ಷಕರಿಂದ ತಿಳಿದು ಅಭ್ಯಾಸ ಮಾಡಿ. ನಂತರ ಯೋಗಾಸನದ ಭಂಗಿಗಳನ್ನು ಸಲಕರಣೆಗಳ ಸಹಾಯದಿಂದ ಅಭ್ಯಾಸ ಮಾಡುವುದನ್ನು ಕಲಿಯಿರಿ.

  • ನನಗೆ ಧೂಳು, ಹೊಗೆ ಆಗದು. (ಡಸ್ಟ್ ಅಲರ್ಜಿ). ಇದರಿಂದ ಉಸಿರಾಟದ ತೊಂದರೆ ಕಾಡುತ್ತದೆ. ಪರಿಹಾರ ತಿಳಿಸಿ.

| ಮಮತಾ ಬೈಲಹೊಂಗಲ

ಸರಳ ಯೋಗಾಸನಗಳ ನಿತ್ಯ ಅಭ್ಯಾಸದಿಂದ ನಿಮ್ಮ ಸಮಸ್ಯೆಗೆ ಪರಿಹಾರವಿದೆ. ಅನುಲೋಮ, ವಿಲೋಮ ಉಸಿರಾಟದ ಅಭ್ಯಾಸ ಮಾಡಿ. ನಿತ್ಯವೂ ಸೂರ್ಯ ನಮಸ್ಕಾರ ಅಭ್ಯಾಸ ಮಾಡುವುದು ಸೂಕ್ತ. ಉಸಿರಾಟ ಬಹಳ ಮುಖ್ಯ. ಮನೆಯಲ್ಲೇ ತಯಾರಿಸಿದ ಕಷಾಯ ಸೇವನೆ ಸೂಕ್ತ. ಯೋಗ ಸಲಕರಣೆಗಳೊಂದಿಗೆ ಕೆಲವು ಆಸನಗಳನ್ನು ಅಭ್ಯಸಿಸಬೇಕು.

  • ಅಧೋಮುಖ ಶ್ವಾನಾಸನದ ಲಾಭಗಳು ಏನು?

| ಸುರೇಂದ್ರಕುಮಾರ್ ದಾವಣಗೆರೆ

ಕೈ ಕಾಲುಗಳ ನರ ಮತ್ತು ಸ್ನಾಯುಗಳಿಗೆ, ತೋಳು, ಭುಜಗಳಿಗೆ ಶಕ್ತಿ ಇಮ್ಮಡಿಸುತ್ತದೆ. ಬೆನ್ನೆಲುಬುಗಳನ್ನು ಕ್ರಮಬದ್ಧವಾಗಿರುವಂತೆ ನೋಡಿಕೊಳ್ಳುತ್ತದೆ. ಶ್ವಾಸಾಂಗಗಳ ಸಮಸ್ಯೆ ದೂರ ಮಾಡುತ್ತದೆ. ದಪ್ಪಗಾಗುವುದನ್ನು ತಡೆದು ಬೊಜ್ಜನ್ನು ನಿವಾರಿಸುತ್ತದೆ. ಕುತ್ತಿಗೆಯ ತೊಂದರೆ, ಮಲಬದ್ಧತೆ ನಿವಾರಿಸುತ್ತದೆ. ಮಲಮೂತ್ರ ವಿಸರ್ಜನೆ ಸರಾಗವಾಗುವಂತೆ ಮಾಡುತ್ತದೆ. ಇದೆಲ್ಲದರಿಂದ ಆತ್ಮವಿಶ್ವಾಸ ವೃದ್ಧಿಸಿ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ನಿತ್ಯವೂ ಅಭ್ಯಾಸ ಮಾಡಿ.