ಯೋಗಾಸನ ದಿನಚರಿಯ ಭಾಗವಾಗಲಿ

<ಉಡುಪಿ ಶ್ರೀಕೃಷ್ಣ ಮಠದ ಕಾರ್ಯಕ್ರಮದಲ್ಲಿ ಪಲಿಮಾರು ಶ್ರೀ ಆಶಯ>

 ಉಡುಪಿ: ಯೋಗವನ್ನು ಜಗತ್ತಿಗೆ ಪರಿಚಯಿಸಿದ ದೇಶ ಭಾರತ. ಹೀಗಾಗಿ ಭಾರತೀಯರ ಜೀವನದಲ್ಲಿ ಯೋಗಾಸನ ದಿನಚರಿಯ ಭಾಗವಾಗಬೇಕು. ಯೋಗದಿಂದ ಆರೋಗ್ಯ ಪಡೆಯಬಹುದು ಎಂದು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.

ಕೃಷ್ಣ ಮಠದ ರಾಜಾಂಗಣದಲ್ಲಿ ಶುಕ್ರವಾರ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ವಿಜಯವಾಣಿ-ದಿಗ್ವಿಜಯ ಮಾಧ್ಯಮ ಸಹಯೋಗದಲ್ಲಿ ಪತಂಜಲಿ ಯೋಗ ಸಮಿತಿ(ಹರಿದ್ವಾರ), ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ವಿವೇಕಾನಂದ ಜಿಲ್ಲಾ ಯೋಗ ಸ್ವಾಸ್ಥೃ ಕೇಂದ್ರ, ಸ್ವಾಮಿ ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ, ಸಿದ್ಧ ಸಮಾಧಿಯೋಗ, ಶ್ರೀಕೃಷ್ಣ ಯೋಗ ಕೇಂದ್ರ ಬ್ರಹ್ಮಗಿರಿ ಆಯೋಜಿಸಿರುವ ಐದನೇ ವಿಶ್ವ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಉತ್ತರದಿಂದ ದಕ್ಷಿಣಕ್ಕೆ ಸೂರ್ಯ ತನ್ನ ಪಥ ಬದಲಿಸುವ ಜೂನ್ 21ರಂದು ಯೋಗ ದಿನಾಚರಣೆ ನಡೆಯುತ್ತಿದೆ. ಉತ್ತರ ಕುಬೇರನ ಸ್ಥಾನ, ದಕ್ಷಿಣ ಯಮನ ಸ್ಥಾನ. ಹೀಗಾಗಿ ನಾವು ಯೋಗದಿಂದ ಯಮನ ಬದಲು ಕುಬೇರ ಸ್ಥಾನದೆಡೆಗೆ ಹೋಗಲು ಪ್ರಯತ್ನಿಸಬೇಕು. ದೇಹವನ್ನು ದಂಡಿಸದೆ ಇರುವುದರಿಂದ ಅಂಗಾಂಗಗಳು ಬಿಗಿಯಾಗಿ ಅನಾರೋಗ್ಯ ಉಂಟಾಗುತ್ತಿದೆ. ಇದಕ್ಕೆ ಯೋಗ ಪರಿಹಾರ. ಪತಂಜಲಿ ಸಂಸ್ಥೆ ಹರಿದ್ವಾರದಲ್ಲಿ ಯೋಗಕೇಂದ್ರ ಸ್ಥಾಪಿಸಿ ವಿಶ್ವದಲ್ಲಿ ಯೋಗವನ್ನು ಪಸರಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಭಾರತ್ ಸ್ವಾಭಿಮಾನ್ ಟ್ರಸ್ಟ್ ಜಿಲ್ಲಾ ಪ್ರಭಾರಿ ಕರಂಬಳ್ಳಿ ಶಿವರಾಂ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ರಾಘವೇಂದ್ರ ಆಚಾರ್ಯ, ವಿಶ್ವನಾಥ ಭಟ್, ಪಿ.ವಿ.ಭಟ್, ಶ್ರೀಪತಿ ಭವಾನಿ, ವಸಂತ ಭಟ್, ಬಿ.ಸಿ.ಪೈ, ಅಮಿತ್ ಕುಮಾರ್ ಉಪಸ್ಥಿತರಿದ್ದರು.

ಕೆ.ರಾಘವೇಂದ್ರ ಭಟ್, ಡಾ.ದಿನೇಶ್ ನಾಯಕ್, ಜ್ಯೋತಿ, ಅರುಣ್‌ಕುಮಾರ್, ಲವಕರ್, ಶಿವರಾಯ, ಸೀಮಾ ಚಂದ್ರಶೇಖರ್, ರಾಜೇಶ್, ಡಾ.ವಿಶಾಖಾ ಭಂಡಾರ್‌ಕರ್ ಯೋಗ ಪ್ರಾತ್ಯಕ್ಷಿಕೆ ನೀಡಿದರು. ಮಮತಾ ಯೋಗ ಪ್ರಾತ್ಯಕ್ಷಿಕೆ ನಿರೂಪಿಸಿದರು.ಅಜಿತ್ ಶೆಟ್ಟಿ ಮತ್ತು ಸತೀಶ್ ಕುಂದರ್ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು.